- ರಾಜ್ಯ ಕಾರ್ಮಿಕರ ಮತ್ತು ಚಿಕ್ಕಬಳ್ಳಾಪುರದ ಜನತೆಯ ದನಿ ಲೋಕಸಭೆಯಲ್ಲಿ ಮೊಳಗಲು
- ಜಾತ್ಯತೀತ ಪ್ರಜಾಪ್ರಭುತ್ವ ಉಳಿಸಿ ಬೆಳೆಸಲು * ಜಾತ್ಯತೀತ ಬದಲಿ ಜನಪರ ಸರಕಾರಕ್ಕಾಗಿ
ಹದಿನೇಳನೇ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇದು ಸಾಧಾರಣ ಚುನಾವಣೆಯಲ್ಲ. ಭಾರತದ ಭವಿಷ್ಯವನ್ನು ನಿರ್ಧರಿಸುವ ಒಂದು ಮಹತ್ವದ ಚುನಾವಣೆಯಾಗಲಿದೆ. ಏಕೆಂದರೆ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ, ಪ್ರತಿ ವರ್ಷ ೨ ಕೋಟಿ ಉದ್ಯೋಗಗಳು, ವಿದೇಶೀ ಕಪ್ಪು ಹಣ ವಾಪಸು ತಂದು ತಲಾ ೧೫ ಲಕ್ಷ ರೂ. ಹಂಚುವುದು, ಭಯೋತ್ಪಾದನೆಯನ್ನು ತೊಡೆದು ಹಾಕುವುದೇ ಮುಂತಾದ ಮೋದಿ ನಾಯಕತ್ವದ ಬಿಜೆಪಿ ಸರಕಾರ ನೀಡಿದ್ದ ಯಾವುದೇ ಪ್ರಮುಖ ಆಶ್ವಾಸನೆಗಳನ್ನು ಪೂರೈಸುವಲ್ಲಿ ಅದು ವಿಫಲವಾಗಿದೆ. ಬದಲಿಗೆ ದೇಶದ ಜನಸಾಮಾನ್ಯರ ಎಲ್ಲಾ ಸಮಸ್ಯೆಗಳು ಉಲ್ಬಣಗೊಂಡಿವೆ.
ಪ್ರಧಾನಿ ಮೋದಿಯವರ ’ಅಚ್ಛೇ ದಿನ್’ಗಳು ಅದಾನಿ, ಅಂಬಾನಿ ಮುಂತಾದ ಅವರ ಮಿತ್ರರಿಗೆ ಮಾತ್ರ ಬಂದಿವೆ. ಮಾತ್ರವಲ್ಲ, ಈ ಸರಕಾರ ನಮ್ಮ ಸಂವಿಧಾನದ ನಾಲ್ಕು ಆಧಾರಸ್ತಂಭಗಳು ಮತ್ತು ಸಂಸ್ಥೆಗಳನ್ನು ಬುಡಮೇಲು ಮಾಡಲು ಹೊರಟಿದೆ. ಸಂವಿಧಾನದ ನಾಲ್ಕು ಆಧಾರಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವ ಈಗ ತೀವ್ರ ಅಪಾಯದಲ್ಲಿವೆ. ದೇಶ ಉಳಿಸಬೇಕಾದರೆ ಅವುಗಳನ್ನು ರಕ್ಷಿಸಿ ಬೆಳೆಸಬೇಕಾದರೆ, ಮೋದಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ನಮ್ಮ ಸಂವೈಧಾನಿಕ ಗಣತಂತ್ರವನ್ನು ರಕ್ಷಿಸಿ ಇನ್ನಷ್ಟು ಬಲಪಡಿಸಬಲ್ಲ ಬದಲಿ ಜನಪರ ಆರ್ಥಿಕ ನೀತಿಗಳ ಜಾತ್ಯತೀತ ಸರಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ.
