ಕೇಂದ್ರ ಸರಕಾರ ಮತ್ತು ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ “ಸಾಮಾನ್ಯ”ವಾಗಿದೆ ಎಂದು ಗಂಟಲು ಹರಿಯುವಂತೆ ಸಾರುತ್ತಿದ್ದರೂ, ನಿಜಸಂಗತಿ ತದ್ವಿರುದ್ಧವೇ ಆಗಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ. ಇಂತಹ ಸನ್ನಿವೇಶದಲ್ಲಿ. ಪರಿಸ್ಥಿತಿ ‘ಸಾಮಾನ್ಯ”ವಾಗಿದೆ ಎಂದು ಜಗತ್ತಿನ ಮುಂದೆ ಚಿತ್ರಿಸುವುದಕ್ಕಾಗಿಯಷ್ಟೇಅಲ್ಲಿ ಬ್ಲಾಕ್ ಅಭಿವೃದ್ಧಿ ಮಂಡಳಿಗಳಿಗೆ ಚುನಾವಣೆಗಳನ್ನು ಪ್ರಕಟಿಸಲಾಗಿದೆ. ಇದು ಪ್ರಜಾಪ್ರಭುತ್ವವನ್ನು ನಗೆಪಾಟಲು ಮಾಡುವ ಸಂಗತಿ ಎಂದು ಸಿಪಿಐ(ಎಂ) ಹೇಳಿದೆ.
ಅಕ್ಟೋಬರ್ 2ರಿಂದ 4 ರ ವರೆಗೆ ನವದೆಹಲಿಯಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ನಡೆಯಿತು. ಆನಂತರ ನೀಡಿರುವ ಪತ್ರಿಕಾ ಹೇಳಿಕೆಯ ಹೇಳಿಕೆಯ ಅಂಶಗಳು ಹೀಗಿವೆ:
ಕೇರಳದಲ್ಲಿ ಎಲ್.ಡಿ.ಎಫ್. ವಿಜಯಕ್ಕೆ ಅಭಿನಂದನೆ
ಎಡ ಪ್ರಜಾಪ್ರಭುತ್ವ ರಂಗ(ಎಲ್ಡಿ.ಎಫ್.)ದ ಅಭ್ಯರ್ಥಿಯನ್ನು ಚುನಾಯಿಸಿದ್ದಕ್ಕೆ ಸಿಪಿಐ(ಎಂ) ಕೇಂದ್ರಸಮಿತಿ ಕೇರಳದ ಪಾಲ ವಿಧಾನಸಭಾ ಕ್ಷೇತ್ರದ ಜನರನ್ನು ಅಭಿನಂದಿಸಿದೆ. ಇದೊಂದು ಅಭೂತಪೂರ್ವ ವಿಜಯ. ಯುಡಿಎಫ್ನ ಬಲಿಷ್ಟ ನೆಲೆಯಂದು ಹೇಳಲಾಗುತ್ತಿದ್ದ, ಅದು ಕಳೆದ ಬಾರಿಯೂ ಗೆದ್ದಿದ್ದ ಈ ಸ್ಥಾನವನ್ನು ಎಲ್.ಡಿ.ಎಫ್. ಮತ್ತು ಅದರ ಸರಕಾರದ ವಿರುದ್ಧ ನಡೆಸಿದ ಒಂದು ದೊಡ್ಡ ಪ್ರಚಾರವನ್ನು ಎದುರಿಸಿಯೂ ಎಲ್.ಡಿ.ಎಫ್. ಕಸಿದುಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ
ಕೇಂದ್ರ ಸರಕಾರ ಮತ್ತು ಬಿಜೆಪಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ “ಸಾಮಾನ್ಯ”ವಾಗಿದೆ ಎಂದು ಗಂಟಲು ಹರಿಯುವಂತೆ ಸಾರುತ್ತಿದ್ದರೂ, ನಿಜಸಂಗತಿ ತದ್ವಿರುದ್ಧವೇ ಆಗಿದೆ. ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಮಹಮ್ಮದ್ ಯುಸುಫ್ ತಾರಿಗಾಮಿಯವರಿಗೆ ಕೇಂದ್ರಸಮಿತಿಯ ಸಭೆಯಲ್ಲಿ ಭಾಗವಹಿಸಲು ಕೂಡ, ಅವರನ್ನು ಬಂಧನದಲ್ಲಿ ಇಟ್ಟಿಲ್ಲ ಎಂದು ಸುಪ್ರಿಂ ಕೋಟಿಗೆ ತಾನೇ ಹೇಳಿದ್ದ ಈ ಸರಕಾರ ಅನುಮತಿ ನೀಡಿಲ್ಲ. ಇದು, ಕಣಿವೆಯಲ್ಲಿ ಸಾಮಾನ್ಯ ಪರಿಸ್ಥಿತಿ ಇದೆ ಎಂಬ ಸರಕಾರದ ದಾವೆಗಳೆಲ್ಲವೂ ನೆಲಮಟ್ಟದ ವಾಸ್ತವತೆಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ ಎಂಬುದನ್ನು ತೋರಿಸುತ್ತದೆ.
