ಚುನಾವಣಾ ಬಾಂಡ್ ಕುರಿತ ಮಧ್ಯಂತರ ಆದೇಶದ ಬಗ್ಗೆ ಸಿಪಿಐ(ಎಂ) ಪೊಲಿಟ್ಬ್ಯುರೊ
ಮೋದಿ ಸರಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗಳ ಸಂದರ್ಭದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಎಪ್ರಿಲ್ 12ರಂದು ಒಂದು ಮಧ್ಯಂತರ ಆದೇಶವನ್ನು ನೀಡಿದ್ದು, ಇದು ಸಕಾರಾತ್ಮಕವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಸಂಸತ್ತಿನಲ್ಲಿ ಸರಿಯಾದ ಮತ್ತು ಸಮಗ್ರವಾದ ಚರ್ಚೆಯಿಲ್ಲದೆ, ಈ ಕುರಿತ ಕಾನೂನಿನಲ್ಲಿ ಬದಲಾವಣೆಗಳನ್ನು ಅವಸರವಸರವಾಗಿ ಮುಂದೊತ್ತಲಾಯಿತು. ಇದರ ಉದ್ದೇಶ ರಾಜಕೀಯ ಪಕ್ಷಗಳಿಗೆ, ವಿಶೇಷವಾಗಿ ಚುನಾವಣೆಗಳ ಸಂದರ್ಭದಲ್ಲಿ ಕಾರ್ಪೊರೇಟ್ ವಂತಿಗೆಗಳಿಗೆ ಇರುವ ಮಿತಿಗಳನ್ನು ತೆಗೆಯುವುದೇ ಆಗಿತ್ತು. ಈ ಬದಲಾವಣೆಗಳು ಈ ಇಡೀ ವ್ಯವಸ್ಥೆಯನ್ನು ಚಮಚಾ ಬಂಡವಾಳಶಾಹಿಗೆ ಈಡು ಮಾಡಿ ಅದಕ್ಕೆ ಪ್ರತಿಯಾಗಿ ಆಳುವ ಪಕ್ಷದಿಂದ ಪ್ರಯೋಜನಗಳನ್ನು ಗಿಟ್ಟಿಸುವುದಕ್ಕೆ ಒಂದು ಸ್ಪಷ್ಟ ಆಧಾರ ಕಲ್ಪಿಸಲಿಕ್ಕಾಗಿ ಎಂದು ಗಮನಿಸಿರುವ ಪೊಲಿಟ್ ಬ್ಯುರೊ ನಿಧಿ ನೀಡಿಕೆಯನ್ನು ಪಾರದರ್ಶಕಗೊಳಿಸುವುದಕ್ಕೆ ಸರಕಾರದ ಬದ್ಧ ವಿರೋಧವಿರುವುದನ್ನು ಸವೋಚ್ಚ ನ್ಯಾಯಾಲಯದಲ್ಲಿ ಅಟಾರ್ನಿ ಜನರಲ್ ಅವರ ವಾದ ಸ್ಪಷ್ಟವಾಗಿ ತೋರಿಸಿದೆ ಎಂದಿದೆ. ಅಟಾರ್ನಿ ಜನರಲ್ ಅವರು “ಎಲ್ಲಿಂದ ಹಣ ಬರುತ್ತದೆ ಎಂಬುದು ಮತದಾರರಿಗೆ ಬೇಕಿಲ್ಲ. ಪಾರದರ್ಶಕತೆ ದೇಶದ ಒಂದು ಮಂತ್ರವೆಂದು ಕಾಣಬೇಕಿಲ್ಲ” ಎಂದು ಹೇಳಿದರು!.
ಎಪ್ರಿಲ್ 12ರ ಮಧ್ಯಂತರ ತೀರ್ಪು, ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ಗಳಿಂದ ಬಂದಿರುವ ತಮ್ಮಸಂಗ್ರಹವನ್ನು ಮತ್ತು ಅದರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಮೇ 30ರೊಳಗೆ ಸೀಲ್ ಆದ ಲಕೋಟೆಗಳಲ್ಲಿ ಸಲ್ಲಿಸಬೇಕು ಎಂದು ಆದೇಶಿಸುವ ಮೂಲಕ ಇದರಲ್ಲಿ ಸ್ವಲ್ಪ ಮಟ್ಟಿನ ಹೊಣೆಗಾರಿಕೆಯನ್ನು ತಂದಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ. ಈ ಪ್ರಶ್ನೆಯ ಗಂಭೀರತೆಯಿಂದಾಗಿ ಮತ್ತು ಅದು ನಮ್ಮ ಪ್ರಜಾಪ್ರಭುತ್ವದ ಸ್ವರೂಪದ ಮೇಲೆಯೇ ಹೊಂದಿರುವ ಪರಿಣಾಮದಿಂದಾಗಿ ಈ ವಿಷಯದಲ್ಲಿ ಹೆಚ್ಚು ಆಳವಾದ ಪರೀಕ್ಷಣೆ ಮಾಡಲಾಗುತ್ತದೆ ಎಂದೂ ಈ ಮಧ್ಯಂತರ ಆದೇಶ ಆಶ್ವಾಸನೆ ನೀಡಿದೆ.
ಈ ಮಧ್ಯಂತರ ಆದೇಶವೇ ಪ್ರಧಾನ ಮಂತ್ರಿ ಮೋದಿ, ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಮತ್ತು ಬಿಜೆಪಿ ತಳೆದಿರುವ ನಿಲುವನ್ನು ಧ್ವಂಸ ಮಾಡಿದೆ ಎಂದು ಪೊಲಿಟ್ ಬ್ಯುರೊ ಸಕಾರಾತ್ಮಕವಾಗಿ ಟಿಪ್ಪಣಿ ಮಾಡಿದೆ. ಇವರೆಲ್ಲ ಅಪಾರದರ್ಶಕವಾದ, ಗುಪ್ತ ಚುನಾವಣಾ ಬಾಂಡ್ ಗಳಿಗಾಗಿ ಅದನ್ನು ಒಂದು ಹಣ ಮಸೂದೆಯಾಗಿ ತೂರಿಸಿದರು. ಆದರೆ ನ್ಯಾಯಾಲಯ ಪಾರದರ್ಶಕತೆ ಚುನಾವಣಾ ನಿಧಿ ನೀಡಿಕೆಯ ಆಧಾರಭೂತ ನೀತಿ ಎಂದು ಸ್ಪಷ್ಟವಾಗಿ ಹೇಳಿದೆ. ಜನಗಳಿಗೆ ಯಾವ ರಾಜಕೀಯ ಪಕ್ಷ ಯಾರಿಂದ ಎಷ್ಟು ಹಣವನ್ನು ಪಡೆದಿದೆ ಎಂದು ತಿಳಿಯುವ ಹಕ್ಕು ಇದೆ ಎಂದು ಈ ಮೂಲಕ ಸ್ಪಷ್ಟಗೊಳಿಸಲಾಗಿದೆ.
ಸಿಪಿಐ(ಎಂ) ಕೂಡ ಅರ್ಜಿದಾರನಾಗಿರುವ ಕಾನೂನು ಸಮರ ಸದ್ಯಕ್ಕೆ ಸ್ವಲ್ಪ ಸಕಾರಾತ್ಮಕ ಫಲಿತಾಂಶ ನೀಡಿದೆ ಎಂದು ತೃಪ್ತಿ ವ್ಯಕ್ತಪಡಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಚುನಾವಣಾ ನಿಧಿ ಸಂಗ್ರಹವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲು ಮತ್ತು ಕಾರ್ಪೊರೇಟ್ ಪ್ರಭಾವದಿಂದ ಅದನ್ನು ಮುಕ್ತಗೊಳಿಸಲು, ಆಮೂಲಕ ಕಾರ್ಪೊರೇಟ್- ಆಳುವ ಪಕ್ಷದ ಕೂಟವನ್ನು ಮುರಿಯುವತ್ತ ಸಾಗಲು ಈ ಹೋರಾಟವನ್ನು ಮುಂದೊಯ್ಯುವುದಾಗಿ ಪುನರುಚ್ಚರಿಸಿದೆ.
ಕಪ್ಪು ಹಣದ ದಾನಿಗಳು ಇನ್ನು ಈ ದಾರಿಯ ಬಗ್ಗೆ ಭಯ ಪಡುತ್ತಾರೆ-ಯೆಚುರಿ
ಈ ಮಧ್ಯಂತರ ಆದೇಶ ಪ್ರಧಾನ ಮಂತ್ರಿ ಮೋದಿ, ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಮತ್ತು ಬಿಜೆಪಿ ತಳೆದಿರುವ ನಿಲುವನ್ನು ಧ್ವಂಸ ಮಾಡಿದೆ, ನ್ಯಾಯಾಲಯ ಚುನಾವಣಾ ನಿಧಿ ಸಂಗ್ರಹದಲ್ಲಿ ಪಾರದರ್ಶಕತೆ ಆಧಾರಭೂತ ನೀತಿ ಎಂದು ನಿರ್ಧರಿಸಿದೆ ಎಂದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಬಿಜೆಪಿ ಮುಂದೊತ್ತುತ್ತ ಬಂದಿರುವ ದಾನಿಗಳ ಅನಾಮಧೇಯತೆ ಕೊನೆಗಾಣುತ್ತಿದೆ, ಕಪ್ಪು ಹಣದ ದಾನಿಗಳು ಇನ್ನು ಮುಂದೆ ಈ ಚುನಾವಣಾ ಬಾಂಡಿನ ದಾರಿ ಹಿಡಿಯಲು ಭಯ ಪಡುತ್ತಾರೆ ಎಂದು ಟಿಪ್ಪಣಿ ಮಾಡಿದ್ದಾರೆ.
ಇಂದು ಚುನಾವಣಾ ಆಯೋಗದ ಬಳಿ ಮಾಹಿತಿಯಿದೆ. ನಾಳೆ ಸಾರ್ವಜನಿಕರೂ ಅದನ್ನು ಪಡೆಯುತ್ತಾರೆ ಎಂದು ಮುಂದುವರೆದು ಅವರು ಹೇಳಿದ್ದಾರೆ.