ಆಳಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಜನಗಳ ಸಂಕಟಗಳ ವಿರುದ್ಧ ಅಖಿಲ ಭಾರತ ಪ್ರತಿಭಟನೆ
ಈ ಸಮಾವೇಶವು
ಭಾರತೀಯ ಅರ್ಥವ್ಯವಸ್ಥೆಯು ಹಿಂಜರಿತದ ಅಂಚಿಗೆ ಬಂದಿರುವ ಒಂದು ಅತ್ಯಂತ ಗಂಭೀರ ಬಿಕ್ಕಟ್ಟಿನ ಹಿಡಿತದಲ್ಲಿ ಸಿಲುಕಿದೆ, ಎಲ್ಲ ಸಾಕ್ಷ್ಯಗಳು, ತೇಪೆಹಚ್ಚಿದ ಅಧಿಕೃತ ಮಾಹಿತಿ ಕೂಡ ಸುಮಾರಾಗಿ ಅರ್ಥವ್ಯವಸ್ಥೆಯ ಎಲ್ಲ ವಲಯಗಳಲ್ಲಿ ಬೇಡಿಕೆ ಕುಸಿದಿದೆ, ಇದರಿಂದಾಗಿ ಉತ್ಪಾದನೆಯಲ್ಲಿ ದೊಡ್ಡ ಕಡಿತಗಳಾಗಿವೆ ಮತ್ತು ಅಭೂತಪೂರ್ವ ರೀತಿಯಲ್ಲಿ ಉದ್ಯೋಗನಷ್ಟಗಳು ಹೆಚ್ಚುತ್ತಿವೆ, ಇದಕ್ಕೆ ಮಹಿಳೆಯರು ಅತಿ ಹೆಚ್ಚಾಗಿ ಬಲಿಯಾಗಿದ್ದಾರೆ ಎಂಬುದನ್ನು ದೃಢಪಡಿಸುತ್ತಿವೆ; ವಾಹನಗಳ ಮಾರಾಟದಿಂದ ಹಿಡಿದು, ಜವಳಿ, ಈ ಚಹಾ-ಬಿಸ್ಕಿಟ್ ಪ್ರಿಯ ದೇಶದಲ್ಲಿ ಬಿಸ್ಕಿಟಿನ ಮಾರಾಟದ ವರೆಗೂ ಪ್ರಸಕ್ತ ವಾಸ್ತವತೆಯನ್ನು ಕಣ್ಣಿಗೆ ರಾಚುವಂತೆ ಪ್ರದರ್ಶಿಸುತ್ತಿವೆ ಎಂಬುದನ್ನು ಅತ್ಯಂತ ಆಳವಾದ ಬೇಗುದಿಯಿಂದ ಗಮನಿಸುತ್ತದೆ;
ಇದನ್ನು ಸುಮಾರಾಗಿ ನಿರಾಕರಿಸುತ್ತಲೇ ಇದ್ದ ಮೋದಿ ಸರಕಾರ ಈಗ ಒಲ್ಲದ ಮನಸ್ಸಿನಿಂದಲೇ ಆರ್ಥಿಕ ಮಂದಗತಿ ಇದೆ ಎಂಬುದನ್ನು ಒಪ್ಪುವ ಸ್ಥಿತಿಗೆ ಬಂದಿದೆ. ಆದರೂ ಅದು ನೋಟುರದ್ಧತಿ ಮತ್ತು ಸರಿಯಾಗಿ ರೂಪಿಸದ, ಸರಿಯಾದ ಸಿದ್ಧತೆಯಿಲ್ಲದೆ ತಂದ ಜಿಎಸ್ಟಿ ಮುಂತಾದ ತನ್ನದೇ ಧೋರಣೆಗಳು ಅದಾಗಲೇ ನಿರುದ್ಯೋಗ, ಬೆಲೆಯೇರಿಕೆ ಮತ್ತು ಜೀವನಾಧಾರಗಳ ಬಿಕ್ಕಟ್ಟಿನಿಂದ ತತ್ತರಿಸುತ್ತಿದ್ದ ಅರ್ಥವ್ಯವಸ್ಥೆಗೆ ಎಂದೂ ಸರಿಪಡಿಸಲಾಗದ ಹಾನಿ ಉಂಟು ಮಾಡಿವೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಲೇ ಇದೆ, ಮೋದಿ ಸರಕಾರಕ್ಕೆ ಈಗಲೂ ಹೆಚ್ಚುತ್ತಿರುವ ಸಾಮೂಹಿಕ ನಿರುದ್ಯೋಗ, ಅರೆ-ಉದ್ಯೋಗ, ಕಡಿಮೆ ಕೂಲಿಗಳು, ಕಡಿಮೆ ಆದಾಯಗಳು ಮತ್ತು ಆಳಗೊಳ್ಳುತ್ತಿರುವ ಕೃಷಿ ಸಂಕಟದ ಸಮಸ್ಯೆಗಳ ಪರಿವೆಯೇ ಇಲ್ಲ, ಇದರ ಫಲಿತಾಂಶವಾಗಿ ನಮ್ಮ ದುಡಿಯುವ ಜನತೆಯ ಬಹುಪಾಲು ವಿಭಾಗಗಳ ಸಂಕಟ ಇನ್ನಷ್ಟು ಹೆಚ್ಚುತ್ತಿವೆ, ಈ ಪ್ರಶ್ನೆಗಳನ್ನು ಎದುರಿಸುವ ಬದಲು ಮೋದಿ ಸರಕಾರ ಧ್ರುವೀಕರಣವನ್ನು ಆಳಗೊಳಿಸುವ ಭಾವೋನ್ಮಾದಗಳನ್ನು ಬಡಿದೆಬ್ಬಿಸಿ ಜನಗಳ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ ಎಂಬ ಬಗ್ಗೆ ಆಳವಾದ ಆತಂಕವನ್ನು ವ್ಯಕ್ತಪಡಿಸುತ್ತದೆ;
ಆಗಿರುವ ಅಲ್ಪ-ಸ್ವಲ್ಪ ವೃದ್ಧಿಯ ಫಲಗಳನ್ನೂ ಮೋದಿ ಸರಕಾರದ ಬಂಟ ಬಂಡವಾಳಶಾಹಿಯಿಂದಾಗಿ ಅತಿ-ಶ್ರೀಮಂತರ ಒಂದು ಸಣ್ಣ ವಿಭಾಗವೇ ಹೆಚ್ಚೆಚ್ಚಾಗಿ ಬಾಚಿಕೊಳ್ಳುತ್ತಿದೆ. ಸರಕಾರ ಈಗ ಅತಿ-ಶ್ರೀಮಂತರ ಮೇಲೆ ಪ್ರಕಟಿಸಿದ ತೆರಿಗೆ ಸರ್ಚಾರ್ಜ್ಗಳನ್ನು ಹಿಂತೆಗೆದುಕೊಂಡಿದೆ. ಅಪಾರವಾದ ಮತ್ತು ತ್ವರಿತವಾಗಿ ಹೆಚ್ಚುತ್ತಿರುವ ಅಸಮಾನತೆಯ ಮಟ್ಟಗಳು ಭಾರತವನ್ನು ಜಗತ್ತಿನ ಅತ್ಯಂತ ಅಸಮಾನ ಸಮಾಜಗಳಲ್ಲಿ ಒಂದಾಗಿಸಿದೆ. ಇದು ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ಒಂದು ಅನಿವಾರ್ಯ ಪರಿಣಾಮ ಎಂದು ಅಸಂದಿಗ್ಧವಾಗಿ ಖಂಡಿಸುತ್ತದೆ;
ಭಾರತೀಯ ಅರ್ಥವ್ಯವಸ್ಥೆ ಬಹುಪಾಲು ಜನತೆಯ ನಡುವೆ ಕೊಳ್ಳುವ ಸಾಮರ್ಥ್ಯದ ಕೊರತೆಯಿಂದಾಗಿ ಆಂತರಿಕೆ ಬೇಡಿಕೆ ತೀವ್ರರೀತಿಯಲ್ಲಿ ಕುಗ್ಗಿರುವ ಸಮಸ್ಯೆಯಿಂದ ನರಳುತ್ತಿದೆ ಎಂಬುದು ಸ್ಪಷ್ಟವಾಗಿದೆ, ಜನಗಳ ಕೊಳ್ಳುವ ಸಾಮರ್ಥ್ಯ ಹೆಚ್ಚದೆ ಆಂತರಿಕ ಬೇಡಿಕೆ ಹೆಚ್ಚುವುದಿಲ್ಲ, ಅದರಿಂದಾಗಿ, ತಯಾರಿಕೆ ಮತ್ತು ಕೈಗಾರಿಕಾ ವಲಯದಲ್ಲಿ ಸ್ಥಗಿತತೆ ಮತ್ತು ಇಳಿಕೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ, ಮೂಲರಚನೆಗಳಲ್ಲಿ ಬೃಹತ್ ಪ್ರಮಾಣದ ಹೂಡಿಕೆಯಿಂದ ಮಾತ್ರವೇ ಹೊಸ ಉದ್ಯೋಗಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುವುದು, ಮತ್ತು ಆಮೂಲಕ ಜನಗಳ ಕೊಳ್ಳುವ ಸಾಮರ್ಥ್ಯವನ್ನು ಮತ್ತು ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ಸಾಧ್ಯ ಎಂದು ಗಂಭೀರ ಆತಂಕದಿಂದ ಗಮನಿಸುತ್ತದೆ;
