ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ಕರಡು ರಾಷ್ಟ್ರೀಯ ಶಿಕ್ಷಣ ಧೋರಣೆ ಶಾಲಾಶಿಕ್ಷಣದ ಪ್ರಾಥಮಿಕ ಹಂತದಿಂದಲೇ ತ್ರಿಭಾಷಾ ಸೂತ್ರವನ್ನು ಅನುಸರಿಸುವ ಪ್ರಸ್ತಾವವನ್ನು ಇಟ್ಟಿದೆ. ಈ ರೀತಿಯ ಹೇರಿಕೆಯನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ನಿಸ್ಸಂದಿಗ್ಧವಾಗಿ ವಿರೋಧಿಸಿದೆ. ಈ ವಿರೋಧ ಯಾವುದೇ ಒಂದು ಭಾಷೆಗೆ ಅಲ್ಲ, ಬದಲಾಗಿ ಎಲ್ಲ ಭಾರತೀಯ ಭಾಷೆಗಳಿಗೆ ಬೆಳೆಯಲು ಮತ್ತು ಸಮೃದ್ದಗೊಳ್ಳಲು ಸಮಾನ ಅವಕಾಶಗಳನ್ನು ಖಾತ್ರಿಗೊಳಿಸುವುದಕ್ಕಾಗಿ ಎಂದು ಅದು ಹೇಳಿದೆ.
ಕರಡಿನಲ್ಲಿರುವ ಈ ಸಂವೇದನಾಹೀನ ವಿಚಾರದ ವಿರುದ್ಧ ವ್ಯಾಪಕ ಪ್ರತಿಕ್ರಿಯೆಗಳು, ವಿಶೇಷವಾಗಿ ದಕ್ಷಿಣದ ರಾಜ್ಯಗಳಿಂದ ವ್ಯಕ್ತವಾಗಿವೆ. ಬಲವಂತದ ಹೇರಿಕೆ ಭಾಷಾ ಸಂಕುಚಿತವಾದದ ಭಾವನೆಗಳು ಬೆಳೆಯಲು ಕಾರಣವಾಗುತ್ತದೆ, ಆ ಮೂಲಕ ನಮ್ಮ ಜನಗಳ ಮತ್ತು ದೇಶದ ಐಕ್ಯತೆಗೆ ಹಾನಿಕಾರಕವಾಗುತ್ತದೆ.
ಈ ಬಲವಾದ ಟೀಕೆ ಸರಕಾರವನ್ನು ಕುಟುಕಿದ್ದು, ಈ ದಸ್ತಾವೇಜು ಕೇವಲ ಕರಡು ಮಾತ್ರ ಎಂದು ಅದು ಸ್ಪಷ್ಟೀಕರಣ ನೀಡಿದೆ. ಇದು ಅತ್ಯಂತ ಸೂಕ್ಷ್ಮ ಸ್ವರೂಪದ ಪ್ರಶ್ನೆಯಾದ್ದರಿಂದ ಕರಡನ್ನು ಸರಕಾರ ಹಿಂತೆಗೆದುಕೊಳ್ಳಬೇಕು ಮತ್ತು ಈ ವಿವಾದಕ್ಕೆ ಪೂರ್ಣವಿರಾಮ ಹಾಕಿ ಹೊಸದೊಂದು ಕರಡನ್ನು ಮಂಡಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಸರಕಾರ ಮುಂದಿಟ್ಟಿರುವ ಈ ಕಳವಳಕಾರಿ ಹೆಜ್ಜೆಯನ್ನು ಹಿಂದಕ್ಕೆ ಸೆಳೆಯುವಂತೆ ಒತ್ತಡ ತರಲು ಎಲ್ಲ ಪ್ರಜಾಪ್ರಭುತ್ವವಾದಿ ಮತ್ತು ಸರಿಯಾದ ದಿಕ್ಕಿನಲ್ಲಿ ಯೋಚಿಸುವ ನಾಗರಿಕರು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಳಲ್ಲಿರುವ ಸಂಘಟನೆಗಳು, ಗುಂಪುಗಳು ಮತ್ತು ವ್ಯಕ್ತಿಗಳೆಲ್ಲರೂ ತಮ್ಮ ದನಿಯನ್ನು ಎತ್ತಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಮನವಿ ಮಾಡಿಕೊಂಡಿದೆ.