ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ನಿಯೋಗದ ಆಗ್ರಹ
ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ಎಪ್ರಿಲ್ 11ರಂದು ನಡೆದ ಮತದಾನದಲ್ಲಿ ವ್ಯಾಪಕವಾದ ಅಕ್ರಮಗಳು ಮತ್ತು ಮೋಸ ನಡೆದಿರುವುದು ಚುನಾವಣಾ ಆಯೋಗದ ತನಿಖೆಗಳಿಂದಲೇ ಮತ್ತು ಈಗ ಲಭ್ಯವಾಗಿರುವ ದಸ್ತಾವೇಜುಗಳಿಂದ ಸ್ಪಷ್ಟವಾಗಿರುವುದರಿಂದ ಅಲ್ಲಿ ಇಡೀ ಮತದಾನವನ್ನು ರದ್ದು ಮಾಡಬೇಕು, ಇನ್ನೂ ಈ ಚುನಾವಣೆಗಳಲ್ಲಿ ಸಾಕಷ್ಟು ಸಮಯ ಇದ್ದು, ಈ ಕ್ಷೇತ್ರದಲ್ಲಿ ಹೊಸದಾಗಿ ಮತದಾನ ನಡೆಸಬೇಕು ಎಂದು ಎಪ್ರಿಲ್ 30ರಂದು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾದ ಸಿಪಿಐ(ಎಂ) ನಿಯೋಗ ಅವರನ್ನು ಆಗ್ರಹ ಪಡಿಸಿದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಪೊಲಿಟ್ ಬ್ಯುರೊ ಸದಸ್ಯರಾದ ನೀಲೋತ್ಪಲ ಬಸು ಮತ್ತು ತ್ರಿಪುರಾದ ಎರಡೂ ಲೋಕಸಭಾ ಕ್ಷೇತ್ರಗಳ ಸಿಪಿಐ(ಎಂ) ಅಭ್ಯರ್ಥಿಗಳಾದ ಶಂಕರ ಪ್ರಸಾದ್ ದತ್ತ ಮತ್ತು ಜಿತೇಂದ್ರ ಚೌಧರಿ ಈ ನಿಯೋಗದಲ್ಲಿದ್ದರು.
ತ್ರಿಪುರಾದಲ್ಲಿ ಮುಕ್ತ ಮತ್ತು ನ್ಯಾಯಯುತ ಮತದಾನ ನಡೆಸುವುದಕ್ಕೆ ತೀವ್ರ ಬೆದರಿಕೆಗಳು ಇರುವ ಬಗ್ಗೆ ಸಿಪಿಐ(ಎಂ) ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮೊದಲಿಂದಲೇ ಚುನಾವಣಾ ಆಯೋಗದ ಗಮನವನ್ನು ಸೆಳೆಯುತ್ತ ಬಂದಿದೆ. ಫೆಬ್ರುವರಿ 20ರಂದು ನಿರ್ದಿಷ್ಟವಾಗಿ ಈ ಬೆದರಿಕೆಗಳ ಬಗ್ಗೆ ಆಯೋಗಕ್ಕೆ ಪತ್ರ ಬರೆಯಲಾಗಿತ್ತು, ಹಾಗೂ ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿಯ ಪ್ರಕಟಣೆಯ ಎರಡು ದಿನಗಳ ಮೊದಲು ಸಿಪಿಐ(ಎಂ) ನಿಯೋಗ ಚುನಾವಣಾ ಆಯೋಗದ ಎಲ್ಲ ಸದಸ್ಯರನ್ನೂ ಭೇಟಿಯಾಗಿ ಇವನ್ನು ವಿವರಿಸಿತ್ತು. ಆದರೂ ಪಕ್ಷ ವ್ಯಕ್ತಪಡಿಸಿದ ಈ ಎಲ್ಲ ಆತಂಕಗಳನ್ನು ನಂತರದ ಬೆಳವಣಿಗೆಗಳು ಸಾಬೀತಿ ಪಡಿಸಿರುವುದು ಖೇದಕರ ಎಂದು ಸಿಪಿಐ(ಎಂ) ಮುಖ್ಯ ಚುನಾವಣಾ ಆಯುಕ್ತರಿಗೆ ಎಪ್ರಿಲ್ 30ರಂದು ಸಲ್ಲಿಸಿದ ಪತ್ರದಲ್ಲಿ ಹೇಳಿದೆ.
ತ್ರಿಪುರಾ ಪಶ್ವಿಮ ಲೋಕಸಭಾ ಕ್ಷೇತ್ರಕ್ಕೆ ರಿಟರ್ನಿಂಗ್ ಆಫೀಸರ್(ಆರ್.ಒ.) ಆಗಿ ನೇಮಿಸುವವರ ಸೂಕ್ತತೆಯ ಪ್ರಶ್ನೆಯನ್ನು ಆಗ ಎತ್ತಲಾಗಿತ್ತು. ಈ ಆರ್.ಒ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ದೈನಿಕ ದೇಶೇರ್ ಕಥಾ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸುವ ಆದೇಶವನ್ನು ಹೊರಡಿಸಿದ್ದವರು. ಇದು ರಾಜ್ಯದ ಪ್ರಗತಿಪರ ಶಕ್ತಿಗಳ ವಿರುದ್ಧ ಆ ವ್ಯಕ್ತಿಯ ಪಕ್ಷಪಾತದ ವಾಸನೆಯನ್ನು ಸೂಸಿತ್ತು. ತ್ರಿಪುರಾ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಈ ಆದೇಶ ಜಾರಿಗೆ ಸೂಕ್ತವಾದುದಲ್ಲ ಎಂದು ಕಂಡು ಅದರ ಮೇಲೆ ಮುಂದಿನ ಕ್ರಮಕ್ಕೆ ತಡೆ ನೀಡಿದರು. ಇದರಿಂದಾಗಿ, ಪರೋಕ್ಷವಾಗಿ ನ್ಯಾಯಾಂಗದ ಕಡಿವಾಣಕ್ಕೆ ಒಳಗಾದ ಅಧಿಕಾರಿಗಳ ಪಾತ್ರದ ಬಗ್ಗೆ ಈ ಹಿಂದೆ ಅನುಸರಿಸಿದ ಕ್ರಮಗಳಿಗೆ ಅನುಸಾರವಾಗಿ ಅವರನ್ನು ಈ ನಿರ್ಣಾಯಕ ಚುನಾವಣಾ ಜವಾಬ್ದಾರಿಗೆ ಸೂಕ್ತರಲ್ಲ ಎಂದು ಪರಿಗಣಿಸಬೇಕು ಎಂದು ಸಿಪಿಐ(ಎಂ) ಸೂಚಿಸಿತ್ತು. ಆದರೆ ಚುನಾವಣಾ ಆಯೋಗ ರಾಜ್ಯ ಆಡಳಿತ ನೀಡಿದ ಮಾಹಿತಿಗಳ ಆಧಾರದಲ್ಲಿ ಅದೇ ಅಧಿಕಾರಿಯನ್ನು ರಿಟರ್ನಿಂಗ್ ಆಫೀಸರ್ ಆಗಿ ಮುಂದುವರೆಸಿತು.
“ನಮ್ಮ ದೂರುಗಳು ಮತ್ತು ವೀಕ್ಷಕರು ಮತ್ತು ಇತರರ ಸ್ಪಂದನೆಗಳ ಆಧಾರದಲ್ಲಿ ಚುನಾವಣಾ ಆಯೋಗ ಎಪ್ರಿಲ್ 11ರ ಅನುಭವ ಎಪ್ರಿಲ್ 18ರಂದು ನಡೆಯಬೇಕಾಗಿದ್ದ ತ್ರಿಪುರಾ ಪೂರ್ವ(ಎಸ್.ಟಿ.) ಲೋಕಸಭಾ ಕ್ಷೇತ್ರದ ಮತದಾನವನ್ನು ಮುಂದೂಡುವಷ್ಟು ಗಂಭೀರವಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ. “ಮುಖ್ಯ ಚುನಾವಣಾ ಅಧಿಕಾರಿ, ತ್ರಿಪುರಾ ಮತ್ತು ವಿಶೇಷ ಪೋಲೀಸ್ ನಿರೀಕ್ಷಕರು, ತ್ರಿಪುರಾ ಇವರಿಂದ ತ್ರಿಪುರಾ ಪೂರ್ವ(ಎಸ್.ಟಿ.) ಲೋಕಸಭಾ ಕ್ಷೇತ್ರದಲ್ಲಿ ಎಪ್ರಿಲ್ 18, 2019 ರಂದು ಮುಕ್ತ ಮತ್ತು ನ್ಯಾಯಯುತ ಮತದಾನವನ್ನು ನಡೆಸಲು ಪರಿಸ್ಥಿತಿ ಸೂಕ್ತವಾಗಿಲ್ಲ ಎಂಬ ವರದಿಗಳು ಬಂದಿವೆ” ಎಂದು ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ಹೇಳಲಾಗಿದೆ” ಎಂಬುದನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿರುವ ಸಿಪಿಐ(ಎಂ), ಚುನಾವಣಾ ಆಯೋಗದಿಂದ ಇಂತಹ ಒಂದು ತೀವ್ರ ಕ್ರಮ ಹಿಂದೆಂದೂ ಬಂದಿರಲಿಲ್ಲ, ಇವೆಲ್ಲವೂ ಎಪ್ರಿಲ್ 11 ರ ವಾಸ್ತವಿಕ ಅನುಭವದಿಂದಲೇ, ಏಕೆಂದರೆ ತನಿಖೆಯ ಪ್ರಕ್ರಿಯೆ ಅತ್ಯಂತ ಆತಂಕ ಟುಮಾಡುವಂತಹ ಸಂಗತಿಗಳನ್ನು ಹೊರತಂದಿದೆ ಎಂದು ತನ್ನ ಪತ್ರದಲ್ಲಿ ಹೇಳಿದೆ.