ಸಂಪರ್ಕಗಳ ಮೇಲಿನ ಕಟು ನಿರ್ಬಂಧ ಮುಂದುವರೆಯುತ್ತಿದೆ, ಸಾರ್ವಜನಿಕ ಸಾರಿಗೆ ಸಂಚಾರ ಸ್ಥಬ್ಧಗೊಂಡಿದೆ, ಶಾಲೆಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿಯೇ ಇವೆ, ಅಂಗಡಿಗಳು ಮತ್ತು ಇತರ ವ್ಯಾಪಾರ-ವಹಿವಾಟುಗಳ ಸಂಸ್ಥೆಗಳೂ ಬಾಗಿಲು ಹಾಕಿವೆ. ಈಗ ರಡು ತಿಂಗಳುಗಳಿಗೂ ಹೆಚ್ಚು ಕಾಲ ಮುಂದುವರೆದಿರುವ ಸನ್ನಿವೇಶ ಜನಗಳನ್ನು ಅಭೂತಪೂರ್ವ ಸಂಕಟಗಳಿಗಳಿಗೆ ಈಡು ಮಾಡಿವೆ.
ಇಂತಹ ಸನ್ನಿವೆಶದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಅಭಿವೃದ್ಧಿ ಮಂಡಳಿಗಳಿಗೆ ಚುನಾವಣೆಗಳನ್ನು ಪ್ರಕಟಿಸಲಾಗಿದೆ. ಇದು ಪ್ರಜಾಪ್ರಭುತ್ವವನ್ನು ನಗೆಪಾಟಲು ಮಾಡುವ ಸಂಗತಿ. ಪರಿಸ್ಥಿತಿ ‘ಸಾಮಾನ್ಯ”ವಾಗಿದೆ ಎಂದು ಜಗತ್ತಿನ ಮುಂದೆ ಚಿತ್ರಿಸುವುದಷ್ಟೇ ಇದರ ಆಶಯ. ಅಲ್ಲದೆ, ಈ ಬಿಡಿಸಿ ಚುನಾವಣೆಗಳಲ್ಲಿ ಮತದಾನ ಮಾಡಬೇಕಾದವರು ಗ್ರಾಮ ಪಂಚಾಯತುಗಳ ಪಂಚರು ಮತ್ತು ಸರಪಂಚರು. ಆದರೆ ಈ ಸ್ಥಾನಗಳಲ್ಲಿ 61ಶೇ.ದಷ್ಟು ಖಾಲಿಯಾಗಿಯೇ ಇವೆ.
ಸಂಪರ್ಕಗಳು, ಓಡಾಟ, ನಾಗರಿಕ ಸ್ವಾತಂತ್ರ್ಯಗಳನ್ನು ಮತ್ತೆ ನೆಲೆಗೊಳಿಸಬೇಕು ಮತ್ತು ಎಲ್ಲ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಸಿಪಿಐ(ಎಂ) ಕೇಂದ್ರಸಮಿತಿ ಮತ್ತೊಮ್ಮೆ ಆಗ್ರಹಿಸುತ್ತ, ರಾಜಕೀಯ ಚಟುವಟಿಕೆಗಳ ಹಕ್ಕನ್ನು ಮತ್ತೆ ನೆಲೆಗೊಳಿಸಿದ ನಂತರವೇ ಚುನಾವಣೆಗಳನ್ನು ನಡೆಸಬೇಕು ಎಂದಿದೆ.
ಎನ್. ಆರ್.ಸಿ. ಪ್ರಕ್ರಿಯೆ ಮತ್ತು ಸಂಬಂಧಪಟ್ಟ ಪ್ರಶ್ನೆಗಳು
ವಿವಿಧ ಬಿಜೆಪಿ ಆಳ್ವಿಕೆಯ ಮುಖ್ಯಮಂತ್ರಿಗಳು ತಂತಮ್ಮ ರಾಜ್ಯಗಳಲ್ಲಿ ರಾಷ್ಟ್ರೀಯ ಪೌರತ್ವ ದಾಖಲೆ (ಎನ್.ಆರ್.ಸಿ.) ಬೇಕು ಎಂದು ಆಗ್ರಹಿಸಿದ್ದಾರೆ. ಎನ್. ಆರ್.ಸಿ. ಎಂಬುದು ಅಸ್ಸಾಂ ಒಪ್ಪಂದದ ಭಾಗವಾಗಿದ್ದು, ಆ ರಾಜ್ಯಕ್ಕೇ ನಿರ್ದಿಷ್ಟವಾಗಿರುವಂತದ್ದು. ಸುಪ್ರಿಂ ಕೋರ್ಟಿನ ನಿರ್ದೇಶನದ ಅಡಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ. ಅಲ್ಲೀಗ ಸುಮಾರು 20 ಲಕ್ಷ ಮಂದಿಯನ್ನು ಎನ್. ಆರ್.ಸಿ. ಯಲ್ಲಿ ಕೈಬಿಡಲಾಗಿದೆ. ಯಾವ ನೈಜ ಭಾರತೀಯ ಪೌರರನ್ನೂ ಈ ದಾಖಲೆಯಿಂದ ಹೊರಗಿಡಬಾರದು ಎಂದು ಹೇಳಿರುವ ಸಿಪಿಐ(ಎಂ) ಕೇಂದ್ರಸಮಿತಿ, ಹೀಗೆ ಕೈಬಿಡಲಾಗಿರುವ ಎಲ್ಲರ ಮನವಿಗಳನ್ನು ಪರಿಶೀಲಿಸಬೇಕು ಮತ್ತು ಒಂದು ನ್ಯಾಯಾಂಧ ಪ್ರಾಧಿಕಾರ ಯಾವುದೇ ತಾರತಮ್ಯವಿಲ್ಲದೆ ಈ ಬಗ್ಗೆ ನ್ಯಾಯನಿರ್ಣಯ ಮಾಡಬೇಕು ಎಂದು ಆಗ್ರಹಿಸಿದೆ.
ವಿದೇಶೀಯರ ನ್ಯಾಯಮಂಡಳಿಗಳು ವಿದೇಶೀಯರೆಂದು ಸಾರಿರುವವರನ್ನು ಇಟ್ಟಿರುವ ಸ್ಥಾನಬದ್ಧತೆಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ, ಅಲ್ಲಿನ ಪರಿಸ್ಥಿತಿ ತೀರಾ ನಿಕೃಷ್ಟವಾಗಿದೆ, ಇದು ಕನಿಷ್ಟ ಮಾನವ ಹಕ್ಕುಗಳನ್ನೂ ಉಲ್ಲಂಘಿಸುವಂತದ್ದು. ಈ ಕೇಂದ್ರಗಳನ್ನು ಮುಚ್ಚಿ ಬಿಡಬೇಕು, ಮತ್ತು ಈ ಜನಗಳ ಮನವಿಗಳ ನ್ಯಾಯನಿರ್ಣಯ ಆಗುವ ವರೆಗೆ ಅವರು ಮೊದಲಿನಂತೆಯೇ ಇರಲು ಬಿಡಬೇಕು.
ಈ ಎನ್. ಆರ್.ಸಿ. ಯನ್ನು ಅಸ್ಸಾಂನ ಹೊರಗೆ ವಿಸ್ತರಿಸುವುದನ್ನು ಸಿಪಿಐ(ಎಂ) ಕೇಂದ್ರ ಸಮಿತಿ ವಿರೋಧಿಸಿದೆ. ಈ ಸರಕಾರ ‘ರಾಷ್ಟ್ರೀಯ ಜನಸಂಖ್ಯಾ ದಾಖಲೆ’ (ಎನ್. ಪಿ.ಆರ್. )ಯನ್ನು ತಯಾರಿಸುವ ಕೆಲಸವನ್ನು ಮತ್ತೆ ಆರಂಭಿಸಿದೆ. ಇದನ್ನು ಈ ಎನ್.ಪಿ.ಆರ್. ಆಧಾರದಲ್ಲಿ ಅಖಿಲ ಭಾರತ ಎನ್. ಆರ್.ಸಿ. ಗೆ ಸಿದ್ಧತೆಯಾಗಿ ಮಾಡಲಾಗಿದೆ. ಬಿಜೆಪಿ ಕೇಂದ್ರ ಸರಕಾರ ಸ್ಥಾನಬದ್ಧತಾ ಕೇಂದ್ರಗಳಾಗಿ ಬಳಸಲು ಕಟ್ಟಡಗಳ ನಿರ್ಮಾಣವನ್ನು ಆರಂಭಿಸಬೇಕು ಎಂದು ಕೆಲವು ರಾಜ್ಯಗಳಿಗೆ ಹೇಳಿದೆ.
ಈ ಎಲ್ಲ ಕಸರತ್ತುಗಳು ಅನಗತ್ಯವಾಗಿವೆ. ಏಕೆಂದರೆ ದೇಶದಲ್ಲಿ ಆಧಾರ್ ಕಾರ್ಡ್ಗಳನ್ನು ಸಾರ್ವತ್ರಿಕಗೊಳಿಸಲಾಗಿದೆ. ಇಡೀ ದೇಶದಲ್ಲಿ ಚುನಾವಣಾ ಫೋಟೋ ಗುರುತು ಕಾರ್ಡ್(ಇ.ಪಿ.ಐ.ಸಿ.), ಜತೆಗೆ ಪೋಟೋ ಗುರುತುಗಳಿರುವ ಮತದಾರರ ಪಟ್ಟಿಗಳಿದ್ದು ಅವನ್ನು ಪ್ರತಿವರ್ಷ ಪರಿಷ್ಕರಿಸಲಾಗುತ್ತಿದೆ. ಇವೆಲ್ಲವೂ ಈಗಾಗಲೇ ಇರುವಾಗ, ಎನ್. ಆರ್.ಸಿ. ಯನ್ನು ಅಸ್ಸಾಂನ ಆಚೆಗೂ ವಿಸ್ತರಿಸುವ, ಎನ್.ಪಿ.ಆರ್. ಗಣತಿಯ, ಮತದಾರ ಪಟ್ಟಿಯೊಂದಿಗೆ ಚುನಾವಣಾ ದೃಢೀಕರಣ ಪ್ರಕ್ರಿಯೆ(ಇ.ವಿ.ಪಿ.) ಯ ಮಾತುಗಳು ಹಾಗೂ ಪೌರತ್ವ ತಿದ್ದುಪಡಿ ಮಸೂದೆಯನ್ನು ಪಾಸು ಮಾಡುವ ಭರವಸೆ-ಇವೆಲ್ಲವೂ ಆರೆಸ್ಸೆಸ್/ಬಿಜೆಪಿ ಕೋಮುವಾದಿ ವೋಟ್ ಬ್ಯಾಂಕನ್ನು ಕ್ರೋಡೀಕರಿಸಲು ಧ್ರುವೀಕರಣವನ್ನು ತೀಕ್ಷ್ಣ ಗೊಳಿಸುವ ಪ್ರಯತ್ನಗಳನ್ನು ಸೂಚಿಸುತ್ತವೆ ಎಂದು ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.
ಆರ್ಥಿಕ ಬಿಕ್ಕಟ್ಟು
ಭಾರತದಲ್ಲಿ ಈಗ ಆರ್ಥಿಕ ಹಿಂಜರಿತದ ಅಂಚಿಗೆ ಬಂದಿರುವ ಆರ್ಥಿಕ ಮಂದಗತಿ, ಅದರಿಂದಾಗಿ ವ್ಯಾಪಕ ಪ್ರಮಾಣದ ನಿರುದ್ಯೋಗ, ಲಕ್ಷಾಂತರ ಕಾರ್ಮಿಕರ ರಿಟ್ರೆಂಚ್ ಮೆಂಟ್, ಮುಂದುವರೆಯುತ್ತಿರುವ ಕರ್ಷಕ ಸಂಕಟ ಇವೆಲ್ಲವೂ ಜನಗಳ ಮೇಲೆ ಹೆಚ್ಚೆಚ್ಚು ದುಸ್ಥಿತಿಗಳನ್ನು ಹೇರುತ್ತಿವೆ. 2011-12ರ ವಿವಾದಾತ್ಮಕ ಮೂಲವರ್ಷ ಸರಣಿಯನ್ನು ಅಧರಿಸಿದ ಜಿಡಿಪಿ ಮಾಹಿತಿಯ ಪ್ರಕಾರವೂ, ಜಿಡಿಪಿ ಬೆಳವಣಿಗೆ ದರ ಕಳೆದ ಐದು ತ್ರೈಮಾಸಿಕಗಳಲ್ಲಿ ಸತತವಾಗಿ ಇಳಿಯುತ್ತ ಬಂದಿದೆ.
2017-18ರ ಕೊನೆಯ ತ್ರೈಮಾಸಿಕದಲ್ಲಿ 8.1 ಶೇ. ಇದ್ದದ್ದು, 2019-20ರ ಮೊದಲ ತ್ರೈಮಾಸಿಕದ ವೇಳೆಗೆ 5ಶೇ.ಕ್ಕೆ ಇಳಿದಿದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ(ಐಐಪಿ)ವೂ ಆರ್ಥಿಕ ಮಂದಗತಿಯನ್ನು ದೃಢಪಡಿಸಿದೆ. ಕೈಗಾರಿಕಾ ಉತ್ಪಾದನೆಯ ತಯಾರಿಕಾ ಸೂಚ್ಯಂಕದಲ್ಲಿ ಬೆಳವಣಿಗೆ 2019-20ರ ಎಪ್ರಿಲ್-ಜುಲೈ ಅವಧಿಯಲ್ಲಿ ಕೇವಲ 2.8ಶೇ. ಕಳೆದ ವರ್ಷ ಇದೇ ಅವಧಿಯಲ್ಲಿ ಅದು 5.6ಶೇ.ವಿತ್ತು. ಇದೇ ರೀತಿ ಒಟ್ಟು ಐ.ಐ.ಪಿ. ಬೆಳವಣಿಗೆ ಕಳೆದ ವರ್ಷದ ಎಪ್ರಿಲ್-ಜೂನ್ ಅವಧಿಯಲ್ಲಿ 5.4ಶೇ. ಇದ್ದದ್ದು, ಈ ವರ್ಷ ಅದೇ ಅವಧಿಯಲ್ಲಿ 3.3ಶೇ.ಕ್ಕೆ ಇಳಿದಿದೆ. ನಿಜಸಂಗತಿಯೆಂದರ ಬಂಡವಾಳ ಸರಕುಗಳ ಉತ್ಪಾದನೆ ಹೆಚ್ಚುವ ಬದಲು 4.3ಶೇ.ದಷ್ಟು ಇಳಿದಿದೆ. ಕಳದ ವರ್ಷ ಈ ಅವಧಿಯಲ್ಲಿ ಅದು 7.1ಶೇ. ಬೆಳವಣಿಗೆ ತೋರಿಸಿತ್ತು. ಬಾಳಿಕೆಯ ಬಳಕೆ ವಸ್ತುಗಳ ಉತ್ಪಾದನೆಯೂ 2.7ಶೇ.ದಷ್ಟು ಕುಂಠಿತಗೊಂಡಿದೆ.