ಇದನ್ನು ಮಾಡುವ ಬದಲು ಮೋದಿ ಸರಕಾರ ಮತ್ತೊಮ್ಮೆ ಖಾಸಗಿ ಬಂಡವಾಳಕ್ಕೆ ಹೆಚ್ಚಿನ ರಿಯಾಯ್ತಿಗಳನ್ನು ಕೊಡಲು ಪ್ರಯತ್ನಿಸುತ್ತಿದೆ, ಅದರಿಂದ ಊಡಿಕೆ ಮಟ್ಟಗಳು ಏರುತ್ತವೆ ಮತ್ತು ಭಾರತದ ರಫ್ತುಗಳನ್ನು ವಿಸ್ತರಿಸುವತ್ತ ಗುರಿಯಿಡುವ ನಿರೀಕ್ಷೆಯಿಟ್ಟುಕೊಂಡಿದೆ, ಹಣಕಾಸು ಮಂತ್ರಿಗಳು ಇತ್ತೀಚೆಗೆ ೭೦,೦೦೦ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ವೆಚ್ಚದ ಕ್ರನಗಳನ್ನು ಪ್ರಕಟಿಸಿ ಮಾಡಿರುವುದು ಇದನ್ನೇ. ರಿಯಲ್ ಎಸ್ಟೇಟ್ ವ್ಯವಹಾರಗಳು ಮತ್ತು ವಸತಿ ವಲಯಗಳ ಮೇಲೆ ಗುರಿಯಿಟ್ಟು ಸರಕಾರಕ್ಕೆ ಮತ್ತೊಮ್ಮೆ, ಜನಗಳ ಬಳಿ ಮನೆ ಕೊಳ್ಳಲು ಹಣವಿಲ್ಲದ್ದರಿಂದಲೇ ಮನೆಗಳ ಖರೀದಿ ನಡೆಯುತ್ತಿಲ್ಲ ಎಂಬ ಸಂಗತಿಯ ಅರಿವು ಇಲ್ಲವೆಂದಾಗಿದೆ. ಜಾಗತಿಕ ವ್ಯಾಪಾರದ ಮಂದಗತಿಯಿಂದಾಗಿ ಜಾಗತಿಕ ವ್ಯಾಪಾರ ಪರಿಮಾಣಗಳು ತೀಕ್ಷ್ಣವಾಗಿ ಇಳಿಯುತ್ತಿರುವ ಒಂದು ಸನ್ನಿವೇಶದಲ್ಲಿ ಭಾರತದ ರಫ್ತುಗಳನ್ನು ಉತ್ತೇಜಿಸುವ ಯಾವುದೇ ಪ್ರಯತ್ನ ಯಶಸ್ವಿಯಾಗುತ್ತದೆ ಎಂಬುದರ ಬಗ್ಗೆ ಬಲವಾದ ಅಸಮ್ಮತಿ ವ್ಯಕ್ತಪಡಿಸುತ್ತದೆ.
ಇಂತಹ ಪರಿಸ್ಥಿತಿಗಳಲ್ಲಿ
ರಿಝರ್ವ್ ಬ್ಯಾಂಕಿನಿಂದ ತೆಗೆದುಕೊಂಡ ೧.೭೬ ಲಕ್ಷ ಕೋಟಿ ರೂ.ಗಳನ್ನು ಕಳೆದ ವರ್ಷ ನೋಟುರದ್ದತಿ ಮತ್ತು ಜಿಎಸ್ಟಿಯಿಂದಾಗಿ ಆಗಿರುವ ೧.೭ ಲಕ್ಷ ಕೋಟಿ ರೂ.ಗಳ ರೆವಿನೂ ಕೊರತೆಯನ್ನು ತುಂಬಲು ಬಳಸದೆ, ಉದ್ಯೋಗಗಳನ್ನು ನಿರ್ಮಿಸುವ ಮತ್ತು ದೇಶದೊಳಗಿನ ಬೇಡಿಕೆಗಳನ್ನು ಹೆಚ್ಚಿಸುವ ಸಾರ್ವಜನಿಕ ಹೂಡಿಕೆಗಳಿಗೆ ಬಳಸಬೇಕು ಎಂದು ಎಡಪಕ್ಷಗಳು ಆಗ್ರಹಿಸುತ್ತವೆ.
