ಪ್ರಧಾನಿಗಳೂ ಸೇರಿದಂತೆ ಬಿಜೆಪಿ ಮುಖಂಡರಿಂದ ಮತ್ತೆ-ಮತ್ತೆ ಚುನಾವಣಾ ಅಚಾರ ಸಂಹಿತೆಯ ಭಂಡ ಉಲ್ಲಂಘನೆಗಳು
ಚುನಾವಣಾ ಆಯೋಗಕ್ಕೆ ನೀಲೋತ್ಪಲ ಬಸು ಪತ್ರ
ಪ್ರಧಾನ ಮಂತ್ರಿಗಳೂ ಸೇರಿದಂತೆ ಆಳುವ ಪಕ್ಷ ಬಿಜೆಪಿಯ ಮುಖಂಡರು ಚುನಾವಣೆಯ ಮಾದರಿ ಆಚಾರ ಸಂಹಿತೆಯನ್ನು ಭಂಡತನದಿಂದ ಉಲ್ಲಂಘಿಸುತ್ತಿರುವುದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲೇಬೇಕಾಗಿ ಬಂದಿದೆ, ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯ ನೀಲೋತ್ಪಲ ಬಸು ಎಪ್ರಿಲ್ 2ರಂದು ಮುಖ್ಯ ಚುನಾವಣಾ ಆಯುಕ್ತ ಅರೋರಾ ಅವರಿಗೆ ಮತ್ತೊಂದು ಪತ್ರವನ್ನು ಬರೆದಿದ್ದಾರೆ.
ಈ ಪತ್ರದಲ್ಲಿ ಬಸು ಅವರು ಈ ಮೊದಲು ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಒಂದು ಕೆಳಮಟ್ಟದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ನಿಷ್ಪ್ರಯೋಜಕಗೊಂಡ ಉಪಗ್ರಹವನ್ನು ಕ್ಷಿಪಣಿಯಿಂದ ನಾಶಗೊಳಿಸಿದ್ದು ನಮ್ಮ ತಂತ್ರಜ್ಞಾನ ಸಾಮರ್ಥ್ಯದ ಪ್ರದರ್ಶನ ಎಂದುಪ್ರಧಾನ ಮಂತ್ರಿಗಳು ಸಾರ್ವಜನಿಕ ಪ್ರಸಾರ ಮಾಡಿದ್ದರ ಅನೌಚಿತ್ಯವನ್ನು ಆಯೋಗದ ಗಮನಕ್ಕೆ ತಂದುದನ್ನು ನೆನಪಿಸಿದ್ದಾರೆ.
“ಒಬ್ಬ ಬಿಜೆಪಿ ಅಭ್ಯರ್ಥಿಯೂ ಅಗಿರುವ ಪ್ರಧಾನ ಮಂತ್ರಿಗಳು ಚುನಾವಣಾ ಪ್ರಯೋಜನಕ್ಕಾಗಿ ಪ್ರಭಾವ ಬೀರಲು ತನ್ನ ಹುದ್ದೆ ಮತ್ತು ವಿಶೇಷ ಅವಕಾಶಗಳನ್ನು ಬಳಸಿಕೊಳ್ಳಬಹುದೇ ಎಂಬುದು ಇಲ್ಲಿ ಇರುವ ಮೂಲಭೂತ ಪ್ರಶ್ನೆ, ಆದರೆ ಆಯೋಗ ಅದನ್ನು ದೂರದರ್ಶನದ ಪಾತ್ರಕ್ಕೆ ಸೀಮಿತಗೊಳಿಸುವ ದಾರಿ ಆಯ್ದುಕೊಂಡಿತು, ಮತ್ತು ಅದರಿಂದೇನೂ ತಪ್ಪು ಸಂಭವಿಸಿಲ್ಲ ಎಂದು ಹೇಳಿತು. ಈಗ ದೂರದರ್ಶನ ನ್ಯೂಸ್ ವೀಡಿಯೋ ಕಾನ್ಫರೆನ್ಸ್ ಮೂಲಕ # ಮೈಂಭೀ ಚೌಕೀದಾರ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಭಾಷಣವನ್ನು ವೀಕ್ಷಿಸಬೇಕು ಎಂದು ಟ್ವೀಟ್ ಮಾಡಿರುವತ್ತ ನಮ್ಮ ಗಮನವನ್ನು ಸೆಳೆಯಲಾಗಿದೆ” ಎನ್ನುತ್ತ ನೀಲೋತ್ಪಲ ಬಸು ಈ ಟ್ವೀಟ್ನ ಮುದ್ರಿತ ಪ್ರತಿಯನ್ನು ತಮ್ಮ ಪತ್ರದಲ್ಲಿ ಲಗತ್ತಿಸಿ ಆಯೋಗದ ಮುಂದಿಟ್ಟಿದ್ದಾರೆ.
