ಲೋಕಸಭಾ ಚುನಾವಣೆ – 2019
ಸಿಪಿಐ(ಎಂ) ಗೆಲ್ಲಿಸಿ * ಲೋಕಸಭೆಯಲ್ಲಿ ಜನಪರ ದನಿ ಮೊಳಗಿಸಿ
ಮತದಾರ ಬಂಧು ಭಗಿನಿಯರೆ,
17ನೇ ಲೋಕಸಭೆಯನ್ನು ಚುನಾಯಿಸಲು ನಾವೆಲ್ಲರೂ ಸಜ್ಜಾಗುತ್ತಿದ್ದೇವೆ. ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿ ದೇಶದ ಜನತೆಗೆ ನೀಡಿದ ಒಂದೊಂದು ಭರವಸೆಗೂ ದ್ರೋಹ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ನಂತರವೂ ಮೋದಿ ಅವರು ಹೊಸ ಭರವಸೆಗಳನ್ನು, ಪೊಳ್ಳು ಘೋಷಣೆಗಳನ್ನು ನೀಡುತ್ತಾ ಬಂದು ಅದಕ್ಕಾಗಿ ‘ಸುಳ್ಳು ಭರವಸೆಗಳ ಸರದಾರ’ ಎಂಬ ಬಿರುದನ್ನು ಸಂಪಾದಿಸಿದ್ದಾರೆ.
ಬಿಜೆಪಿ ಮೈತ್ರಿ ಕೂಟವನ್ನು ಸೋಲಿಸಬೇಕು
ಈ ಭರವಸೆಗಳನ್ನು ಈಡೇರಿಸುವ ಬದಲಾಗಿ, ಮೋದಿ ಸರಕಾರ ಎಲ್ಲಾ ಜನವಿಭಾಗಗಳ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದೆ. ಕಾರ್ಮಿಕರಿಗೆ ಸ್ವಲ್ಪವಾದರೂ ರಕ್ಷಣೆ ಕೊಡುವ ಈಗಿರುವ ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ-ವಿರೋಧಿ ತಿದ್ದುಪಡಿಗಳನ್ನು ಮಾಡಿ ಕಾರ್ಮಿಕರ ದಮನಕ್ಕೆ ಮುಂದಾಗಿದೆ. ಮರುಪಾವತಿ ಮಾಡಲಾಗದ ರೈತರ ಸಾಲ ೨೦೧೭ ರಲ್ಲಿ ೭೦ ಸಾವಿರ ಕೋಟಿ ರೂ. ಇದ್ದದ್ದು ೨೦೧೮ ರಲ್ಲಿ ೧ ಲಕ್ಷ ಕೋಟಿ ರೂ. ಗೆ ಏರಿತು. ಇದು ರೈತರನ್ನು ಆತ್ಮಹತ್ಯೆಗೆ ತಳ್ಳುತ್ತಿರುವ ಕಾರ್ಷಿಕ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತದೆ. ನಿರುದ್ಯೋಗ ದರವು ೨೦೧೮ ರಲ್ಲಿ ಶೇಕಡಾ ೫.೯ ರಷ್ಟು ಇದ್ದದ್ದು ೨೦೧೯ ರಲ್ಲಿ ಶೇಕಡ ೭.೧ ಕ್ಕೆ ಏರಿ, ೪೫ ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಮಟ್ಟ ಮುಟ್ಟಿತು. ಆರ್ಥಿಕ ಬೆಳವಣಿಗೆಯ ದರ ಕುಸಿದಿದೆ. ನೋಟು ರದ್ದತಿ ಮತ್ತು ಜಿ.ಎಸ್.ಟಿ ದಾಳಿಯಿಂದ ಮಧ್ಯಮ, ಸಣ್ಣ ಉದ್ದಿಮೆಗಳು ಮುಚ್ಚಿ ಹೋಗಿವೆ. ಆದರೆ ೨೦೧೪-೨೦೧೮ ಅವಧಿಯಲ್ಲಿ ದೇಶದ ಜನಸಂಖ್ಯೆಯ ಶೇಕಡಾ ೧ ಆಗರ್ಭ ಶ್ರೀಮಂತರ ಸಂಪತ್ತು ಶೇಕಡ ೪೯ ರಿಂದ ಶೇಕಡ ೭೩ ಕ್ಕೆ ಏರಿದೆ. ಇಂತಹ ಶ್ರೀಮಂತ-ಪರ ರೈತ-ವಿರೋಧಿ ಬಡವರ ವಿರೋಧಿ ಸರಕಾರ ಬೇಕಾ?
ಬಿಜೆಪಿ ಸರ್ಕಾರ ಬಂದಾಗಿನಿಂದ ದೇಶದೊಳಗೆ ಬೇರು ಬಿಟ್ಟಿರುವ ಮತೀಯವಾದಿ, ಮನುವಾದಿ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕಿದೆ. ಎಲ್ಲಾ ಜನವಿಭಾಗಗಳ ಪ್ರಜಾಪ್ರಭುತ್ವ ಹಕ್ಕುಗಳ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ತೀವ್ರ ದಾಳಿಗಳಾಗುತ್ತಿವೆ. ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಫ್ಯಾಸಿಸ್ಟ್ ಪ್ರವೃತ್ತಿಗಳು ವ್ಯಕ್ತವಾಗುತ್ತಿವೆ. ಆಳುವ ವರ್ಗಗಳು ದುಡಿಯುವ ಜನರನ್ನು ಒಡೆಯಲು ಕಾರ್ಯತಂತ್ರವನ್ನು ರೂಪಿಸಿಕೊಂಡಿವೆ. ಅದುವೇ ಮುಂದೆ ಮತೀಯ ಫ್ಯಾಸಿಸಂ ಆಗಿ ಬೆಳೆಯಬಹುದಾದ ಮತೀಯವಾದ. ಕಳೆದ ೫ ವರ್ಷಗಳ ಅವಧಿಯಲ್ಲಿ ಇಂತಹ ಪ್ರವೃತ್ತಿಯ ಹಲವು ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಸರ್ಕಾರದ ಕುಮ್ಮಕ್ಕಿನಿಂದ, ಗೋರಕ್ಷಣೆ ಹೆಸರಿನಲ್ಲಿ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ಮಾರಣಾಂತಿಕ ಹಲ್ಲೆಗಳೂ ಬೀದಿಯಲ್ಲೇ ಹೊಡೆದು ಕೊಲ್ಲುವುದು, ಮತಾಂತರದ ಆರೋಪ ಹೊರಿಸಿ ಕ್ರಿಶ್ಚಿಯನ್ನರ ಮೇಲೆ ಹಲ್ಲೆ, ಮಹಿಳೆಯರ ಮೇಲೆ, ಮಕ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳು ಕಳೆದ ೫ ವರ್ಷಗಳಲ್ಲಿ ಆತಂಕಕಾರಿಯಾಗಿ ಹೆಚ್ಚಾಗಿವೆ.
ದೇಶದ ರಕ್ಷಣೆಯ ಮತ್ತು ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆಯ ಬಗ್ಗೆ ಜಂಭ ಕೊಚ್ಚುವ ಮೋದಿ ಈ ನಿಟ್ಟಿನಲ್ಲೂ ಪೂರ್ಣ ವಿಫಲವಾಗಿದ್ದಾರೆ. ಉರಿ ಮಿಲಿಟರಿ ನೆಲೆ, ಫುಲವಾಮದಲ್ಲಿ ಸಿಆರ್.ಪಿ.ಎಫ್ ಪಡೆಗಳ ಮೇಲೆ ಪ್ರಮುಖ ಭಯೋತ್ಪಾದಕ ದಾಳಿಗಳು ಸೇರಿದಂತೆ ಈ ಅವಧಿಯಲ್ಲಿ ಭಯೋತ್ಪಾದನಾ ಪ್ರಕರಣಗಳು ಶೇ. ೧೭೬ ರಷ್ಟು ಹೆಚ್ಚಾಗಿವೆ. ಮೋದಿ ಸರ್ಕಾರದ ‘ಜಮ್ಮು ಮತ್ತು ಕಾಶ್ಮೀರ’ ನೀತಿ ಒಂದು ದೊಡ್ಡ ವೈಫಲ್ಯವಾಗಿದೆ.
