ಅಮೆರಿಕ ಸಂಯುಕ್ತ ಸಂಸ್ಥಾನ ಭಾರತಕ್ಕೆ ನೀಡಿದ್ದ ಆದ್ಯತೆಯ ವ್ಯಾಪಾರ ಸವಲತ್ತನ್ನು ಹಿಂತೆಗೆದುಕೊಳ್ಳುವ ಮೂಲಕ ವ್ಯಾಪಾರ ಸಮರವನ್ನು ಭಾರತಕ್ಕೂ ವಿಸ್ತರಿಸಿದೆ. ‘ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್’ ಎಂಬುದರ ಅಡಿಯಲ್ಲಿರುವ ಸವಲತ್ತುಗಳನ್ನು ಮುಂದಿನ 60 ದಿನಗಳಲ್ಲಿ ರದ್ದು ಮಾಡುವ ಮೂಲಕ ಭಾರತದಿಂದ 1900 ಐಟಂಗಳ ಮೇಲೆ ಈಗ ಇರುವ ಸುಂಕ ವಿನಾಯ್ತಿ ಇಲ್ಲವಾಗುತ್ತದೆ.
ಈ ಹಿಂದೆ ಭಾರತದಿಂದ ಉಕ್ಕು ಮತ್ತು ಅಲ್ಯುಮಿನಿಯಂ ಆಮದುಗಳ ಮೇಲೆ ಸುಂಕಗಳನ್ನು ಹೆಚ್ಚಿಸಿದ ನಂತರ ಈಗ ಈ ಪ್ರತಿಕೂಲ ಕ್ರಮಗಳು ಬಂದಿವೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಮೋದಿ ಸರಕಾರ ಇಂತಹ ಪ್ರತಿಕೂಲ ಕ್ರಮಗಳ ವಿರುದ್ಧ ಒಂದು ದೃಢ ನಿಲುವನ್ನು ತಳೆಯುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದೆ.
ಈ ಹಿಂದೆ, ಸ್ವತಃ ಪ್ರಧಾನ ಮಂತ್ರಿಗಳೇ ಅಧ್ಯಕ್ಷ ಟ್ರಂಫ್ ರವರ ಒಂದು ಫೋನ್ ಕರೆಯ ಆಧಾರದಲ್ಲೇ ಅಮರಿಕಾದಿಂದ ಆಮದು ಮಾಡಿಕೊಳ್ಳುತ್ತಿರುವ ಹಾರ್ಲೆ ಡೇವಿಡ್ಸನ್ ಮೋಟಾರು ಬೈಕ್ ಗಳ ಮೇಲಿನ ಸುಂಕವನ್ನು ಅರ್ಧದಷ್ಟು ಇಳಿಸಿದ್ದರು.
ಆದರೂ ನಮ್ಮ ಸರಕಾರ ಈಗ ಇಂತಹ ಪ್ರತಿಕೂಲ ಕ್ರಮಗಳನ್ನು ಪ್ರತಿಭಟಿಸುತ್ತಿಲ್ಲವೇಕೆ? ಸರಕಾರ ಇಂತಹ ಕ್ರಮಗಳಿಗೆ ದೃಢವಾದ ಪ್ರತ್ಯುತ್ತರ ನೀಡಬೇಕು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಭಾರತದ ವ್ಯಾಪಾರೀ ಹಿತಗಳನ್ನು ರಕ್ಷಿಸಿಕೊಳ್ಳಲು, ಅಮೆರಿಕಾದ ಕ್ರಮಗಳಿಗೆ ಪ್ರತಿಯಾದ ವ್ಯಾಪಾರೀ ಸುಂಕಪಟ್ಟಿಗಳೂ ಈ ಅಗತ್ಯ ಕ್ರಮಗಳಲ್ಲಿ ಸೇರಿರಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.