ಈ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಮಿರುದ್ಯೋಗ ಹಿಂದೆಂದೂ ಕಾಣದ ಮಟ್ಟಕ್ಕೆ ಏರಿದೆ. ಅಧಿಕೃತ ಅಂಕೆ-ಸಂಖ್ಯೆಗಳು ಸಾಮಾನ್ಯವಾಗಿ ಕೀಳಂದಾಜನ್ನೇ ಮಾಡುತ್ತವೆ. ಆದರೆ ಈ ಅಂಕೆ-ಸಂಖ್ಯೆಗಳ ಆಧಾರದಲ್ಲಿ ಸಿ.ಎಂ.ಇ.ಐ. ಮಾಡಿರುವ ಅಂದಾಜಿನ ಪ್ರಕಾರವೂ ಸಪ್ಟಂಬರ್ 27, 2019ರ ವೇಳೆಗೆ ನಿರುದ್ಯೋಗ 9.94ಶೇ.ವನ್ನು ತಲುಪಿದೆ. ಇದು ಕಳೆದ ಅರ್ಧ ಶತಮಾನದಲ್ಲೇ ಅತೀ ಹೆಚ್ಚು. ಆಗಸ್ಟ್ ಅಂತ್ಯದ ವೇಳೆಗೆ ಅಧಿಕೃತವಾಗಿ 4.5 ಕೋಟಿ ಜನಗಳು ನಿರುದ್ಯೋಗಿಗಳಾಗಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ 1.1. ಕೋಟಿಯಷ್ಟ ಹೆಚ್ಚಳವನ್ನು ಇದು ತೋರಿಸುತ್ತದೆ. ಯುವಜನರಲ್ಲಿ ನಿರುದ್ಯೋಗ 28ಶೇ. ಎಂದು ಅಂದಾಜು ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಎಡಪಕ್ಷಗಳು ಅಕ್ಟೋಬರ್ 10ರಿಂದ 16 ರವರೆಗೆ ಈ ಕೆಳಗಿನ ಬೇಡಿಕೆಗಳ ಮೇಲೆ ಅಖಿಲ ಭಾರತ ಪ್ರತಿಭಟನೆಗೆ ಕರೆ ನೀಡಿವೆ:
- ಉದ್ಯೋಗಾವಕಾಶ ನಿರ್ಮಾಣಕ್ಕೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು, ಮತ್ತು ಅದುವರೆಗೆ ಕೇಂದ್ರ ಸರಕಾರ ಯುವಜನರಿಗೆ ನಿರುದ್ಯೋಗ ಭತ್ಯೆ ಕೊಡಬೇಕು.
- ಕನಿಷ್ಟ ಮಾಸಿಕ ವೇತನ ರೂ.21,೦೦೦ ಖಾತ್ರಿಗೊಳಿಸಬೇಕು.
- ಉದ್ಯೋಗದಿಂದ ತೆಗೆದುಹಾಕಿರುವ ಅಪಾರ ಸಂಖ್ಯೆಯ ಕಾರ್ಮಿಕರಿಗೆ ಮಾಸಿಕ ಬದುಕುವ ವೇತನ ಸಿಗುವಂತೆ ಸರಕಾರ ಖಾತ್ರಿಗೊಳಿಸಬೇಕು.
