ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಕೊಲೆ, “ಜಮ್ಮು ಮತ್ತು ಕಾಶ್ಮೀರ ರಾಜ್ಯದ ನಾಶವನ್ನು ನಿಲ್ಲಿಸಿ, ಸಂವಿಧಾನದ ಕಲಮು 370ನ್ನು ರಕ್ಷಿಸಿ”
ಮೋದಿ ಸರಕಾರ ಸಂವಿಧಾನದ ಕಲಮು 370 ರ ವಜಾ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಒಂದು ಆಘಾತವನ್ನು ಉಂಟುಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ.
ಪಾಕಿಸ್ತಾನದಿಂದ ಅತಿಕ್ರಮಣಕೋರರು ಬರುತ್ತಿದ್ದಾಗ ಕಾಶ್ಮೀರದ ಜನತೆ ಅವರನ್ನು ಎದುರಿಸಿ ಭಾರತವನ್ನು ಸೇರಿಕೊಂಡರು. ಭಾರತದ ಪ್ರಭುತ್ವ ಅವರಿಗೆ ವಿಶೇಷ ಸ್ಥಾನಮಾನವನ್ನು ಮತ್ತು ಸ್ವಾಯತ್ತತೆಯನ್ನು ಕೊಡಮಾಡುವ ಒಂದು ಗಂಭೀರ ವಾಗ್ದಾನ ಮಾಡಿತು. ಇದು ಕಲಮು 370ರಲ್ಲಿ ಮೈದಾಳಿದೆ. ಈ ವಾಗ್ದಾನವನ್ನು ಮುರಿಯುವ ಮೂಲಕ ಮೋದಿ ಸರಕಾರ ಜಮ್ಮು ಮತ್ತು ಕಾಶ್ಮೀರದ ಜನತೆಗೆ ವಿಶ್ವಾಸಘಾತ ಮಾಡಿದೆ.
ಭಾರತದ ಐಕ್ಯತೆ ಅದರ ವೈವಿಧ್ಯತೆಯಲ್ಲಿ ಹುದುಗಿದೆ ಎಂಬುದು ಸಾರ್ವತ್ರಿಕವಾಗಿ ಒಪ್ಪುತ್ತಿರುವ ಸಂಗತಿ. ಬಿಜೆಪಿ-ಆರೆಸ್ಸೆಸ್ ಮುಖಂಡರು ಯಾವುದೇ ವೈವಿಧ್ಯತೆಯನ್ನು ಮತ್ತು ಒಕ್ಕೂಟ ತತ್ವವನ್ನು ಸಹಿಸುವುದಿಲ್ಲ. ಅವರು ಜಮ್ಮು ಮತ್ತು ಕಾಶ್ಮೀರ ವನ್ನು ಒಂದು ಆಕ್ರಮಿತ ಪ್ರದೇಶದಂತೆ ಕಾಣುತ್ತಿದ್ದಾರೆ. ಸಂವಿಧಾನವನ್ನು ತುಳಿದು ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಿದ್ದಾರೆ. ಇದು ರಾಷ್ಟ್ರೀಯ ಐಕ್ಯತೆಗೆ ಮತ್ತು ಭಾರತವು ರಾಜ್ಯಗಳ ಒಂದು ಒಕ್ಕೂಟ ಎಂಬ ಪರಿಕಲ್ಪನೆಯ ಮೇಲೆ ಒಂದು ಅತ್ಯಂತ ದೊಡ್ಡ ದಾಳಿ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ.
ಈ ಸರ್ವಾಧಿಕಾರಶಾಹಿ ಕ್ರಮಗಳಿಗೆ ಪೂರ್ವಭಾವಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವಿರ-ಸಾವಿರ ಸಂಖ್ಯೆಯಲ್ಲಿ ಪಡೆಗಳನ್ನು ತಂದು ನಿಲ್ಲಿಸಲಾಗಿದೆ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ಸ್ಥಾನಬದ್ಧತೆಯಲ್ಲಿ ಇಡಲಾಗಿದೆ. ಮತ್ತು ಸಾರ್ವಜನಿಕ ಓಡಾಟವನ್ನು ನಿಷೇಧಿಸಲಾಗಿದೆ. ಮೋದಿ ಸರಕಾರ ಜನಗಳ ಒಪ್ಪಿಗೆಯಿಲ್ಲದೆ ತನ್ನು ಫರ್ಮಾನುಗಳನ್ನು ಹೇರುತ್ತಿದೆ ಎಂಬುದನ್ನು ಇದೇ ತೋರಿಸುತ್ತದೆ.
