ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯ ಉಭ ಗ್ರಾಮದಲ್ಲಿ ಕ್ರಿಮಿನಲ್ ಭೂಕಬಳಿಕೆ ಮಾಫಿಯಾ ಹತ್ತು ಆದಿವಾಸಿ ಭೂಹೀನ ರೈತರ ಅಮಾನುಷ ಹತ್ಯೆ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಹತ್ಯೆಯಾದವರಲ್ಲಿ ಮೂವರು ಮಹಿಳೆಯರು. ಈ ಕ್ರಿಮಿನಲ್‍ಗಳು ಉತ್ತರಪ್ರದೇಶ ಸರಕಾರ ಮತ್ತು ಆಡಳಿದ ಬೆಂಬಲದಿಂದ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಆದಿವಾಸಿಗಳು ಹಲವು ದಶಕಗಳಿಂದ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವವರು. ಆದರೆ ಯಾವ ಸರಕಾರವೂ ಅವರ ಹಕ್ಕಾಗಿರುವ ಜಮೀನು ಪಟ್ಟಾ ನೀಡಿರಲಿಲ್ಲ. ಆದಿತ್ಯನಾಥ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸ್ಥಳೀಯ ಭೂಮಾಫಿಯಾ ಅವರು ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನಿನಲ್ಲಿ ಉಳುಮೆ ಮಾಡಬಾರದು ಎಂದು ಬೆದರಿಸಿದ್ದಾರೆ. ಆದಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರೂ, ಸರಕಾರ ಮತ್ತು ಆಡಳಿತ ಕ್ರಮ ಕೈಗೊಳ್ಳಲು ನಿರಾಕರಿಸಿದ್ದವು.
ಆದಿತ್ಯನಾಥ ಸರಕಾರ ಬೇರೆಯವರ ಮೇಲೆ ಜವಾಬ್ದಾರಿ ಹಾಕಲು ಪ್ರಯತ್ನಿಸುತ್ತಿದೆ. ಆದರೆ ಪ್ರಧಾನನ ನೇತೃತ್ವದಲ್ಲಿ ಭೂಮಾಫಿಯಾ ಆ ಜಮೀನನ್ನು “ಖರೀದಿಸಿದ್ದೇವೆ’ ಎಂದು ಹೇಳಿಕೊಂಡು ಆದಿವಾಸಿಗಳ ಮೇಲೆ ಭಯೋತ್ಪಾದನೆಯನ್ನು ಹರಿಯ ಬಿಟ್ಟಿರುವುದು ಈ ಸರಕಾರದ ಆಳ್ವಿಕೆಯಲ್ಲಿಯೇ. ಗಾಯಗೊಂಡವರಿಗೆ ನೆರವಾಗಲು ಈ ಸರಕಾರ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ, ಬದಲಾಗಿ ಕೆಲವರನ್ನು ಬಲವಂತದಿಂದ ಆಸ್ಪತ್ರೆಯಿಂದ ಮನೆಗೆ ಕಳಿಸಲಾಗಿದೆ ಎಂಬುದು ಅತ್ಯಂತ ಖಂಡನೀಯ ಎಂದು ಸಿಪಿಐ(ಎಂ) ಹೇಳಿದೆ.
ಉತ್ತರಪ್ರದೇಶ ಸರಕಾರ ಸಂತೃಸ್ತರನ್ನು ಭೇಟಿಯಾಗಲು ಗ್ರಾಮಕ್ಕೆ ಪ್ರವೇಶಿಸದಂತೆ ತಡೆದಿರುವುದೂ ಖಂಡನೀಯ. ಆದರೂ ಇದನ್ನು ಬೇಧಿಸಿ ಸಿಪಿಐ(ಎಂ) ನಿಯೋಗವೊಂದು ಜುಲೈ 19ರಂದು ಸಂತೃಸ್ತ ಕುಟುಂಬಗಳನ್ನು ಭೇಟಿಯಾಗಿದೆ. ಹೀಗೆ ಭೇಟಿ ಮಾಡಿದ ಮೊದಲ ನಿಯೋಗವಿದು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸಮಿತಿ ಸದಸ್ಯ ಹೀರಾಲಾಲ್ ಯಾದವ್ ನೇತೃತ್ವದ ರು ಸದಸ್ಯರ ನಿಯೋಗದಲ್ಲಿ ಇದ್ದ ತರರೆಂದರೆ ದೀನಾನಾತ ಯಾದವ್, ಅನೂಪ್ ಪ್ರತಾಪ್ ಸಿಂಗ್, ಬಚ್ಚಾಲಾಲ್, ಅರವಿಂದ್ ವಕೀಲ್, ಅನಿಲ್ ಕುಮಾರ್ ಸಿಂಗ್. ಸಂತೃಸ್ತ ಕುಟುಂಬಗಳು ತೀಲಸಿರುವ ಸಂಗತಿಗಳು ಬೆಚ್ಚಿ ಬೀಲಿಸುವಂತವು. ಆದಿವಾಸಿಗಳು ಉಳುಮೆಯಲ್ಲಿ ತೊಡಗಿದ್ದಾಗ ತುಂಬಿದ್ದ ಟ್ರಕ್‍ನಲ್ಲಿ ಬಂದ ಸಶಸ್ತ್ರ ಮಂದಿ ಯಜ್ಞದತ್ ಎಂಬಾತನ ನೇತೃತ್ವದಲ್ಲಿ ಮೃತ್ಯುಕಾಂಡ ನಡೆಸಿದರು.
