ಕಾರ್ಪೊರೇಟ್‍ಗಳಿಗೆ ಮತ್ತಷ್ಟು ಶ್ರೀಮಂತಿಕೆ- ಜನಗಳಿಗೆ ಇನ್ನಷ್ಟು ಸಂಕಟಗಳು

“ಕಾರ್ಪೊರೇಟ್‍-ಕೋಮುವಾದಿ ನಂಟು ಭಾರತೀಯ ಜನತೆಯ ಮೇಲೆ ಹೆಚ್ಚೆಚ್ಚು ಸಂಕಟಗಳನ್ನು ಹೇರುತ್ತಿದೆ”

ಆರೆಸ್ಸೆಸ್‍-ಬಿಜೆಪಿ ಸರಕಾರ ಕಾರ್ಪೊರೇಟ್‍ಗಳಿಗೆ ಮತ್ತು ಸೂಪರ್ ಶ್ರೀಮಂತರಿಗೆ 1.45 ಲಕ್ಷ ಕೋಟಿ ರೂ.ಗಳ ಅಗಾಧ ರಿಯಾಯ್ತಿಗಳನ್ನು ಕೊಡಮಾಡಲು ಒಂದು ಸುಗ್ರೀವಾಜ್ಞೆಯ ಮೂಲಕ ಆದಾಯ ತೆರಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಇದಕ್ಕೆ ಮೊದಲು ರಿಯಲ್ ಎಸ್ಟೇಟ್‍ ಮತ್ತು ರಫ್ತು ವಲಯಕ್ಕೆ 70,000 ಕೋಟಿ ರೂ.ಗಳ ರಿಯಾಯ್ತಿಗಳನ್ನು ಕೊಡಲಾಗಿತ್ತು. ರಿಝರ್ವ್ ಬ್ಯಾಂಕಿನ ಮೀಸಲು ನಿಧಿಗಳಿಂದ ಸ್ವಾಧೀನ ಪಡಿಸಿಕೊಂಡ 1.76 ಲಕ್ಷ ಕೋಟಿ ರೂ.ಗಳನ್ನು ಉದ್ಯೋಗಾವಕಾಶಗಳನ್ನು ನಿರ್ಮಿಸಲು ಮತ್ತು ಜನಗಳ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲು ಸಾರ್ವಜನಿಕ ಹೂಡಿಕೆಗಳಿಗೆ ಬಳಸಿಕೊಳ್ಳುವ ಬದಲು ಈಗ ಅದನ್ನು ಕಾರ್ಪೊರೇಟ್‍ಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕೇಂದ್ರ ಸರಕಾರದ ಸಪ್ಟಂಬರ್ 20ರ ಕ್ರಮವೂ ಸೇರಿದಂತೆ ಇತ್ತೀಚಿನ ಆರ್ಥಿಕ ಕ್ರಮಗಳನ್ನು ಬಲವಾಗಿ ಟೀಕಿಸಿದೆ.

ಭಾರತದಲ್ಲಿನ ಪ್ರಸ್ತುತ ಆರ್ಥಿಕ ಹಿಂಜರಿತ ಉಂಟಾಗಿರುವುದು ಬೇಡಿಕೆಯ ಕೊರತೆಯಿಂದಾಗಿ, ಅಂದರೆ ಜನಗಳಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀಸುವ ಶಕ್ತಿ ಇಲ್ಲವಾದ್ದರಿಂದ. ಬಜೆಟ್‍ ಪ್ರಕಟಣೆಗಳನ್ನು ತಿರುಗುಮುರುಗುಗೊಳಿಸುವ ಪ್ರಯತ್ನಗಳಿಂದ ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಏಕೆಂದರೆ ಉತ್ಪಾದನೆಯಾಗುವ ವಸ್ತುಗಳನ್ನು ಕೊಳ್ಳಲು ಜನಗಳಲ್ಲಿ ಹಣವೇ ಇಲ್ಲ. ಜಾಗತಿಕ ಮಂದಗತಿ ಮತ್ತು ವಿಶ್ವ ವ್ಯಾಪಾರದಲ್ಲಿ ಒಂದು ಅಗಾಧ ಇಳಿಕೆಯಿಂದಾಗಿ ನಮ್ಮ ರಫ್ತುಗಳನ್ನು ಹೆಚ್ಚಿಸುವ ಯಾವುದೇ ನಿರೀಕ್ಷೆಯೂ ಹುಸಿಯಾಗುತ್ತದೆ.

