“ಕೋಮುವಾದಿ ಅಜೆಂಡಾಕ್ಕಾಗಿ ದೇಶದ ಇತರೆಡೆಗಳಲ್ಲೂ ಎನ್. ಆರ್. ಸಿ,ಗೆ ನಮ್ಮ ವಿರೋಧವಿದೆ”
ಅಸ್ಸಾಂನ “ರಾಷ್ಟ್ರೀಯ ನಾಗರಿಕರ ದಾಖಲೆ” (ಎನ್. ಆರ್. ಸಿ.)ಯ ಅಂತಿಮ ಪಟ್ಟಿಯ ಪ್ರಕಟಣೆಯ ಫಲಿತಾಂಶವಾಗಿ 10.06 ಲಕ್ಷ ಮಂದಿ ಪಟ್ಟಿಯಲ್ಲಿ ಹೆಸರು ಕಾಣದೆ ಅತಂತ್ರರಾಗಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆ ಬಹಳಷ್ಟು ಭಾರತೀಯ ನಾಗರಿಕರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆಯೇ ಎಂಬ ಭೀತಿಗಳನ್ನು ಬಡಿದೆಬ್ಬಿಸಿರುವುದು ಉಚಿತವೇ ಆಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.
ಈಗ ಈ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವ ಎಲ್ಲ ಭಾರತೀಯ ನಾಗರಿಕರನ್ನು ಇದರಲ್ಲಿ ಸೇರಿಸುವಂತೆ ಖಾತ್ರಪಡಿಸುವುದು ಮಹತ್ವದ ಕೆಲಸವಾಗಿದೆ ಎಂದಿರುವ ಪೊಲಿಟ್ ಬ್ಯುರೊ ಅದಕ್ಕಾಗಿ ಸೂಚಿಸಿರುವ ಕ್ರಮಗಳು ಹೀಗಿವೆ:
ಮೊದಲನೆಯದಾಗಿ, ಈ ಪಟ್ಟಿಯಿಂದ ಹೊರಗಿಟ್ಟಿರುವವರ ಸ್ಥಾನಮಾನ ಮತ್ತು ಹಕ್ಕುಗಳು ಏನು ಎಂದು ಸರಕಾರ ವಿವರಿಸಬೇಕು. ಅವರ ಮನವಿಗಳ ವಿಚಾರಣೆ ನಡೆಸುವಾಗ ಮತ್ತು ಈ ಪ್ರಕ್ರಿಯೆ ಮುಗಿಯುವ ವರೆಗೆ ಅವರಿಗೆ ಈಗಿರುವ ಹಕ್ಕುಗಳು ಮತ್ತು ಸೌಲಭ್ಯಗಳು ಮುಂದುವರೆಯಬೇಕು. ಈ ವಿಷಯವನ್ನು ಚರ್ಚಿಸಲು ಅಸ್ಸಾಂ ನಲ್ಲಿ ಒಂದು ಸರ್ವಪಕ್ಷ ಸಭೆಯನ್ನು ಕರೆಯಬೇಕು.
ಎರಡನೆಯದಾಗಿ, ಈಗ ಹೇಳಿರುವ ವಿಧಾನವೆಂದರೆ, ಪಟ್ಟಿಯಲ್ಲಿ ಸೇರ್ಪಡೆಯಾಗದವರು 120 ದಿನಗಳೊಳಗೆ ಇದಕ್ಕಾಗಿ ನೇಮಿತ ವಿದೇಶೀಯರ ನ್ಯಾಯಮಂಡಳಿಗೆ ವಿಚಾರಣೆಗೆ ಸಲ್ಲಿಸಬಹುದು. ವಿದೇಶೀಯರ ನ್ಯಾಯಮಂಡಳಿ ಒಂದು ನ್ಯಾಯಾಂಗ ಸಂಸ್ಥೆಯಲ್ಲ. ಅವುಗಳ ಕಾರ್ಯನಿರ್ವಹಣೆ ಒಂದು ಕಾರ್ಯಾಂಗದಂತೆಯೇ ಇದೆ. ಅಲ್ಲದೆ, ನಿಯಮಗಳಂತೆ, ಅದು ಅರ್ಜಿಯನ್ನು ವಿಚಾರಣೆಗೆ ತಗೊಳ್ಳಲು ನಿರ್ಧರಿಸುವ ಮೊದಲು ಅದರ ವಿಚಾರಾರ್ಹತೆಯನ್ನು ಪರಿಶೀಲಿಸುತ್ತದೆ. ಮನವಿಯ ಹಕ್ಕನ್ನು ಒಂದು ನ್ಯಾಯಾಂಗದ ವ್ಯವಸ್ಥೆಯ ಮೂಲಕವೇ ಜರುಗಿಸಬೇಕು ಎಂದು ಸಿಪಿಐ(ಎಂ) ಬಯಸುತ್ತದೆ. ಈ ಉದ್ದೇಶಕ್ಕೆ ವಿದೇಶೀಯರ ನ್ಯಾಯಮಂಡಳಿಗಳು ಸಾಕಾಗುವುದಿಲ್ಲ.
ಮೂರನೆಯದಾಗಿ, ನ್ಯಾಯಮಂಡಳಿಗಳು ವಿದೇಶೀಯರು ಎಂದು ಘೋಷಿಸಿರುವವರನ್ನು ಸ್ಥಾನಬದ್ಧತೆಯ ಶಿಬಿರಗಳಿಗೆ ಕಳಿಸುವುದನ್ನು ನಿಲ್ಲಿಸಬೇಕು, ಏಕೆಂದರೆ, ಇದು ಮೂಲಭೂತ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.
ಎನ್. ಆರ್. ಸಿ. ಪಟ್ಟಿಯಲ್ಲಿ ಸೇರಿಸದೇ ಇರುವವರಿಗೆ ನ್ಯಾಯ ದೊರಕಿಸಲು ಸಿಪಿಐ(ಎಂ) ವಿವಿಧ ವೇದಿಕೆಗಳ ಮೂಲಕ ಎಲ್ಲ ಅಗತ್ಯ ನೆರವುಗಳನ್ನು ಒದಗಿಸುತ್ತದೆ, ಕಾನೂನಿನ ನೆರವು ಪಡೆಯಲು ನೆರವಾಗುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಅಸ್ಸಾಂ ನಲ್ಲಿ ಎನ್. ಆರ್. ಸಿ. ಯನ್ನು ಸಮಕಾಲಿಕಗೊಳಿಸಬೇಕಾಗಿ ಬರಲು ನಿರ್ದಿಷ್ಟ ಚಾರಿತ್ರಿಕ ಮತ್ತು ರಾಜಕೀಯ ಸಂದರ್ಭಗಳಿದ್ದವು. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಆಶಿಸುವಂತೆ ಇದನ್ನು ದೇಶದ ಇತರೆಡೆಗಳಲ್ಲಿಯೂ ಆರಂಭಿಸುವುದಕ್ಕೆ ಸಿಪಿಐ(ಎಂ)ನ ವಿರೋಧವಿದೆ, ಏಕಂದರೆ ಬಿಜೆಪಿ ಈ ಪ್ರಕ್ರಿಯೆಯನ್ನು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ತನ್ನ ವಿಭಜನಕಾರೀ ಕೋಮುವಾದಿ ಅಜೆಂಡಾಕ್ಕೆ ಬಳಸಿಕೊಳ್ಳ ಬಯಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಎಚ್ಚರಿಸಿದೆ.