ಕಾಶ್ಮೀರದಲ್ಲಿ ಬಿಗಿ ನಿರ್ಬಂಧ ಹೇರಿ 40 ದಿನಗಳಾಗಿವೆ. ,ಇಂಟರ್ನೆಟ್ ಇಲ್ಲ, ಟೆಲಿಫೋನ್ ಇಲ್ಲ, ಅಂಗಡಿಗಳು ತೆರೆದಿವೆಯೇ-ಇಲ್ಲ; ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿದೆ-ಮಕ್ಕಳು ಶಾಲೆ-ಕಾಲೇಜುಗಳಿಗೆ ಹೋಗಲು ಆಗುತ್ತಿದೆಯೇ -ಇಲ್ಲ. ಆದರೂ ಸಂಜೆ ಹೇಳುತ್ತಾರೆ-ಸ್ಥಿತಿ ಸಾಮಾನ್ಯವಾಗಿದೆ. ಇದೇನಿದು ಹೊಸ ಮಂತ್ರ? ನಂತರ ಕೇಳುತ್ತಾರೆ- ಯಾರೂ ಸತ್ತಿಲ್ಲವಲ್ಲ. ಅಯ್ಯೋ ಸ್ವಾಮಿ, ಕಾಶ್ಮೀರಿಗಳು ನಿಧಾನವಾಗಿ ಸಾಯುತ್ತಿದ್ದಾರೆ, ನಮ್ಮ ಉಸಿರು ಕಟ್ಟಿದೆ. ನಾವೂ ಬದುಕ ಬಯಸುತ್ತೇವೆ-ಒಬ್ಬ ಕಾಶ್ಮೀರಿ, ಒಬ್ಬ ಹಿಂದುಸ್ಥಾನಿಯಾಗಿ ಇಲ್ಲಿ ಕೇಳುತ್ತಿದ್ದೇನೆ- ವಿನಂತಿಸಿಕೊಳ್ಳುತ್ತಿದ್ದೇನೆ-ಬಹುಶಃ ಆಡಳಿತ ನಡೆಸುವವರ ವರೆಗೆ ನನ್ನ ದನಿ ತಲುಪುತ್ತದೋ ಇಲ್ಲವೋ-ಆದರೆ ದೇಶದ ಜನಸಾಮಾನ್ಯರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ-ನಮಗೂ ಬದುಕುವ ಅವಕಾಶ ಸಿಗಬೇಕು”
ಇದು ಸಪ್ಟಂಬರ್ 17 ರಂದು ನವದೆಹಲಿಯಲ್ಲಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹಿರಿಯ ಸಿಪಿಐ(ಎಂ) ಮುಖಂಡ ಮತ್ತು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ, ಕಾಶ್ಮೀರ ಕಣಿವೆಯ ಒಂದು ಅತ್ಯಂತ ಭಯೋತ್ಪಾದನಾಗ್ರಸ್ತ ಪ್ರದೇಶವಾದ ಕುಲ್ಗಾಮ್‍ನಿಂದ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆರಿಸಲ್ಪಟ್ಟಿರುವ ಮಹಮ್ಮದ್ ಯುಸುಫ್ ತಾರಿಗಾಮಿ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಕಳಕಳಿಯ ಮನವಿ. “ಒಬ್ಬ ನಾಗರಿಕನಾಗಿ ವಿನಂತಿಸಿಕೊಳ್ಳುತ್ತಿದ್ದೇನೆ, ಸರಕಾರದ ನಿರೂಪಣೆಯನ್ನು ಕೇಳುತ್ತಿದ್ದೀರಿ, ಕಾಶ್ಮೀರಿ ಜನತೆಯ ನಿರೂಪಣೆಯನ್ನೂ ಕೇಳಿ. ನಾವು ಕೊಲೆಯಾಗ ಬಯಸುವುದಿಲ್ಲ, ಸಾಯಬಯಸುವುದಿಲ್ಲ, ನಾಶವಾಗಬಯಸುವುದಿಲ್ಲ”