ಸರ್ಚಾರ್ಜ್ ಮತ್ತು ಸೆಸ್‍ ಸೇರಿದಂತೆ ಕಾರ್ಪೊರೇಟ್‍ ತೆರಿಗೆಯ ಪ್ರಮಾಣವನ್ನು 34.94% ದಿಂದ 25.17%ಕ್ಕೆ ಇಳಿಸಲಾಗಿದೆ. ಇದು ಸುಮಾರು 10%ದಷ್ಟಾಗುವ ಒಂದು ಬೃಹತ್‍ ರಿಯಾಯ್ತಿ. ಅಲ್ಲದೆ, ಅಕ್ಟೋಬರ್ 1, 2019ರಿಂದ ಹೊಸ ಹೂಡಿಕೆಗಳನ್ನು ಮಾಡುವ ಕಂಪನಿಗಳು ಸರ್ಚಾರ್ಜ್ ಗಳೂ ಸೇರಿದಂತೆ ಕೇವಲ 17.01% ತೆರಿಗೆಗಳನ್ನು ತೆರುವ ಅವಕಾಶವನ್ನೂ ಕೊಡಲಾಗಿದೆ.

ಬಜೆಟಿನಲ್ಲಿ ಪ್ರಕಟಿಸಿದ್ದ ಬಂಡವಾಳ ಗಳಿಕೆಯ ಮೇಲೆ ಹೆಚ್ಚಿನ ಸರ್ಚಾರ್ಜನ್ನು ಹಿಂತೆಗೆದುಕೊಂಡು ವಿದೇಶಿ ಪೋರ್ಟ್ ಫೋಲಿಯೊ ಹೂಡಿಕೆದಾರರಿಗೆ ಪ್ರಯೋಜನವನ್ನು ಒದಗಿಸಲಾಗಿದೆ. ಇದು ಮೋದಿಯವರ ಅಮೆರಿಕಾ ಭೇಟಿ ಮತ್ತು ಅಮೆರಿಕಾ ಮತ್ತಿತರ ವಿದೇಶಗಳಿಂದ ಪೋರ್ಟ್ ಫೋಲಿಯೊ ಹೂಡಿಕೆದಾರರನ್ನು ಸಂತುಷ್ಟಗೊಳಿಸುವ ನಾಚಿಕೆಹೀನ ಪ್ರಯತ್ನದ ಹಿನ್ನೆಲೆಯಲ್ಲಿ ಬರುತ್ತಿದೆ.

ದೇಶದ ದುಡಿಯುವ ಜನಗಳಿಗೆ ಆತಂಕ ಹುಟ್ಟಿಸುವಂತೆ ಏರುತ್ತಿರುವ ನಿರುದ್ಯೋಗ, ಲೇ-ಆಫ್‍ ಗಳು, ರಿಟ್ರೆಂಚ್‍ ಮೆಂಟ್‍ ಗಳು ಮತ್ತು ನಿಜ ಆದಾಯಗಳಲ್ಲಿ ತೀವ್ರ ಇಳಿಕೆಯ ಒಂದು ಸನ್ನಿವೇಶದಲ್ಲಿ ಈ ಯಾವ ಕ್ರಮವೂ ಜನಗಳ ಜೀವನಾಧಾರಗಳನ್ನು ಉತ್ತಮಪಡಿಸಲಾಗಲೀ, ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲಾಗಲೀ ನೆರವಾಗಲಾರದು. ಈಗ ಬೇಕಾಗಿರುವುದು ಉದ್ಯೋಗಾವಕಾಶಗಳನ್ನು ನಿರ್ಮಿಸಲು ಮತ್ತು ಜನಗಳ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ದೊಡ್ಡ ಪ್ರಮಾಣದ ಸಾರ್ವಜನಿಕ ಹೂಡಿಕೆ. ಆದರೆ ಸರಕಾರ ತದ್ವಿರುದ್ಧ ಧೋರಣೆಯನ್ನೇ ಅನುಸರಿಸುತ್ತಿದೆ. ಇದು ಖಾಸಗಿ ಕಾರ್ಪೊರೇಟ್‍ ಪ್ರಯೋಜನಗಳಿಗಾಗಿ ಮತ್ತು ಜೂಜುಕೋರ ಲಾಭಕ್ಕಾಗಿ ಭಾರತೀಯ ಹಣದ ಲೂಟಿಯಲ್ಲದೆ ಬೇರೇನೂ ಅಲ್ಲ.

ಕಾರ್ಪೊರೇಟ್‍-ಕೋಮುವಾದಿ ನಂಟು ಭಾರತೀಯ ಜನತೆಯ ಮೇಲೆ ಹೆಚ್ಚೆಚ್ಚು ಸಂಕಟಗಳನ್ನು ಹೇರುತ್ತಿದೆ ಎಂದು ವಿಶ್ಲೇಷಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ರಿಝರ್ವ್ ಬ್ಯಾಂಕಿನ ಮೀಸಲು ನಿಧಿಗಳಿಂದ ತೆಗೆದುಕೊಂಡಿರುವ 1.76 ಲಕ್ಷ ಕೋಟಿ ರೂ.ಗಳನ್ನು ಬಹಳಷ್ಟು ಅಗತ್ಯವಿರುವ ಮೂಲರಚನೆಗಳನ್ನು ಕಟ್ಟಿ ಬೆಳೆಸುವ ಸಾರ್ವಜನಿಕ ಹೂಡಿಕೆಗೆ ಬಳಸಬೇಕು ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.

Leave a Reply

Your email address will not be published. Required fields are marked *