ಮಗ, ಪತ್ನಿಯಿಂದ ೧.೭೫ ಕೋಟಿ. ಸಾಲ ಪಡೆದ ಮೊಯ್ಲಿ | ಬಚ್ಚೇಗೌಡಗಿಂತ ಅವರ ಪತ್ನಿಯೇ ಶ್ರೀಮಂತೆ !
ಮಾರ್ಚ್ 25ರಂದು ನಾಮಪತ್ರ ಸಲ್ಲಿಸುವ ಮೂಲಕ ರಣಕಣಕ್ಕೆ ಧುಮುಕಿರುವ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪಮೊಯ್ಲಿ, ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಮೊಯ್ಲಿ ಅವರಿಗಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಚ್ಚೇಗೌಡ ಕೋಟ್ಯಧಿಪತಿಯಾಗಿದ್ದಾರೆ.
ಜತೆಗೆ, ಬಿ ಎಸ್ ಪಿ ಪಕ್ಷ ಅಭ್ಯರ್ಥಿ ಡಾ.ಸಿ.ಎಸ್.ದ್ವಾರಕಾನಾಥ್ ಹಾಗೂ ಸಿಪಿಐ(ಎಂ) ಪಕ್ಷದ ಎಸ್.ವರಲಕ್ಷ್ಮೀ ಕೂಡ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ.
ಕ್ಷೇತ್ರದಲ್ಲಿ ಸತತ ೨ ಬಾರಿ ಸಂಸದರಾಗಿ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿ ನಾಲ್ಕೈದು ಇಲಾಖೆಗಳನ್ನು ನಿಭಾಯಿಸಿರುವ ವೀರಪ್ಪಮೊಯ್ಲಿ, ಕಳೆದ ನಾಲ್ಕೈದು ದಶಕಗಳಿಂದ ರಾಜಕಾರಣದಲ್ಲಿ ಇದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ೧,೪೦,೫೭೯ ರೂ.ನಗದು ಇದ್ದು, ಪತ್ನಿ ಬಳಿ ೧,೦೩,೩೩೬ ರೂ. ಇದೆ. ಮೊಯ್ಲಿ ಅವರು ೬ ವಿವಿಧ ಬ್ಯಾಂಕ್ಗಳ ಉಳಿತಾಯ ಖಾತೆಯಲ್ಲಿ ೯,೨೩,೦೦೭ ರೂ. ಪ್ರತ್ಯೇಕ ೨ ಬ್ಯಾಂಕ್ಗಳಲ್ಲಿ ಖಾಯಂ ಉಳಿತಾಯ ೭.೫೦ ಲಕ್ಷ ರೂ., ವಿಜಯಾಬ್ಯಾಂಕ್ನಲ್ಲಿ ೪೧,೦೦೦ ಷೇರು ಬಂಡವಾಳ, ಅವರ ಪತ್ನಿ ಐದು ಪ್ರತ್ಯೇಕ ಬ್ಯಾಂಕ್ಗಳ ಉಳಿತಾಯ ಖಾತೆಯಲ್ಲಿ ೫,೫೬,೩೧೦ ರೂ. ೩ ಪ್ರತ್ಯೇಕ ಬ್ಯಾಂಕ್ಗಳಲ್ಲಿ ೨೯,೩೨,೫೯೧ ರೂ.ಖಾಯಂ ಉಳಿತಾಯವನ್ನು ಹೊಂದಿದ್ದಾರೆ. ಎಸ್ಸಿಡಿಸಿಸಿ ಬ್ಯಾಂಕ್ನಲ್ಲಿ ೧೦,೧೦೦ ರೂ. ಷೇರು ಹೂಡಿಕೆ ಮಾಡಿದ್ದಾರೆ.