ಈ ಮೊದಲು ಬಾಲಕೋಟ್ ನಂತರದ ಸನ್ನಿವೇಶವನ್ನು ಉಪಯೋಗಿಸಿಕೊಳ್ಳುವ ಮತ್ತು ಸಶಸ್ತ್ರ ಪಡೆಗಳ ಸಾಧನೆಗಳನ್ನು ಚುನಾವಣಾ ಉದ್ದೇಶಗಳಿಗೆ ಬಳಸಿಕೊಳ್ಳುವ ಆಳುವ ಪಕ್ಷದ ನಾಚಿಕೆಗೆಟ್ಟ ಪ್ರಯತ್ನಗಳನ್ನು ಕೂಡ ಆಯೋಗದ ಗಮನಕ್ಕೆ ತರಲಾಗಿತ್ತು. ಆಗ ಅದನ್ನು ಗಮನಕ್ಕೆ ತಗೊಂಡ ಆಯೋಗ ಚುನಾವಣಾ ಪ್ರಚಾರದಲ್ಲಿ ಸಶಸ್ತ್ರ ಪಡೆಗಳ ಇಂತಹ ಬಳಕೆಯನ್ನು ದೃಢವಾಗಿ ನಿಷೇಧಿಸಿ ಒಂದು ಆದೇಶವನ್ನು ಹೊರಡಿಸಿತ್ತು.
ಇದನ್ನೂ ತಮ್ಮ ಪತ್ರದಲ್ಲಿ ನೀಲೋತ್ಪಲ ಬಸು ಆಯೋಗಕ್ಕೆ ನೆನಪಿಸುತ್ತ, ಈಗ ಬಿಜೆಪಿ ಮುಖಂಡ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅದರ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ ಬ ಸಂಗತಿಯತ್ತ ಆಯೋಗದ ಗಮನ ಸೆಳೆದಿದ್ದಾರೆ. ಈತ ಘಾಜಿಯಾಬಾದ್ನಲ್ಲಿ ಎಪ್ರಿಲ್ 1ರಂದು ಒಂದು ಸಭೆಯಲ್ಲಿ ಭಾರತೀಯ ಸೇನೆಯನ್ನು ‘ಮೋದೀಜೀ ಕೀ ಸೇನಾ” ಎಂದು ಹೇಳಿದ್ದಾರೆ.
ಅದೇ ರೀತಿ, ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಾರ್ಧಾದಲ್ಲಿ ಒಂದು ಚುನಾವಣಾ ಸಭೆಯಲ್ಲಿ, ಎನ್.ಐ.ಎ. ಕೋರ್ಟಿನ ಫಲಿತಾಂಶವನ್ನು ಉದ್ಧರಿಸುತ್ತ, ಅದರಲ್ಲಿನ ಆರೋಪಿಯನ್ನು ಸಮಸ್ತ ಹಿಂದೂ ಸಮುದಾಯದೊಂದಿಗೆ ಸಮೀಕರಿಸಿ ಕೋಮುವಾದಿ ಭಾವನೆಗಳನ್ನು ಬಡಿದೆಬ್ಬಿಸುವ ನಗ್ನ ಪ್ರಯತ್ನ ನಡೆಸಿದ್ದಾರೆ.
“ನಮ್ಮ ಅಭಿಪ್ರಾಯದಲ್ಲಿ, ಇವು ಮಾದರಿ ಆಚಾರ ಸಂಹಿತೆಯ ನಗ್ನ ಉಲ್ಲಂಘನೆಗಳು, ಮತ್ತು ಚುನಾವಣೆಗಳ ಸಂದರ್ಭದಲ್ಲಿ ಸಾಮಾಜಿಕ ವಾತಾವರಣವನ್ನು ಕಲುಷಿತಗೊಳಿಸುವಂತವುಗಳು” ಎನ್ನುತ್ತ ನೀಲೋತ್ಪಲ ಬಸುರವರು ಮಾದರಿ ಆಚಾರ ಸಂಹಿತೆಯ ಪಾವಿತ್ರ್ಯವನ್ನು ಕಾಯ್ದುಕೊಳ್ಳಲು ಮತ್ತು ಒಂದು ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸಲು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರನ್ನು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.