ಹೀಗೆ ಎಲ್ಲಾ ರಂಗಗಳಲ್ಲೂ ವಿಫಲವಾದ ಬಿಜೆಪಿ ಸರಕಾರಕ್ಕೆ ಮತ್ತೆ ಅಧಿಕಾರ ಕೊಡಬಾರದು. ಪುನಃ ಅಧಿಕಾರ ಹಿಡಿದು ಸಾಂವಿಧಾನಿಕ ಪ್ರಜಾಪ್ರಭುತ್ವ ನಾಶ ಮಾಡಲು ಅವಕಾಶ ಕೊಡಬಾರದು. ಬಿಜೆಪಿ ಮೈತ್ರಿಕೂಟವನ್ನು ನಿರ್ಣಾಯಕವಾಗಿ ಸೋಲಿಸಬೇಕು.
ಪರ್ಯಾಯ ಜಾತ್ಯಾತೀತ ಸರ್ಕಾರ ಅಧಿಕಾರಕ್ಕೆ ಬರಲಿ
ಜಾತ್ಯಾತೀತ ಪ್ರಜಾಸತ್ತೆಯ ರಕ್ಷಣೆಗಾಗಿ ಜಾತ್ಯಾತೀತ ಸರಕಾರದ ಅಗತ್ಯವಿದ್ದು ಸಿಪಿಐ(ಎಂ) ಇದಕ್ಕಾಗಿ ಕಾರ್ಯ ನಿರ್ವಹಿಸಲಿದೆ ಮತ್ತು ಅಂತಹ ಅವಕಾಶವನ್ನು ಬಳಸಿಕೊಂಡು ಜನಪರ ಪ್ರಶ್ನೆಗಳ ಕಡೆ ಆ ಸರಕಾರವನ್ನು ಸೆಳೆಯಲು ಒತ್ತಡವನ್ನು ಹೇರಲಿದೆ. ಇದು ಮಾತ್ರವೇ ಜನ ಚಳುವಳಿಯನ್ನು ಮುನ್ನಡೆಸುವ, ಅವರ ಹಕ್ಕುಗಳನ್ನು ಬಲವಾಗಿ ಒತ್ತಾಯಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ.
ಸಿಪಿಐ(ಎಂ) ಮತ್ತು ಎಡ ಪಕ್ಷಗಳ ಪ್ರಾತಿನಿಧ್ಯ ಹೆಚ್ಚಾಗಲಿ
ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಜಾತ್ಯಾತೀತ ಸರ್ಕಾರ ಜನಪರವಾಗಿ ಕೆಲಸ ಮಾಡಬೇಕಾದರೆ ಸರ್ಕಾರದ ಆರ್ಥಿಕ, ಸಾಮಾಜಿಕ ಮೊದಲಾದ ನೀತಿಗಳು ಬದಲಾಗಬೇಕು. ಜಾತ್ಯಾತೀತ ಸರಕಾರದ ಮೇಲೆ ಇಂತಹ ಒತ್ತಡವನ್ನು ಹೊರಗೆ ಮತ್ತು ಒಳಗಿನಿಂದ ಹಾಕಲು ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡ ಶಕ್ತಿಗಳ ಪ್ರಾತಿನಿಧ್ಯ ಹೆಚ್ಚ್ಚಬೇಕಾಗಿದೆ.
೨೦೦೪ ರ ಚುನಾವಣೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಒಟ್ಟು ೬೧ ಪ್ರತಿನಿಧಿಗಳನ್ನು ಜನತೆ ಲೋಕಸಭೆಗೆ ಆರಿಸಿ ಕಳುಹಿಸಿತ್ತು. ಬಿಜೆಪಿ ಸರ್ಕಾರದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು, ಎಡಪಕ್ಷಗಳು ಜಾತ್ಯತೀತ ಸರ್ಕಾರ ರಚನೆಗೆ ಬೆಂಬಲ ನೀಡಿದ್ದವು. ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕುಗಳ ಕಾಯ್ದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಂತಹ ಕೆಲವು ಜನಪರವಾದ ಕಾಯ್ದೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದವು. ನವ-ಉದಾರೀಕರಣದ ಜನವಿರೋಧಿ ನೀತಿಗಳ ಹರಿಕಾರ ಮತ್ತು ಇನ್ನೂ ಅದರ ಪ್ರಬಲ ಬೆಂಬಲಿಗನಾಗಿರುವ ಕಾಂಗ್ರೆಸಿನ ನಾಯಕತ್ವದ ಸರಕಾರಗಳ ಜನವಿರೋಧಿ ನೀತಿಗಳನ್ನು ಅಷ್ಟೇ ಧೃಢವಾಗಿ ವಿರೊಧಿಸಿದ್ದವು. ಇಂತಹ ಕಟುವಾದ ಜನವಿರೋಧಿ ನೀತಿಗಳ ಜಾರಿಯೇ ಕೋಮುವಾದಿ ಬಲಪಂಥಿಯ ಬಿಜೆಪಿ ಸರಕಾರದ ರಚನೆಗೆ ಹಾದಿ ಮಾಡಿಕೊಟ್ಟಿತು ಎಂದೂ ಮರೆಯುವಂತಿಲ್ಲ. ಅದು ಮರುಕಳಿಸದಂತೆ ಎಡಪಕ್ಷಗಳು ಮಾತ್ರ ಮಾಡಬಲ್ಲವು.
ಲೋಕಸಭೆಯಲ್ಲಿ ತೀವ್ರ ಹಾಗೂ ಅಧ್ಯಯನ ಪೂರ್ಣವಾದ ಚರ್ಚೆಗೆ ಸಿಪಿಐ(ಎಂ) ಹೆಸರುವಾಸಿಯಾಗಿದೆ. ಸಿಪಿಐ(ಎಂ) ಪ್ರತಿನಿಧಿಗಳು ಯಾರ ಮುಲಾಜಿಲ್ಲದೆ ನಿರ್ಭಿಡೆಯಿಂದ ಮಾತನಾಡುತ್ತಾರೆ. ಸೈದ್ಧಾಂತಿಕ ಹಾಗೂ ಜನಪರ ನಿಲುವುಗಳ ವಿಷಯದಲ್ಲಿ ಅವರು ರಾಜಿ ಮಾಡಿಕೊಳ್ಳುವುದಿಲ್ಲ. ತಾನು ಬೆಂಬಲಿಸುವ ಒಂದು ರಾಜಕೀಯ ಮೈತ್ರಿ ಕೂಟವನ್ನು ಅಗತ್ಯಬಿದ್ದರೆ ಟೀಕಿಸಲು ಸಿಪಿಐ(ಎಂ) ಹಿಂಜರಿಯುವುದಿಲ್ಲ.
