ಸುಪ್ರಿಂ ಕೋರ್ಟ್ ಹತ್ತು ಲಕ್ಷಕ್ಕೂ ಹೆಚ್ಚು ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳನ್ನು ಅವರು ನೆಲೆಸಿರುವ ಭೂಮಿಯಿಂದ ಒಕ್ಕಲೆಬ್ಬಿಸುವ ಆದೇಶವನ್ನು ನೀಡಿರುವ ಹಿನ್ನೆಲೆಯಲ್ಲಿ ಮೋದಿ ಸರಕಾರ ಇನ್ನಷ್ಟು ವಿಳಂಬ ಮಾಡದೆ ಎಲ್ಲ ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯ ವಾಸಿಗಳಿಗೆ ಒಕ್ಕಲೆಬ್ಬಿಸದಂತೆ ರಕ್ಷಣೆ ಕೊಡುವ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.
ಆದಿವಾಸಿ ಜನಗಳು ತಾವು ಏನೂ ತಪ್ಪು ಮಾಡಿರದಿದ್ದರೂ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಯ್ದೆಯನ್ನು ಜಾರಿ ಮಾಡಲು ವಿಫಲರಾಗಿರುವುದರಿಂದ ಶಿಕ್ಷೆ ಅನುಭವಿಸುವಂತಾಗಿದೆ. ಡಿಸೆಂಬರ್ 2018ರ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ದೇಶಾದ್ಯಂತ 42.19 ಲಕ್ಷ ದಾವೆಗಳು ಬಂದಿದ್ದು, ಅವುಗಳಲ್ಲಿ 18.89 ಲಕ್ಷ ವನ್ನು , ಅಂದರೆ ಸುಮಾರು 40 ಶೇಕಡಾದಷ್ಟು ಮಾತ್ರವೇ ದಾವೆಗಳನ್ನು ಸ್ವೀಕರಿಸಲಾಗಿದೆ.
ಹಲವಾರು ಸಂದರ್ಭಗಳಲ್ಲಿ ಸ್ವೇಚ್ಛಾಚಾರದಿಂದ ದಾವೆಗಳನ್ನು ತಿರಸ್ಕರಿಸಲಾಗಿದೆ, ಗ್ರಾಮಸಭಾದ ಶಿಫಾರಸುಗಳ ವಿರುದ್ಧ, ಮತ್ತು ಅರಣ್ಯಗಳನ್ನು ಖಾಸಗಿಯವರಿಗೆ ಹಾಗೂ ವ್ಯಾಪಾರಸ್ಥರಿಗೆ ವಹಿಸಿಕೊಡ ಬಯಸುವ ಲಾಬ್ಬಿಗಳಿಂದಾಗಿ ತಿರಸ್ಕರಿಸಲಾಗಿದೆ. ಈ ತಿರಸ್ಕರಣೆಗಳ ವಿರುದ್ಧ ಹಾಕಿರುವ ಲಕ್ಷಾಂತರ ಅಪೀಲುಗಳನ್ನು ಇತ್ಯರ್ಥ ಮಾಡದೆ ಉಳಿಸಲಾಗಿದೆ.
ನ್ಯಾಯಾಲಯದಲ್ಲಿ ವಿಚಾರಣೆಯಾಗುವಾಗ ನಿರ್ಣಾಯಕವಾದ ದಿನಾಂಕಗಳಲ್ಲಿ ಕೇಂದ್ರ ಸರಕಾರದ ಕಾನೂನು ಸಲಹೆಗಾರರು ಉದ್ದೇಪೂರ್ವಕವಾಗಿ ಗೈರು ಹಾಜರಾಗಿರುವುದರಿಂದ, ಸಂಬಂಧಪಟ್ಟ ಸಚಿವಾಲಯ ಅರಣ್ಯ ಹಕ್ಕುಗಳ ಕಾಯ್ದೆಯ ವಿರುದ್ಧದ ಅರ್ಜಿಯಲ್ಲಿ ಶಾಮೀಲಾಗಿದೆ ಎಂಬ ಆರೋಪ ನ್ಯಾಯವಾಗಿಯೇ ಬಂದಿದೆ.
ಸರಕಾರ ಆದಿವಾಸಿಗಳ ಹಕ್ಕುಗಳ ಮೇಲೆ ಸುಮಾರಾಗಿ ಸಮರವನ್ನೇ ಸಾರಿರುವುದನ್ನು ತಡೆಯಬೇಕು ಎಂದಿರುವ ಪೊಲಿಟ್ ಬ್ಯುರೊ ತಕ್ಷಣವೇ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಒತ್ತಾಯಿಸಿದೆ.
ಈ ಕುರಿತಂತೆ ಸಿಪಿಐ(ಎಂ ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಅವರು ಒಂದು ಪತ್ರವನ್ನು ಬರೆದು, ಬೇರೆ ಹಲವು ವಿಷಯಗಳ ಮೇಲೆ ಸುಗ್ರೀವಾಜ್ಞೆಗಳ ವಿಧಾನವನ್ನು ಅಂಗೀಕರಿಸಿರುವ ಸರಕಾರ ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವುದರಿಂದ ರಕ್ಷಣ ಕೊಡಲು ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸದಿದ್ದರೆ ಅದೊಂದು ಅವರಿಗೆ ಮಾಡುವ ದೊಡ್ಡ ಅನ್ಯಾಯವಾಗುತ್ತದೆ ಎಂದು ಹೇಳಿದ್ದಾರೆ.