ಎಲ್ಲ ಭಾರತೀಯರ ಭದ್ರತೆ ಮತ್ತು ಐಕ್ಯತೆಯನ್ನು ಧ್ವಂಸ ಮಾಡಲು. ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹೊಣೆ ನಿಮಗಿದೆ:
ಗೃಹಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
ಯುಟ್ಯೂಬ್‌ನಲ್ಲಿ ಮತ್ತು ವಾಟ್ಸ್‌ಆಪ್ ಗುಂಪುಗಳಲ್ಲಿ ಒಂದು ಸಮುದಾಯದ ವಿರುದ್ದ ಇನ್ನೊಂದು ಸಮುದಾಯವನ್ನು ಕೋಮುವಾದಿ ದ್ವೇಷ, ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಉದ್ರೇಕಿಸುವ ಕೆಲವಾರು ವೀಡಿಯೋಗಳು ಹರಿದಾಡುತ್ತಿವೆ. ಒಂದು ವೀಡಿಯೋ ಎಲ್ಲ ಹಿಂದುಗಳು ತಥಾಕಥಿತ ಲವ್ ಜಿಹಾದ್ ವಿರುದ್ಧ ಪಾಟ ಕಲಿಸಲು ಮುಸ್ಲಿಮರ ಮನೆಗಳಿಗೆ ಪ್ರವೇಶಿಸಬೇಕು ಎಂದು ಉದ್ರೇಕಿಸುತ್ತದೆ. ಇನ್ನೊಂದು ಜೈಶ್ರೀರಾಮ್ ಹೇಳದವರನ್ನು ಸ್ಮಶಾನಕ್ಕೆ ಕಳಿಸಲಾಗುವುದು ಎಂದು ಬೆದರಿಸುತ್ತದೆ.
ಈ ಕುರಿತು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರಿಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಪತ್ರ ಬರೆದು ಈ ಕ್ರಿಮಿನಲ್ ಕೃತ್ಯಗಳಿಂದ ದೇಶದ ಪ್ರತಿಷ್ಠೆಗೆ ತೀವ್ರ ಧಕ್ಕೆ ತರುತ್ತಿರುವವರು ಮತ್ತು ಎಲ್ಲ ಭಾರತೀಯರ ಭದ್ರತೆ ಮತ್ತು ಐಕ್ಯತೆಯನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇಂತಹ ಮೂರು ವೀಡಿಯೋಗಳ ಲಿಂಕ್ ಕೊಡುತ್ತ ಬೃಂದಾ ಕಾರಟ್, ಈ ವೀಡಿಯೋಗಳು ಮತ್ತು ಅವುಗಳ ಪ್ರಸಾರ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ, ಸೈಬರ್ ಕಾನೂನುಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿಯೂ ಕ್ರಿಮಿನಲ್ ಕೃತ್ಯಗಳಾಗಿವೆ. ತಮ್ಮ ವಾಹಿನಿಗಳಲ್ಲಿ ಇಂತಹ ರಾಷ್ಟ್ರ-ವಿರೋಧಿ ವಿಷಯಗಳನ್ನು ಪಸರಿಸಲು ಬಿಡುವಲ್ಲಿ ಯುಟ್ಯೂಬ್ ವಾಹಿನಿಯ ಮಾಲಕರು/ ಅದಕ್ಕೆ ಅಧಿಕಾರ ಕೊಡುವ ಹತೋಟಿ ಇರುವವರು ಕೂಡ ಅಪರಾಧಿಗಳಾಗುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.
ಯುಟ್ಯೂಬ್ ಜಗತ್ತನ್ನೆಲ್ಲ ತಲುಪುವುದರಿಂದ ಭಾರತದಿಂದ ಹೊಮ್ಮಿರುವ ಇಂತಹ ಕೋಮುವಾದಿ ದ್ವೇಷ ಮತ್ತು ಅತ್ಯಂತ ಉದ್ರೇಕಕಾರಿ ವೀಡಿಯೋಗಳು ದೇಶದ ಪ್ರತಿಷ್ಠೆಗೆ ಗಂಭೀರ ಧಕ್ಕೆ ತರುತ್ತವೆ ಮತ್ತು ಇದು ಅಪಾಯಕಾರಿ ದುಷ್ಪರಿಣಾಮಗಳನ್ನು ಬೀರಬಹುದು ಎಂಬ ಸಂಗತಿಯತ್ತ ಗಮನ ಸೆಳಯುತ್ತ ಬೃಂದಾ ಕಾರಟ್ ಅವರು “ಗೃಹಮಂತ್ರಿಯಾಗಿ ನಿಮಗೆ, ನಮ್ಮ ಎಲ್ಲ ನಾಗರಿಕರಿಗೆ ಭದ್ರತೆ ಮತ್ತು ಸುಸ್ಥಿತಿಯನ್ನು ಖಾತ್ರಿಗೊಳಿಸುವ ಹಾಗೂ ಎಲ್ಲ ಭಾರತೀಯರ ಭದ್ರತೆ ಮತ್ತು ಐಕ್ಯತೆಯನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಹೊಣೆಗಾರಿಕೆ ಇದೆ”ಎಂದು ಹೇಳಿದ್ದಾರೆ.
ಬೃಂದಾ ಕಾರಟ್ ಮತ್ತು ಸಿಪಿಐ(ಎಂ) ದಿಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಎಂ.ತಿವಾರಿ ಈ ಕುರಿತು ಎಫ್‌ಐಆರ್ ಮತ್ತು ಇತರ ಕ್ರಮಗಳನ್ನು ಕೈಗೊಳ್ಳುವಂತೆ ದಿಲ್ಲಿಯ ಡೆಪ್ಯುಟಿ ಪೋಲೀಸ್ ಕಮಿಷನರ್ ಮಂದೀಪ್ ಸಿಂಗ್ ಅವರಿಗೂ ಪತ್ರ ಬರೆದಿದ್ದು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರನ್ನು ಕೋರಲಾಗಿದೆ.
- ಒಂದು ಎಫ್‌ಐಆರ್ ಹಾಕಿ, ಈ ಮಾತುಗಳನ್ನು ಆಡುವ ಮೂಲಕ ವಿವಿಧ ಕಾಯ್ದೆಗಳ ಅಡಿಯಲ್ಲಿ ಒಂದು ಅಪರಾಧ ಎಸಗಿರುವ ವ್ಯಕ್ತಿಗಳ ವಿರುದ್ಧ ತಕ್ಷಣವೇ ಕ್ರಮವನ್ನು ಕೈಗೊಳ್ಳಬೇಕು.
- ವೀಡಿಯೋದಲ್ಲಿ ಹೆಸರಿಸಿರುವ ಕಂಪನಿ ಜನತಾ ಮ್ಯೂಸಿಕ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು.
- ಈ ವೀಡಿಯೋಗಳನ್ನು ತಮ್ಮ ವಾಹಿನಿಯಲ್ಲಿ ಪಸರಿಸಲು ಅನುಮತಿ ನೀಡಿ ಅಪರಾಧಕ್ಕೆ ಉತ್ತೇಜನೆ ನೀಡಿರುವುದಕ್ಕೆ ಎಫ್‌ಐಆರ್ ದಾಖಲಿಸಿ ಯುಟ್ಯೂಬ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
- ಈ ವೀಡಿಯೋಗಳನ್ನು ಇಳಿಸಬೇಕು ಮತ್ತು ಈ ಹೊಲಸು ವಿಷಯಗಳ ಪ್ರಸಾರವನ್ನು ನಿಲ್ಲಿಸುವಂತೆ ಒಂದು ನೋಟೀಸು ಕಳಿಸಬೇಕು.
ಇದನ್ನು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಗೃಹಮಂತ್ರಿಗಳ ಗಮನಕ್ಕೆ ತಂದು ಈ ಕ್ರಮಗಳನ್ನು ಕೈಗೊಳ್ಳುವಂತೆ ಅವರಿಗೂ ಸೂಚಿಸಿದ್ದಾರೆ.