ಎಡಪಕ್ಷಗಳ ಹೆಚ್ಚುತ್ತಿರುವ ಸವಾಲನ್ನು ತೋರಿಸುತ್ತದೆ
ಎಪ್ರಿಲ್ 9 ರಂದು ಪಶ್ಷಿಮ ಬಂಗಾಲದ ಅಸನ್ ಸೋಲ್ ಲೋಕಸಭಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಗೌರಾಂಗ ಚಟರ್ಜಿ ಪಶ್ಚಿಮ ಬರ್ದಮಾನ್ ಜಿಲ್ಲೆಯ ಬರಬಾನಿ ಪೊಲಿಸ್ ಠಾಣೆಯ ಅಡಿಯಲ್ಲಿ ಬರುವ ಮದನಪುರ ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ. ಟಿಎಂಸಿ ಯಜಮಾನಿಕೆಯಲ್ಲಿರುವ ಕಲ್ಲಿದ್ದಲು ಮಾಫಿಯಾದ ಗೂಂಡಾಗಳು ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅದೇ ದಿನ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಡಾ. ಫವುದ್ ಹಲೀಂ ಮೇಲೂ ಆಳುವ ಪಕ್ಷದ ಗೂಂಡಾಗಳು ಮಾಡಿರುವ ಹಲ್ಲೆಯಿಂದಾಗಿ ಅವರು ತೀವ್ರವಾಗಿ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಿದೆ.
ಅದರ ಹಿಂದಿನ ದಿನ ಬಸಿರ್ಹಾಟ್ ಕ್ಷೇತ್ರದ ಸಿಪಿಐ ಅಭ್ಯರ್ಥಿ ಪಲ್ಲಬ್ ಸೆನ್ಗುಪ್ತರವರ ಮೇಲೆ ಹಲ್ಲೆ ನಡೆದಿದೆ, ಅವರು ಚುನಾವಣಾ ಪ್ರಚಾರವನ್ನು ಮುಂದುವರೆಸುವ ಧೈರ್ಯ ತೋರಿದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟಿಎಂಸಿ ಗೂಂಡಾಗಳು ಬೆದರಿಸಿದ್ದಾರೆ.
ಈ ಹಲ್ಲೆಗಳನ್ನು, ಬೆದರಿಕೆಗಳನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ದಿನ ಬೆಳಗಾದರೆ ಮುಖ್ಯಧಾರೆಯ ಕಾರ್ಪೊರೇಟ್ ಮಾಧ್ಯಮಗಳಲ್ಲಿನ ಚುನಾವಣಾ ಸರ್ವೆಗಳು ಎಂದು ಹೇಳಿಕೊಳ್ಳುವ ವರದಿಗಳು ಪಶ್ಚಿಮ ಬಂಗಾಲದಲ್ಲಿ ಎಡಶಕ್ತಿಗಳು ಸತ್ತೇ ಹೋಗುತ್ತವೆ ಎಂದು ಸಂತೋಷದಿಂದ ಭವಿಷ್ಯ ನಡಿಯುತ್ತಿವೆ. ಹಾಗಿದ್ದರೆ ಎಡಪಕ್ಷಗಳ ಕಾರ್ಯಕರ್ತರು ಮಾತ್ರವಲ್ಲ ಅಭ್ಯರ್ಥಿಗಳ ಮೇಲೆಯೂ ಹಲ್ಲೆಗಳು ಏಕೆ ಹೆಚ್ಚುತ್ತಿವೆ? ಇಂತಹ ಮಾರಣಾಂತಿಕ ಹಲ್ಲೆಗಳು, ವಾಸ್ತವಿಕವಾಗಿ, ಬಹುಪಾಲು ಮತದಾರರಿಗೆ ಮತದಾನದ ಹಕ್ಕನ್ನೂ ನಿರಾಕರಿಸುವ ಅಳುವ ಪಕ್ಷ ಟಿಎಂಸಿಯ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹಿ ಧೋರಣೆಗಳಿಗೆ ಎಡರಂಗ ಸವಾಲುಗಳನ್ನು ಒಡ್ಡಿದೆ ಎಂಬುದನ್ನು ಎತ್ತಿ ತೋರುತ್ತವೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಕೆಂಬಾವುಟವನ್ನು ಇಂತಹ ಭಯೋತ್ಪಾದಕ ತಂತ್ರಗಳಿಂದ ದಮನ ಮಾಡಲು ಸಾಧ್ಯವಿಲ್ಲೆ ಎಂದು ಸಿಪಿಐ(ಎಂ), ಇತರ ಎಡಪಕ್ಷಗಳು ಮತ್ತು ಪ್ರಜಾಪ್ರಭುತ್ವವಾದಿ ಮನೋಭಾವದ ಜನಗಳು ಪುನರುಚ್ಚರಿಸುತ್ತಾರೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಪಶ್ಚಿಮ ಬಂಗಾಲದಲ್ಲಿ ಮುಕ್ತ ಮತ್ತು ನ್ಯಾಯಯುತ ಮತದಾನ ನಡೆಯುವಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಈ ಹಿಂದೆ ಹಲವು ಬಾರಿ ಕೇಳಲಾಗಿದ್ದು, ಈಗ ಮತ್ತೊಮ್ಮೆ ಆದನ್ನು ಪೊಲಿಟ್ ಬ್ಯುರೊ ಆಗ್ರಹಿಸಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನೇ ಶಿಥಿಲಗೊಳಿಸುತ್ತಿರುವ ಈ ಶಕ್ತಿಗಳನ್ನು ದೂರ ತಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ರಾಜ್ಯದ ಮತ್ತು ಇಡೀ ದೇಶದ ಪ್ರಜಾಪ್ರಭುತ್ವ ಮನೋಭಾವದ ಜನಗಳಿಗೆ ಮನವಿ ಮಾಡಿಕೊಂಡಿದೆ.