ಅರಣ್ಯ ಕಾಯ್ದೆ, ೧೯೨೭ಕ್ಕೆ ಸರಕಾರ ಸೂಚಿಸಿರುವ ಕರಡು ತಿದ್ದುಪಡಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವನ್ನು ಹಿಂತೆದುಕೊಳ್ಳಬೇಕು. ಅದರ ಬದಲಿಗೆ, ಈ ಕಾಯ್ದೆಯನ್ನು ಅರಣ್ಯ ಹಕ್ಕುಗಳ ಕಾಯ್ದೆ ಮತ್ತು ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಚಾರಿತ್ರಿಕ ಅನ್ಯಾಯಗಳನ್ನು, ಈಗ ಒಂದೆಡೆಯಲ್ಲಿ ಅಭಿವೃದ್ಧಿಯ ಹೆಸರಲ್ಲಿ, ಮತ್ತೊಂದೆಡೆಯಲ್ಲಿ ಸಂರಕ್ಷಣೆಯ ಹೆಸರಲ್ಲಿ ಆಧುನಿಕ ಸ್ವರೂಪಗಳಲ್ಲಿ ಎಸಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಯತ್ನಿಸಿರುವ ಇತರ ಕಾಯ್ದೆಗಳಿಗೆ ಸರಿಹೊಂದುವ ರೀತಿಯಲ್ಲಿ ತರುವುದೇ ಅರಣ್ಯ ಸಂರಕ್ಷಣೆಯ ಹಿತರಕ್ಷಣೆಯ ದೃಷ್ಟಿಯಿಂದ ಉತ್ತಮ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಿ ಪ್ರಕಾಶ ಜಾವ್ಡೇಕರ್ ಅವರಿಗೆ ಜುಲೈ ೯ರಂದು ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಮಂತ್ರಾಲಯ ಚರ್ಚೆಗೆ ಬಿಡುಗಡೆ ಮಾಡಿರುವುದು ಅರಣ್ಯ ಕಾಯ್ದೆ, ೧೯೨೭ಕ್ಕೆ ತಿದ್ದುಪಡಿಗಳ ಮೊದಲ ಕರಡನ್ನು ಮಾತ್ರವಾದರೂ, ಲೋಕಸಭೆಯಲ್ಲಿ ಜೂನ್ ೨೮ರಂದು ಪ್ರಕಾಶ್ ಜಾವ್ಡೇಕರ್ ಈ ಕುರಿತು ಸಲ್ಲಿಸಿರುವ ಲಿಖಿತ ಹೇಳಿಕೆ ಬಹಳಷ್ಟು ದಾರಿ ತಪ್ಪಿಸುವಂತದ್ದು. “ನೀವು ತಿದ್ದುಪಡಿಗಳನ್ನು ಸಮರ್ಥಿಸಿ ಕೊಂಡಿದ್ದೀರಿ. ಈ ಕಾಯ್ದೆಯಲ್ಲಿರುವ ಅತ್ಯಂತ ದಮನಕಾರಿ ಕ್ರಮಗಳನ್ನು ಅಷ್ಟೇನೂ ಮುಖ್ಯವಲ್ಲ ಎಂದು ಬದಿಗೆ ಸರಿಸುವ ಪ್ರಯತ್ನ ಮಾಡಿದ್ದೀರಿ, ಅದರಲ್ಲೂ ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ದಮನಮಾಡುತ್ತಿರುವುದನ್ನು ಉಪೇಕ್ಷಿಸಿದ್ದೀರಿ.
ಆದ್ದರಿಂದ ಈ ತಿದ್ದುಪಡಿಗಳ ಬಗ್ಗೆ ಹೆಚ್ಚು ವಿವರವಾದ ವಿಮರ್ಶೆಯನ್ನು ತಮಗೆ ಕೊಡುವುದು ಅಗತ್ಯ ಎಂದು ನನಗನಿಸಿದೆ. ಇದು ಸಂಸತ್ತಿಗೆ ಒಂದು ಹೆಚ್ಚು ಸರಿಯಾದ ಚಿತ್ರವನ್ನು ಕೊಡಲು ನೆರವಾಗಬಹುದು” ಎಂದು ಈ ಪತ್ರವನ್ನು ಬರೆದಿರುವುದಕ್ಕೆ ಕಾರಣವನ್ನು ತಿಳಿಸುತ್ತ ಬೃಂದಾ ಕಾರಟ್ ಹೇಳಿದ್ದಾರೆ.