ಜಮೀನು ಪಟ್ಟಾ ಕೋಡಿ ಎಂದು ಎಷ್ಟೊಂದು ಬಾರಿ ಆಡಳಿತವನ್ನು ಅಂಗಲಾಚಿದ್ದೆವು ಎಂಬುದನ್ನೂ ಕುಟುಂಬದವರು ವಿವರಿಸಿದರು. ಈ ಹಿಂದೆ 1955ರಲ್ಲಿ ಬಲಿಷ್ಟ ಭೂಮಾಲಕರು ಒಬ್ಬ ಸಿನ್ಹ ಎಂಬಾತನ ನೇತೃತ್ವದಲ್ಲಿ ಈ ಜಮೀನನ್ನು ವಶಪಡಿಸಿಕೊಂಡಿದ್ದರು. ಆದರ್ಶ ಟ್ರಸ್ಟ್ ಎಂಬುದನ್ನು ರಚಿಸಿದರು. ಆ ಟ್ರಸ್ಟ್ ಗೆ ಅಂದಿನಿಂದ ಈ ಆದಿವಾಸಿ ಜನಗಳು ವಾಷಿಕ ಗೇಣಿ ಕಟ್ಟಿಕೊಂಡು ಬರುತ್ತಿದ್ದಾರೆ. ಭೂಮಿಯನ್ನು ಮಾರುವುದಿಲ್ಲ ಎಂಬ ಆಶ್ವಾಸನೆ ಮೇಲೆ ಇತ್ತೀಚೆಗೆ ಅವರು ತೆತ್ತಿರುವ ವಾರ್ಷಿಕ ಗೇಣಿ ಒಂದು ಬೀಘಾ ಜಮೀನಿಗೆ 500ರೂ. 2017ರಲ್ಲಷ್ಟೇ ಈ ಜಮೀನನ್ನು ಯಜ್ಞ ದತ್ತನಿಗೆ ಆಡಳಿತದ ನೆರವಿನಿಂದ ಮಾರಿರುವಂತೆ ಕಾಣುತ್ತದೆ. ಇದು ನಡೆದಿರುವುದು ಬಿಜೆಪಿ ಸರಕಾರದ ಆಳ್ವಿಕೆಯಲ್ಲಿ.
ಭೂಮಾಫಿಯಾವನ್ನು ರಕ್ಷಿಸಲು ಮತ್ತು ಆದಿವಾಸಿಗಳಿಗೆ ಜಮೀನು ಪಟ್ಟಾವನ್ನು ಕೊಡದಿರಲು ಪ್ರಸಕ್ತ ಆಳ್ವಿಕೆಯೇ ಹೊಣೆ ಎಂದಿರುವ ಸಿಪಿಐ(ಎಂ), ಏಳು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಜಮೀನಿನ ಸಾಗುವಳಿ ಮಾಡಿಕೊಂಡು ಬಂದಿರುವ ಆದಿವಾಸಿ ಕುಟುಂಬಗಳಿಗೆ ತಕ್ಷಣವೇ ಜಮೀನು ಪಟ್ಟಾ ನೀಡಬೇಕು ಎಂದು ಆಗ್ರಹಿಸಿದೆ. ಈ ಅಮಾನುಷ ಹತ್ಯಾಕಾಂಡದಲ್ಲಿ ಭಾಗಿಯಾದ ಎಲ್ಲರನ್ನೂ ತಕ್ಷಣವೇ ಬಂಧಿಸಿ ಕಠಿಣತಮ ಶಿಕ್ಷೆಯನ್ನು ವಿಧಿಸಬೇಕು ಮತ್ತು ಅವರೊಂದಿಗೆ ಶಾಮೀಲಾದ ಆಡಳಿತದ ಅಧಿಕಾರಿಗಳನ್ನು ಹಾಗೂ ಪೋಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ, ಹತ್ಯೆಯಾದವರು ಮತ್ತು ಗಾಯಗೊಂಡ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕು ಮತ್ತು ತಮ್ಮ ಜೀವನಾಧಾರದಿಂದ ವಂಚಿಸಲ್ಪಟ್ಟಿರುವ ಕುಟುಂಬಗಳಿಗೆ ಪುಕ್ಕಟೆ ರೇಶನ್ ಲಭ್ಯವಾಗುವಂತೆ ಮಾಡಬೇಕು ಎಂದೂ ಸಿಪಿಐ(ಎಂ) ಆಗ್ರಹಿಸಿದೆ.