ಸಂವಿಧಾನದ ಈ ನಾಲ್ಕು ಆಧಾರಸ್ತಂಭಗಳನ್ನು ಉಳಿಸಿ ಬೆಳೆಸಲು, ಬದಲಿ ಜನಪರ ಆರ್ಥಿಕ ನೀತಿಗಳ ಜಾತ್ಯತೀತ ಸರಕಾರದ ರಚನೆಗೆ ೧೭ನೇ ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಪ್ರಬಲ ಪ್ರಾತಿನಿಧ್ಯ ಅಗತ್ಯವಾಗಿದೆ. ಏಕೆಂದರೆ ಸಿಪಿಐ(ಎಂ) ಮತ್ತು ಎಡಪಕ್ಷಗಳು ಮಾತ್ರ ಪರ್ಯಾಯ ಜನಪರ ನೀತಿಗಳನ್ನು ಪ್ರತಿನಿಧಿಸುತ್ತವೆ. ಅದಕ್ಕಾಗಿ ಸಿಪಿಐ(ಎಂ) ದೇಶದಾದ್ಯಂತ ಪಕ್ಷಕ್ಕೆ ಜನಬೆಂಬಲ ಇರುವ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಇದರ ಭಾಗವಾಗಿ ಪಕ್ಷ ಹಿಂದೆ ಹಲವು ಬಾರಿ ಸ್ಪರ್ಧಿಸಿ ಪ್ರತಿನಿಧಿಸಿದ್ದ ವಿಧಾನಸಭೆ ಕ್ಷೇತ್ರಗಳಿರುವ ಮತ್ತು ಹಿಂದೆಯೂ ಸ್ಪರ್ಧಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿಪಿಐ(ಎಂ) ನಿರ್ಧರಿಸಿದೆ. ರಾಜ್ಯದ ದುಡಿಯುವ ಜನರ ಪರ ಹೋರಾಟಗಾರ್ತಿ, ಕಾರ್ಮಿಕರ ಅಪ್ರತಿಮ ನಾಯಕಿ, ಸಿಐಟಿಯು ರಾಜ್ಯ ಅಧ್ಯಕ್ಷರು, ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಸಿಪಿಐ(ಎಂ) ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯರು ಆಗಿರುವ, ದುಡಿಯವ ಜನರ ಪರವಾಗಿ ದಣಿವರಿಯದ ಕೆಲಸ ಮಾಡುತ್ತಿರುವ ಎಸ್.ವರಲಕ್ಷ್ಮಿ ಅವರು ಸಿಪಿಐ(ಎಂ) ಅಭ್ಯರ್ಥಿಯಾಗಿರುತ್ತಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದು ಇದೇ ಮೊದಲು ಎಂಬುದು ಅವರ ಇನ್ನೊಂದು ಹೆಗ್ಗಳಿಕೆ.
ಸಿಪಿಐ(ಎಂ) ಈ ಲೋಕಸಭಾ ಕ್ಷೇತ್ರದಲ್ಲಿರುವ ಪ್ರದೇಶದಲ್ಲಿ ರೈತ-ಕಾರ್ಮಿಕರ ಮತ್ತು ಜನತೆಯ ಸಾಮಾನ್ಯ ಸಮಸ್ಯೆಗಳ ಪರಿಹಾರಕ್ಕೆ ಸತತವಾಗಿ ಹೋರಾಟ ನಡೆಸುತ್ತಾ ಬಂದಿದೆ. ಅವಿಭಜಿತ ಕೋಲಾರ ಜಿಲ್ಲೆಯ ೬೦-೭೦ರ ದಶಕದ ಪ್ರಸಿದ್ಧ ಭೂಹೋರಾಟಗಳ ನಾಯಕತ್ವ ಪಕ್ಷದ್ದಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಮತ್ತು ನೀರಿನ ಸಮಸ್ಯೆ ಬಗೆಹರಿಸಲು ಪರಮಶಿವಯ್ಯ ವರದಿಯ ಶಿಫಾರಸುಗಳನ್ನೊಳಗೊಂಡ ಶಾಶ್ವತ ನೀರಾವರಿ ಯೋಜನೆಯ ಜಾರಿಗೆ ದಶಕಗಳಿಂದ ಸತತ ಹೋರಾಟ ಮಾಡುತ್ತಾ ಬಂದಿದೆ. ಅದರ ಬದಲು ಕಾರ್ಯಸಾಧ್ಯವಲ್ಲದ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯಿಂದ ಎರಡೇ ವರ್ಷಗಳಲ್ಲಿ ನೀರು ಒದಗಿಸಲಾಗುವುದು ಎಂಬ ಭರವಸೆ ಹತ್ತು ವರ್ಷಗಳಾದರೂ ಜಾರಿಯಾಗಿಲ್ಲ.
ಬಾಗೇಪಲ್ಲಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಸಿಪಿಐ(ಎಂ)ನ ಹಿರಿಯ ನಾಯಕ ಜಿ.ವಿ.ಶ್ರೀರಾಮರೆಡ್ಡಿ ಶಾಶ್ವತ ನೀರಾವರಿ ಯೋಜನೆಯ ಜಾರಿಗೆ ಹೋರಾಟದ ನಾಯಕತ್ವ ವಹಿಸಿದ್ದಲ್ಲದೆ ಶಾಸಕರಾಗಿ ಬಾಗೇಪಲ್ಲಿ ಕ್ಷೇತ್ರದ ಬೆಳವಣಿಗೆಗೂ ಸತತವಾಗಿ ಶ್ರಮಿಸಿದ್ದಾರೆ. ಯಲಹಂಕ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಗಳ ಕೈಗಾರಿಕಾ ಕ್ಷೇತ್ರಗಳ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಎಸ್.ವರಲಕ್ಷ್ಮಿ ನಾಯಕತ್ವದ ಸಿಐಟಿಯು ಸತತವಾಗಿ ಹೋರಾಡುತ್ತಾ ಬಂದಿದೆ. ಇಡೀ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಗರ್ ಹುಕುಂ ಸಾಗುವಳಿ ಭೂಮಿಯ ಹಕ್ಕುಪತ್ರ ಮುಂತಾದ ರೈತರ ಸಮಸ್ಯೆಗಳ ಪರಿಹಾರಕ್ಕೂ ಸತತವಾಗಿ ಪಕ್ಷ ಹೋರಾಡುತ್ತಾ ಬಂದಿದೆ. ಇಡೀ ಕ್ಷೇತ್ರದ ಸಾಮಾನ್ಯ ಸಮಸ್ಯೆಗಳಾದ ಕುಡಿಯುವ ನೀರು, ನಿರುದ್ಯೋಗ, ಕೃಷಿ-ಕೈಗಾರಿಕಾ ಅನಭಿವೃದ್ಧಿ, ಮೂಲ ಸೌಕರ್ಯಗಳ ಕೊರತೆಯ ಸಮಸ್ಯೆ ಪರಿಹಾರಕ್ಕೂ ಪಕ್ಷ ಹೋರಾಟ ನಡೆಸಿದೆ. ಇಂತಹ ಹೋರಾಟಗಳನ್ನು ಬಲಪಡಿಸಿ ಜನರ ಸಮಸ್ಯೆ ಪರಿಹರಿಸಲು ಲೋಕಸಭೆಯಲ್ಲಿ ಸಿಪಿಐ(ಎಂ) ಪ್ರಾತಿನಿಧ್ಯ ಹೆಚ್ಚಾಗುವುದು ಅಗತ್ಯವಾಗಿದೆ.