ಆದ್ದರಿಂದ ಈ ಸಮಾವೇಶ
ಉದ್ಯೋಗಾವಕಾಶ ನಿರ್ಮಾಣಕ್ಕೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು, ಮತ್ತು ಅದುವರೆಗೆ ಕೇಂದ್ರ ಸರಕಾರ ಯುವಜನರಿಗೆ ನಿರುದ್ಯೋಗ ಭತ್ಯೆ ಕೊಡಬೇಕು
ಕನಿಷ್ಟ ಮಾಸಿಕ ವೇತನ ರೂ.೧೮,೦೦೦ ಖಾತ್ರಿಗೊಳಿಸಬೇಕು
ಉದ್ಯೋಗದಿಂದ ತೆಗೆದುಹಾಕಿರುವ ಅಪಾರ ಸಂಖ್ಯೆಯ ಕಾರ್ಮಿಕರಿಗೆ ಮಾಸಿಕ ಬದುಕುವ ವೇತನ ಸಿಗುವಂತೆ ಸರಕಾರ ಖಾತ್ರಿಗೊಳಿಸಬೇಕು
ಸಾರ್ವಜನಿಕ ವಲಯದ ಖಾಸಗೀಕರಣವನ್ನು ನಿಲ್ಲಿಸಬೇಕು, ರಕ್ಷಣೆ ಮತ್ತು ಕಲ್ಲಿದ್ದಲು ವಲಯಗಳಲ್ಲಿ ೧೦೦ಶೇ. ಎಫ್ಡಿಐ ಹಿಂತೆಗೆದುಕೊಳ್ಳಬೇಕು.
ಬಿಎಸ್ಎನ್ಎಲ್, ಶಸ್ತ್ರಾಸ್ತ್ರ ಕಾರ್ಖಾನೆಗಳು, ಭಾರತೀಯ ರೈಲ್ವೆ, ಏರ್ ಇಂಡಿಯಾ ಮುಂತಾದವುಗಳ ವ್ಯಾಪಕ ಪ್ರಮಾಣದ ಖಾಸಗೀಕರಣವನ್ನು ನಿಲ್ಲಿಸಬೇಕು
ಮನರೇಗದಲ್ಲಿ ಹಿಂದಿನ ಬಾಕಿ ಕೂಲಿಗಳನ್ನು ತೆರಲು ಮತ್ತು ಕನಿಷ್ಟ ೨೦೦ ದಿನಗಳ ಕೆಲಸ ಒದಗಿಸಲು ಅದಕ್ಕೆ ಹಣನೀಡಿಕೆಯನ್ನು ಹೆಚ್ಚಿಸಬೇಕು
ಕರ್ಷಕ ಸಂಕಟವನ್ನು ಎದುರಿಸಲು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ರೈತರಿಗೆ ಒಂದು ಬಾರಿಯ ಸಾಲಮನ್ನಾ, ಲಾಗುವಾಡುಗಳ ವೆಚ್ಚದ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆಯ ಪ್ರಕಟಣೆ ಮತ್ತು ಜಾರಿ
ವಯಸ್ಸಾದವರಿಗೆ ಮತ್ತು ವಿಧವೆಯರಿಗೆ ಕನಿಷ್ಟ ಮಾಸಿಕ ಪೆನ್ಶನ್ ಮೊತ್ತವನ್ನು ೩೦೦೦ರೂ.ಗೆ ಏರಿಸಬೇಕು
ಎಂದು ಆಗ್ರಹಿಸುತ್ತದೆ.
ಈ ಪ್ರಶ್ನೆಗಳ ಮೇಲೆ ಪ್ರತಿಭಟನೆ ನಡೆಸಲು ಮತ್ತು ಈ ಬೇಡಿಕೆಗಳನ್ನು ಮೋದಿ ಸರಕಾರ ತಕ್ಷಣವೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ
ಅಕ್ಟೋಬರ್ ೧೦ರಿಂದ ೧೬ ರವರೆಗೆ ದೇಶಾದ್ಯಂತ ಪ್ರತಿಭಟನಾ ಚಟುವಟಿಕೆಗಳನ್ನು ಸಂಘಟಿಸಲು ತಮ್ಮ ಎಲ್ಲ ಘಟಕಗಳಿಗೆ ಕರೆ ನೀಡಲು
ಎಡಪಕ್ಷಗಳ ಈ ಸಮಾವೇಶ ನಿರ್ಣಯಿಸುತ್ತದೆ..
ಒಂದು ಜನತಾ ಪ್ರತಿಭಟನಾ ಆಂದೋಲನವನ್ನು ಕಟ್ಟಿ ಬೆಳೆಸಲು ಈ ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ಸೇರಿಕೊಳ್ಳಬೇಕು ಎಂದು ಎಲ್ಲ ಪ್ರಜಾಪ್ರಭುತ್ವವಾದಿ ಶಕ್ತಿಗಳಿಗೆ ಈ ಸಮಾವೇಶ ಮನವಿ ಮಾಡುತ್ತದೆ.