ತರಿಗಾಮಿಯವರನ್ನು ಭೇಟಿ ಮಾಡಲು ಯೆಚುರಿಯವರಿಗೆ ಅನುಮತಿ ನೀಡುವಂತೆ ಸುಪ್ರಿಂ ಕೋರ್ಟ್ ಆದೇಶ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಪಕ್ಷದ ಕೇಂದ್ರ ಸಮಿತಿಯ ಸದಸ್ಯರು ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿರುವ ಮಹಮ್ಮದ್‍ ಯುಸುಫ್‍ ತರಿಗಾಮಿಯವರು ಆಗಸ್ಟ್ 5ರಿಂದ ಎಲ್ಲಿದ್ದಾರೆಂದು ತಿಳಿದಿಲ್ಲ, ಅವರನ್ನು ಹಾಜರು ಪಡಿಸಬೇಕು ಎಂದು ಕೋರುವ ಹೆಬಿಯಸ್‍ ಕಾರ್ಪಸ್‍ ಅರ್ಜಿಯನ್ನು ಆಗಸ್ಟ್ 24ರಂದು ಸುಪ್ರಿಂ ಕೋರ್ಟಿನಲ್ಲಿ ಸಲ್ಲಿಸಿದ್ದರು.

ಅದನ್ನು ಆಗಸ್ಟ್ 28ರಂದು ವಿಚಾರಣೆಗೆತ್ತಿಕೊಂಡ ಸುಪ್ರಿಂ ಕೋರ್ಟ್‍ ಕಾಶ್ಮೀರದಲ್ಲಿ ತರಿಗಾಮಿಯವರನ್ನು ಭೇಟಿ ಮಾಡಲು ಯೆಚುರಿಯವರಿಗೆ ಅನುಮತಿ ನೀಡಬೇಕು ಎಂದು ಆದೇಶ ನೀಡಿದೆ. ಅವರು ಮರಳಿ ಬಂದು ನ್ಯಾಯಾಲಯಕ್ಕೆ ತರಿಗಾಮಿಯವರ ಆರೋಗ್ಯದ ಕುರಿತು ವಿವರಗಳನ್ನು ಕುರಿತಂತೆ ಅಫಿಡವಿಟ್‍ ಸಲ್ಲಿಸಬೇಕು ಎಂದು ಅದು ಹೇಳಿದೆ.

ಅದರ ಪ್ರಕಾರ ಯೆಚುರಿಯವರು ಆಗಸ್ಟ್ 29ರಂದು ಶ್ರೀನಗರಕ್ಕೆ ಮತ್ತೊಮ್ಮೆ ತೆರಳಲಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ತಿಳಿಸಿದೆ. ಈ ಹಿಂದೆ ಎರಡು ಬಾರಿ ಯೆಚುರಿಯವರು ತರಿಗಾಮಿಯವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ಎರಡೂ ಬಾರಿ ಅಲ್ಲಿನ ಅಧಿಕಾರಿಗಳು ಅವರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ವಾಪಾಸು ಕಳಿಸಿದ್ದರು.

ಸುಪ್ರಿಂ ಕೋರ್ಟ್‍ ಆದೇಶ ಬಂದ ನಂತರ ಯೆಚುರಿಯವರು ಮತ್ತೊಮ್ಮೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಿಗೆ ಪತ್ರ ಬರೆದು ಸವೋಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಆಗಸ್ಟ್ 29ರಂದು ತಾನು ಶ್ರೀನಗರಕ್ಕೆ ಬಂದು ತರಿಗಾಮಿಯವರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ತನ್ನ ಆರೋಗ್ಯ ಸರಿಯಿಲ್ಲವಾದ್ದರಿಂದ ಒಬ್ಬ ಆಪ್ತ ಸಹಾಯಕರು ಜತೆಗೆ ಬರುತ್ತಿದ್ದಾರೆ, ತಾನು ಸುಪ್ರಿಂ ಕೋರ್ಟ್‍ ನಿರ್ದೇಶನಗಳಿಗೆ ಅನುಸಾರವಾಗಿ ಬರುತ್ತಿರುವುದರಿಂದ ಈ ಆಪ್ತ ಸಹಾಯಕರು ಜತೆಗೆ ಬರಲು ಆಡಳಿತ ಅನುಮತಿ ನೀಡುತ್ತದೆ ಎಂಬ ಆಶಯವನ್ನೂ ಯೆಚುರಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *