ನರೇಂದ್ರ ಮೋದಿ ನೇತೃತ್ವದ ಬಿಜೆಪಿ-ಎನ್.ಡಿ.ಎ. 17ನೇ ಲೋಕಸಭೆಗೆ ನಡೆದ ಚುನಾವಣೆಗಳಲ್ಲಿ ಪ್ರಚಂಡ ಮತ್ತು ನಿರ್ಣಾಯಕ ಜನಾದೇಶವನ್ನು ಗಳಿಸಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಇನ್ನು ಕೆಲವು ರಾಜ್ಯಗಳನ್ನು ಬಿಟ್ಟು ಬೇರೆಡೆಗಳಲ್ಲಿ ಹೆಚ್ಚಿನ ಪ್ರತಿಪಕ್ಷಗಳು ಈ ಚುನಾವಣೆಗಳಲ್ಲಿ ಒಂದು ದೊಡ್ಡ ನಷ್ಟವನ್ನು ಕಂಡಿವೆ.
ಸಿಪಿಐ(ಎಂ) ಮತ್ತು ಎಡಪಂಥ ಚುನಾವಣೆಗಳಲ್ಲಿ ಒಂದು ತೀವ್ರ ಹಿನ್ನಡೆಯನ್ನು, ನಿರ್ದಿಷ್ಟವಾಗಿ ತಮ್ಮ ಬಲಿಷ್ಟ ನೆಲೆಗಳಲ್ಲಿ, ಅನುಭವಿಸಿವೆ.
ಜನಗಳ ಮುಂದೆ ನಿರೂಪಣೆಯನ್ನು ಎನ್.ಡಿ.ಎ. ಸರಕಾರದ ಕಳೆದ ಐದು ವರ್ಷಗಳಲ್ಲಿ ಹೊರಿಸಿದ ಹತ್ತು-ಹಲವು ಜೀವನಾಧಾರದ ಪ್ರಶ್ನೆಗಳಿಂದ ಬೇರೆಡೆಗೆ ತಿರುಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಂಕುಚಿತ ಕೋಮುವಾದಿ ರಾಷ್ಟ್ರವಾದಿ ಅಬ್ಬರದ ಸುತ್ತ ಹೆಣೆದ ಕಥನ, ಜತೆಗೆ ಭಯೋತ್ಪಾದನೆಯ ವಿರುದ್ಧ ಹೋರಾಟದ ಪ್ರಶ್ನೆಗಳು ಜನಗಳನ್ನು ಬಾಧಿಸುತ್ತಿರುವ ದೈನಂದಿನ ಸಮಸ್ಯೆಗಳನ್ನೆಲ್ಲ ಬದಿಗೆ ತಳ್ಳಿದವು. ಹಲವಾರು ಅಂಶಗಳ ಮೂಲಕ ಮೋದಿಯವರ ವ್ಯಕ್ತಿ-ಪ್ರತಿಷ್ಠೆಯನ್ನು ಕಟ್ಟಿ ಬೆಳೆಸಿದ್ದು ಇದಕ್ಕೆ ನೆರವಾಯಿತು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಮೇ 26 ಮತ್ತು 27ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್ಬ್ಯರೊ 2019ರ ಲೋಕಸಭಾ ಚುನಾವಣೆಗಳ ಆರಂಭಿಕ ವಿಶ್ಲೇಷಣೆಯನ್ನು ನಡೆಸಿದ ನಂತರ ನೀಡಿರುವ ಹೇಳಿಕೆಯಲ್ಲಿ ಹೀಗಂದಿದೆ.
ಮೋದಿ ವ್ಯಕ್ತಿ-ಪ್ರತಿಷ್ಠೆಯನ್ನು ಕಟ್ಟಿ ಬೆಳೆಸಲು ತಂತ್ರಜ್ಞಾನವನ್ನು ಮತ್ತು ಜನತೆಗೆ ಸಂದೇಶಗಳನ್ನು ತಲುಪಿಸುವ ಸಲಕರಣೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲಾಯಿತು. ಇದಕ್ಕೆ ದೊಡ್ಡ ಪ್ರಮಾಣದ ಮಾಹಿತಿ-ವಿಶ್ಲೇಷಣಾ ಸಾಧನಗಳನ್ನು ಮತ್ತು ಸೂಕ್ಷ್ಮ ಮಟ್ಟದ ಸಾಮಾಜಿಕ ತಂತ್ರಗಾರಿಕೆಗಳನ್ನು ಬಳಸಲಾಯಿತು. ಬೃಹತ್ ಪ್ರಮಾಣದ ಹಣಬಲದ ಬೆಂಬಲದಿಂದ ಇಂತಹ ಒಂದು ಕಥನವನ್ನು ಕಟ್ಟುವ ಯೋಜನೆಯಲ್ಲಿ ಮಾಧ್ಯಮಗಳ ಕೆಲವು ವಿಭಾಗಗಳು ಜತೆಗೂಡಿದವು. ಈ ರೀತಿ ಕಟ್ಟಲು ಅನುಮತಿ ನೀಡುವಲ್ಲಿ ಚುನಾವಣಾ ಆಯೋಗದ ಪಾತ್ರವೂ ಇದೆ. ಆರ್.ಎಸ್.ಎಸ್. ಗೆ ಸಂಯೋಜಿತವಾದ ಸಂಘಟನೆಗಳ ಒಂದು ಬೃಹತ್ ಜಾಲ ಈ ಪ್ರಕ್ರಿಯೆಗೆ ಸಹಾಯಕವಾಯಿತು ಎಂದು ಪೊಲಿಟ್ ಬ್ಯುರೊ ವಿಶ್ಲೇಷಿಸಿದೆ.