ಆದ್ದರಿಂದ ಲೋಕಸಭೆಯಲ್ಲಿ ಸಿಪಿಐ(ಎಂ) ಪ್ರಾತಿನಿಧ್ಯವನ್ನು ಹೆಚ್ಚಿಸಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಾರ್ಮಿಕ ನಾಯಕಿ, ಹೋರಾಟಗಾರ್ತಿ ಎಸ್. ವರಲಕ್ಷ್ಮಿ ಅವರನ್ನು ಗೆಲ್ಲಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಪರಿಸ್ಥಿತಿ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಲಹಂಕ ಮಾತ್ರ ನಗರ ಕ್ಷೇತ್ರವಾಗಿದ್ದು ಉಳಿದ ಎಲ್ಲಾ ೭ ಕ್ಷೇತ್ರಗಳು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಗ್ರಾಮೀಣ ಪ್ರದೇಶವೇ ಆಗಿವೆ. ಯಲಹಂಕ ವಿಧಾನಸಭಾ ಕ್ಷೇತ್ರವು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ವಲಸೆ ಕಾರ್ಮಿಕರು, ಹಮಾಲಿ ಕಾರ್ಮಿಕರು, ಆಟೋ ಚಾಲಕರು, ಗಾಮೆಂಟ್ ಕೆಲಸಗಾರರು, ಮನೆ ಕೆಲಸಗಾರರು, ಮಧ್ಯಮ ವರ್ಗದ ನೌಕರರು, ವರ್ತಕರು ಪ್ರಧಾನವಾಗಿರುವ ಕ್ಷೇತ್ರವಾಗಿದೆ.
ಉಳಿದ 7 ಕೃಷಿ ಪ್ರಧಾನ ಕ್ಷೇತ್ರಗಳಲ್ಲಿ ರೈತರು, ಕೂಲಿಕಾರರು, ಅಂಗನವಾಡಿ, ಬಿಸಿಯೂಟ, ಪಂಚಾಯತ್, ಡೈರಿಗಳಲ್ಲಿ, ಪುರಸಭೆಗಳಲ್ಲಿ ದುಡಿಯುವವರು, ನೇಕಾರರು, ರೇಷ್ಮೆ ರೀಲರುಗಳು, ಚಿಲ್ಲರೆ ವ್ಯಾಪಾರಸ್ಥರು ಇದ್ದಾರೆ. ಇಲ್ಲಿಯ ರೈತರು ಒಂದೆಡೆ ರೇಷ್ಮೆ, ದ್ರಾಕ್ಷಿ, ತರಕಾರಿ ಬೆಳೆಯುತ್ತಾ ಮತ್ತೊಂದೆಡೆ ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಮೋದಿ ಸರಕಾರದ ನೋಟು ನಿಷೇಧ, ಜಿ.ಎಸ್.ಟಿ. ಮುಂತಾದ ನೀತಿಗಳು ಇವರೆಲ್ಲರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ.
ಬರಪೀಡಿತ ಜಿಲ್ಲೆ
ರಾಜ್ಯದಲ್ಲಿ ನಿರಂತರ ಬರಗಾಲ ಮತ್ತು ಅನಾವೃಷ್ಠಿಗೆ ತುತ್ತಾಗುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ಒಂದು. ಇಲ್ಲಿ ಕುಡಿಯಲು ಶುದ್ಧ ನೀರು ಸಿಗದಂತಾಗಿ ಫ್ಲೋರೈಡ್, ಸಲ್ಫೇಟ್ ಮಿಶ್ರಿತ ನೀರನ್ನು ಕುಡಿದು ಜನ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಫಲವತ್ತಾದ ಮಣ್ಣು ಲಭ್ಯವಿದ್ದರೂ ಬೇಸಾಯಕ್ಕೆ ನೀರಿಲ್ಲದೆ ರೈತರು ಪರಿತಪಿಸುತ್ತಿರುತ್ತಾರೆ.
ಸಿಪಿಐ(ಎಂ) ಮುಖಂಡರೂ, ಬಾಗೇಪಲ್ಲಿ ಮಾಜಿ ಶಾಸಕರೂ ಆಗಿರುವ ಜಿ.ವಿ. ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಶಾಶ್ವತ ನೀರಾವರಿಗಾಗಿ ಇಲ್ಲಿ ಗಮನಾರ್ಹ ಹೋರಾಟಗಳನ್ನು ನಡೆಸಲಾಗಿದೆ. ಡಾ. ಪರಮಶಿವಯ್ಯ ವರದಿ ಆಧಾರದಲ್ಲಿ ಯೋಜನೆಯನ್ನು ರೂಪಿಸುವ ಬದಲು ಎತ್ತಿನ ಹೊಳೆಯಿಂದ ನೀರು ತರುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಸಾಧಕ ಬಾಧಕಗಳ ಕುರಿತು ಇನ್ನೂ ಅಧ್ಯಯನ ನಡೆಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ಈ ಕೆಳಗಿನ ಕಾರ್ಯಕ್ರಮಗಳನ್ನು ಮತದಾರರ ಮುಂದಿಡುತ್ತದೆ.
- ಡಾ. ಪರಮಶಿವಯ್ಯ ಸಮಿತಿ ಶಿಫಾರಸು ಆಧಾರಿತ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನ
- ಎಲ್ಲ ಕಾರ್ಮಿಕರಿಗೂ ಮಾಸಿಕ ಕನಿಷ್ಠ ವೇತನ ರೂ. ೧೮ ಸಾವಿರ, ಕಾಯಮೇತರ ಕಾರ್ಮಿಕರ ಕಾಯಂಗೆ ಕಾನೂನು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ
- ಅಂಗನವಾಡಿ, ಬಿಸಿಯೂಟ, ಆಶಾ, ಗ್ರಾಮ ಪಂಚಾಯತ್, ಮತ್ತು ಖಾಸಗಿ ಹಾಗೂ ಸರಕಾರಿ ವಲಯದ ಗುತ್ತಿಗೆ ಕಾರ್ಮಿಕರಿಗೆ ಸೇವಾ ಮತ್ತು ಸಾಮಾಜಿಕ ಭದ್ರತೆ
- ಈ ಕ್ಷೇತ್ರದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ
- ವಿದ್ಯುತ್ ಮಗ್ಗ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳ ಅನುಷ್ಠಾನ
- ಹೈನುಗಾರರಿಗೆ ಮತ್ತು ರೇಷ್ಮೆ ಬೆಳೆಗಾರರಿಗೆ ಬೆಲೆ ಕುಸಿತದ ಹಾವಳಿಯಿಂದ ರಕ್ಷಣೆ
- ಬೀದಿ ಬದಿಯ ವ್ಯಾಪಾರಿಗಳ ಹಾಗೂ ಚಿಲ್ಲರೆ ವರ್ತಕರ ಹಿತರಕ್ಷಣೆ
- ಸ್ವಂತ ಮನೆ ಇಲ್ಲದ ಬಡ ಕುಟುಂಬಗಳನ್ನು ಗುರುತಿಸಿ ನಿವೇಶನ ಹಾಗೂ ವಾಸಕ್ಕೆ ಮನೆ ಒದಗಿಸುವುದು
- ದಲಿತರಿಗೆ ಸಂವಿಧಾನಾತ್ಮಕ ಮೀಸಲಾತಿಯ ಜಾರಿ ಮತ್ತು ಖಾಸಗಿ ಕ್ಷೇತ್ರಕ್ಕೆ ವಿಸ್ತಾರ, ದೌರ್ಜನ್ಯ ತಡೆ ಕಾಯ್ದೆಯ ಕಟ್ಟುನಿಟ್ಟಿನ ಜಾರಿ, ವಿಶೇಷ ನೆರವು ಯೋಜನೆ ಜಾರಿ
- ಅಲ್ಪ ಸಂಖ್ಯಾತರ ಹಿತರಕ್ಷಣೆಗಾಗಿ ರಾಜೇಂದ್ರ ಸಾಚಾರ್ ಸಮಿತಿ ಮತ್ತು ರಂಗನಾಥ ಮಿಶ್ರ ಸಮಿತಿ ವರದಿಗಳ ಜಾರಿ
ಎಸ್. ವರಲಕ್ಷ್ಮಿ ಅವರಿಗೆ ನಿಮ್ಮ ಮತ