“ಈ ಸಂದೇಶವನ್ನು ದಯವಿಟ್ಟು ದೇಶದ ಜನಸಾಮಾನ್ಯರಿಗೆ ತಲುಪಿಸಿ-ನಿಮಗೆ ಸಾಧ್ಯವಿದ್ದರೆ” ಎಂದು ಅವರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಪತ್ರಕರ್ತರನ್ನು ಕೇಳಿಕೊಂಡರು. ಕೇವಲ ಒಂದು ವಾರ ದಿಲ್ಲಿಯಲ್ಲೋ, ಬೇರಾವ ನಗರದಲ್ಲೋ ಈ ರೀತಿ ಎಲ್ಲವನ್ನೂ ಮುಚ್ಚಿಬಿಟ್ಟಿದ್ದರೆ ಏನಾಗಬಹುದು ಯೋಚಿಸಿ ಎಂದೂ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜತೆಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಆರಂಭದಲ್ಲಿ ಹೇಳಿದಂತೆ, ಇದು ಬಿಗಿ ನಿರ್ಬಂಧಕ್ಕೆ ಒಳಗಾಗಿರುವ ಕಾಶ್ಮೀರ ಕಣಿವೆಯಿಂದ ಹೊಮ್ಮಿ ಬಂದ ಮೊದಲ ಸಾಚಾ ದನಿ. ಗೃಹಬಂಧನದಲ್ಲಿದ್ದ ಮತ್ತು ಅನಾರೋಗ್ಯದಿಂದಿದ್ದ ಅವರನ್ನು ಭೇಟಿಯಾಗಲು ಯೆಚುರಿ ಎರಡು ಬಾರಿ ಶ್ರೀನಗರಕ್ಕೆ ಹೋದರೂ ಅಲ್ಲಿನ ಆಢಳಿತ ಅವರನ್ನು ವಿಮಾನ ನಿಲ್ದಾಣದಿಂದಲೇ ಹಿಂದಕ್ಕೆ ಕಳಿಸಿತು. ನಂತರ ಯೆಚುರಿಯವರು ಸುಪ್ರಿಂ ಕೋರ್ಟಿನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ ಮೇಲೆಯೇ ಸುಪ್ರಿಂ ಕೋರ್ಟ್ ಅನುಮತಿಯೊಂದಿಗೆ ಅವರನ್ನು ಭೇಟಿಯಾಗಲು ಸಾಧ್ಯವಾಯಿತು.
ಅಲ್ಲಿಂದ ಹಿಂದಿರುಗಿ ಯೆಚುರಿಯವರು ಸುಪ್ರಿಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿದ ಮೇಲೆ ನ್ಯಾಯಾಲಯ ಅವರನ್ನು ಚಿಕಿತ್ಸೆಗೆ ದಿಲ್ಲಿಗೆ ಕರೆ ತರಲು ಅನುಮತಿ ನೀಡಿತು, ಹಾಗೂ ಅವರ ಸ್ಥಾನಬದ್ಧತೆಯ ಬಗ್ಗೆ ವಿವರಣೆ ನೀಡುವಂತೆ ಭಾರತ ಸರಕಾರಕ್ಕೆ ನೋಟೀಸು ಜಾರಿ ಮಾಡಲಾಯಿತು. ಸರಕಾರ ದುವರೆಗೆ ಇದಕ್ಕೆ ಉತ್ತರಿಸಿಲ್ಲ. ಸುಪ್ರಿಂ ಕೋರ್ಟ್ ಅವರು ತಮಗೆ ಬೇಕೆನಿಸಿದಾಗ ಶ್ರೀನಗರಕ್ಕೆ ಮರಳಲು ಸ್ವತಂತ್ರರು, ಆದರೆ ಶ್ರೀನಗರದಲ್ಲಿ ಸಂಚರಿಸಲು ಅಲ್ಲಿನ ಆಢಳಿತದಿಂದ ಸೂಕ್ತ ಅನುಮತಿ ಪಡೆಯಬೇಕು ಎಂದಿತು. ಈ ಹಿನ್ನೆಲೆಯಲ್ಲಿ ಈ ಪತ್ರಿಕಾಗೋಷ್ಠಿ ನಡೆದಿದೆ.
ಸೀತಾರಾಮ್ ಯೆಚುರಿಯವರು ಕಲಮು 370ನ್ನು ನಿಷ್ಕ್ರಿಯಗೊಳಿಸಿದ ಮೇಲೆ ಶ್ರೀನಗರಕ್ಕೆ ಭೇಟಿ ಕೊಟ್ಟಿರುವ ದೇಶದ ಮೊದಲ ರಾಜಕೀಯ ನಾಯಕರಾದರೆ, ಮಹಮ್ಮದ್ ಯುಸುಫ್ ತಾರಿಗಾಮಿಯವರು ಮಾಧ್ಯಮಗಳವರೊಂದಿಗೆ ಮುಕ್ತವಾಗಿ ಮಾತಾಡಿರುವ ಮೊದಲ ಪ್ರಮುಖ ಕಾಶ್ಮೀರಿ ರಾಜಕೀಯ ಮುಖಂಡರಾಗಿದ್ದಾರೆ.
“ನಾನು ಬಹಳಷ್ಟು ಕೆಟ್ಟದಿನಗಳನ್ನು ಕಂಡಿದ್ದೇನೆ. ನನ್ನ ಗೆಳೆಯರು ದಾಳಿಗಳಿಗೆ ಬಲಿಯಾಗಿದ್ದಾರೆ, ನನ್ನ ಕುಟುಂಬದ ಸದಸ್ಯರೂ ಬಲಿಯಾಗಿದ್ದಾರೆ, ನನ್ನ ಮೇಲೂ ಬಹಳಷ್ಟು ಹಲ್ಲೆಗಳು ನಡೆದಿವೆ. ಆದರೆ ಎಂದೂ ನನ್ನ ಮನಸ್ಸು ಇಂದಿನಷ್ಟು ಕದಡಿರಲಿಲ್ಲ, ಹೀಗೇಕಾಯಿತು ಎಂದು ನನಗೆ ನಾನೇ ಪ್ರಶ್ನೆ ಕೇಳಿಕೊಳ್ಳುತ್ತಿದ್ದೇನೆ” ಎಂದು ಭಾವುಕರಾಗಿ ತಾರಿಗಾಮಿ ಹೇಳಿದರು. ಈಗಿನ ಆಡಳಿತಗಾರರಿಂದ ನನಗೆ ಬಹಳವೇನೂ ನಿರೀಕ್ಷೆ ಇರಲಿಲ್ಲ. ಆದರೆ ಅವರ ಹತಾಶೆ ಇಂತಹ ಮಟ್ಟಕ್ಕೆ ಇಳಿಯುತ್ತದೆ ಎಂದು ತಾನು ಭಾವಿಸಿರಲಿಲ್ಲ, ಇದರಿಂದ ಆಶ್ಚರ್ಯವೂ ಆಗಿದೆ, ಆಘಾತವೂ ಆಗಿದೆ ಎಂದು ಅವರು ಮುಂದುವರೆದು ಹೇಳಿದರು.
“ಭಾರತ ಒಕ್ಕೂಟ ಮತ್ತು ಜಮ್ಮು ಮತ್ತು ಕಾಶ್ಮೀರದ ಐಕ್ಯತೆಯ ಬುನಾದಿಯ ಮೇಲೆಯೇ, ಭಾರತೀಯ ಸಂವಿಧಾನವನ್ನು ರಕ್ಷಿಸುವ ಜನಾದೇಶ ಇರುವವರೇ ಪ್ರಹಾರ ನಡೆಸಿದ್ದಾರೆ” ಎಂದು ಕಲಮು 370ನ್ನು ನಿಷ್ಕ್ರಿಯಗೊಳಿಸಿರುವ ಮತ್ತು ಆ ರಾಜ್ಯವನ್ನು ಇಬ್ಭಾಗ ಮಾಡಿ ಕೆಳಗಿನ ಸ್ಥಾನಕ್ಕೆ ಇಳಿಸಿರುವ ಬಗ್ಗೆ ಟಿಪ್ಪಣಿ ಮಾಡುತ್ತ ತಾರಿಗಾಮಿ ಹೇಳಿದರು. ಯಾವುದೇ ಚರ್ಚೆ, ಮಾತುಕತೆಯಿಲ್ಲದೆಯೇ ಕೇಂದ್ರ ಸರಕಾರ ಕೈಗೊಂಡಿರುವ ನರ್ಣಯ ಕಾಶ್ಮೀರಿಗಳ ವಿಶ್ವಾಸಕ್ಕೆ ಆಘಾತ ಬಗೆದಿದೆ. 1947ರಲ್ಲಿ ಮಹಾರಾಜ ಹರಿಸಿಂಗ್ ಭಾರತದೊಂದಿಗೆ ಸೇರ್ಪಡೆಯಾಗಬೇಕೇ ಬೇಡವೇ ಎಂದೂ ಇನ್ನೂ ಅಸಮಂಜಸದಲ್ಲಿದ್ದಾಗ, ಕಾಶ್ಮೀರದ ಜನರು ಗಡಿಯಾಚೆಯಿಂದ(ಹೊಸದಾಗಿ ರಚನೆಯಾದ ಪಾಕಿಸ್ತಾನದಿಂದ)ಬರುತ್ತಿದ್ಧ ಫರ್ಮಾನುಗಳಿಗೆ ಕಿವಿಗೊಡಲು ನಿರಾಕರಿಸಿದರು ಜಾತ್ಯತೀತ ಭಾರತದಲ್ಲಿ ಸೇರ್ಪಡೆಯಾಗಲು ನಿರ್ಧರಿಸಿದರು ಎಂಬುದನ್ನು ಈ ಸರಕಾರ ಮರೆತಂತಿದೆ ಎಂದು ತಾರಿಗಾಮಿ ಖೇದ ವ್ಯಕ್ತಪಡಿಸಿದರು.