ಸಿಪಿಐ(ಎಂ)ನ ಚುನಾವಣಾ ನೆಲೆಗಟ್ಟು ನಮ್ಮ ಬಲಿಷ್ಟ ನೆಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ಷರಣಗೊಂಡಿದೆ. ಇದಕ್ಕೆ ಕಾರಣವಾದ ಕೆಲವು ಪ್ರಶ್ನೆಗಳನ್ನು ಪೊಲಿಟ್ ಬ್ಯುರೊ ಚರ್ಚಿಸಿತು. ಜೂನ್ 7 ರಿಂದ 9 ರವರೆಗೆ ನಡೆಯಲಿರುವ ಪಕ್ಷದ ಕೇಂದ್ರ ಸಮಿತಿಯ ಸಭೆ ರಾಜ್ಯಗಳಿಂದ ಬರುವ ವರದಿಗಳ ಆಧಾರದಲ್ಲಿ ಚರ್ಚಿಸಿ ಈ ಚುನಾವಣೆಗಳ ಅನುಭವಗಳ ಒಂದು ಆತ್ಮಾವಲೋಕನದ ಆಧಾರದಲ್ಲಿ ಸರಿಯಾದ ಪಾಟಗಳನ್ನು ಪಡೆಯುವ ಒಂದು ವರದಿಯನ್ನು ಅಂಗೀಕರಿಸುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಈ ಕೇಂದ್ರ ಸಮಿತಿ ಸಭೆಯ ಮೊದಲು ಸಿಪಿಐ(ಎಂ)ನ ಶಕ್ತಿ ಹೆಚ್ಚಿರುವ ರಾಜ್ಯಗಳಲ್ಲಿ ಪಕ್ಷದ ರಾಜ್ಯಸಮಿತಿಗಳು ಸಭೆ ಸೇರಿ ತಮ್ಮ ಕಾರ್ಯನಿರ್ವಣೆಯ ಮೌಲ್ಯಮಾಪನವನ್ನು ಸ್ವವಿಮರ್ಶಾತ್ಮಕವಾಗಿ ನಡೆಸುತ್ತವೆ. ಮತ್ತು ಈ ಆಧಾರದಲ್ಲಿ ಕೇಂದ್ರ ಸಮಿತಿ ಸಿಪಿಐ(ಎಂ)ನ ಸ್ವತಂತ್ರ ಶಕ್ತಿಯನ್ನು ಮತ್ತು ಜನಸಮೂಹಗಳ ಹೋರಾಟಗಳ ಮೂಲಕ ತನ್ನ ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಅಗತ್ಯವಾದ ಸರಿಪಡಿಕೆ ಕ್ರಮಗಳನ್ನು ರೂಪಿಸುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಪಕ್ಷದಿಂದ ಮೂವರು, ಇಬ್ಬರು ತಮಿಳುನಾಡಿನಿಂದ ಮತ್ತು ಒಬ್ಬರು ಕೇರಳದಿಂದ 17ನೇ ಲೋಕಸಭೆಗೆ ಚುನಾಯಿತರಾಗಿದ್ದಾರೆ. ಪಕ್ಷದ ಅಭ್ಯರ್ಥಿಗಳಿಗೆ ಮತನೀಡಿದ ಎಲ್ಲರಿಗೂ ಪೊಲಿಟ್ ಬ್ಯುರೊ ಪಕ್ಷದ ಧನ್ಯವಾದಗಳನ್ನು ಅರ್ಪಿಸಿದೆ.