ಸಿಪಿಐ(ಎಂ) ಅಭ್ಯರ್ಥಿಯಾಗಿರುವ ವರಲಕ್ಷ್ಮಿಯವರು, ಕೋಲಾರದ ಮಾಲೂರು ತಾಲ್ಲೂಕಿನ ಹಳ್ಳಿಯೊಂದರ ಹಿಂದುಳಿದ ಸಮುದಾಯದ ಬಡಕುಟುಂಬದಿಂದ ಬಂದವರು. ಮುಂದೆ ಇವರ ಕುಟುಂಬ ಬೆಂಗಳೂರಿನ ಕುಂಬಳಗೋಡಿಗೆ ವಲಸೆ ಬಂದು ವರಲಕ್ಷ್ಮಿ ಒಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡು, ಸಂಜೆ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಮುಂದುವರೆಸಿದರು. ಈ ಸಂದರ್ಭದಲ್ಲಿ ಅವರು ಕಾರ್ಮಿಕರ ಮುಂಚೂಣಿ ಸಂಘಟನೆ ಸಿಐಟಿಯು ನ ಸಂಪರ್ಕಕ್ಕೆ ಬಂದು, ಅಲ್ಲಿಂದ ಮುಂದಿನದ್ದು ಅವಿಸ್ಮರಣೀಯ ಕಾರ್ಮಿಕ ಹೋರಾಟಗಳ ಪರ್ವ.
ಕುಂಬಳಗೋಡು ಕಾರ್ಖಾನೆಯಲ್ಲಿ ೧೯೯೩ರಲ್ಲಿ ಕಾರ್ಮಿಕರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದು ನಡೆಸಿದ ಹೋರಾಟದಲ್ಲಿ, ಪೊಲೀಸರು ವರಲಕ್ಷ್ಮಿಯವರಿಗೆ ಹೊಡೆದು, ಹಿಂಸಿಸಿ ಜೈಲಿಗಟ್ಟಿದರು. ಇದರಿಂದ ವಿಚಲಿತರಾಗುವ ಬದಲು ಜೈಲಿನಿಂದ ಬಿಡುಗಡೆ ಹೊಂದಿದ ಮರುವರ್ಷವೇ ಅವರು ಸಿಐಟಿಯು ನ ಪೂರ್ಣಾವಧಿ ಕಾರ್ಯಕರ್ತೆಯಾಗಿ ಕಾರ್ಮಿಕರನ್ನು ಸಂಘಟಿಸಲು ದೃಢಸಂಕಲ್ಪ ಮಾಡಿದರು. ಮುಂದಿನ ದಿನಗಳಲ್ಲಿ ಅಂಗನವಾಡಿ, ಬಿಸಿಯೂಟ, ಗುತ್ತಿಗೆ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರ ಅಲ್ಲದೇ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳಿಗಾಗಿ, ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಸಿಐಟಿಯು ನೇತೃತ್ವದಲ್ಲಿ ಹೋರಾಟಗಳನ್ನು ಸಂಘಟಿಸುತ್ತಾ ಮುಂಚೂಣಿಯಲ್ಲಿ ನಿಂತರು. ದೇಶದ ಗಮನ ಸೆಳೆಯುವ ರೀತಿಯಲ್ಲಿ ಸಹಸ್ರಾರು ಮಹಿಳೆಯರ ಅಹೋರಾತ್ರಿ ಹೋರಾಟಗಳಲ್ಲಿ ತೊಡಗಿಸಿಕೊಂಡರು. ಕಳೆದ ೨೫ ವರ್ಷಗಳಿಂದ ರಾಜ್ಯದ ಕಾರ್ಮಿಕರು, ಮಹಿಳೆಯರು ಮತ್ತು ದುಡಿಯುವ ಜನರ ಸೇವೆಗೆ ವರಲಕ್ಷ್ಮಿಯವರು ಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ವರಲಕ್ಷ್ಮಿಯವರು ಸಿಐಟಿಯು ರಾಜ್ಯ ಘಟಕವೊಂದರ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದಾರೆ. ದುಡಿಯುವ ಜನರ ಪಕ್ಷವಾದ ಸಿಪಿಐ(ಎಂ)ನ ಪ್ರಮುಖ ರಾಜ್ಯ ನಾಯಕರಾಗಿ ಬೆಳೆದಿದ್ದಾರೆ.
ಈ ಬಾರಿ ಮತದಾನ ಮಾಡುವಾಗ, ಹಿಂದೆ ಹೇಳಿದ ಸಂವಿಧಾನದ ನಾಲ್ಕು ಆಧಾರಸ್ತಂಭಗಳಿಗೆ ಇರುವ ಅಪಾಯಗಳ ಬಗ್ಗೆ ಮತದಾರರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ನಮ್ಮ ವಿನಂತಿ.
ಜಾತ್ಯತೀತ ಪ್ರಜಾಪ್ರಭುತ್ವ ತೀವ್ರ ಅಪಾಯದಲ್ಲಿದೆ. ಗೋರಕ್ಷಣೆ, ನೈತಿಕ ಪೋಲಿಸ್ಗಿರಿ ಮತ್ತು ಧರ್ಮ ರಕ್ಷಣೆಗಳ ಹೆಸರಲ್ಲಿ ಖಾಸಗಿ ಸೇನೆಗಳು ಯಾವುದೇ ಎಗ್ಗಿಲ್ಲದೆ ದಲಿತರು, ಮುಸ್ಲಿಮರು, ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿ ದೌರ್ಜನ್ಯಗಳನ್ನು ನಡೆಸುತ್ತಿವೆ. ಕೋಮುವಾದೀಕರಣ ಮನುವಾದೀಕರಣ ವಿಷದಂತೆ ಹಬ್ಬುತ್ತಿದ್ದು ಸಾಮಾಜಿಕ ಸೌಹಾರ್ದ ಕದಡಿದೆ. ಉಚ್ಛ ಶಿಕ್ಷಣ ಸಂಸ್ಥೆಗಳ ಮೇಲೆ ಅವುಗಳನ್ನು ನಾಶ ಮಾಡುವ ಅಥವಾ ಕೋಮುವಾದೀಕರಿಸುವ ಉದ್ದೇಶದಿಂದ ದಾಳಿ ಮಾಡಲಾಗುತ್ತಿದೆ. ಕಾರ್ಮಿಕರು, ರೈತರು ಮತ್ತಿತರ ಜನವಿಭಾಗಗಳ ಹಕ್ಕುಗಳ ದಮನ ಮಾಡಲಾಗುತ್ತಿದೆ. ಅಭಿವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ರಾಷ್ಟ್ರೀಯ ಭದ್ರತೆಯ ಹೆಸರಲ್ಲಿ ದಾಳಿ ಮಾಡಲಾಗುತ್ತಿದೆ.
ಸ್ವಾವಲಂಬನೆ ಆಧಾರಿತ ಆರ್ಥಿಕ ಬೆಳವಣಿಗೆಯ ಗುರಿಯಿಂದ ಈ ಸರಕಾರ ಮತ್ತಷ್ಟು ದೂರ ಸರಿದಿದೆ. ಐದು ವರ್ಷಗಳಲ್ಲಿ ಕೃಷಿ, ಕೈಗಾರಿಕೆ, ಇತರ ಕ್ಷೇತ್ರಗಳು ಸೇರಿದಂತೆ ಸಾಧಿಸಿದ ಒಟ್ಟಾರೆ ಆರ್ಥಿಕ ಬೆಳವಣಿಗೆ ಹಲವು ದಶಕಗಳಲ್ಲೇ ಅತ್ಯಂತ ಕಳಪೆಯಾಗಿದೆ. ಕಳೆದ ೪೫ ವರ್ಷಗಳಲ್ಲೇ ನಿರುದ್ಯೋಗ ಅತ್ಯಂತ ಹೆಚ್ಚಾಗಿದೆ. ರೈತ ಮತ್ತು ಕೃಷಿಯ ಸಂಕಷ್ಟಗಳು ಇನ್ನಷ್ಟು ತೀವ್ರ ಮತ್ತು ಆಳಗೊಂಡಿದ್ದು ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ಮುಂದುವರೆದಿವೆ. ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಕನಸಿನ ಗಂಟಾಯಿತು. ಸಾಲದಿಂದ ವಿಮೋಚನೆಯ ಆಶ್ವಾಸನೆ ಈಡೇರಲೇ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಸಾಯಿಸಲಾಗುತ್ತಿದ್ದು ಗ್ರಾಮೀಣ ಕೂಲಿಕಾರರ ಕಳವಳಕಾರಿ ವಲಸೆ ಹೆಚ್ಚುತ್ತಿದೆ.