ಎಪ್ರಿಲ್ 16ರಿಂದ ಆರಂಭಿಸಿ ಆದೇಶಗಳ ಒಂದು ಸರಣಿಯೇ ಬಂದಿದೆ, 16ರ ನಂತರ 17ರಂದು, 18 ರಂದು ಮತ್ತು 19ರಂದು ಹೊರಡಿಸಿರುವ ಆದೇಶಗಳು ಅಕ್ರಮಗಳ ವಿವಿಧ ಆಯಾಮಗಳ ವಿವರಗಳನ್ನು ನೀಡಿವೆ ಮತ್ತು ಹಲವು ಅಧಿಕಾರಗಳ ಹೊಣೆಗಾರಿಕೆಯನ್ನು ನಿಗದಿ ಪಡಿಸಿವೆ.
ಈ ಅಧಿಕೃತ ದಸ್ತಾವೇಜುಗಳ ಸರಣಿಯಲ್ಲಿ ಸಿಪಿಐ(ಎಂ)ಗೆ ಲಭ್ಯವಿರುವ ಕೊನೆಯದಾದ ಎಪ್ರಿಲ್ 23ರ ದಸ್ತಾವೇಜಿನಲ್ಲಿ ಆರ್.ಒ. 433 ಮತಗಟ್ಟೆಗಳಲ್ಲಿನ ಅಕ್ರಮಗಳ ಬಗ್ಗೆ ಒಂದು ಸಮಗ್ರ ಹೇಳಿಕೆಯನ್ನು ಅತಿರಿಕ್ತ ಮುಖ್ಯ ಚುನಾವಣಾ ಅಧಿಕಾರಿಗೆ ಕಳಿಸಿದ್ದಾರೆ ಎಂದು ತಿಳಿದು ಬರುತ್ತದೆ. ಆದರೆ ವಿಶೇಷ ವೀಕ್ಷಕರಿಂದಾಗಿ ಅಕ್ರಮಗಳು ನಡೆದಿವೆ ಎಂದು ಒಪ್ಪಿಕೊಂಡು ಅದರಿಂದಾಗಿ ಮರುಮತದಾನ ಅಗತ್ಯವಿರುವ ಮತಗಟ್ಟೆಗಳ ಸಂಖ್ಯೆಯನ್ನು ಇಳಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದೂ ತಿಳಿದು ಬಂದಿದೆ.
ನಿಜಸಂಗತಿಯೆಂದರೆ, ಚುನಾವಣಾ ಮೋಸದ ಪ್ರಮಾಣ ಇದಕ್ಕಿಂತ ಎಷ್ಟೋ ದೊಡ್ಡದಿದೆ. ಎಪ್ರಿಲ್ 11 ರ ಸಂಜೆಯ ಪ್ರಾಥಮಿಕ ವರದಿಗಳ ಆಧಾರದಲ್ಲಿ ಸಿಪಿಐ(ಎಂ) ಒಟ್ಟು 1679 ಮತಗಟ್ಟೆಗಳ ಪೈಕಿ 464 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಬೇಕೆಂದು ಕೋರಿತು. ನಂತರ ಪೂರ್ಣ ಮಾಹಿತಿಗಳು ಲಭ್ಯವಾದಾಗ 846 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಬೇಕು ಎಂದು ಪಕ್ಷ ಆಗ್ರಹಿಸಿತು. ಅರ್ಧಕ್ಕಿಂತ ಹೆಚ್ಚು ಮತದಾರರಿಗೆ ಅಂದು ತಮ್ಮ ಮತ ಚಲಾಯಿಸಲು ಬಿಡಲಿಲ್ಲ ಎಂಬುದರಲ್ಲಿ ಸಂದೇಹವೇ ಇಲ್ಲ.
