ಚುನಾವಣಾ ಆಯೋಗ ತಾನೇ ನೀಡಿರುವ ಮಾಗ೯-ನಿದೇ೯ಶನಗಳನ್ನು ಪ್ರಧಾನ ಮಂತ್ರಿಗಳೂ ಸೇರಿದಂತೆ, ಎಲ್ಲರೂ ಪಾಲಿಸುವಂತೆ ಖಾತರಿಪಡಿಸಲು ಕ್ರಮಗಳನ್ನು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮುಖ್ಯ ಚುನಾವಣಾ ಆಯುಕ್ತರಿಗೆ ಎಪ್ರಿಲ್ 22ರಂದು ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ. ಆಗ ಮಾತ್ರವೇ ಭಾರತದ ಸಂವಿಧಾನದ ಕಲಂ 324ರಲ್ಲಿ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರದ ಪಾವಿತ್ರ್ಯವನ್ನು ಎತ್ತಿ ಹಿಡಿಯಲು ಸಾಧ್ಯ ಎಂದು ತನ್ನ ಅಭಿಪ್ರಾಯ ಎನ್ನುತ್ತ ಅವರು ಮುಖ್ಯ ಚುನಾವಣಾ ಆಯುಕ್ತರು ಶೀರ್ಘವಾಗಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಆಶಿಸಿದ್ದಾರೆ.
ರಾಜಕೀಯ ಪಕ್ಷಗಳು ಸಶಸ್ತ್ರ ಪಡೆಗಳನ್ನು ಚುನಾವಣಾ ಪ್ರಯೋಜನಕ್ಕೆ ಬಳಸಿಕೊಳ್ಳಬಾರದು ಎಂಬ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಪ್ರಧಾನ ಮಂತ್ರಿಗಳು ಉಲ್ಲಂಘಿಸುತ್ತಿರುವ ಬಗ್ಗೆ ಅವರು ಈ ಪತ್ರವನ್ನು ಬರೆದಿದ್ದಾರೆ.
ರಾಷ್ಟ್ರೀಯ ಭದ್ರತೆಯ ಮತ್ತು ಭಾರತದ ಸಶಸ್ತ್ರ ಪಡೆಗಳ ಕಾರ್ಯಾಚರಣೆ ಗಳನ್ನು ಆಳುವ ಪಕ್ಷ ಚುನಾವಣಾ ಭಾಷಣಗಳಿಗೆ ಆಹಾರವಾಗಿ ಉಪಯೋಗಿಸಬಾರದು ಎಂದು ಚುನಾವಣಾ ಆಯೋಗ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿತ್ತು. ಇದನ್ನು ಸಾರ್ವತ್ರಿಕ ಚುನಾವಣೆಗಳ ಪ್ರಕಟಣೆಯ ನಂತರ ಪುನರುಚ್ಚರಿಸಲಾಗಿತ್ತು, ಆದರೆ ಇದನ್ನು ಪ್ರಧಾನ ಮಂತ್ರಿಗಳು ಸತತವಾಗಿ ಉಲ್ಲಂಘಿಸುತ್ತ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ಲಾತೂರಿನಲ್ಲಿ ಅವರು ಪುಲ್ವಾಮಾದ ಹುತಾತ್ಮರ ಹೆಸರಿನಲ್ಲಿ ಮತ ಯಾಚನೆ ಮಾಡಿರುವ ಸುದ್ದಿಯತ್ತ ಮುಖ್ಯ ಚುನಾವಣಾ ಆಯುಕ್ತರ ಗಮನ ಸೆಳೆದಿದ್ದಾರೆ.
“ಲಾತೂರಿನಲ್ಲಿ ಅವರು ಮಾಡಿದ ಭಾಷಣಗಳನ್ನು ನೀವು ಗಮನಕ್ಕೆ ತಗೊಂಡಿದ್ದೀರಿ ಎಂದು ನಂಬುತ್ತೇನೆ. ಆದರೆ ಅವರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮಗಳ ವಿವರಗಳಿಗೆ ಇನ್ನೂ ಕಾಯುತ್ತಿದ್ದೇವೆ. ಅಲ್ಲದೆ, ಆಯೋಗದ ಮಾರ್ಗ ಸೂಚಿಗಳಿಗೆ ಅವಮಾನ ಮಾಡುವುದನ್ನು, ಚುನಾವಣಾ ಪ್ರಕ್ರಿಯೆಯನ್ನು, ಮತ್ತು ಅದರಿಂದಾಗಿ ಪ್ರಜಾಸತ್ತಾತ್ಮಕ ಕ್ರಿಯೆಯನ್ನು ಕಲುಷಿತಗೊಳಿಸುವುದನ್ನು ನಿಲ್ಲಿಸಬೇಕೆಂದು ಅವರಿಗೆ ಯಾವಾಗ ಹೇಳಲಾಗುತ್ತದೆ ಎಂಬುದೂ ನಮಗಿನ್ನೂ ಕೇಳ ಬಂದಿಲ್ಲ” ಎಂದು ಈ ಕುರಿತು ಮುಂದುವರೆದು ಟಿಪ್ಪಣಿ ಮಾಡಿರುವ ಯೆಚುರಿಯವರು ನರೇಂದ್ರ ಮೋದಿಯವರ ಇತ್ತೀಚಿನ ಎರಡು ಹೇಳಿಕೆಗಳತ್ತವೂ ಮುಖ್ಯ ಚುನಾವಣಾ ಆಯುಕ್ತರ ಗಮನ ಸೆಳೆದಿದ್ದಾರೆ. ಇವು ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲೂ ವಿವರವಾಗಿ ವರದಿಯಾಗಿವೆ.
ಎಪ್ರಿಲ್ 21ರಂದು ಗುಜರಾತಿನಲ್ಲಿ ಪ್ರಚಾರದ ಕೊನೆಯ ದಿನದಂದು ಅವರು, ಪಾಕಿಸ್ತಾನ ಭಾರತೀಯ ವಾಯುಪಡೆಯ ಪೈಲಟ್ರನ್ನು ಹಿಂದಿರುಗಿಸದಿದ್ದದಿದ್ದರೆ ಒಂದು “ಸಂಹಾರದ ರಾತ್ರಿಯೇ” (ಖತ್ಲ್ ಕೀ ರಾತ್) ಸಂಭವಿಸುತ್ತಿತ್ತು ಎಂದರು.
ಪಠಾಣ್ ದಲ್ಲಿ ಒಂದು ರ್ಯಾಲಿಯನ್ನು ಉದ್ದೇಶಿಸಿ ಮಾತಾಡುತ್ತ ಪ್ರಧಾನ ಮಂತ್ರಿ ಮೋದಿ “ಎರಡನೇ ದಿನ, ಭಾರತ ದೊಡ್ಡದಾದುದೊಂದನ್ನು ಮಾಡಲಿದೆ ಎಂದು ಅಮೆರಿಕಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಮೋದಿಯವರು 12 ಕ್ಷಿಪಣಿಗಳೊಂದಿಗೆ ಸಿದ್ಧವಾಗಿದ್ದರು. ಅದೊಂದು ಗಂಭೀರ ಸನ್ನಿವೇಶವಾಗುತ್ತಿತ್ತು. ಪಾಕಿಸ್ತಾನ ಭಾರತೀಯ ಪೈಲಟನ್ನು ಹಿಂದಿರುಗಿಸುವುದಾಗಿ ಪ್ರಕಟಿಸಿದ್ದು ಒಳ್ಳೆಯದೇ ಆಯಿತು. , ಇಲ್ಲವಾದರೆ ಅದು ಸಂಹಾರದ ರಾತ್ರಿಯಾಗುತ್ತಿತ್ತು” ಎಂದರು.
“ವ್ಯಂಗ್ಯವೆಂದರೆ, ಅಮೆರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಫ್, ಪಾಕಿಸ್ತಾನ ಅಭಿನಂದನ್ ರವರನ್ನು ಹಿಂದಿರುಗಿಸುವ ಕೆಲವು ಗಂಟೆಗಳ ಮೊದಲು ಹಾನೊಯ್ ನಲ್ಲಿ ಜಾಗತಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತಾಡುತ್ತ ಭಾರತ-ಪಾಕಿಸ್ತಾನ ತಿಕ್ಕಾಟ ಕುರಿತಂತೆ ಜಗತ್ತು ಒಂದು ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಬೇಕು ಎಂದಿದ್ದರು.
ಇತ್ತೀಚಿನ ವಾಯು ದಾಳಿಗಳಲ್ಲಿ ಭಾರತವನ್ನು ಸುಭದ್ರಗೊಳಿಸಿದ್ದು ತಾನು, ನಮ್ಮ ಸಶಸ್ತ್ರ ಪಡೆಗಳಲ್ಲ ಎಂದು ಹೇಳಿಕೊಳ್ಳುತ್ತ ಅವರು ಮುಂದುವರೆದು ತಾನು ಇಸ್ಲಾಮಾಬಾದ್ ಗೆ ಬೆದರಿಕೆ ಹಾಕಿದ ಮೇಲೆಯೇ ಪಾಕಿಸ್ತಾನ ಭಾರತೀಯ ವಾಯುಪಡೆಯ ಪೈಲಟನ್ನು ಹಿಂದಕ್ಕೆ ಕಳಿಸಿದ್ದು ಎಂದೂ ಹೇಳಿಕೊಂಡರು.
ಮೋದಿಯವರು ಪರಮಾಣು ಶಸ್ತ್ರಗಳನ್ನು ಬಳಸಬೇಕು ಎಂದು ಹೇಳುವಷ್ಟರ ವರೆಗೂ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವನ್ನು ತೋರಿದ್ದಾರೆ. ಬಾರ್ಮೇರ್ ನಲ್ಲಿ ಭಾನುವಾರ ಒಂದು ಚುನಾವಣಾ ರ್ಯಾಲಿಯಲ್ಲಿ ಅವರು ‘ಭಾರತ ಪಾಕಿಸ್ತಾನದ ಬೆದರಿಕೆಗಳಿಂದ ಭಯಪಡುವುದು ನಿಂತಿತು. ‘ನಮ್ಮ ಬಳಿ ಪರಮಾಣು ಬಟನ್ ಇದೆ, ಪರಮಾಣು ಬಟನ್ ಇದೆ ‘ಎಂದು ಅವರು ಹೇಳುತ್ತಿದ್ದರು. ಹಾಗಿದ್ದರೆ ನಮ್ಮ ಬಳಿ ಇರುವುದೇನು? ಅದನ್ನು ದೀಪಾವಳಿಗೆ ಇಟ್ಟುಕೊಂಡಿದ್ದೇವೆಯೇ?”