೧.೭೫ ಕೋಟಿ. ಸಾಲಗಾರ ಮೊಯ್ಲಿ
ಮೊಯ್ಲಿ ಅವರು ಮಗ ಹರ್ಷ ಬಳಿ ೧,೨೩,೬೬,೧೫೭ ರೂ. ಹಾಗೂ ಪತ್ನಿ ಬಳಿ ೫೨, ೧೧,೫೧೭ ರೂ. ಸಾಲ ಪಡೆದಿದ್ದಾರೆ. ಪತ್ನಿ ಕೂಡ ಮಗ ಹರ್ಷ ಬಳಿ ೪,೮೪,೮೨, ೭೭೬ ರೂ. ಸಾಲ ಮಾಡಿದ್ದಾರೆ. ಮೊಯ್ಲಿ ೧,೯೩, ೭೧೮ ರೂ. ಮೌಲ್ಯದ ಒಂದು ಐಷಾರಾಮಿ ಕಾರು ಹೊಂದಿದ್ದರೆ, ಪತ್ನಿ ೯,೮೬,೧೪೦ ರೂ. ಮೌಲ್ಯದ ೨ ಐಶಾರಾಮಿ ಕಾರುಗಳ ಮಾಲೀಕರವಾಗಿದ್ದಾರೆ. ಮೊಯ್ಲಿ ಬಳಿ ಯಾವುದೇ ಚಿನ್ನಾಭರಣ ಇಲ್ಲ, ಆದರೆ ಅವರ ಪತ್ನಿ ಬಳಿ ೧೪.೩೩ ಲಕ್ಷ ರೂ. ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳಿವೆ.
ಇನ್ನು ಮೊಯ್ಲಿ ಬಳಿ ಯಾವುದೇ ಕೃಷಿ ಭೂಮಿ ಇಲ್ಲ. ಪತ್ನಿ ಹೆಸರಲ್ಲಿ ೨೦.೮೭ ಎಕರೆ ಕೃಷಿ ಜಮೀನು ಇದ್ದು, ಅದರ ಪ್ರಸ್ತುತ ಬೆಲೆ ೪,೬೬,೩೦,೦೦೦ ರೂ.ಎಂದು ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.
ಒಟ್ಟಾರೆ ಹಾಲಿ ಸಂಸದ ಮೊಯ್ಲಿ ಅವರ ಬಳಿ ೪,೯೦,೫೫೮ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ೨.೨೭ ಕೋಟಿ ರೂ. ಚರಾಸ್ತಿ ಇದ್ದು, ಪತ್ನಿ ಬಳಿ ೩೦.೫೪ ಲಕ್ಷ ರೂ. ಸೇರಿ ಒಟ್ಟು ೫.೭೪ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ೫.೫೫ ಕೋಟಿ ರೂ. ಚರಾಸ್ತಿ ಇದೆ.
ಮೊಯ್ಲಿಗಿಂತ ಬಚ್ಚೇಗೌಡರು ಶ್ರೀಮಂತ
ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಅತಿ ಶ್ರೀಮಂತರಾಗಿದ್ದಾರೆ. ಬಚ್ಚೇಗೌಡರ ಬಳಿ ೧೦ ಲಕ್ಷ ರೂ. ನಗದು, ವಿವಿಧ ಬ್ಯಾಂಕ್ಗಳ ಉಳಿತಾಯ ಖಾತೆಯಲ್ಲಿ ೧೦.೫೧ ಲಕ್ಷ ರೂ. ಹೊಂದಿದ್ದಾರೆ. ಅದೇ ರೀತಿ ಪತ್ನಿ ಉಮಾಗೌಡ ಕೈಯಲ್ಲಿ ೫ ಲಕ್ಷ ನಗದು, ೩ ಪ್ರತ್ಯೇಕ ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ೧೦.೪೯ ಲಕ್ಷ ರೂ. ಇದೆ. ಬಚ್ಚೇಗೌಡ ಬಳಿ ೩೦ ಲಕ್ಷ ರೂ. ಮೌಲ್ಯದ ೪೫೦ ಗ್ರಾಂ ಚಿನ್ನ, ೩ ಕೆ.ಜಿ.ಬೆಳ್ಳಿ ಹೊಂದಿದ್ದು, ಪತ್ನಿ ಬಳಿ ಸುಮಾರು ೯೦ ಲಕ್ಷ ರೂ. ಮೌಲ್ಯದ ೯೫೦ ಗ್ರಾಂ ಚಿನ್ನ, ೫ ಕೆ.ಜಿ.ಬೆಳ್ಳಿಹಾಗೂ ಡೈಮಂಡ್ ಆಭರಣಗಳನ್ನು ಹೊಂದಿದ್ದಾರೆ.
