-
ಶಬರಿಮಲೆ ಕುರಿತಂತೆ ಪ್ರಧಾನಿಗಳ ಕಲುಷಿತಕಾರೀ, ಧ್ರುವೀಕರಣದ ಟಿಪ್ಪಣಿಯ ಮೇಲೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಿ – ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ಆಗ್ರಹ
- ಮೋದಿ ಆಚಾರ ಸಂಹಿತೆಯನ್ನು ಉಲ್ಲಂಫಿಸುತ್ತಿದ್ದಾರೆ ಎಂಬುದಕ್ಕಷ್ಟೇ ಅಲ್ಲ, ಚುನಾವಣಾ ಆಯೋಗದ ಆದೇಶಕ್ಕೂ
ಸವಾಲು ಒಡ್ಡುತ್ತಿದ್ದಾರೆ ಎಂಬುದರ ಸ್ಪಷ್ಟ ಉದಾಹರಣೆ :
ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯ ನೀಲೋತ್ಪಲ ಬಸು ಅವರು ಎಪ್ರಿಲ್ 16ರಂದು ಮುಖ್ಯ ಚುನಾವಣಾ ಅಯುಕ್ತರಿಗೆ ಮತ್ತೊಂದು ಪತ್ರ ಬರೆಯಬೇಕಾಗಿ ಬಂದಿದೆ. ಇದು ಚುನಾವಣಾ ರ್ಯಾಲಿಗಳಲ್ಲಿ ಶಬರಿಮಲೆ ಕುರಿತಂತೆ ಸ್ವತಃ ಪ್ರಧಾನ ಮಂತ್ರಿಗಳ ಕೋಮುಧ್ರುವೀಕರಣ ತರುವ ಉದ್ದೇಶದ ಮಾತುಗಳನ್ನು ಕುರಿತಾದ್ದು.
ದೇಶದ ಸವೋಚ್ಚ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಧ್ರುವೀಕರಣದ ಪ್ರಯತ್ನಗಳ ವಿರುದ್ಧ ತಾನಾಗಿಯೇ ಕ್ರಮ ಕೈಗೊಳ್ಳಲು ಸಾಕಷ್ಟು ಅಧಿಕಾರಗಳು ಇವೆ, ಅವನ್ನು ಚಲಾಯಿಸಬೇಕು ಎಂದು ಇತ್ತೀಚೆಗೆ ನೆನಪಿಸಿದೆ. ಮತ್ತು ಚುನಾವಣಾ ಆಯೋಗ ಕೂಡ ಕೆಲವು ರಾಜಕೀಯ ಮುಖಂಡರ ಮೇಲೆ ಆದೇಶಗಳನ್ನು ಹೊರಡಿಸಿದೆ ಎಂಬುದು ಗಮನಾರ್ಹ. ಈಗ ಮಾದರಿ ಆಚಾರ ಸಂಹಿತೆಯ ಮತ್ತೊಂದು ನಗ್ನ ಉಲ್ಲಂಘನೆಯ ಪ್ರಕರಣ ನಡೆದಿದ್ದು, ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾತ್ರದ ವಿರುದ್ಧವೂ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ನೀಲೋತ್ಪಲ ಬಸು ತಮ್ಮ ಪತ್ರದಲ್ಲಿ ಬಲವಾಗಿ ಆಗ್ರಹಿಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಸಮಾಜವನ್ನು ಧ್ರುವೀಕರಿಸುವ ವಿಷಯಗಳನ್ನು ಎಳೆದು ತಂದು ವಾತಾವರಣವನ್ನು ಕಲುಷಿತಗೊಳಿಸಲಾಗುತ್ತಿದೆ. ಎಪ್ರಿಲ್ 13ರಂದು ನರೇಂದ್ರ ಮೋದಿಯವರು ತಮಿಳುನಾಡಿನ ರಾಮನಾಥಪುರಂನ ಥೇಣಿಯಲ್ಲಿ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಹೇಳಿರುವ ಮಾತುಗಳು ಈ ಪ್ರವೃತ್ತಿಯನ್ನು ಎತ್ತಿ ತೋರಿವೆ.
ಥೇಣಿಯ ಚುನಾವಣಾ ಸಭೆಯಲ್ಲಿ ಮಾತಾಡುತ್ತ ಅವರು, ಕಮ್ಯುನಿಸ್ಟರು ಮತ್ತು ಮುಸ್ಲಿಂ ಲೀಗ್ ಶಬರಿಮಲೆಯಲ್ಲಿ ಅಪಾಯಕಾರಿ ಆಟವಾಡುತ್ತಿದ್ದಾರೆ ಮತ್ತು “ನಂಬಿಕೆಯ ಬುಡಕ್ಕೇ ಏಟು ಹಾಕಲು ಸಿದ್ಧರಾಗುತ್ತಿದ್ದಾರೆ ಎಂದು ಒತ್ತಿ ಹೇಳಿದರು. ಮತ್ತು “ಬಿಜೆಪಿ ಇರುವ ವರೆಗೆ ಯಾರೂ ನಮ್ಮ ನಂಬಿಕೆಯನ್ನು ಧ್ವಂಸ ಮಾಡಲು ಸಾಧ್ಯವಿಲ್ಲ” ಎಂದೂ ಒತ್ತಿ ಹೇಳಿದರು.
ಇದು ಹೇಗೆ ನರೇಂದ್ರ ಮೋದಿಯವರು ಮಾದರಿ ಆಚಾರ ಸಂಹಿತೆಯನ್ನು ಉಲ್ಲಂಫಿಸುತ್ತಿದ್ದಾರೆ ಎಂಬುದಕ್ಕಷ್ಟೇ ಅಲ್ಲ, ಪರೋಕ್ಷವಾಗಿ ಚುನಾವಣಾ ಆಯೋಗದ ಆದೇಶಕ್ಕೂ ಹೇಗೆ ಸವಾಲು ಒಡ್ಡುತ್ತಿದ್ದಾರೆ ಎಂಬುದರ ಒಂದು ಸ್ಪಷ್ಟ ಉದಾಹರಣೆ ಎಂದು ನೀಲೋತ್ಪಲ ಬಸು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಶಬರಿಮಲೆ ದೇವಸ್ಥಾನ ಮತ್ತು ಅಯ್ಯಪ್ಪ ದೇವರ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಬಳಸಬಾರದು ಎಂದು ಚುನಾವಣಾ ಆಯೋಗ ಈ ಮೊದಲೇ ರಾಜಕೀಯ ಪಕ್ಷಗಳಿಗೆ ಆದೇಶ ಹೊರಡಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಸಂದರ್ಭದಲ್ಲಿ ಸಿಪಿಐ(ಎಂ) ಮುಖಂಡರು ತಮ್ಮ ಪತ್ರದಲ್ಲಿ ಶಬರಿಮಲೆ ಪ್ರಶ್ನೆಯನ್ನು ನೆನಪಿಸಿದ್ದಾರೆ. ಎಲ್.ಡಿ.ಎಫ್. ಸರಕಾರ ತಾನು ನಂಬಿಕೆಯ ವಿರುದ್ಧ ನಿಂತಿಲ್ಲ ಎಂದು ಮತ್ತೆ-ಮತ್ತೆ ಒತ್ತಿ ಹೇಳುತ್ತ, ಸುಪ್ರಿಂ ಕೋರ್ಟಿನ ಆದೇಶದ ಜ್ಯಾರಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡು ಬಂದಿದೆ. ಇಲ್ಲಿ ನಂಬಿಕೆಯ ಪ್ರಶ್ನೆಯನ್ನು ತರುವುದರ ಮೂಲಕ ಮತ್ತು ಕೇರಳದ ಎಲ್.ಡಿ.ಎಫ್. ಸರಕಾರವನ್ನು ದೂಷಿಸುವ ಮೂಲಕ ಪ್ರಧಾನ ಮಂತ್ರಿಗಳು “ನಂಬಿಕೆ”ಯ ಜನವಿಭಾಗಕ್ಕೆ ಮನವಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ , “ಇದು ಮಾದರಿ ಆಚಾರ ಸಂಹಿತೆಗೆ ಮತ್ತು ತಮ್ಮ ನಿರ್ದಿಷ್ಟ ಆದೇಶಕ್ಕೆ ಕೂಡ ವಿರುದ್ಧವಾಗಿದೆ” ಎಂಬುದನ್ನು ಸಿಪಿಐ(ಎಂ) ಈ ಪತ್ರದಲ್ಲಿ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿದೆ. ಅಲ್ಲದೆ, ಮಾಧ್ಯಮಗಳು ಮತ್ತು ಇಂಟರ್ ನೆಟ್ ನ ಈ ದಿನಗಳಲ್ಲಿ ಈ ಮಿತಿಗೆ ಭೌಗೋಳಿಕ ಗಡಿಗಳು ಇಲ್ಲ ಎಂದೂ ಸಿಪಿಐ(ಎಂ) ಹೇಳಿದೆ.
“ಭಾರತದ ಚುನಾವಣಾ ಆಯೋಗವೇ ಒಂದು ಸ್ವತಂತ್ರ ಸಂವಿಧಾನಿಕ ಪ್ರಾಧಿಕಾರವಾಗಿರುವುದರಿಂದ ಮತ್ತು ಸುಪ್ರಿಂ ಕೋರ್ಟ್ ಆದೇಶ ಸಂವಿಧಾನಿಕ ವ್ಯವಸ್ಥೆಯ ಭಾವನೆಯನ್ನು ಹೊಂದಿರುವುದರಿಂದ, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜ್ಯಾರಿಗೊಳಿಸಿದ್ದಕ್ಕೆ ಎಲ್.ಡಿ.ಎಫ್. ಸರಕಾರವನ್ನು ಮತ್ತು ಕಮ್ಯುನಿಸ್ಟರನ್ನು ದೂಷಿಸುವುದು ವಾತಾವರಣವನ್ನು ಕಲುಷಿತಗೊಳಿಸುವುದಷ್ಟೇ ಅಲ್ಲ, ಚುನಾವಣಾ ಪ್ರಚಾರದ ಮಿತಿಗಳನ್ನು ನಿರೂಪಿಸುವ ಸಂವಿಧಾನಿಕ ವ್ಯವಸ್ಥೆಯನ್ನೂ ಬುಡಮೇಲು ಮಾಡಿದಂತಾಗುತ್ತದೆ “ ಎಂದು ಸಿಪಿಐ(ಎಂ)ಅಭಿಪ್ರಾಯ ಪಟ್ಟಿದೆ.
ದೇಶದ ಸವೋಚ್ಚ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಧ್ರುವೀಕರಣದ ಪ್ರಯತ್ನಗಳ ವಿರುದ್ಧ ತಾನಾಗಿಯೇ ಕ್ರಮ ಕೈಗೊಳ್ಳಲು ಸಾಕಷ್ಟು ಅಧಿಕಾರಗಳು ಇವೆ, ಅವನ್ನು ಚಲಾಯಿಸಬೇಕು ಎಂದು ಇತ್ತೀಚೆಗೆ ನೆನಪಿಸಿರುವುದನ್ನು , ಮತ್ತು ಚುನಾವಣಾ ಆಯೋಗ ಕೂಡ ಕೆಲವು ರಾಜಕೀಯ ಮುಖಂಡರ ಮೇಲೆ ಆದೇಶಗಳನ್ನು ಕೂಡ ಹೊರಡಿಸಿರುವುದನ್ನು ಗಮನಿಸುತ್ತ, “ನಾವು, ಆದ್ದರಿಂದ, ಪ್ರಧಾನ ಮಂತ್ರಿಗಳ ಪ್ರಯತ್ನಗಳು ಮತ್ತು ನಗ್ನ ಉಲ್ಲಂಘನೆಯಲ್ಲಿ ಅವರ ಪಾತ್ರದ ವಿರುದ್ಧ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಮ್ಮನ್ನು ಬಲವಾಗಿ ಆಗ್ರಹಿಸುತ್ತೇವೆ” ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯ ನೀಲೋತ್ಪಲ ಬಸು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಈ ಉಲ್ಲಂಘನೆಯನ್ನು ಕರಾರುವಾಕ್ಕಾಗಿ ವರದಿ ಮಾಡಿರುವ ಮಾಧ್ಯಮ ವರದಿಯ ಭಾಗವನ್ನು ಈ ಪತ್ರಕ್ಕೆ ಲಗತ್ತಿಸಲಾಗಿದೆ.