ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸಿ, ಪರಕೀಯ ಭಾವ ಆಳಗೊಳ್ಳುವುದನ್ನು ತಡೆಯಿರಿ
ಕೇಂದ್ರ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹ
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ಆರು ತಿಂಗಳು ವಿಸ್ತರಿಸಲು ಸಂಸತ್ತಿನಲ್ಲಿ ನಿಲುವಳಿಯನ್ನು ಮಂಡಿಸುವಾಗ ಕೇಂದ್ರ ಗೃಹಮಂತ್ರಿಗಳ ಮಧ್ಯಪ್ರವೇಶ ಉದ್ರೇಕಕಾರಿಯಾಗಿದ್ದು, ಅದು ಆ ರಾಜ್ಯದ ಜನರಲ್ಲಿ ಮತ್ತಷ್ಟು ಪರಕೀಯ ಭಾವ ಹೆಚ್ಚಲು ಎಡೆಮಾಡಿ ಕೊಡುತ್ತದೆ. ಇದು ಭಾರತದ ಐಕ್ಯತೆ ಮತ್ತು ಸಮಗ್ರತ್ರೆಗೆ ಆರೋಗ್ಯಕರವಲ್ಲ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಟಿಪ್ಪಣಿ ಮಾಡಿದೆ. ಪರಕೀಯ ಭಾವವು, ದೇಶ ಐಕ್ಯತೆಯಿಂದ ಯಾವ ಭಯೋತ್ಪಾದಕತೆಯನ್ನು ಸೋಲಿಸಬೇಕೆಂದು ದೃಢನಿರ್ಧಾರ ಮಾಡಿದೆಯೋ ಅದರ ಬೆಳವಣಿಗೆಗೇ ಆಹಾರ ಉಣಿಸುತ್ತದೆ ಎಂದು ಅದು ಹೇಳಿದೆ.
ಈ ರಾಜ್ಯದಲ್ಲಿ ಸಂಸದೀಯ ಚುನಾವಣೆಗಳನ್ನು ನಡೆಸಲು ಪರಿಸ್ಥಿತಿಗಳು ಅನುಕೂಲವಾಗಿದ್ದವು ಎನ್ನುವುದಾದರೆ, ಅವೇ ಪರಿಸ್ಥಿತಿಗಳು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಗಳನ್ನು ನಡೆಸುವುದಕ್ಕೆ ತಡೆಯಾಗಿವೆ ಎಂದು ನಂಬುವುದಕ್ಕೆ ಕಾರಣಗಳಿಲ್ಲ. ರಾಜ್ಯದಲ್ಲಿನ ಎಲ್ಲ ರಾಜಕೀಯ ಪಕ್ಷಗಳೂ ವಿಧಾನಸಭೆಗೆ ತಕ್ಷಣ ಚುನಾವಣೆಗಳನ್ನು ನಡೆಸಬೇಕು ಮತ್ತು ಇದು ಕಾಶ್ಮೀರದ ಜನತೆಯನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಯೊಳಕ್ಕೆ ಸೆಳೆಯುವ ಅತ್ಯುತ್ತಮ ಮಾರ್ಗ ಎಂದು ಅಭಿಪ್ರಾಯ ಪಟ್ಟಿವೆ ಎಂಬ ಸಂಗತಿಯತ್ತ ಪೊಲಿಟ್ ಬ್ಯುರೊ ಗಮನ ಸೆಳೆದಿದೆ.
ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಕಾಲದಲ್ಲಿ ಒಬ್ಬ ಕೇಂದ್ರ ಗೃಹಮಂತ್ರಿಗಳು ರಾಜ್ಯದಲ್ಲಿನ ರಾಜಕೀಯ ಪಕ್ಷಗಳನ್ನು ಭೇಟಿಮಾಡದಿರುವುದು ಭಾರತದ ಇತಿಹಾಸದಲ್ಲೇ ಮೊದಲ ಬಾರಿ ನಡೆದಿದೆ. ಇದಲ್ಲದೆ, ಭಾರತದ ಎಲ್ಲ ರಾಜ್ಯಗಳ ಪೈಕಿ ಜಮ್ಮು ಮತ್ತು ಕಾಶ್ಮೀರ ಮಾತ್ರವೇ ನಮ್ಮ ಸಂವಿಧಾನದ 370ನೆ ಕಲಮಿನಲ್ಲಿ ಇರುವ ವಿಶೇಷ ಅಂಶವನ್ನು ಪಡೆದಿರುವುದು ಎಂದು ಗೃಹ ಮಂತ್ರಿಗಳು ಸಂಸದೀಯ ಮಧ್ಯಪ್ರವೇಶದ ಸಂದರ್ಭದಲ್ಲಿ ಹೇಳಿದ್ದಾರೆ. ಇದು ನಮ್ಮ ಸಂವಿಧಾನುಕ ಅಂಶಗಳನ್ನು ವಿರೂಪಗೊಳಿಸಿರುವ ಮಾತು. ಸಂವಿಧಾನ ಮಹಾರಾಷ್ಟ್ರ, ಗುಜರಾತ, ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ, ಆಂಧ್ರಪ್ರದೇಶ (ಈಗ ತೆಲಂಗಾಣ), ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಗೋವಾ ರಾಜ್ಯಗಳಿಗೆ ವಿಶೇಷ ಅಂಶಗಳನ್ನು (ಕಲಮು 371, 371 ಎ ಯಿಂದ ಐ ವರೆಗೆ) ಒದಗಿಸಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ನೆನಪಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಸನ್ನಿವೇಶ ಕೇವಲ ಕಾನೂನು ಮತ್ತು ವ್ಯವಸ್ಥೆಯ ಸಮಸ್ಯೆಯಲ್ಲ ಎಂಬುದು ಎಲ್ಲರೂ ಗುರುತಿಸಿರುವ ಸಂಗತಿ. ಇದರ ಆಧಾರದಲ್ಲಿ, ಕೇಂದ್ರ ಸರಕಾರ ತಾನೇ ಈ ಹಿಂದೆ, 1. ಒಂದು ರಾಜಕೀಯ ಸಂವಾದವನ್ನು ಸಂಬಂಧಪಟ್ಟ ಎಲ್ಲರೊಂದಿಗೆ ಆರಂಭಿಸಲಾಗುವುದು, ಮತ್ತು 2. ವಿಶ್ವಾಸವನ್ನು ಕಟ್ಟಿ ಬೆಳೆಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಜನತೆಗೆ ನೀಡಿರುವ ಶ್ವಾಸನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಇವು, ಜತೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನ ಸಭೆಗೆ ಬೇಗನೇ ಚುನಾವಣೆಗಳನ್ನು ನಡೆಸುವುದು ಈಗ ಜಮ್ಮು ಮತ್ತು ಕಾಶ್ಮೀರದ ಜನತೆಯ ನಡುವೆ ಆಳಗೊಳ್ಳುತ್ತಿರುವ ಪರಕೀಯ ಭಾವವನ್ನು ನಿವಾರಿಸುವ ಅತ್ಯಂತ ಸೂಕ್ತ ವಿಧಾನ ಎಂದು ಹೇಳಿದೆ.