ಒಟ್ಟಾರೆ ಬಚ್ಚೇಗೌಡ ಅವರ ಒಟ್ಟು ಚರಾಸ್ತಿ ೬೦.೬೦ ಲಕ್ಷ ರೂ.ಗಳು ಇದ್ದು, ಪತ್ನಿ ಉಮಾಗೌಡ ಬಳಿ ೭.೭೪ ಕೋಟಿ ರೂ. ಚರಾಸ್ತಿಯನ್ನು ಹೊಂದುವ ಮೂಲಕ ಗಂಡನಿಗಿಂತ ಹೆಂಡತಿಯೇ ಶ್ರೀಮಂತರಾಗಿದ್ದಾರೆ. ಬಚ್ಚೇಗೌಡರ ಹೆಸರಿನಲ್ಲಿ ಸುಮಾರು ೮೩ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ (ಕೃಷಿ, ಕೃಷಿಯೇತರ ಭೂಮಿ, ವಸತಿ ಸಮುಚ್ಚಯ, ಬಾಡಿಗೆ ಕಟ್ಟಡಗಳು ಇತರೆ) ಇದ್ದು, ೨೪ ಕೋಟಿ ರೂ.ಮೌಲ್ಯದ ಸ್ಥಿರಾಸ್ತಿಯು ಪತ್ನಿ ಹೆಸರಲ್ಲಿ ಇದೆ. ಇನ್ನು ಮೊಯ್ಲಿ ಯಾವುದೇ ಸಾಲ ಬಾಕಿ ಉಳಿಸಿಕೊಂಡಿಲ್ಲ. ಯಾವುದೇ ಪ್ರಕರಣವೂ ಇಲ್ಲ ಎಂದು ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.
ಉಳಿದಂತೆ ಇದುವರೆಗೆ ಒಟ್ಟು ೧೩ ಮಂದಿ ಅಭ್ಯರ್ಥಿಗಳು ಲೋಕಸಭೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ.
೨.೮೪ ಕೋಟಿ ಒಡೆಯ ದ್ವಾರಕಾನಾಥ್
ಬಿಎಸ್ಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತನ್ನ ಬಳಿ ೨.೮೪ ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ದ್ವಾರಕಾನಾಥ್ ಕೈಯಲ್ಲಿ ೧.೫೦ ಲಕ್ಷ ರೂ. ನಗದು, ವಿವಿಧ ಬ್ಯಾಂಕ್ನ ಉಳಿತಾಯ ಖಾತೆಗಳಲ್ಲಿ ೧.೭೩ ಲಕ್ಷ ರೂ. ಹಾಗೂ ಪತ್ನಿ ಎಲ್.ಕಮಲ ಅವರ ಕೈಯಲ್ಲಿ ೧.೫೦ ಲಕ್ಷ ರೂ. ನಗದು ಮತ್ತು ಪ್ರತ್ಯೇಕ ೨ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ೨.೮೮ ಲಕ್ಷ ರೂ. ಇಟ್ಟುಕೊಂಡಿದ್ದಾರೆ. ದ್ವಾರಕಾನಾಥ್ ಅವರು ೧ ಲಕ್ಷ ರೂ. ಮೌಲ್ಯದ ಕಾರು ಸೇರಿ ಒಟ್ಟು ೪.೨೩ ಲಕ್ಷ ರೂ. ಚರಾಸ್ತಿಯನ್ನು ಹೊಂದಿದ್ದರೆ, ಪತ್ನಿ ವಿವಿಧ ಚಿನ್ನಾಭರಣವೂ ಸೇರಿದಂತೆ ಒಟ್ಟು ೨೬.೪೯ ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ.