ಸಶಸ್ತ್ರ ಪಡೆಗಳ ಹೆಸರನ್ನು, ಸಶಸ್ತ್ರ ಕಾರ್ಯಾಚರಣೆಯನ್ನು ಭಂಡತನದಿಂದ, ಎಚ್ಚರಹೀನವಾಗಿ ಉದ್ಧರಿಸುವುದು ಮತ್ತು ನಂತರ ಪರಮಾಣು ಯುದ್ಧದ ಬೆದರಿಕೆ ಹಾಕುವುದು ಅವರ ಒಂದು ಪಕ್ಷಪಾತೀ ರಾಜಕೀಯ ಕೃತ್ಯ ಮತ್ತು ಆದರ ಆಧಾರದಲ್ಲಿ ಮತ ಕೇಳುವುದು ಚುನಾವಣಾ ಆಯೋಗ ಹಾಕಿಕೊಟ್ಟಿರುವ ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಹಾನಿ ತರುತ್ತದೆ ಎಂದು ಸೀತಾರಾಂ ಯಚುರಿ ಈ ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ವಾರಾಣಸಿಯಲ್ಲಿ ಅಭ್ಯರ್ಥಿಯೂ ಆಗಿರುವ ಪ್ರಧಾನ ಮಂತ್ರಿಗಳು ಮತ್ತು ಆಳುವ ಪಕ್ಷದ ಪ್ರಮುಖ ಪ್ರಚಾರಕರೂ ಆಗಿರುವವರು ಸದಾ ಸಶಸ್ತ್ರ ಪಡೆಗಳ ಕೆಚ್ಚನ್ನು ತನ್ನದೇ ಎಂದು ಹೇಳಿಕೊಳ್ಳಲು, ಮತ್ತು ಅದರ ಮೇಲೆ ಮತಗಳನ್ನು ಕೇಳಲು ಬಿಟ್ಟಿರುವುದು ನೇರವಾಗಿ ಮಾದರಿ ಆಚಾರ ಸಂಹಿತೆಯ ಉಲ್ಲಂಘನೆಯಾಗಿದೆ, ಮತ್ತು ಚುನಾವಣಾ ಉದ್ದೇಶಗಳಿಗೆ ಪ್ರಧಾನ ಮಂತ್ರಿ ಹುದ್ದೆಯ ದುರುಪಯೋಗವೂ ಆಗಿದೆ ಎಂದು ಯೆಚುರಿಯವರು ಮುಖ್ಯ ಚುನಾವಣಾ ಆಯುಕ್ತರಿಗೆ ಹೇಳಿದ್ದಾರೆ.
“ಕೆಲವು ವಾರಗಳ ಹಿಂದೆ ‘ಹುತಾತ್ಮ’ರ ಹೆಸರಿನಲ್ಲಿ ಮತಯಾಚನೆಯ ನಂತರವೂ ಅವರು ತಮ್ಮ ಭಾಷಣಗಳಲ್ಲಿ ನಿಮ್ಮ ಸುಸ್ಥಾಪಿತ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ತಾವು ತಮ್ಮ ಅಧಿಕಾರವನ್ನು ಬಳಸಬೇಕು ಮತ್ತು ಇಂತಹ ಅಭಯ ರಕ್ಷೆ ನಿಲ್ಲುವಂತಾಗಬೇಕು” ಎಂದು ಯೆಚುರಿಯವರು ಮುಖ್ಯ ಚಾನಾವಣಾ ಆಯುಕ್ತರನ್ನು ಆಗ್ರಹಿಸಿದ್ದಾರೆ.
“ತಾವು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ, ಆಮೂಲಕ ತಾವು ಹಾಕಿಕೊಟ್ಟಿರುವ ಮಾರ್ಗಸೂಚಿಗಳ ಪಾವಿತ್ರ್ಯ ಉಳಿಯುವಂತೆ ಮಾಡಬೇಕು ಮತ್ತು ಸಮಸ್ತ ಚುನಾವಣಾ ಪ್ರಕ್ರಿಯೆ ನಿಜವಾಗಿಯೂ ಎಲ್ಲ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಸಮಾನ ನೆಲೆಯ ರಂಗವಾಗಿ ಉಳಿಯಬೇಕು. ಚುನಾವಣಾ ಆಯೋಗ ತಾನೇ ನೀಡಿರುವ ಮಾಗ೯-ಸೂಚಿಗಳನ್ನು ಪ್ರಧಾನ ಮಂತ್ರಿಗಳೂ ಸೇರಿದಂತೆ, ಎಲ್ಲರೂ ಪಾಲಿಸುವಂತೆ ಖಾತರಿಪಡಿಸಲು ಕ್ರಮಗಳನ್ನು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಮಾತ್ರವೇ ಭಾರತದ ಸಂವಿಧಾನದ ಕಲಂ 324ರಲ್ಲಿ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರದ ಪಾವಿತ್ರ್ಯವನ್ನು ಎತ್ತಿ ಹಿಡಿಯಲು ಸಾಧ್ಯ ಎಂದು ನನ್ನ ಅಭಿಪ್ರಾಯ” ಎಂದು ಅವರು ಹೇಳಿದ್ದಾರೆ.