ದೇಶದ ಆರ್ಥಿಕ ಮತ್ತು ಜನಗಳ ಜೀವನಾಧಾರಗಳ ಮೇಲೆ ಈ ನಿರ್ದಯ ದಾಳಿಯ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಲು ಕರೆ
ಭಾರತದ ರಿಝರ್ವ್ ಬ್ಯಾಂಕ್ ಸರಕಾರಕ್ಕೆ 1.76ಲಕ್ಷ ಕೋಟಿ ರೂ.ಗಳಷ್ಟು ತನ್ನ ಮಿಗುತಾಯ ನಿಧಿಯನ್ನು ಭಾರತ ಸರಕಾರಕ್ಕೆ ವಗಾಯಿಸಲು ನಿರ್ಧರಿಸಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸುತ್ತ, ಸರಕಾರದ ಹಣಕಾಸು ಕೊರತೆಯನ್ನು ತುಂಬಿಸಿಕೊಳ್ಳಲು ರಿಝರ್ವ್ ಬ್ಯಾಂಕಿನ ಮೀಸಲು ನಿಧಿಗಳನ್ನು ಬಳಸಿಕೊಂಡಿರುವ ವಿಧಾನ ಖಂಡಿತಾ ಒಪ್ಪತಕ್ಕಂತದ್ದಲ್ಲ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಇದೇ ರೀತಿಯಲ್ಲಿ ಈ ಹಿಂದೆ ಒ.ಎನ್.ಜಿ.ಸಿ. ಮುಂತಾದ ಸಾರ್ವಜನಿಕ ವಲಯದ ಲಾಭದಾಯಕವಾಗಿ ನಡೆಯುತ್ತಿದ್ದ ನವರತ್ನಗಳನ್ನು ಮೋದಿ ಸರಕಾರದ ಪ್ರಚಾರ ಮುಂತಾದ ದುಂದುವೆಚ್ಚಗಳಿಗಾಗಿ ಬಳಸಿಕೊಳ್ಳಲಾಗಿತ್ತು ಎಂಬುದನ್ನು ಅದು ನೆನಪಿಸಿದೆ.
ರಿಝರ್ವ್ ಬ್ಯಾಂಕ್ ಆಫ್ ಇಂಡಿಯ ಉಸ್ತುವಾರಿ ನಡೆಸುವ ಅಧಿಕಾರವುಳ್ಳ ಸಂಸ್ಥೆ, ಕಟ್ಟಕಡೆಯದಾಗಿ ಸಾಲ ನೀಡುವಂತದ್ದು. ಅದರ ಹಣಕಾಸು ಸ್ಥಿರತೆ ನಮ್ಮ ಆರ್ಥಿಕ ವ್ಯವಸ್ಥೆಗೆ ಹಣಸಂಬಂಧಿ, ಆಥವ ವಿತ್ತೀಯ ಅಸ್ಥಿರತೆ ಅಥವ ಜಾಗತಿಕವಾಗಿ ಉಂಟಾಗುವ ಬಿಕ್ಕಟ್ಟಿನಿಂದ ರಕ್ಷಣೆ ನೀಡಲು ಅತ್ಯವಶ್ಯವಾಗಿದೆ.
