ಯುದ್ದೋಪಾದಿಯಲ್ಲಿ ಸಾಂಕ್ರಾಮಿಕಕ್ಕೆ ತಡೆ ಹಾಕಲು ಆಗ್ರಹ
ಬಿಹಾರದಲ್ಲಿ, ಮುಖ್ಯವಾಗಿ ಮುಝಫ್ಫರ್ಪುರ್ ನಲ್ಲಿ ಇದುವರೆಗೆ 120ಕ್ಕೂ ಹೆಚ್ಚು ಮಕ್ಕಳು ಎಇಎಸ್ ಎಂಬ ತೀವ್ರ ಮಿದುಳು ಉರಿಯೂತಕ್ಕೆ ಬಲಿಯಾಗಿದ್ದಾರೆ. ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಮಕ್ಕಳ ಸಾವಿಗೆ ತನ್ನ ತೀವ್ರ ದುಃಖವನ್ನು ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಆರೋಗ್ಯ ಅಧಿಕಾರಿಗಳು ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಯುದ್ಧೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲಿಟ್ ಬ್ಯುರೊ ಆಗ್ರಹಿಸಿದೆ.
ಬಿಹಾರದ ಸಿಪಿಐ(ಎಂ) ಮುಖಂಡರ ಒಂದು ನಿಯೋಗ ಸಾವಿಗೀಡಾದ ಮಕ್ಕಳ ಪಾಲಕರನ್ನು ಭೇಟಿಯಾಗಿ ಈ ದುರಂತಕ್ಕೆ ಕಾರಣಗಳನ್ನು ತಿಳಿಯಲು ಪ್ರಯತ್ನಿಸುತ್ತಿದೆ. ಈ ಸಾಂಕ್ರಾಮಿಕವನ್ನು ತಡೆಯಲು, ವೈದ್ಯರ ಒಂದು ತಂಡವೂ ಸೇರಿದಂತೆ ಏನಲ್ಲಾ ಸಹಾಯ ಬೇಕೋ ಅದನ್ನು ಒದಗಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಮಕ್ಕಳ ದುಃಖತಪ್ತ ಕುಟುಂಬಗಳಿಗೆ ತನ್ನ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸಿದೆ.