ದೇಶದ ಸಾರ್ವಭೌಮತೆ ಬಲಿಗೊಟ್ಟು ಅಮೆರಿಕಾದ ಎದುರು ತಲೆಬಾಗುವುದು ಒಪ್ಪಲು ಸಾಧ್ಯವಿಲ್ಲ

ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿದೇಶಾಂಗ ಕಾರ್ಯದರ್ಶಿಯ ಭಾರತ ಭೇಟಿಯ ಸಂದರ್ಭದಲ್ಲಿ ಭಾರತದ ಕೈತಿರುಚುವ ಅಮೆರಿಕಾದ ಅಜೆಂಡಾಕ್ಕೆ ಎಡಪಕ್ಷಗಳು ದೃಢ ವಿರೋಧವನ್ನು ವ್ಯಕ್ತಪಡಿಸಿವೆ. ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ, ಸಿಪಿಐ(ಎಂಎಲ್ -ಲಿಬರೇಷನ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದೇಬಬ್ರತ್ ಬಿಸ್ವಾಸ್ ಮತ್ತು ಆರ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿ ಕ್ಷಿತಿ ಗೋಸ್ವಾಮಿ ಜಂಟಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಅಮೆರಿಕನ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಜೂನ್ 25 ಮತ್ತು 26ರಂದು ಭಾರತಕ್ಕೆ ಭೇಟಿ ನೀಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಈ ಭೇಟಿಯ ಉದ್ದೇಶ ಭಾರತವು ತನ್ನ ಆರ್ಥಿಕ ವ್ಯವಸ್ಥೆಯನ್ನು ಇನ್ನಷ್ಟು ತೆರೆಯುವತ್ತ ತಳ್ಳುವುದು, ವ್ಯಾಪಾರ ಅಡೆ-ತಡೆಗಳನ್ನು ಕೈಬಿಡುವಂತೆ ಮಾಡುವುದು, ಮತ್ತು ಭಾರತಕ್ಕೆ ಅಮೆರಿಕನ್ ರಕ್ಷಣಾ ಸಾಧನಗಳನ್ನು ಮಾರುವುದು ಎನ್ನಲಾಗಿದೆ. ಈ ಭೇಟಿ, ಅಮೆರಿಕಾದ ’ಸಾಮಾನ್ಯಗೊಳಿಸಿದ ಆದ್ಯತಾ ವ್ಯವಸ್ಥೆ ವ್ಯಾಪಾರ ಕಾರ್ಯಕ್ರಮ’ (ಜಿ.ಎಸ್.ಪಿ)ದ ಫಲಾನುಭವಿ ಎಂದು ಭಾರತಕ್ಕೆ ಕೊಟ್ಟಿದ್ದ ಸ್ಥಾನವನ್ನು ಕೊನೆಗೊಳಿಸಿರುವ ಹಿನ್ನೆಲೆಯಲ್ಲಿ ಬಂದಿದೆ. ಇದುವರೆಗೆ ಈ ಸ್ಥಾನಮಾನ ದಿಂದಾಗಿ  ಭಾರತದ ಉತ್ಪನ್ನಗಳು ಸುಂಕ-ಮುಕ್ತವಾಗಿ ಅಮೆರಿಕಾ ಪ್ರವೇಶಿಸಲು ಅವಕಾಶವಿತ್ತು. ಈಗ ಅದು ಇಲ್ಲವಾಗಿದೆ. ಅಲ್ಲದೆ ಭಾರತವು ಇರಾನ್, ವೆನೆಝುವೆಲ ಮುಂತಾದ ದೇಶಗಳಿಂದ ತೈಲ ಖರೀದಿಸಿದರೆ ನಿರ್ಬಂಧಗಳನ್ನು ಹೇರುವುದಾಗಿಯೂ ಅಮೆರಿಕಾ ಬೆದರಿಕೆ ಹಾಕಿದೆ ಎಂಬುದನ್ನು ಎಡಪಕ್ಷಗಳು ನೆನಪಿಸಿವೆ.