ಅಗ ಕಾಶ್ಮೀರಿ ಜನತೆಯ ಮೇಲೆ ಯಾವುದೇ ಒತ್ತಡವಿರಲಿಲ್ಲ, ಬಲವಂತವಿರಲಿಲ್ಲ, ಜನಾಂದೋಲನದ ಸಮಾನ ಅನುಭವದ ಬಂಧ ವಿತ್ತು. ಕಾಶ್ಮೀರದ ಜನತೆ ನಿರಂಕುಶಪ್ರಭುತ್ವದ ವಿರುದ್ಧ ಹೋರಾಡುತ್ತಿದ್ದರೆ, ಭಾರತದ ಇತರ ಭಾಗಗಳಲ್ಲಿ ಜನಗಳು ಬ್ರಿಟಿಶ್ ವಸಾಹತುಶಾಹಿಯ ವಿರುದ್ಧ ಹೋರಾಡುತ್ತಿದ್ದರು ಎಂದು ತಾರಿಗಾಮಿ ಇತಿಹಾಸವನ್ನು ನೆನಪಿಸುತ್ತ, ಆ ಬಂಧವನ್ನು, ಅಲ್ಲಿಯೂ ಇಲ್ಲಿಯೂ ಬಹಳ ಶ್ರಮಪಟ್ಟು ಬೆಸೆದ ಐಕ್ಯತೆಯನ್ನು ಈಗ ಕಡಿದು ಹಾಕಲಾಗಿದೆ ಎಂದು ವ್ಯಥೆಯಿಂದ ಹೇಳಿದರು.
ಕಾಶ್ಮೀರದ ಜನತೆ ಮತ್ತು ಭಾರತ ಸರಕಾರದ ನಡುವೆ ವಿಶ್ವಾಸದ ಕೊರತೆ ಇದೆ. “ಭಾರತ ನನ್ನ ದೇಶ ಕೂಡ. ನಾನೇನೂ ಹೊರಗಿನವನಲ್ಲ. ಒಬ್ಬ ಸರಾಸರಿ ಕಾಶ್ಮೀರಿ ಸ್ವರ್ಗವನ್ನೇನೂ ಕೇಳುತ್ತಿಲ್ಲ, ನಾವೂ ನಿಮ್ಮ ಜತೆಗೂಡಿ ನಡೆಯಲು ಬಿಡಿ ಎಂದಷ್ಟೇ ಕೇಳುತ್ತಿದ್ದಾರೆ. ನಾವೂ ನಿಮ್ಮ ಜತೆಗೆ ನಡೆಯುತ್ತೇವೆ ಎನ್ನುತ್ತಿದ್ದಾರೆ. ಅವರ ಕೇಳಿಕೆಗೆ ಕಿವಿಗೊಡಿ” ಎಂದು ತಾರಿಗಾಮಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು. ಈ ಪ್ರಶ್ನೆಯನ್ನು ಪರಿಹರಿಸುವ ಹೊಣೆಯನ್ನು ಸೈನಿಕರ ಮೇಲೆ ಹಾಕಬೇಡಿ. ಏಕೆಂದರೆ ಈ ಸಮಸ್ಯೆಯನ್ನು ಅವರು ಸೃಷ್ಟಿಸಿಲ್ಲ, ಅದನ್ನು ಸೃಷ್ಟಿಸಿದವರು ರಾಜಕಾರಣಿಗಳೇ. ಅವರೇ ಇದನ್ನು ಕೂತು ಬಗೆಹರಿಸಬೇಕು ಎಂದರು ತಾರಿಗಾಮಿ.