ಆರ್ಥಿಕ ಸ್ಥಗಿತತೆ ಮತ್ತು ಬೆಲೆಏರಿಕೆ ಜನರ ಜೀವನವನ್ನು ದುರ್ಭರಗೊಳಿಸಿದೆ. ಇದು ಸಾಲದೆಂಬಂತೆ ನೋಟು ನಿಷೇಧ ಮತ್ತು ಜಿ.ಎಸ್.ಟಿ ತೆರಿಗೆ ಭಾರ ಹೇರಿಕೆಯಿಂದ, ಗಾಯದ ಮೇಲೆ ಬರೆ ಎಳೆದಂತಾಗಿದ್ದು ಸಣ್ಣ ಮತ್ತು ಮಧ್ಯಮ ವಲಯದ ಉತ್ಪಾದನಾ ಘಟಕಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಅದೇ ಸಮಯದಲ್ಲಿ ಬಹುರಾಷ್ಟ್ರೀಯ ಮತ್ತು ದೇಶೀಯ ಕಾರ್ಪೊರೇಟುಗಳ ೧೫ ಲಕ್ಷ ಕೋಟಿ ರೂ,ನಷ್ಟು ಸಾಲ ಮನ್ನಾ ಮಾಡಿ ಲಾಭ ಗರಿಷ್ಟಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚಮಚಾ ಬಂಡವಾಳಶಾಹಿ ವ್ಯವಸ್ಥೆ ಅತ್ಯಂತ ಅಪಾಯಕಾರಿಯಾಗಿ ಬೆಳೆದಿದೆ. ಮೋದಿಯ ಮಿತ್ರರು ಬಹುಪಾಲು ಸಾಲ ಮನ್ನಾ ಮತ್ತಿತರ ಸವಲತ್ತುಗಳನ್ನು ಬಾಚಿಕೊಳ್ಳುತ್ತಿದ್ದು, ರಾಫೆಲ್ ಹಗರಣಗಳಂತಹ ಹಗರಣಗಳಿಗೆ ಹಾದಿ ಮಾಡಿಕೊಟ್ಟಿದೆ. ಅಪಾರದರ್ಶಕ ’ಚುನಾವಣಾ’ ಬಾಂಡುಗಳು ಹೊಸ ಕಾನೂನುಬದ್ಧ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿದೆ. ಆ ಮೂಲಕ ಹರಿದು ಬಂದ ಕಾರ್ಪೊರೆಟ್ ನಿಧಿಯಲ್ಲಿ ಶೇ. ೯೫ ಬಿಜೆಪಿಗೆ ಹೋಗಿದೆ. ಯಾವ ಕಾರ್ಪೊರೇಟುಗಳು ಈ ನಿಧಿ ಕೊಟ್ಟವು ಎಂದು ಊಹಿಸುವುದು ಕಷ್ಟವೇನಲ್ಲ.
