`ಹಿಂದಿ ರಾಷ್ಟ್ರ ಭಾಷೆಯಾಗಬೇಕು’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಪ್ರತಿಪಾದನೆಯನ್ನು ಸಿಪಿಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ವಿರೋಧಿಸಿದೆ.
ದೇಶದ ಮೇಲೆ ಒಂದು ಭಾಷೆಯನ್ನು ಹೇರುವುದರೊಂದಿಗೆ ದೇಶದ ಐಕ್ಯತೆ ಬಲಗೊಳ್ಳುವುದಿಲ್ಲ. ಒಂದು ಭಾಷೆಯನ್ನು ದೇಶದ ಜನತೆಯ ಮೇಲೆ ಬಲವಂತವಾಗಿ ಹೇರುವುದರಿಂದ ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯಾಗಲಿದೆ.
ಭಾರತದಲ್ಲಿ ಅನೇಕ ಭಾಷೆಗಳಲ್ಲಿ ಮಾತನಾಡುವ ಜನರಿದ್ದಾರೆ. ಭಾಷೆ ಒಂದು ಸಂಸ್ಕೃತಿಯ ಪ್ರತೀಕವಾಗಿದೆ. ಒಂದೊಂದು ಭಾಷೆ ಒಂದೊಂದು ಪ್ರತ್ಯೇಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆ ಅರ್ಥದಲ್ಲಿ ನಮ್ಮ ದೇಶ ಭಾರತ ಹಲವು ಭಾಷೆಗಳ, ಹಲವು ಸಂಸ್ಕೃತಿಗಳ ದೇಶ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ. ನಾವು ಭಾರತ ದೇಶದ ಜನತೆ ಇಲ್ಲಿಯ ಎಲ್ಲ ಭಾಷೆಗಳನ್ನು ಸಮಾನವಾಗಿ ಗೌರವಿಸಬೇಕು.
ಎಲ್ಲ ಭಾಷೆಗಳ ಅಭಿವೃದ್ಧಿ ಭಾರತ ಸರ್ಕಾರದ ಧೋರಣೆಯಾಗಬೇಕು. ಒಂದು ದೇಶ, ಒಂದು ಭಾಷೆ ಘೋಷಣೆಗೆ ಅವಕಾಶ ಕೊಟ್ಟದ್ದೇ ಆದರೆ ಅದು ಮುಂದೆ ಒಂದು ದೇಶ, ಒಂದು ಭಾಷೆ ಎಂಬಲ್ಲಿಗೆ ನಿಲ್ಲದೆ ಒಂದು ಧರ್ಮ, ಒಂದು ಆಹಾರ ಪದ್ಧತಿ ಇತ್ಯಾದಿ ಅಪಾಯಕಾರಿ ಆಯಾಮ ಪಡೆಯುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ಕೇಂದ್ರ ಗೃಹ ಮಂತ್ರಿಗಳಿಗೆ ಗಾಂಧೀಜಿಯವರ ನೆನಪಾಗಿರುವುದು ಸೋಜಿಗವಾಗಿದೆ. ಗಾಂಧೀಜಿಯವರನ್ನು ಕೊಲೆಮಾಡಿ ಅವರ ಎಲ್ಲ ಕನಸುಗಳನ್ನೂ ಕೊಂದವರನ್ನು ಆದರಿಸುವ ಮೋದಿ, ಶಾ ರಂತವರಿಂದ ದೇಶ ಕಲಿಯಬೇಕಾದದ್ದು ಏನೂ ಇಲ್ಲ. ಬೆದರಿಕೆಗಳ ಮೂಲಕ ಇವರು ಜಾರಿ ಮಾಡಲು ಹೊರಟಿರುವ ಹಿಟ್ಲರ್‌ಶಾಹಿ ನೀತಿಯನ್ನು ವಿರೋಧಿಸಿ ಎಲ್ಲರೂ ಒಂದಾಗಿ ಹೋರಾಡುವ ಅಗತ್ಯವಿದೆ.
ಹಿಂದಿ ಹೇರಿಕೆ ವಿರುದ್ಧದ ಹೋರಾಟ ಹಿಂದಿ ಭಾಷಿಕರ ವಿರುದ್ಧದ ಹೋರಾಟವಾಗಿ ಪರಿಣಮಿಸಬಾರದು. ಕರ್ನಾಟಕದಲ್ಲಿ ಹಿಂದಿ ಮಾತೃ ಭಾಷೆ ಹೊಂದಿದ ಜನರಿದ್ದಾರೆ. ಅವರಿಗೆ ಆತಂಕ ಉಂಟುಮಾಡುವ ಪ್ರಯತ್ನಕ್ಕೆ ಯಾರೂ ಮುಂದಾಗಬಾರದೆಂದು ಸಿಪಿಐ(ಎಂ) ಆಗ್ರಹಿಸುತ್ತದೆ.
ಯು. ಬಸವರಾಜ
ಕಾರ್ಯದರ್ಶಿ