ಸಿಪಿಐ(ಎಂ) ಅಭ್ಯರ್ಥಿಯಾಗಿರುವ ವರಲಕ್ಷ್ಮಿಯವರು, ಕೋಲಾರದ ಮಾಲೂರು ತಾಲ್ಲೂಕಿನ ಹಳ್ಳಿಯೊಂದರಲ್ಲಿ ಹಿಂದುಳಿದ ಸಮುದಾಯದ ಬಡಕುಟುಂಬದಿಂದ ಬಂದವರು. ಅವರು ಕೆಲಸ ಮಾಡುತ್ತಿದ್ದ ಕುಂಬಳಗೋಡು ಕಾರ್ಖಾನೆಯಲ್ಲಿ ೧೯೯೩ ರಲ್ಲಿ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ ವರಲಕ್ಷ್ಮಿಯವರಿಗೆ ಪೊಲೀಸರು ಹೊಡೆದು ಹಿಂಸಿಸಿ ಜೈಲಿಗಟ್ಟಿದರು. ಇದರಿಂದ ವಿಚಲಿತರಾಗುವ ಬದಲು ಜೈಲಿನಿಂದ ಬಿಡುಗಡೆ ಹೊಂದಿದ ಮರುವರ್ಷವೇ ಅವರು ಸಿಐಟಿಯು ನ ಪೂರ್ಣಾವಧಿ ಕಾರ್ಯಕರ್ತೆಯಾಗಿ ಕಾರ್ಮಿಕರನ್ನು ಸಂಘಟಿಸಲು ದೃಢ ಸಂಕಲ್ಪ ಮಾಡಿದರು.
ಮುಂದಿನ ದಿನಗಳಲ್ಲಿ ಅಂಗನವಾಡಿ, ಬಿಸಿಯೂಟ, ಗುತ್ತಿಗೆ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರ ಅಲ್ಲದೇ ಸಂಘಟಿತ ಮತ್ತು ಅಸಂಘಟಿತ ವಲಯದ ವಿವಿಧ ಕಾರ್ಮಿಕರ ಹಕ್ಕುಗಳಿಗಾಗಿ, ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಸಿಐಟಿಯು ನೇತೃತ್ವದಲ್ಲಿ ಹೋರಾಟಗಳನ್ನು ಸಂಘಟಿಸುತ್ತಾ ಮುಂಚೂಣಿಯಲ್ಲಿ ನಿಂತರು. ದೇಶದ ಗಮನ ಸೆಳೆಯುವ ರೀತಿಯಲ್ಲಿ ಸಹಸ್ರಾರು ಮಹಿಳೆಯರ ಅಹೋರಾತ್ರಿ ಹೋರಾಟಗಳಲ್ಲಿ ತೊಡಗಿಸಿಕೊಂಡರು.
ಕಳೆದ ೨೫ ವರ್ಷಗಳಿಂದ ರಾಜ್ಯದ ಕಾರ್ಮಿಕರು, ಮಹಿಳೆಯರು ಮತ್ತು ದುಡಿಯುವ ಜನರ ಸೇವೆಗೆ ವರಲಕ್ಷ್ಮಿಯವರು ಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ವರಲಕ್ಷ್ಮಿಯವರು ಸಿಐಟಿಯು ರಾಜ್ಯ ಘಟಕದ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದಾರೆ. ದುಡಿಯುವ ಜನರ ಪಕ್ಷವಾದ ಸಿಪಿಐ(ಎಂ) ನ ಪ್ರಮುಖ ರಾಜ್ಯ ನಾಯಕರಾಗಿ ಬೆಳೆದಿದ್ದಾರೆ.
ನಿಮ್ಮ ಮತ ಎಸ್. ವರಲಕ್ಷ್ಮಿ ಅವರಿಗೆ
-
ಸಿಪಿಐ(ಎಂ) ಗೆಲ್ಲಿಸಿ
-
ಲೋಕಸಭೆಯಲ್ಲಿ ಜನಪರ ದನಿ ಮೊಳಗಿಸಿ