ಆದರೆ ವಿಚಿತ್ರ ಎಂದರೆ, ಮತದಾನ ನಡೆದು 20 ದಿನಗಳ ನಂತರವೂ ಚುನಾವಣಾ ಆಯೋಗಕ್ಕೆ ಒಂದು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಇದರಿಂದಾಗಿ ಚುನಾವಣಾ ಆಯೋಗ ಪ್ರಜಾಸತ್ತಾತ್ಮಕ ಚುನಾವಣೆಗಳನ್ನು ನಡೆಸುವಲ್ಲಿ ವಿಫಲವಾಗಿದೆಯಷ್ಟೇ ಅಲ್ಲ, ಅದನ್ನು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲು ಕೂಡ ಅದು ಹಿಂದೇಟು ಹಾಕುತ್ತಿದೆ ಎಂಬ ಭಾವನೆ ಉಂಟಾಗುತ್ತಿದೆ ಎಂಬುದನ್ನು ಸಿಪಿಐ(ಎಂ) ನಿಯೋಗ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುತ್ತ, ತ್ರಿಪುರಾದ ಎಡರಂಗ ಸಮಿತಿ ಆಗ್ರಹಿಸಿರುವಂತೆ ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ನಡೆದಿರುವ ಇಡೀ ಚುನಾವಣೆಯನ್ನು ರದ್ದುಗೊಳಿಸಿ ಹೊಸ ಚುನಾವಣೆ ನಡೆಸಬೇಕು ಎಂದು ಕೇಳಿದೆ.
ಈ ಸಂದರ್ಭದಲ್ಲಿ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಹಣವನ್ನು ವಶಪಡಿಸಿಕೊಳ್ಳಲಾಯಿತು, ಇದರಿಂದಾಗಿ ಅಲ್ಲಿ ಮತದಾನ ಪ್ರಕ್ರಿಯೆ ಕಲುಷಿತಗೊಂಡಿದೆ ಎಂದು ಹೇಳಿ ಇದೇ ಚುನಾವಣಾ ಆಯೋಗ ಅಲ್ಲಿ ಮತದಾನವನ್ನು ರದ್ದು ಮಾಡುವ ದೃಢ ನಿರ್ಧಾರವನ್ನು ಕೈಗೊಂಡಿರುವುದನ್ನು ಕೂಡ ಸಿಪಿಐ(ಎಂ) ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪ ಮಾಡಿದೆ.
ಸಿಪಿಐ(ಎಂ) ನಿಯೋಗದ ಭೇಟಿಯ ನಂತರ ಪಕ್ಷದ ಕೇಂದ್ರ ಸಮಿತಿ ಕಚೇರಿಯಲ್ಲಿ ನಡೆದ ಪತ್ರಿಕಾ ಸಮ್ಮೇಳನದಲ್ಲಿ ಮಾತಾಡುತ್ತ ಯೆಚುರಿಯವರು ಮತ್ತು ನೀಲೋತ್ಪಲ ಬಸುರವರು ಪಶ್ಚಿಮ ಬಂಗಾಲದಲ್ಲೂ ಅಕ್ರಮಗಳನ್ನು ನಡೆಸುವ ಪ್ರಯತ್ನಗಳ ಬಗ್ಗೆ ಮತ್ತು ಚುನಾವಣಾ ಆಯೋಗ ಸೂಕ್ತ ಕ್ರಮಗಳನ್ನು ಕೈಗೊಳ್ಳು ವಿಳಂಬ ಮಾಡುತ್ತಿರುವ ಬಗ್ಗೆ ಹೇಳಿದರು. ಬಿಹಾರದ ಬೇಗುಸರಾಯ್ ನಲ್ಲಿ ಬಿಜೆಪಿ ಅಭ್ಯರ್ಥಿಯ ಮಾದರಿ ಆಚಾರ ಸಂಹಿತೆಯ ಉಲ್ಲಂಘನೆಯನ್ನು ಪರಿಶೀಲಿಸಿ ಆಯೋಗ ಅವರ ವಿರುದ್ಧ ಕ್ರಮ ಕೈಗೊಂಡದ್ದು ಅಲ್ಲಿ ಮತದಾನ ಮುಗಿಯುವ ವೇಳೆಗಷ್ಟೇ ಎಂಬ ಸಂಗತಿಯನ್ನೂ ಈ ಸಂದರ್ಭದಲ್ಲಿ ಅವರು ಪತ್ರಕರ್ತರ ಗಮನಕ್ಕೆ ತಂದರು.