ಪಶ್ಚಿಮ ಬಂಗಾಲದಲ್ಲೂ ಮತ್ತು ತ್ರಿಪುರಾದಲ್ಲೂ ಈ ಚುನಾವಣೆಗಳು ತೀವ್ರ ಭಯೋತ್ಪಾದನೆ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ ನಡೆದಿವೆ. ಸಿಪಿಐ(ಎಂ) ಬೆಂಬಲಿಗರನ್ನು ದೊಡ್ಡ ಪ್ರಮಾಣದಲ್ಲಿ ಮತದಾನದಲ್ಲಿ ಭಾಗವಹಿಸದಂತೆ ದೈಹಿಕವಾಗಿ ತಡೆದಿರುವ ವರದಿಗಳು ವ್ಯಾಪಕ ಪ್ರಮಾಣದಲ್ಲಿ ಬಂದಿವೆ. ಚುನಾವಣೆಗಳನ್ನು ‘ಮುಕ್ತ ಮತ್ತು ನ್ಯಾಯಸಮ್ಮತ’ವಾಗಿ ನಡೆಸುವ ಚುನಾವಣಾ ಆಯೋಗದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಪಕ್ಷದ ಪತ್ರಗಳನ್ನು ಆಯೋಗ ಗಮನಕ್ಕೆ ತಗೊಳ್ಳದೇ ಹೋಗಿದೆ. ಚುನಾವಣೆಗಳ ಸಮಯದಲ್ಲಿ ಪಶ್ಚಿಮ ಬಂಗಾಲದಲ್ಲಿ ಇಬ್ಬರು ಬೆಂಬಲಿಗರು ಮತ್ತು ತ್ರಿಪುರಾದಲ್ಲಿ ಒಬ್ಬರು ಪ್ರಾಣ ಕಳಕೊಂಡಿದ್ದಾರೆ. ಎರಡೂ ರಾಜ್ಯಗಳಲ್ಲಿ ಚುನಾವಣಾ ನಂತರದ ಹಿಂಸಾಚಾರಗಳು ಮುಂದುವರೆದಿವೆ. ಇದು ಕೋಮು ಘರ್ಷಣೆಗಳತ್ತ ಅಪಾಯಕಾರೀ ತಿರುವು ಪಡೆಯುತ್ತಿದೆ.
ಚುನಾವಣಾ ಫಲಿತಾಂಶಗಳನ್ನು ಘೋಷಿಸಿದ ಬೆನ್ನಲ್ಲೇ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳ ವರದಿಗಳು ಹರ್ಯಾಣ, ಮಧ್ಯಪ್ರದೇಶಗಳಿಂದ ಬಂದಿವೆ. ಇದು, ಹೊಸ ಸರಕಾರ ಎಲ್ಲರನ್ನೂ ಒಳಗೊಳ್ಳುವಂತದ್ದು ಆಗಿರುತ್ತದೆ, ಮತ್ತು ಎಲ್ಲ ಜನವಿಭಾಗಗಳ ನಡುವೆ ವಿಶ್ವಾಸವನ್ನು ನಿರ್ಮಿಸುತ್ತದೆ ಎಂಬ ಮತ್ತೆ ಪ್ರಧಾನ ಮಂತ್ರಿಯಾಗಲಿರುವ ನರೇಂದ್ರ ಮೋದಿಯವರ ಘೋಷಣೆ-ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್-ಗೆ ತದ್ವಿರುದ್ಧವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಭಾರತೀಯ ಜನತೆ ಮತ್ತು ನಮ್ಮ ದೇಶದ ಮುಂದೆ ದೊಡ್ಡ ಸವಾಲುಗಳಿವೆ ಎಂಬುದು ಸ್ಪಷ್ಟ ಎಂದು ಹೇಳಿದೆ.
ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರದ, ಸಂವಿಧಾನಿಕ ಸಂಸ್ಥೆಗಳ ರಕ್ಷಣೆ, ಜನಗಳ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಕಾಯ್ದುಕೊಳ್ಳುವುದು ಹಾಗೂ ಜನಗಳ ಜೀವನಾಧಾರಗಳ ಪ್ರಶ್ನೆಗಳು- ಈ ಎಲ್ಲ ಸವಾಲುಗಳನ್ನು ಎದುರಿಸಲು ಮುಂದೆ ಬರಬೇಕು ಎಂದು ಸಿಪಿಐ(ಎಂ) ಭಾರತೀಯ ಜನತೆಗೆ ಬಲವಾದ ಮನವಿ ಮಾಡಿದೆ.
ನಮ್ಮ ಸಾಮಾಜಿಕ ಬಂಧದ ನೆಚ್ಚಿನ ಸಾಮರಸ್ಯವನ್ನು ಬಲಪಡಿಸಬೇಕು ಮತ್ತು ಮುಂದೆ ಬರಲಿರುವ ಸವಾಲುಗಳನ್ನು ಎದುರಿಸಲು ಐಕ್ಯತೆಯಿಂದ ಎದ್ದು ನಿಲ್ಲಬೇಕು ಎಂದು ಭಾರತೀಯ ಜನತೆಯ ಎಲ್ಲ ವಿಭಾಗಗಳಿಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ ನೀಡಿದೆ.