ದ್ವಾರಕಾನಾಥ್ ಅವರು ಯಾವುದೇ ಕೃಷಿ ಭೂಮಿ ಹೊಂದಿಲ್ಲ. ಬದಲಿಗೆ ೮೦ ಲಕ್ಷ ಮೌಲ್ಯದ ಕೃಷಿಯೇತರ ಭೂಮಿ, ೧೭ ಲಕ್ಷ ರೂ. ಮೌಲ್ಯದ ಮಾರಾಟ ಮಾಡಬಹುದಾದ ಜಮೀನು, ೬೨ ಲಕ್ಷ ರೂ.ಮೌಲ್ಯದ ಪಿತ್ರಾರ್ಜಿತ ಭೂಮಿ, ೬೩ ಸಾವಿರ ರೂ. ಮೌಲ್ಯದ ವಸತಿ ಕಟ್ಟಡದ ಮಾಲೀಕರಾಗಿದ್ದು, ಪತ್ನಿಯೂ ಕೂಡ ೧ ಲಕ್ಷ ರೂ.ಮೌಲ್ಯದ ಕೃಷಿಯೇತರ ಭೂಮಿ, ೮೦ ಲಕ್ಷ ರೂ.ಮೌಲ್ಯದ ಪಿತ್ರಾರ್ಜಿತವಾಗಿ ಬಂದ ಭೂಮಿ ಹಾಗೂ ೫೫ ಲಕ್ಷ ರೂ. ಮೌಲ್ಯದ ಸ್ವಯಂ ಖರೀದಿ ಮಾಡಿದ ಜಮೀನು ಇವರ ಬಳಿ ಇದೆ. ಒಟ್ಟಾರೆ ದ್ವಾರಕಾನಾಥ್ ಅವರು ೨.೪೨ ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದರೆ, ಪತ್ನಿ ಕಮಲಾ ಅವರು ೧.೩೫ ಕೋಟಿ ರೂ. ಮೌಲ್ಯದ ಚರಾಸ್ತಿಯ ಒಡತಿಯಾಗಿದ್ದಾರೆ.
ಸಿಪಿಐಎಂ ಅಭ್ಯರ್ಥಿಗೆ ಹೋರಾಟವೇ ಆಸ್ತಿ!
ಇನ್ನು ಬಡವರು, ಅಸಂಘಟಿತ ಕಾರ್ಮಿಕರು, ನೌಕರರ ಪರವಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿರುವ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಎಸ್. ವರಲಕ್ಷ್ಮೇ ಅವರಿಗೆ ಹೇಳಿಕೊಳ್ಳುವಂತಹ ಯಾವುದೇ ಆಸ್ತಿ-ಪಾಸ್ತಿ ಇಲ್ಲ. ಬದಲಿಗೆ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ರಾಜ್ಯದಲ್ಲಿ ವಿವಿಧ ಹೋರಾಟಗಳ ಸಂದರ್ಭದಲ್ಲಿ ನಮ್ಮ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ೪ ಕ್ರಿಮಿನಲ್ ಪ್ರಕರಣ ಹಾಗೂ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದ ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಇದರ ಜತೆಗೆ ಕೈಯಲ್ಲಿ ೫ ಸಾವಿರ ರೂ. ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ ಉಳಿತಾಯ ೫.೧೦ ಲಕ್ಷ ರೂ. ಹಣ, ೬೦ ಸಾವಿರ ರೂ. ಮೌಲ್ಯದ ೨೧ ಗ್ರಾಂ ಚಿನ್ನಾಭರಣ ಸೇರಿ ಒಟ್ಟು ೯.೬೯ ಲಕ್ಷ ರೂ. ಚರಾಸ್ತಿಯನ್ನು ಹೊಂದಿದ್ದಾರೆ. ಕೃಷಿ, ಕೃಷಿಯೇತರ ಭೂಮಿ, ಕಟ್ಟಡ, ವಸತಿ ಸಮುಚ್ಚಯ ಸೇರಿದಂತೆ ಯಾವ ಸ್ಥಿರಾಸ್ತಿಯೂ ಇವರ ಬಳಿ ಇಲ್ಲ. ಸಾಲವೂ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ.
ಕೃಪೆ: ವಿಜಯ ಕರ್ನಾಟಕ