ದಲಿತ/ಆದಿವಾಸಿ ದೌರ್ಜನ್ಯ ತಡೆ ಕಾಯಿದೆ, ಶಿಕ್ಷಣ ಸಂಸ್ಥೆಗಳಲ್ಲಿ ರೋಸ್ಟರ್ ಪದ್ಧತಿಯ ನೇಮಕ, ಬಡ್ತಿಯಲ್ಲಿ ಮೀಸಲಾತಿ, ಅರಣ್ಯವಾಸಿಗಳ ಹಕ್ಕು ಕಾಯಿದೆ ಇತ್ಯಾದಿ ಸಾಮಾಜಿಕ ನ್ಯಾಯದತ್ತ ಜಾರಿಯ ಹಲವು ಕ್ರಮಗಳನ್ನು ಈ ಐದು ವರ್ಷಗಳಲ್ಲಿ ಪರೋಕ್ಷವಾಗಿ ದುರ್ಬಲ ಅಥವಾ ಸಡಿಲಗೊಳಿಸಲಾಗುತ್ತಿದೆ. ಇಂತಹ ಕ್ರಮಗಳ ವಿರುದ್ಧ ಪ್ರತಿಭಟಿಸಿದರೆ ಅವರ ಮೇಲೆ ದಮನಚಕ್ರ ಹರಿಬಿಡಲಾಗುತ್ತಿದೆ. ದಲಿತರು, ಮುಸ್ಲಿಮರು, ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳು ವಿಪರೀತವಾಗಿ ಏರಿವೆ. ಸಾಮಾಜಿಕ ನ್ಯಾಯ ತೀವ್ರ ಅಪಾಯದಲ್ಲಿದೆ.
ಬಿಜೆಪಿಯೇತರ ಸರಕಾರಗಳ ಬಗ್ಗೆ ತಾರತಮ್ಯ ಧೋರಣೆ, ವಿರೋಧ ಪಕ್ಷಗಳ ಸರಕಾರಗಳನ್ನು ಬುಡಮೇಲು ಮಾಡಲು ಸತತ ಯತ್ನ, ಯೋಜನಾ ಆಯೋಗ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ರದ್ದತಿ, ರಾಜ್ಯ ಸರಕಾರಗಳ ಆದಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಜಿ.ಎಸ್.ಟಿ. ಜಾರಿ, ಮುಂತಾದ ಕ್ರಮಗಳು ರಾಜ್ಯ ಸರಕಾರಗಳನ್ನು ಕೇಂದ್ರದ ಕರುಣೆಯಲ್ಲಿಯೇ ಇರಬೇಕಾದ ಭಿಕ್ಷುಕರ ಮಟ್ಟಕ್ಕೆ ಇಳಿಸಿದೆ. ಇದು ಸಾಂವಿಧಾನಿಕ ಒಕ್ಕೂಟ ತತ್ವಗಳನ್ನು ಉಲ್ಲಂಘಿಸುತ್ತಿದ್ದು ಆರೆಸ್ಸೆಸ್ ನ ಮನುವಾದ ಪ್ರೇರಿತ ಕೇಂದ್ರೀಕೃತ ಹಿಂದೂರಾಷ್ಟ್ರ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಿದೆ.
ಸಂವಿಧಾನದ ಈ ನಾಲ್ಕು ಆಧಾರಸ್ತಂಭಗಳನ್ನು ಉಳಿಸಿ ಬೆಳೆಸಲು, ಮೋದಿ ಸರಕಾರವನ್ನು ಇಳಿಸಿ ಬದಲಿ ಜನಪರ ಆರ್ಥಿಕ ನೀತಿಗಳ ಜಾತ್ಯತೀತ ಸರಕಾರದ ರಚನೆಗೆ ೧೭ನೇ ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಪ್ರಬಲ ಪ್ರಾತಿನಿಧ್ಯ ಅಗತ್ಯವಾಗಿದೆ ಎಂದು ಇನ್ನೊಮ್ಮೆ ಒತ್ತಿ ಹೇಳಬೇಕಾಗಿದೆ. ರಾಜ್ಯದ ಕಾರ್ಮಿಕರ, ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಯ ದನಿ ಲೋಕಸಭೆಯಲ್ಲಿ ಮೊಳಗಬೇಕಾದರೆ, ಜಾತ್ಯತೀತ ಬದಲಿ ಜನಪರ ಸರ್ಕಾರ ರಚನೆಯಾಗಬೇಕಾದರೆ ಸಿಪಿಐ(ಎಂ) ಅಭ್ಯರ್ಥಿ ಎಸ್.ವರಲಕ್ಷ್ಮಿ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಬೇಕೆಂದು ನಮ್ಮ ಆಗ್ರಹಪೂರ್ವಕ ವಿನಂತಿ.