ಈಗ ಈ ಸರಕಾರ ರಿಝರ್ವ್ ಬ್ಯಾಂಕ್ 1.76ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ವರ್ಗಾಯಿಸುವಂತೆ ಬಲವಂತ ಮಾಡಿದೆ. ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರ ಪ್ರತೀ ವರ್ಷ ರಿಝರ್ವ್ ಬ್ಯಾಂಕಿನ ನಿವ್ವಳ ಲಾಧದ 99.99ಶೇವನ್ನು ಹೀರಿಕೊಂಡಿದೆ. ಅದೂ ಸಾಲದೆಂಬಂತೆ ಈಗ ಈ ಬೃಹತ್ ವರ್ಗಾವಣೆ ನಡೆದಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಈ ಮಿಗುತಾಯ ವರ್ಗಾವಣೆಯನ್ನು “ಲಾಭಾಂಶ” (ಡಿವಿಡೆಂಡ್) ಎಂದು ಹೆಸರಿಸಲಾಗಿದ್ದು, ಹಿಂದಿನ ದಾಖಲೆ ‘ಡಿವಿಡೆಂಡ್’ ಮೊತ್ತವೆಂದರೆ 65896 ಕೋಟಿ ರೂ.ಗಳು. ಅಂದರೆ ಈಗ ಈ ದಾಖಲೆ ಮೊತ್ತದ ದುಪ್ಪಟ್ಟು ಮೊತ್ತವನ್ನು ಸರಕಾರ ಪಡೆದಿದೆ. ಆರ್ಥಿಕ ನಿಧಾನಗತಿ ನವರತ್ನಗಳ ಸಮಸ್ಯೆಗಳನ್ನು ಕೂಡ ಇನ್ನಷ್ಟು ಕ್ಲಿಷ್ಟಗೊಳಿಸುತ್ತಿದೆ ಎಂಬುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಸಂದರ್ಭದಲ್ಲಿ ನೆನಪಿಸಿದೆ.
ನಿರುದ್ಯೋಗ ದರ 9ಶೇ.ವನ್ನು ದಾಟುತ್ತಿದ್ದು, ಇದು ಈ ದಶಕದಲ್ಲೇ ಅತಿ ಹೆಚ್ಚಿನ ನಿರುದ್ಯೋಗ ದರ ಎಂದು ದಾಖಲಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರದ ವೆಚ್ಚಗಳನ್ನು ಭರಿಸಲು, ಅದರ ಏರುತ್ತಿರುವ ಹಣಕಾಸು ಕೊರತೆಯನ್ನು ತುಂಬಲು ಈ ರೀತಿ ಮಿಗುತಾಯದ ವರ್ಗಾವಣೆಯನ್ನು ಮಾಡುತ್ತಿರುವುದು ದೇಶದ ಆರ್ಥಿಕವನ್ನು ಮತ್ತು ನಮ್ಮ ದುಡಿಯುವ ಜನಗಳ ಬದುಕನ್ನು ಬಹುವಾಗಿ ತಟ್ಟುತ್ತದೆ.
ಪ್ರಧಾನ ಮಂತ್ರಿಗಳು “ಸಂಪತ್ತಿನ ಸೃಷ್ಟಿಕರ್ತ”ರನ್ನು ಗೌರವಿಸಬೇಕು ಎಂದಿದ್ದಾರೆ. ಸಂಪತ್ತು ಸೃಷ್ಟಿಯಾಗುವುದು ಮೌಲ್ಯವನ್ನು ಉತ್ಪಾದಿಸಿದಾಗ ಮಾತ್ರ. ಆದರೆ ದುಡಿಯುವ ವಿಶಾಲ ಜನಸ್ತೋಮಕ್ಕೆ ಈಗ ಮೌಲ್ಯವನ್ನು ಉತ್ಪತ್ತಿ ಮಾಡಲು ಕೆಲಸವೇ ಇಲ್ಲವಾಗಿದೆ. ಎಲ್ಲ ವಿಭಾಗಗಳನ್ನು, ರೈತರು, ಕಾರ್ಮಿಕರು, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರು, ಯುವಜನ ಮತ್ತು ಮಹಿಳಾ ಕಾರ್ಮಿಕರ ಮೇಲೆ ಇದು ಭಾರೀ ದುಷ್ಪರಿಣಾಮ ಉಂಟು ಮಾಡುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ನಮ್ಮ ಆರ್ಥಿಕ ಮತ್ತು ಜನಗಳ ಜೀವನಾಧಾರಗಳ ಮೇಲೆ ಈ ನಿರ್ದಯ ದಾಳಿಯ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಬೇಕು ಎಂದು ದೇಶದಲ್ಲಿನ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ.