ಎಲ್ಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗಬೇಕು- ಸೀತಾರಾಮ್ ಯೆಚುರಿ
ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮಗಳು ಮತ್ತು ಮತಗಟ್ಟೆ ಅಪಹರಣಗಳು ನಡೆದಿವೆ, ಗೂಂಡಾಗಳು ಈ ಮೂಲಕ ಮುಕ್ತ ಮತ್ತು ನ್ಯಾಯಯುತ ಮತದಾನ ನಡೆಯಲು ಬಿಟ್ಟಿಲ್ಲ ಎಂಬುದು ಈಗ ಭಾರತದ ಚುನಾವಣಾ ಆಯೋಗದ ತನಿಖೆಯಿಂದಲೇ ಸಿದ್ಧಗೊಂಡಿದೆ. ಇದರಿಂದಾಗಿ, ಆಯೋಗ “ಪ್ರಜಾಪ್ರಭುತ್ವದಲ್ಲಿ ನಮ್ಮ ನಂಬಿಕೆ ಮತ್ತೆ ದೃಢಗೊಳ್ಳುವಂತೆ ಮಾಡುತ್ತದೆ” ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತ , 464 ಮತಗಟ್ಟೆಗಳಲ್ಲಿ ಮರು ಮತದಾನವನ್ನು ನಡೆಸಲೇಬೇಕು, ಏಕೆಂದರೆ ಎಲ್ಲ ಮತದಾರರು ತಮ್ಮ ಹಕ್ಕನ್ನು ಸ್ವತಂತ್ರವಾಗಿ ಚಲಾಯಿಸಲು, ಸಂವಿಧಾನದ ಆದೇಶಿಸಿರುವ ರೀತಿಯಲ್ಲೇ ಸಾಧ್ಯವಾಗಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಹೇಳಿದ್ದಾರೆ.
ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ನಡೆಯಬೇಕಾಗಿದ್ದ ಮತದಾನವನ್ನು ಈಗ ಎಪ್ರಿಲ್ 23ಕ್ಕೆ ಮುಂದೂಡಲಾಗಿದ್ದು, ಅಲ್ಲಿ ಪ್ರತಿಯೊಬ್ಬ ಮತದಾರರ ಸುರಕ್ಷಿತತೆಗೆ ಸರಿಯಾದ ಖಾತರಿ ಇರುತ್ತದೆ ಎಂದೂ ಯೆಚುರಿ ಆಶಿಸಿದ್ದಾರೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯಬೇಕಾದರೆ ನಿರ್ಭೀತ ಮತದಾರರು ಅಗತ್ಯ. ಪ್ರಸ್ತುತ ಅಧಿಕಾರದಲ್ಲಿ ಇರುವ ಸರಕಾರ ಮನಬಂದಂತೆ ವರ್ತಿಸಲು ಬಿಡಲಾಗದು. ಒಂದು ಸ್ವತಂತ್ರ, ಮುಕ್ತ ಮತ್ತು ನ್ಯಾಯಯುತ ಮತದಾನವನ್ನು ನಡೆಸುವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸ ಮೂಡಿಸಬೇಕಾದ ಸಂವಿಧಾನಿಕ ಆದೇಶವನ್ನು ಯಾವುದೇ ಸರಕಾರ ತುಚ್ಛೀಕರಿಸಲು ಚುನಾವಣಾ ಆಯೋಗ ಬಿಡುವುದಿಲ್ಲ ಎಂದೂ ಯೆಚುರಿಯವರು ಆಶಯ ವ್ಯಕ್ತಪಡಿಸಿದ್ದಾರೆ.
“ನಮಗೆ ಈಗಾಗಲೇ ಗೊತ್ತಾಗಿರುವುದನ್ನು ಸ್ವತಂತ್ರವಾಗಿ ಪರೀಕ್ಷಿಸುವ ಅಧಿಕಾರಿಗಳು ಇದ್ದಾರೆ ಎಂಬುದಕ್ಕೆ ನಾವು ಕೃತಜ್ಞರು, ಮತ್ತು ಇದು ನಮ್ಮಲ್ಲಿ ಮತ್ತೆ ವಿಶ್ವಾಸವನ್ನು ಮೂಡಿಸಿದೆ. ಏಕೆಂದರೆ, ಸಾವಿರಾರು ಮಂದಿಯನ್ನು ಮತಗಟ್ಟೆಗಳಿಂದ ಹಿಂದೆ ಕಳಿಸಲಾಗಿದೆ, ಒಳಪ್ರವೇಶಿಸಿದವರಿಗೂ ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು, ಎಲ್ಲ ಮತದಾರರು ತಮ್ಮ ಪ್ರತಿನಿಧಿಯನ್ನು ದೈಹಿಕ ಅಪಾಯದ ಅಥವ ಜೀವ ಕಳಕೊಳ್ಳುವ ಸಾಧ್ಯತೆಯ ಭಯವಿಲ್ಲದೆ ಆಯ್ಕೆ ಮಾಡಲು ಸಾಧ್ಯವಾಗುವಂತಹ ಪರಿಸ್ಥಿತಿ ಏರ್ಪಡುವಂತೆ ಮಾಡುವುದು ಚುನಾವಣಾ ಆಯೋಗಕ್ಕೆ ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.