ಅಲ್ಲಿ ಈ 40 ದಿನಗಳಲ್ಲಿ ಒಂದು ಬುಲೆಟ್ ಕೂಡ ಚಲಾಯಿಸಿಲ್ಲ ಎಂಬ ಸರಕಾರದ ಅಫಿಡವಿಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ “ಜೈಲಿನಲ್ಲೂ ಬುಲೆಟ್ ಚಲಾಯಿಸುವುದಿಲ್ಲ. ಆದರೆ ಜೈಲು ಜೈಲೇ ತಾನೇ?” ಎಂದು ಮಾರ್ಮಿಕವಾಗಿ ಹೇಳುತ್ತ ಕಾಶ್ಮೀರಿಗಳು ತಮ್ಮನ್ನೂ ಈ ದೇಶದ ನಾಗರಿಕರು ಎಂದು ಕಾಣಿರಿ ಎಂದಷ್ಟೇ ಕೇಳುತ್ತಿದ್ದಾರೆ, ನಾಗರಿಕರ ಒಂದು ಸಮುದಾಯದೊಂದಿಗೆ ಪ್ರತ್ಯೇಕ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ ಎಂಬುದೇ ನಮ್ಮ ಕೇಳಿಕೆ ಎಂದು ಮುಂದುವರೆದು ಹೇಳಿದರು.
ಕಳೆದ 40ದಿನಗಳಲ್ಲಿ ತಾನು ಸ್ವಾತಂತ್ರ್ಯದ ಕ್ಷಣಗಳನ್ನು ಅನುಭವಿಸಿದ್ದು ನವದೆಹಲಿಯಲ್ಲೇ, ತನ್ನದೇ ಆದ ಶ್ರೀನಗರದಲ್ಲಿ ಅದು ಇಲ್ಲ ಎಂದು ಅವರು ದುಃಖದಿಂದ ಹೇಳಿದರು.
ಆಗಸ್ಟ್ 5 ರ ಮೊದಲು ಕಣಿವೆಯಲ್ಲಿ ಹೆಚ್ಚುವರಿ ಸಶಸ್ತ್ರ ಪಡೆಗಳನ್ನು ತರುತ್ತಿದ್ಸಾಗ, ನಂತರ ಅಮರನಾಥ ಯಾತ್ರೆಯನ್ನು ನಡುವೆಯೇ ನಿಲ್ಲಿಸಿದ ಅಭೂತಪೂರ್ವ ಕ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ಡಾ. ಫಾರುಕ್ ಅಬ್ದುಲ್ಲರವರ ನಿವಾಸದಲ್ಲಿ ಸರ್ವ ಪಕ್ಷ ಸಭೆಯ ನಂತರ ಒಂದು ಪತ್ರಿಕಾ ಹೇಳಿಕೆ ನೀಡಿ ವದಂತಿಗಳನ್ನು ಹರಡಿ ಭೀತಿ ಸೃಷ್ಟಿ ಮಾಡಬೇಡಿ ಎಂದು ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. “ಅದಾದ ನಡುರಾತ್ರಿಯಿಂದಲೇ ನಾವೆಲ್ಲ ಮನೆಯಿಂದಾಚೆಗೆ ಹೋಗುವಂತಿಲ್ಲ ಎಂದು ತಾಕೀತು ಮಾಡಲಾಯಿತು. ಈಗ ಫಾರುಕ್ ಅಬ್ದುಲ್ಲರನ್ನು ಕರಾಳ ಪಿಎಸ್‍ಎ ಕಾಯ್ದೆಯ ಅಡಿಯಲ್ಲಿ ಅವರ ನಿವಾಸದಲ್ಲಿ ಒಂದು ಕೋಣೆಯಲ್ಲಿ ಬಂಧಿಸಿಡಲಾಗಿದೆ.
ನಾವು, ಫಾರುಕ್ ಅಬ್ದುಲ್ಲ ಮತ್ತು ಇತರರು ಭಯೋತ್ಪಾದಕರೇನಲ್ಲ. ಆದರೆ ಭಾರತದ ಬೆಂಬಲಕ್ಕೆ ನಿಂತಿದ್ದ ಎಲ್ಲ ರಾಜಕೀಯ ಮುಖಂಡರನ್ನು ಕೇಂದ್ರ ಸರಕಾರ ಬಂಧನದಲ್ಲಿಟ್ಟಿರುವುದನ್ನು ನೋಡಿ ಗಡಿಯಾಚೆ ಇರುವವರು ಚಪ್ಪಾಳೆ ತಟ್ಟುತ್ತಿದ್ದಾರೆ, ಭೇಷ್, ನಾವು ಮಾಡಲಾಗದ್ದನ್ನು ನೀವು ಮಾಡಿದ್ಧೀರಿ ಎನ್ನುತ್ತಿದ್ದಾರೆ. ಇದರಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ” ಎಂದು ತಾರಿಗಾಮಿ ಬೇಸರದಿಂದ ನುಡಿದರು.
ತಮ್ಮನ್ನು ಗೃಹ ಬಂಧನದಿಂದ ಬಿಡಿಸಲು ಸತತ ಪ್ರಯತ್ನ ನಡೆಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಅವರ ಭೇಟಿಗೆ ಮತ್ತು ತನಗೆ ಶುಶ್ರೂಷೆ ಪಡೆಯಲು ದಿಲ್ಲಿಗೆ ಬರಲು ಅನುಮತಿ ನೀಡಿದ ಸವೋಚ್ಚ ನ್ಯಾಯಾಲಯಕ್ಕೆ ಮತ್ತು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುವಲ್ಲಿ ನೆರವಾದ ವಕೀಲರುಗಳಿಗೆ ತಾರಿಗಾಮಿ ಕೃತಜ್ಞತೆಗಳನ್ನು ಸಲ್ಲಿಸಿದರು.
ತಾರಿಗಾಮಿ ತಮ್ಮ ಜೀವಮಾನವಿಡೀ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡಿದವರು, ತಮ್ಮ ಕುಟುಂಬದ ಸದಸ್ಯರನ್ನೂ ಈ ಹೋರಾಟದಲ್ಲಿ ಕಳಕೊಂಡವರು. ಆದರೂ ಅವರಂತಹ ಮುಖಂಡರನ್ನು ಬಂಧನದಲ್ಲಿಡಲಾಗಿದೆ ಎಂದು ಸೀತಾರಾಮ್ ಯೆಚುರಿ ಮಾತಾಡುತ್ತ ಹೇಳಿದರು. ಡಾ.ಫಾರುಕ್ ಅಬ್ದುಲ್ಲರವರ ಮೇಲೂ ಆಗಸ್ಟ್ 5ರಿಂದ ಅವರ ಕಾನೂನುಬಾಹಿರ ಸ್ಥಾನಬದ್ಧತೆಯ ವಿರುದ್ಧ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ಬರುವ ವರೆಗೆ ಯಾವುದೇ ಆರೋಪಗಳಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಪಿಎಸ್‍ಎ ಅಡಿಯಲ್ಲಿ ಬಂಧಿಸಿರುವುದು ಸರಕಾರಕ್ಕೆ ನಂತರ ಹೊಳೆದಿರುವ ವಿಚಾರವಷ್ಟೇ ಎಂದು ಯೆಚುರಿ ಟಿಪ್ಪಣಿ ಮಾಡಿದರು.
ತಾರಿಗಾಮಿಯವರು ಶೀಘ್ರದಲ್ಲೇ ಕಲಮು 370ನ್ನು ದುರ್ಬಲಗೊಳಿಸುವ ಮತ್ತು ಜಮ್ಮು-ಕಾಶ್ಮೀರ ರಾಜ್ಯದ ಮರುಸಂಘಟನೆಯ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಒಂದು ಪ್ರತ್ಯೇಕ ರಿಟ್ ಅರ್ಜಿಯನ್ನು ಸಲ್ಲಿಸುತ್ತಾರೆ ಎಂದು ಯೆಚುರಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇಲ್ಲೀಗ ಜನಗಳ ಜೀವನಾಧಾರ ಪ್ರಮುಖ ಪ್ರಶ್ನೆಯಾಗಿದೆ. ಜನಗಳ ಬದುಕು ಅಸ್ತವ್ಯಸ್ತಗೊಂಡು 40 ದಿನಗಳು ಕಳೆದಿವೆ, ಇನ್ನೂ ಎಷ್ಟು ದಿನ ಇದು ಮುಂದುವರೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿನ ಬುಡಮಟ್ಟದ ವಾಸ್ತವತೆ ಸರಕಾರ ಹೇಳುವುದಕ್ಕೆ ತದ್ವಿರುದ್ಧವಾಗಿದೆ ಎಂಬುದು ಸ್ಪಷ್ಟ. ಸನ್ನಿವೇಶ ‘ಸಾಮಾನ್ಯ”ವಾಗಿದೆ ಎನ್ನಬೇಕಾದರೆ ಅದು ಜನಗಳ ಬದುಕು ಸಾಮಾನ್ಯವಾಗಿದ್ದಾಗ ಮಾತ್ರ ಸಾಧ್ಯ ಎಂದು ಯೆಚುರಿಯವರು ಹೇಳಿದರು.