ತನ್ನ ಆಣತಿಗಳಿಗೆ ಲಕ್ಷ್ಯ ಕೊಡದಿದ್ದರೆ ಹೊಸ ನಿರ್ಬಂಧಗಳನ್ನು ಹಾಕುವುದಾಗಿ ಅಮೆರಿಕನ್ ಆಡಳಿತ ಜಗತ್ತಿನಾದ್ಯಂತ ದೇಶಗಳಿಗೆ ಬೆದರಿಕೆ ಹಾಕುತ್ತಿದೆ. ಅದು ಕ್ಯೂಬ, ವೆನೆಝುವೆಲ, ಇರಾನ್ ಮತ್ತು ನಿಕರಗುವ ದೇಶಗಳಲ್ಲಿ ಆಡಳಿತಗಳನ್ನು ಬದಲಿಸುವುದಕ್ಕಾಗಿ ಅವುಗಳ ಕುತ್ತಿಗೆ ಹಿಸುಕುವ ಪ್ರಯತ್ನ ನಡೆಸುತ್ತಿದೆ. ಈಗ ನಡೆಯುತ್ತಿರುವ ವ್ಯಾಪಾರ ಸಮರ ಈಗಾಗಲೇ ತತ್ತರಿಸುತ್ತಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಮತ್ತೊಂದು ಹಿಂಜರಿತದತ್ತ ತಳ್ಳುವ ಬೆದರಿಕೆಯನ್ನು ಒಡ್ಡಿದೆ. ಭಾರತವು ಅಮೆರಿಕಾದ ಧೋರಣೆಗಳಿಗೆ ತನ್ನನ್ನು ಒಳಗಾಗಿಸಿಕೊಳ್ಳಬೇಕು, ಇರಾನ್ ಮತ್ತು ವೆನೆಝುವೆಲದಿಂದ ತೈಲ ಖರೀದಿಸುವುದನ್ನು ಮತ್ತು ರಷ್ಯಾದಿಂದ ಎಸ್-೪೦೦ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಅದು ನಿರ್ಬಂಧಿಸುತ್ತಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಮೆರಿಕಾ ಈ ರೀತಿ ಕೈತಿರುಚುತ್ತಿರುವುದನ್ನು ಪ್ರತಿರೋಧಿಸುವ ಬದಲು ಅದರ ಒತ್ತಡಗಳಿಗೆ ಕುಸಿಯುತ್ತಿದೆ. ನಮ್ಮ ಸಾರ್ವಭೌಮತೆ ಮತ್ತು ಆತ್ಮಾಭಿಮಾನವನ್ನು ಬಲಿಗೊಟ್ಟು ಅಮೆರಿಕಾದ ಎದುರು ತಲೆಬಾಗಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಎಡಪಕ್ಷಗಳು, ಬಿಜೆಪಿ ಸರಕಾರ ಭಾರತದ ಹಿತಾಸಕ್ತಿಗಳನ್ನು ಅಮೆರಿಕಾಕ್ಕೆ ಒಪ್ಪಿಸಿ ಬಿಡುತ್ತಿರುವುದನ್ನು ವಿರೋಧಿಸಬೇಕು ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪಟ್ಟಾಗಿ ಭದ್ರಪಡಿಸಿಕೊಳ್ಳುವ ಒಂದು ಸ್ವತಂತ್ರ ಧೋರಣೆಯನ್ನು ಅನುಸರಿಸಬೇಕು ಎಂದು ದೃಢವಾಗಿ ಆಗ್ರಹಿಸಬೇಕು ಎಂದು ಭಾರತದ ಜನತೆಯನ್ನು ಕೇಳಿಕೊಂಡಿವೆ.

Leave a Reply

Your email address will not be published. Required fields are marked *