೧೯೨೭ರ ಅರಣ್ಯ ಕಾಯ್ದೆ ಬ್ರಿಟಿಶ್ ವಸಾಹತುಶಾಹಿಗಳಿಗೆ ಭಾರತದ ಅರಣ್ಯಗಳ ಮೇಲೆ ಅವರ ಸರಕಾರದ ಒಡೆತನವನ್ನು ಸ್ಥಾಪಿಸುವ ಒಂದು ಸಾಧನವಾಗಿತ್ತು. ಈ ಕಾಯ್ದೆಯ ಮೂಲಕ ಅವರು ಬುಡಕಟ್ಟು ಸಮುದಾಯಗಳು ಅತಿಕ್ರಮಣಕಾರರು ಎಂದು ಸಾರಿದರು. ಈ ಸಮುದಾಯಗಳ ವಿರುದ್ಧ ಚಾರಿತ್ರಿಕ ಅನ್ಯಾಯಗಳಿಗೆ ಈ ಮೂಲಕ ಕಾನೂನಿನ ಮಂಜೂರಾತಿಯನ್ನು ಪಡೆಯಲಾಯಿತು. ಈಗ ಸೂಚಿಸಿರುವ ತಿದ್ದುಪಡಿಗಳು, ಕೆಲವು ಸಂಪೂರ್ಣ ಹೊಸದಾದ ವಿಭಾಗಗಳನ್ನೂ ಹೊಂದಿದ್ದು, ಈ ೯೧ ಅಂಶಗಳು ಅರಣ್ಯ ಸಂರಕ್ಷಣೆಯನ್ನು ಮಿಲಿಟರೀಕರಿಸಿ ಬ್ರಿಟಿಶರನ್ನೂ ಮೀರಿಸಿವೆ, ಅವರು ಧೈರ್ಯಸಾಲದೆ ಮಾಡದಿರುವುದನ್ನೂ ಮಾಡ ಹೊರಟಿದೆ.
ಈ ತಿದ್ದುಪಡಿಗಳು ಬುಡಕಟ್ಟು ಬದುಕಿನ ಪ್ರತಿಯೊಂದು ಆಯಾಮವನ್ನೂ ಅಪರಾಧೀಕರಿಸಿವೆ, ಅರಣ್ಯ ಅಧಿಕಾರಶಾಹಿಗೆ ವಾರಂಟ್ ನೀಡದೆಯೇ ಬಂಧಿಸುವ, ಕಾನೂನು ಜಾರಿಗೊಳಿಸಲು ಶಸ್ತ್ರಾಸ್ತ್ರಗಳ ಬಳಕೆಗೂ ಲಂಗುಲಗಾಮಿಲ್ಲದ ಅಧಿಕಾರಗಳನ್ನು ಕೊಟ್ಟಿದೆ. ಪ್ರಸ್ತಾವಿತ ರಾಷ್ಟ್ರೀಯ ಅರಣ್ಯ ಮಂಡಳಿಯಲ್ಲಿ ಸೇನಾಪಡೆಗಳ ಮುಖ್ಯಸ್ಥರನ್ನು ಒಬ್ಬ ಸದಸ್ಯರಾಗಿ ಸೂಚಿಸಿರುವುದು ಈ ದಮನಕಾರೀ ನಿಲುವಿನ ಸಂಕೇತವಾಗಿದೆ. ಬಹುಶಃ ಭಾರತದ ಸೇನಾಧಿಪತಿಗಳು ಈಗ ದೇಶದ ಗಡಿಗಳ ಬದಲು ಅರಣ್ಯಗಳನ್ನು ರಕ್ಷಿಸುವುದು ಹೇಗೆ ಎಂಬ ಚರ್ಚೆಗೆ ಸಮಯ ಕೊಡಬೇಕಾಗಿದೆ ಎಂದು ಈ ಬಗ್ಗೆ ಬರೆಯುತ್ತ ಬೃಂದಾ ಅವರು ಗೇಲಿ ಮಾಡಿದ್ದಾರೆ.
ಇನ್ನೊಂದೆಡೆಯಲ್ಲಿ, ಅರಣ್ಯಗಳ ನಿರ್ವಹಣೆಗೆ, ಸಂರಕ್ಷಣೆಗೆ, ಕಾಯ್ದುಕೊಳ್ಳಲಿಕ್ಕೆ ಮತ್ತು ಬುಡಕಟ್ಟು ಹಕ್ಕುಗಳಿಗೆ ಎಷ್ಟೊಂದು ಅನಿವಾರ್ಯವಾದ ಗ್ರಾಮಸಭೆಗಳ, ಅದರಲ್ಲೂ ಬುಡಕಟ್ಟು ಪ್ರದೇಶಗಳಲ್ಲಿನ ಗ್ರಾಮಸಭೆಗಳ ಪಾತ್ರವನ್ನು ಅಳಿಸಿ ಬಿಡಲಾಗಿದೆ ಎಂಬುದನ್ನು ಎತ್ತಿ ತೋರುತ್ತ ಬೃಂದಾ ಕಾರಟ್ ಈ ತಿದ್ದುಪಡಿಗಳು ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಅಪರಾಧೀಕರಣದ ಒಂದು ನೀಲನಕ್ಷೆ ಎಂದು ಟೀಕಿಸಿದ್ದಾರೆ.
ಅರಣ್ಯ ಸಂರಕ್ಷಣೆ ಈ ತಿದ್ದುಪಡಿಗಳ ಘೋಷಿತ ಗುರಿ. ಆದರೆ ಇವು ಆ ಗುರಿಸಾಧನೆಗೆ ನೆರವಾಗುವುದಿಲ್ಲ. ತದ್ವಿರುದ್ಧವಾಗಿ, ಇವು ಅರಣ್ಯ ಹಕ್ಕುಗಳ ಕಾಯ್ದೆಯಲ್ಲಿ, ೨೦೦೬ರಲ್ಲಿ ತಿದ್ದುಪಡಿಗೊಂಡ ವನ್ಯ ಪ್ರಾಣಿಗಳ ರಕ್ಷಣಾ ಕಾಯ್ದೆಯಲ್ಲಿ, ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ ಕಾಯ್ದೆ(ಪಿಎಇಎಸ್ಎಎ), ಭೂಸ್ವಾಧೀನ ಮತ್ತು ಮರುವಸತಿ ಕಾಯ್ದೆ,೨೦೧೩ರಲ್ಲಿ ಮಾತ್ರವಲ್ಲ, ಸಂವಿಧಾನದ ಶೆಡ್ಯೂಲ್ ೫ ಮತ್ತು ೬ರಲ್ಲಿ ಮಾನ್ಯ ಮಾಡಿರುವ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಈಗಿರುವ ಹಕ್ಕುಗಳನ್ನು ಅಳಿಸಿ ಹಾಕುತ್ತವೆ.
ಮೇಲೆ ಹೇಳಿದಂತೆ, ಈ ತಿದ್ದುಪಡಿಗಳು ಹೇಗೆ ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಅಪರಾಧೀಕರಣದ ನೀಲನಕ್ಷೆ ಎಂಬುದಕ್ಕೆ ವಿವರಗಳನ್ನೂ ಈ ಪತ್ರ ಒಳಗೊಂಡಿದೆ. ಇನ್ನೂ ಗಮನಾರ್ಹ ಸಂಗತಿಯೆಂದರೆ, ಬುಡಕಟ್ಟು ಜನಗಳ ಹಕ್ಕುಗಳ ಪ್ರಶ್ನೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಪ್ರಕಾಶ ಜಾವ್ಡೇಕರ್ ಅವರಿಗೆ ಬೃಂದಾ ಕಾರಟ್ ಈ ಪತ್ರದಲ್ಲಿ ನೆನಪಿಸಬೇಕಾಗಿ ಬಂದಿದೆ.
“ಆದ್ದರಿಂದ ಈ ತಿದ್ದುಪಡಿಗಳು, ಒಟ್ಟಿನಲ್ಲಿ, ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಮತ್ತು ನಿರ್ದಿಷ್ಟವಾಗಿ ಬುಡಕಟ್ಟು ಜನಗಳ ಹಕ್ಕುಗಳನ್ನು, ಒಟ್ಟಾರೆಯಾಗಿ ಪಾರಂಪರಿಕ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ಕಾನೂನು ಚೌಕಟ್ಟಿಗೆ ವ್ಯತಿರಿಕ್ತವಾಗಿವೆ. ಅಲ್ಲದೆ, ಬುಡಕಟ್ಟು ಹಕ್ಕುಗಳು ತಮ್ಮ ಮಂತ್ರಾಲಯದ ಕಾರ್ಯವ್ಯಾಪ್ತಿಗೆ ಸೇರಿದ್ದಲ್ಲ, ಅವು ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ವ್ಯಾಪ್ತಿಗೆ ಸೇರಿದವುಗಳು. ಆದರೂ ಈ ತಿದ್ದುಪಡಿಗಳ ಮೂಲಕ ತಮ್ಮ ಮಂತ್ರಾಲಯ ಬುಡಕಟ್ಟು ಹಕ್ಕುಗಳಿಗೆ ಸಂಬಂಧಪಟ್ಟ ಎಲ್ಲ ಶಾಸನಗಳನ್ನು ಮೀರಿ ನಿಲ್ಲಲು, ಅವನ್ನೆಲ್ಲ ಈ ಪ್ರಸ್ತಾವಿತ ಕಾಯ್ದೆಗೆ ಅಧೀನಗೊಳಿಸಲು ಪ್ರಯತ್ನಿಸುತ್ತಿದೆ. ಇದು ಯಾವುದೇ ರೀತಿಯಲ್ಲಿ ಒಪ್ಪತಕ್ಕಂತದ್ದಲ್ಲ” ಎಂದು ಬೃಂದಾ ಕಾರಟ್ ಪ್ರಕಾಶ ಜಾವ್ಡೇಕರ್ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.