ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಸತತವಾಗಿ 2 ಬಾರಿ ಪ್ರತಿನಿಧಿಸಿರುವ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ರವರು ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕರು ಹಾಗೂ ಸಿಪಿಐ(ಎಂ) ಪಕ್ಷದ ಮುಖಂಡರಾದ ಕಾಂ.ಜಿ.ವಿ.ಶ್ರೀರಾಮ ರೆಡ್ಡಿ ಆರೋಪಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಾರ್ಚ್ 17ರಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎತ್ತಿನ ಹೊಳೆ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಈ ಭಾಗದಲ್ಲಿ ಶಾಶ್ವತವಾಗಿ ನೀರಾವರಿ ಸಮಸ್ಯೆಯನ್ನು ನಿವಾರಿಸುತ್ತೇನೆ ಎಂದು ಮೊಯ್ಲಿ ರವರು ಹೇಳುತ್ತಾ ತಮ್ಮ 2 ಅವಧಿಯನ್ನು ಪೂರೈಸಿದ್ದಾರೆ. ಆದರೆ ನೀರು ಮಾತ್ರ ಇಂದಿಗೂ ಬಂದೇ ಇಲ್ಲ ಎಂದು ಆರೋಪ ಮಾಡಿದರು.
ಮುಂಬರುವ ಮಹಾ ಚುನಾವಣೆಯಲ್ಲಿ ಸಿಪಿಐಎಂ ಪಕ್ಷದ ವತಿಯಿಂದ ರಾಜ್ಯ ಮುಖಂಡರು ಹಾಗೂ ಸಿಐಟಿಯು ರಾಜ್ಯ ಅಧ್ಯಕ್ಷರಾದ ಅಂಗನವಾಡಿ ನೌಕರರ ಮುಂಚೂಣಿ ನಾಯಕಿಯಾದ ಕಾಂ.ಎಸ್.ವರಲಕ್ಷ್ಮಿ ರವರು ಸ್ಪರ್ಧಿಸುತ್ತಿದ್ದು ಅವರ ಗೆಲುವಿಗಾಗಿ ಪಕ್ಷವು ಶ್ರಮಿಸುವುದಾಗಿ ತಿಳಿಸಿದರು.
ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ಅತಿ ಮುಖ್ಯವಾದ ನೀರಾವರಿ ಸಮಸ್ಯೆ ನಿವಾರಣೆ ಸರ್ಕಾರಿ ಭೂಮಿ ರಕ್ಷಣೆ, ರೈತಾಪಿ ವರ್ಗದ ಹಿತ ಸಂರಕ್ಷಣೆ, ಕಾರ್ಮಿಕ ವರ್ಗಕ್ಕೆ ಬೆಂಬಲ, ಒಳಗೊಂಡಂತೆ ಮುಂತಾದ ಮಹತ್ತರ ಜನಪರ ವಿಚಾರಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇದೆ ಎಂದು ತಿಳಿಸಿದರು.