ಭಾರತದ ತರ ಜನಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಜನತೆಯ ಬಂಧಗಳನ್ನು, ಮೂರು ವರ್ಷಗಳ ಹಿಂದೆ ಸರಕಾರ ಆಶ್ವಾಸನೆ ನೀಡಿದಂತೆ ರಾಜಕೀಯ ಸಂವಾದದ ಪ್ರಕ್ರಿಯೆಯ ಮೂಲಕ ಬಲಪಡಿಸಬೇಕಾಗಿತ್ತು. ಅದರ ಬದಲು, ಈಗ ಇಟ್ಟಿರುವ ಏಕಪಕ್ಷೀಯ ಹೆಜ್ಜೆ ಜನಗಳಲ್ಲಿನ ಪರಕೀಯ ಭಾವವನ್ನು ಇನ್ನಷ್ಟು ಆಳಗೊಳಿಸುತ್ತದೆ. ಇದು ಭಾರತದ ಸಮಗ್ರತೆಗೆ ಹಾನಿಕಾರಕ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಮೋದಿ ಸರಕಾರದ ಈ ಕ್ರಮಗಳನ್ನು ಉಗ್ರವಾಗಿ ಟೀಕಿಸಿದೆ.
ಇವು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಕ್ರಮಗಳು. ಇವು ಕೇವಲ ಜಮ್ಮು ಮತ್ತು ಕಾಶ್ಮೀರಕ್ಕಷ್ಟೇ ಸೀಮಿತವಾದ ವಿಷಯವಲ್ಲ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂವಿಧಾನದ ಮೇಲೆಯೇ ಮಾಡಿರುವ ಒಂದು ದಾಳಿಯಾಗಿದೆ. ಭಾರತದ ಜನರಿಗೆ, ಅವರ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಹಕ್ಕುಗಳ ಮೇಲೆ ಇಂತಹ ಸರ್ವಾಧಿಕಾರಶಾಹಿ ದಾಳಿಗಳು ಬರಲಿವೆ ಎಂಬ ಮುನ್ನೆಚ್ಚರಿಕೆ ಬಂದಿದೆ.
ಇದು ಜಮ್ಮು ಮತ್ತು ಕಾಶ್ಮೀರದ ಜನಗಳ ಬೆಂಬಲಕ್ಕೆ ನಿಲ್ಲಬೇಕಾದ ಮತ್ತು ಸಂವಿಧಾನ ಹಾಗೂ ಒಕ್ಕೂಟ ತತ್ವದ ಮೇಲಿನ ದಾಳಿಯನ್ನು ಪ್ರ ತಿರೋಧಿಸಲು ಜನಗಳನ್ನು ಅಣಿನೆರೆಸಬೇಕಾದ ಸಮಯ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗಸ್ಟ್ 7ರಂದು ಎಡಪಕ್ಷಗಳು ಕರೆ ನೀಡಿರುವ ಅಖಿಲ ಭಾರತ ಪ್ರತಿಭಟನೆಗಳಲ್ಲಿ ಸೇರಿಕೊಳ್ಳಬೇಕು, “ಜಮ್ಮು ಮತ್ತು ಕಾಶ್ಮೀರ ರಾಜ್ಯದ ನಾಶವನ್ನು ನಿಲ್ಲಿಸಿ, ಸಂವಿಧಾನದ ಕಲಮು 370ನ್ನು ರಕ್ಷಿಸಿ” ಎಂದು ಎಲ್ಲ ಪ್ರಜಾಪ್ರಭುತ್ವವಾದಿ ಮನೋಭಾವದ ಜನಗಳಿಗೆ ಕರೆ ನೀಡಿದೆ.