ಪಶ್ಚಿಮ ಬಂಗಾಲದಲ್ಲಿ ಜೂನ್ 22ರಂದು ಟಿಎಂಸಿಗೆ ಸೇರಿದ ಕ್ರಿಮಿನಲ್ ಗಳು ಇಬ್ಬರು ಯುವ ಸಂಗಾತಿಗಳನ್ನು ಕೊಲೆಗೈದಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಕಳವಳ ಮತ್ತು ದುಃಖವನ್ನು ವ್ಯಕ್ತಪಡಿಸಿದೆ.
ಉತ್ತರ 24 ಪರಗಣ ಜಿಲ್ಲೆಯ ಅಮ್ದಂಗದಲ್ಲಿ ಒಬ್ಬ ಬಹಳ ಚಿಕ್ಕ ವಯಸ್ಸಿನ ಸಂಗಾತಿ ತಾಜಿಮುಲ್ ಕರೀಂ ನ ನಿರ್ಮಮ ಹತ್ಯೆ ನಡೆಸಲಾಗಿದೆ. ಅದೇ ದಿನ ರಾತ್ರಿ ದಕ್ಷಿಣ ಪರಗಣ ಜಿಲ್ಲೆಯ ಮಥುರಾಪುರ್ ದಲ್ಲಿ ಅತ್ಯಂತ ಅಮಾನುಷ ರೀತಿಯಲ್ಲಿ ನಿಜಾಮುದ್ದೀನ್ ಮಂಡಲ್ ಕೊಲೆಯಾಯಿತು. ತಾಜಿಮುಲ್ ಕರೀಂ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು ಬಹಳ ಸಮಯದಿಂದ ಮಾರಣಾಂತಿಕ ಬೆದರಿಕೆಗಳಿಂದಾಗಿ ಮನೆಯಿಂದ ದೂರವಿದ್ದು ಕೆಲಸ ಮಾಡುತ್ತಿದ್ದರು. ಲೋಕಸಭಾ ಚುನಾವಣೆಗಳ ಫಲಿತಾಂಶಗಳ ನಂತರ ತನ್ನ ಮನೆಗೆ ಮರಳಿದ್ದರು. ನಿಜಾಮುದ್ದೀನ್ ಕೂಡ ಚುನಾವಣಾ ಸಮರದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಸಿಪಿಐ(ಎಂ)ನ ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡಿದ್ದವರು.
ಟಿಎಂಸಿ ಮಂದಿ ತಮ್ಮ ಹಿಂಸಾ ರಾಜಕೀಯಕ್ಕೆ ವ್ಯಕ್ತಗೊಂಡಿರುವ ವ್ಯಾಪಕ ವಿರೋಧದಿಂದ ಪಾಟ ಕಲಿತಿಲ್ಲ ಎಂಬುದು ಸ್ಪಷ್ಟ. ಸಿಪಿಐ(ಎಂ) ಮತ್ತು ಎಡಪಕ್ಷಗಳ ವಿರುದ್ಧ ಇದು ಮುಂದುವರೆಸುತ್ತಿದೆ. ಈ ಹಿಂಸಾ ರಾಜಕೀಯ ಈಗ ಪರಿಚಿತಗೊಂಡಿದೆಯಾದರೂ ಆಡಳಿತದ ಅಸಹ್ಯ ವರ್ತನೆ ಮುಂದುವರೆಯುತ್ತಿದೆ. ನ್ಯಾಯವನ್ನು ನಿರಾಕರಿಸುವಲ್ಲಿ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುವಲ್ಲಿ ಅದು ಶಾಮೀಲಾಗಿದೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಆದರೆ ಎಡಪಂಥೀಯರ ವಿರುದ್ಧ ಇಂತಹ ಹಿಂಸಾಚಾರ ಮುಖ್ಯಧಾರೆಯ ಮಾಧ್ಯಮಗಳಲ್ಲಿ ‘ವರದಿಯೋಗ್ಯ’ವಾಗಿಲ್ಲ! ಇವು ಈ ರಾಜ್ಯದಲ್ಲಿ ಒಟ್ಟಾರೆ ಕಾನೂನು-ವ್ಯವಸ್ಥೆ ಕುಸಿದಿರುವುದನ್ನು, ಟಿಎಂಸಿ ಮತ್ತು ಬಿಜೆಪಿ ಎರಡೂ ಪ್ರದರ್ಶಿಸುತ್ತಿರುವ ಹಿಂಸಾಚಾರವನ್ನು ಕುರಿತಂತೆ ಒಂದು ತಮ್ಮದೇ ಬಣ್ಣ ಲೇಪಿಸಿದ ಕಥನವನ್ನು ಪ್ರಾಯೋಜಿಸುತ್ತಿವೆ. ಈ ಕಥನ ರಾಜಕೀಯ ಎರಡು ಶಕ್ತಿಗಳ ಸುತ್ತವೇ ಸುತ್ತು ಹೊಡೆಯುತ್ತಿದೆ ಎಂಬ ಭಾವನೆಯನ್ನು ಗಟ್ಟಿಗೊಳಿಸಲಿಕ್ಕಾಗಿಯಷ್ಟೇ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಇಬ್ಬರು ಹುತಾತ್ಮರ ಕುಟುಂಬಗಳಿಗೆ ಸಂತಾಪವನ್ನು ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಿದೆ, ಅವರಿಗೆ ತಮ್ಮ ದುಃಖವನ್ನು ಮೀರಿ ನಿಲ್ಲುವಂತೆ ನೆರವಾಗಲು ಪಕ್ಷ ಸಾಧ್ಯವಾದುದೆಲ್ಲವನ್ನೂ ಮಾಡುವ ದೃಢನಿರ್ಧಾರವನ್ನು ವ್ಯಕ್ತಪಡಿಸಿದೆ.
ಈ ಹೀನ ಅಪರಾಧದಲ್ಲಿ ಒಳಗೊಂಡಿರುವ ಎಲ್ಲರಿಗೂ ಆದಷ್ಟು ಬೇಗನೇ ಶಿಕ್ಷೆಯಾಗಬೇಕು ಎಂದು ಅದು ದೃಢವಾಗಿ ಆಗ್ರಹಿಸಿದೆ.