ಮಾನವ ಸಂಪನ್ಮೂಲ ಮಂತ್ರಿಗಳಿಗೆ ಯೆಚುರಿ ಪತ್ರ
“ನಮ್ಮ ಇಂದಿನ ಪರಿಸ್ಥಿತಿಗಳಿಗೆ ಸೂಕ್ತವಾದ ಧೋರಣೆ ರೂಪಿಸಲು ವ್ಯಾಪಕ ಸಮಾಲೋಚನೆಗಳ ಅಗತ್ಯವಿದೆ”
ಕೇಂದ್ರ ಸರಕಾರ ಪ್ರಕಟಿಸಿರುವ ಕರಡು ರಾಷ್ಟ್ರೀಯ ಶಿಕ್ಷಣ ಧೋರಣೆ(ಡಿ ಎನ್ ಇ ಪಿ) ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮಾಣ , ಗುಣಮಟ್ಟ ಮತ್ತು ಸಮತ್ವದ ನಡುವೆ ಒಂದು ಸಮತೋಲನವನ್ನು ರೂಪಿಸುವ ಬದಲು ಶಿಕ್ಷಣ ವ್ಯವಸ್ಥೆಯ ಮತ್ತು ಸಂರಚನೆಗಳ ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದೀಕರಣ ಆಗುವಂತೆ ಮಾಡುವಂತದ್ದು, ಇದು ಹೆಚ್ಚು ಮೇಲ್ವರ್ಗಗಳ ಪರವಾದ , ಕಾರ್ಪೊರೇಟ್ಗಳ ಪರವಾದ ಒತ್ತಿಗೆ ಪ್ರೋತ್ಸಾಹ ನೀಡುವಂತದ್ದಾಗಿದೆ, ಆದ್ದರಿಂದ ಅದನ್ನು ಅದು ಈಗಿರುವ ಸ್ವರೂಪದಲ್ಲಿ ಒಪ್ಪುವುದು ಸಾಧ್ಯವಿಲ್ಲ, ಇಂದಿನ ನಮ್ಮ ಪರಿಸ್ಥಿತಿಗಳಿಗೆ ಸೂಕ್ತವಾದ ಒಂದು ರಾಷ್ಟ್ರೀಯ ಶಿಕ್ಷಣ ಧೋರಣೆಯ ಬಗ್ಗೆ ವ್ಯಾಪಕ ಸಮಾಲೋಚನೆಗಳ ನಂತರವೇ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಕೇಂದ್ರ ಮಾನವ ಸಂಪನ್ಮೂಲ ಮಂತ್ರಿಗಳಿಗೆ ಸಿಪಿಐ(ಎಂ) ಪರವಾಗಿ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಸಿಪಿಐ(ಎಂ) ಈ ಕರಡು ಧೋರಣೆಯ ದಸ್ತಾವೇಜನ್ನು ಆಳವಾಗಿ ಪರಿಶೀಲಿಸಿದ್ದು ಈ ಕುರಿತಂತೆ ಅದರ ಪರಿವೀಕ್ಷಣೆಗಳನ್ನು ಈ ಪತ್ರದೊಂದಿಗೆ ಸರಕಾರಕ್ಕೆ ಸಲ್ಲಿಸಲಾಗಿದೆ.
ಇವು ಈ ಕರಡು ಧೋರಣೆಯ ಎಲ್ಲ ಆಯಾಮಗಳನ್ನು ಕುರಿತಾಗಿವೆ, ವಿಶೇಷವಾಗಿ ಇದರ ಅಧ್ಯಾಯ 23 ರಲ್ಲಿ ಪ್ರಸ್ತಾಪಿಸಿರುವ ‘ರಾಷ್ಟ್ರೀಯ ಶಿಕ್ಷಾ ಆಯೋಗ’ದ ಮೂಲಕ ಅಧಿಕಾರಗಳ ಕೇಂದ್ರೀಕರಣದ ಅಂಶಗಳು ರಾಜ್ಯ ಸರಕಾರಗಳ ಅಧಿಕಾರಗಳನ್ನು ಮೊಟಕು ಮಾಡುತ್ತವೆ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿವೆ, ಆದ್ದರಿಂದ ಅವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂಬ ಸಿಪಿಐ(ಎಂ) ಆಗ್ರಹಕ್ಕೆ ಯೆಚುರಿ ತಮ್ಮ ಪತ್ರದಲ್ಲಿ ಒತ್ತು ನೀಡಿದ್ದಾರೆ.
ಈ ಹಿಂದಿನ ರಾಷ್ಟ್ರೀಯ ಶಿಕ್ಷಣ ಧೋರಣೆ ಕುರಿತಾದ ಭಾರತ ಸರಕಾರದ ದಸ್ತಾವೇಜಿನ 33 ವರ್ಷಗಳ ನಂತರ ಬಂದಿರುವ ಈ ಕರಡು ಹಿಂದಿನ ರಾಷ್ಟ್ರೀಯ ಶಿಕ್ಷಣ ಧೋರಣೆಯ ಸಾಧನೆಗಳು ಮತ್ತು ವಿಫಲತೆಗಳನ್ನು ವಸ್ತುನಿಷ್ಟವಾಗಿ ಪರಾಮರ್ಶಿಸುತ್ತದೆ, ಮತ್ತು ಈ ಅವಧಿಯಲ್ಲಿ ಎದ್ದು ಬಂದಿರುವ ಹೊಸ ಸವಾಲುಗಳನ್ನು ವಿಶ್ಲೇಷಿಸಿ ರಾಷ್ಟ್ರನಿರ್ಮಾಣದ ಈ ಒಂದು ಮಹತ್ವದ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಆಕಾಂಕ್ಷೆಗಳನ್ನು ಕುರಿತಂತೆ ಸಂವಿಧಾನಿಕ ನಿರ್ದೇಶನಗಳನ್ನು ಪರಿಪಾಲಿಸುವ ಕಣ್ಣೋಟವನ್ನು ನೀಡುತ್ತದೆ ಎಂದು ಸಹಜವಾಗಿ ನಿರೀಕ್ಷಿಸಲಾಗಿತ್ತು. ಆದರೆ ನಮ್ಮ ಮುಂದಿರುವುದು ಇವಕ್ಕೆ ತೊಡಕುಂಟು ಮಾಡುವ ಒಂದು ದಸ್ತಾವೇಜು ಎನ್ನುತ್ತ ಸಿಪಿಐ(ಎಂ) ತನ್ನ ಪರಿವೀಕ್ಷಣೆಗಳ ಪೀಠಿಕೆಯಲ್ಲಿ ಅದನ್ನು ವಿಷದಪಡಿಸಿದೆ.
ಶಾಲಾಶಿಕ್ಷಣ ಮತ್ತು ಉನ್ನತ ಶಿಕ್ಷಣ ಕುರಿತ ದಸ್ತಾವೇಜಿನಲ್ಲಿರುವ ಅಂಶಗಳು, ಮತ್ತು ‘ರಾಷ್ಟ್ರೀಯ ಶಿಕ್ಷಾ ಆಯೋಗ’ವನ್ನು ರಚಿಸುವ ಪ್ರಸ್ತಾವದಲ್ಲಿ ಹೇಳಿರುವ ಅಂಶಗಳನ್ನು ವಿವರವಾಗಿ ಪರಿಶೀಲಿಸಿದ ನಂತರ ಸಿಪಿಐ(ಎಂ) ಈ ಕುರಿತಂತೆ ತನ್ನ ತೀರ್ಮಾನಗಳನ್ನು ಸರಕಾರಕ್ಕೆ ಸಲ್ಲಿಸಿದ್ದು ಅವು ಹೀಗಿವೆ:
“ಈ ಕರಡು ಈಗಿರುವ ವ್ಯವಸ್ಥೆಯ ಸಾಮರ್ಥ್ಯದ, ಅಥವ ಅದನ್ನು ಸರಿಪಡಿಸಬೇಕಾದ ಮತ್ತು ಅದರ ಅಸಮರ್ಪಕತೆಗಳನ್ನು ನಿವಾರಿಸಬೇಕಾದ ಅಗತ್ಯದ ಬಗ್ಗೆ ಒಂದು ಪ್ರಾಮಾಣಿಕ ಆಕಲನ ನಡೆಸುವ ಬದಲು ಸಂರಚನಾ ಪರಿವರ್ತನೆಯತ್ತ ವಾಲಿದೆ. ಇದು, ಭಾರತದ ಶಿಕ್ಷಣ ಧೋರಣೆಯ ವಿಷಯದಲ್ಲಿ ಈ ಹಿಂದಿನ ಮೈಲಿಗಲ್ಲು ದಸ್ತಾವೇಜುಗಳಾದ ರಾಧಾಕೃಷ್ಣನ್ ಸಮಿತಿ ವರದಿ (1948), ತಾಂತ್ರಿಕ ಶಿಕ್ಷಣದ ಬಗ್ಗೆ ಮುದಲಿಯಾರ್ ಸಮಿತಿಯ ವರದಿ ಮತ್ತು ಕೊಠಾರಿ ಆಯೋಗದ ವರದಿ (1966) ಯ ಕಣ್ಣೋಟ ಮತ್ತು ಪ್ರಸ್ತಾವಗಳೊಡನೆ ಸಂವಾದಕ್ಕೆ ಮುಂದಾಗಲು ನಿರಾಕರಿಸುವುದೇ ಇದನ್ನು ಸ್ಪಷ್ಪಪಡಿಸುತ್ತದೆ. ಸ್ವತಂತ್ರ ಭಾರತದ ಅಭಿವೃದ್ಧಿಯ ಆರಂಭದ ಘಟ್ಟಗಳಲ್ಲಿ ಶಿಕ್ಷಣದ ಸಾರ್ವಜನಿಕ ಮೌಲ್ಯ ಮತ್ತು ಉದ್ದೇಶಗಳ ರೂಪುರೇಷೆಗಳನ್ನು ಕೊಟ್ಟಿದ್ದ ದಸ್ತಾವೇಜುಗಳಿವು., ಶಿಕ್ಷಣ ರಂಗದಲ್ಲಿ ಎದ್ದು ಬರುತ್ತಿರುವ ಸವಾಲುಗಳನ್ನು ಎದುರಿಸುವಲ್ಲಿ ಸಾತತ್ಯ ಕಾಣುತ್ತಿಲ್ಲ. ಇದು ಪ್ರಜಾಪ್ರಭುತ್ವ ನೀತಿಗಳು, ಒಕ್ಕೂಟ ಆಳ್ವಿಕೆ ಮತ್ತು ಸಾರ್ವಜನಿಕ ವಿಶ್ವಾಸದ ಬಗ್ಗೆ ಎಲ್ಲಿಲ್ಲದ ತುಚ್ಛೀಕಾರವನ್ನು ಎತ್ತಿ ತೋರುತ್ತದೆ.
ಭಾರತೀಯ ಸಂವಿಧಾನದಲ್ಲಿ ಇರುವ ಅಧಿಕಾರಗಳ ಸಮತೋಲನವನ್ನು ಉಪೇಕ್ಷಿಸಿ ಇದು ಕಾರ್ಯಾಂಗಕ್ಕೆ ಎಲ್ಲ ನಿರ್ಣಯ ಕೈಗೊಳ್ಳುವ ಅಧಿಕಾರಗಳನ್ನು ಕೊಡುತ್ತದೆ, ಈ ಮೂಲಕ ಇದುವರೆಗೆ ಹಲವು ಸಂಸ್ಥೆಗಳನ್ನು ಮತ್ತು ಜನಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸಂಪನ್ಮೂಲಗಳನ್ನು ನಿರ್ಮಿಸುವಲ್ಲಿ ಸಕ್ರಿಯವಾಗಿ ತೊಡಗಿದ್ದ ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಲಗಳಿಗೆ ಯಾವ ಅಧಿಕಾರವನ್ನೂ ಉಳಿಸಿಲ್ಲ.
ಭಾರತದ ಶಿಕ್ಷಣ ಧೋರಣೆಯನ್ನು ಖಾಸಗಿ ಹೂಡಿಕೆಯ ಅಗತ್ಯಗಳೊಂದಿಗೆ ಜೋಡಿಸುವ ಈ ಕರಡು ಧೋರಣೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯ ಕೊಳ್ಳುಬಾಕತನ ರಾರಾಜಿಸುತ್ತಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆಯೊಂದಿಗೆ ಹೊಂದಿಕೊಳ್ಳುವಲ್ಲಿ ಇದು ವಿಫಲವಾಗಿದೆ, ಇನ್ನು, ‘ಸಬ್ ಕಾ ವಿಶ್ವಾಸ್’ ಬಗ್ಗೆಯಂತೂ ಹೇಳುವಂತೆಯೇ ಇಲ್ಲ. ಕರಡನ್ನು ಸಿದ್ಧಪಡಿಸಿದ ಸಮಿತಿ ಹಲವಾರು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿದಂತೆ ಕಾಣುತ್ತದೆ. ಆದರೆ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸಂಸ್ಥೆಗಳು ಎಲ್ಲ ಹಂತಗಳಲ್ಲೂ ಪ್ರತಿನಿಧಿಸುವ ಸಾಮೂಹಿಕ ಆಕಾಂಕ್ಷೆಗಳನ್ನು ಉಪೇಕ್ಷಿಸುವ ಅಪರಾಧವನ್ನು ಮಾಡಿದೆ. ಭಾರತದ ಯುವ ಜನವಿಭಾಗ ದೇಶದ ಶಿಕ್ಷಣ ಕಾರ್ಯಕ್ರಮದಲ್ಲಿ ಒಂದು ನ್ಯಾಯಯುತ ರೀತಿಯಲ್ಲಿ ಮತ್ತು ವಿಶ್ವಾಸಪೂರ್ಣವಾಗಿ ಭಾಗವಹಿಸುವುದನ್ನು ಸಾಧ್ಯಗೊಳಿಸಲು ಎದುರಿಸಬೇಕಾದ ಹಲವು ನೈಜ ಸವಾಲುಗಳ ಬಗ್ಗೆ ಇದಕ್ಕೆ ಅರಿವೇ ಇದ್ದಂತಿಲ್ಲ ಎಂದಿರುವ ಸಿಪಿಐ(ಎಂ)ನ ಪರಿವೀಕ್ಷಣೆ “ನಾವು ಈ ಕರಡು ರಾಷ್ಟ್ರೀಯ ಶಿಕ್ಷಣ ಧೋರಣೆಯನ್ನು ತಿರಸ್ಕರಿಸುತ್ತೇವೆ” ಎಂದು ಹೇಳಿದೆ.
ಮುಂದುವರೆದು ಅದು “ನಾಗರಿಕ ಸಮಾಜ ಹಾಗೂ ರಾಜಕೀಯ ವಲಯದ ವಿಭಿನ್ನ ವಿಭಾಗಗಳಿಂದ ರಾಷ್ಟ್ರೀಯ ಶಿಕ್ಷಣ ಧೋರಣೆಯ ಕರಡನ್ನು ಮರುರೂಪಿಸುವಲ್ಲಿ ಅಗತ್ಯವಾದ ಅಂಶಗಳನ್ನು ಪಡೆಯಲು ಒಂದು ವಿಶ್ವಾಸಾರ್ಹ ಮತ್ತು ಸಮರ್ಥನೀಯ ಚಟುವಟಿಕೆ ನಡೆಸುವತ್ತ ವ್ಯಾಪಕ ಸಮಾಲೋಚನೆಗಳನ್ನು ನಡೆಸಲು ಅಧಿಕಾರ ನೀಡಬೇಕು” ಎಂದು ಆಗ್ರಹಿಸಿದೆ. ಇಂತಹ ಒಂದು ದಸ್ತಾವೇಜನ್ನು ಭಾರತೀಯ ಸಂವಿಧಾನದ 8ನೇ ಶೆಡ್ಯೂಲಿನಲ್ಲಿ ಮಾನ್ಯ ಮಾಡಿರುವ ಎಲ್ಲ ಭಾಷೆಗಳಲ್ಲಿ, ಹಾಗೂ ಪಡೆಯಬಹುದಾದ ರೀತಿಯಲ್ಲಿ ಲಭ್ಯಗೊಳಿಸಬೇಕು ಎಂದೂ ಅದು ಹೇಳಿದೆ.