ಸಂವಿಧಾನದ 35ಎ ವಿಧಿಯನ್ನು ತೆಗೆದು ಹಾಕುವ ಪ್ರಯತ್ನಗಳ ವರದಿಗಳು ಕಾಶ್ಮೀರದ ಜನತೆಯನ್ನು ಮತ್ತು ಅಲ್ಲಿನ ಎಲ್ಲ ಛಾಯೆಗಳ ರಾಜಕೀಯ ಅಭಿಪ್ರಾಯದವರನ್ನು ವಿಚಲಿತಗೊಳಿಸಿದೆ.
ಸುಪ್ರಿಂ ಕೋರ್ಟಿನಲ್ಲಿ ಇದಕ್ಕೆ ಸವಾಲು ಹಾಕಿರುವ ಅರ್ಜಿಯ ವಿಚಾರಣೆ ಮತ್ತು ಕೆಂದ್ರ ಸರಕಾರ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂಬ ಸಂಗತಿಯ ಹಿನ್ನೆಲೆಯಲ್ಲಿ ಇದು ಉಂಟಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಸಂವಿಧಾನದ 35ಎ ವಿಧಿ ಜಮ್ಮು ಮತ್ತು ಕಾಶ್ಮೀರದ ವಿಧಾನ ಮಂಡಲಕ್ಕೆ ಆ ರಾಜ್ಯದ ಖಾಯಂ ನಿವಾಸಿಗಳು ಯಾರು ಮತ್ತು ಅವರ ಹಕ್ಕುಗಳೇನು ಎಂದು ನಿರೂಪಿಸುವ ಅಧಿಕಾರವನ್ನು ಕೊಟ್ಟಿದೆ.
ಇದರಲ್ಲಿ ಕೈಯಾಡಿಸುವ ಯಾವುದೇ ಪ್ರಯತ್ನ ಮೂಲಭೂತವಾಗಿ ಸಂವಿಧಾನದ 370ನೇವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕೊಡಮಾಡಿರುವ ವಿಶೇಷ ಸ್ಥಾನಮಾನಕ್ಕೆ ಅನಾಹುತ ಉಂಟು ಮಾಡುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ 35ಎ ವಿಧಿಯಲ್ಲಿ ಹಸ್ತಕ್ಷೇಪದ ನಡೆಗೆ ತನ್ನ ಬಲವಾದ ವಿರೋಧವನ್ನು ವ್ಯಕ್ತಪಡಿಸಿದೆ.
ಈ ವಿಧಿಯನ್ನು ಸಂವಿಧಾನದಲ್ಲಿ ಈಗಿರುವಂತೆಯೇ ಉಳಿಸಿಕೊಳ್ಳಲಾಗುತ್ತದೆ ಎಂಬ ಸಾರ್ವಜನಿಕ ವಚನವನ್ನು ಕೇಂದ್ರ ಸರಕಾರ ನೀಡಬೇಕು ಎಂದು ಅದು ಆಗ್ರಹಿಸಿದೆ.