- ಸಾರ್ವಜನಿಕ ವಲಯದ ಖಾಸಗೀಕರಣವನ್ನು ನಿಲ್ಲಿಸಬೇಕು, ರಕ್ಷಣೆ ಮತ್ತು ಕಲ್ಲಿದ್ದಲು ವಲಯಗಳಲ್ಲಿ ೧೦೦ಶೇ. ಎಫ್ಡಿಐ ಹಿಂತೆಗೆದುಕೊಳ್ಳಬೇಕು. ಬಿಎಸ್ಎನ್ಎಲ್, ಶಸ್ತ್ರಾಸ್ತ್ರ ಕಾರ್ಖಾನೆಗಳು, ಭಾರತೀಯ ರೈಲ್ವೆ, ಏರ್ ಇಂಡಿಯಾ ಮುಂತಾದವುಗಳ ವ್ಯಾಪಕ ಪ್ರಮಾಣದ ಖಾಸಗೀಕರಣವನ್ನು ನಿಲ್ಲಿಸಬೇಕು.
- ಮನರೇಗದಲ್ಲಿ ಹಿಂದಿನ ಬಾಕಿ ಕೂಲಿಗಳನ್ನು ತೆರಲು ಮತ್ತು ಕನಿಷ್ಟ 200 ದಿನಗಳ ಕೆಲಸ ಒದಗಿಸಲು ಅದಕ್ಕೆ ಹಣನೀಡಿಕೆಯನ್ನು ಹೆಚ್ಚಿಸಬೇಕು.
- ಕರ್ಷಕ ಸಂಕಟವನ್ನು ಎದುರಿಸಲು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ರೈತರಿಗೆ ಒಂದು ಬಾರಿಯ ಸಾಲಮನ್ನಾ, ಲಾಗುವಾಡುಗಳ ವೆಚ್ಚದ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆಯ ಪ್ರಕಟಣೆ ಮತ್ತು ಜಾರಿ.
- ವಯಸ್ಸಾದವರಿಗೆ ಮತ್ತು ವಿಧವೆಯರಿಗೆ ಕನಿಷ್ಟ ಮಾಸಿಕ ಪೆನ್ಶನ್ ಮೊತ್ತವನ್ನು 3000ರೂ.ಗೆ ಏರಿಸಬೇಕು.
ಈ ಕರೆಗೆ ಸ್ಪಂದಿಸಿ ಸಾಧ್ಯವಾದಷ್ಟು ಹೆಚ್ಚು ಪ್ರಮಾಣದಲ್ಲಿ ಜನವಿಭಾಗಗಳನ್ನು ಅಣಿನೆರೆಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ತನ್ನ ಘಟಕಗಳಿಗೆ ಕರೆ ನೀಡಿದೆ.
ರಾಜ್ಯ ವಿಧಾನಸಭಾ ಚುನಾವಣೆಗಳು:
ಕೇಂದ್ರ ಸಮಿತಿ ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಿಗೆ ಚುನಾವಣೆಯ ಕಾರ್ಯತಂತ್ರಗಳನ್ನು ಚರ್ಚಿಸಿತು. ಸೀಟು ಹೊಂದಾಣಿಕೆಗಳಿಗೆ ಎಡ, ಜಾತ್ಯತೀತ, ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ.
ಈ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಿಪಿಐ(ಎಂ) ಅಭ್ಯರ್ಥಿಗಳ ಪೂರ್ಣ ಪಟ್ಟಿಯನ್ನು ಬೇಗನೇ ಪ್ರಕಟಿಸಲಾಗುವುದು.
ಈ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನೇತೃತ್ವದ ಕೋಮುವಾದಿ-ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಮತ್ತು ವಿಧಾನಸಭೆಗಳಲ್ಲಿ ಎಡ ಪ್ರಾತಿನಿಧ್ಯವನ್ನು ಬಲಪಡಿಸಲು ಸಿಪಿಐ(ಎಂ) ಶ್ರಮಿಸುತ್ತದೆ ಎಂದು ಕೇಂದ್ರ ಸಮಿತಿ ಹೇಳಿದೆ.
ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ಶತಮಾನೋತ್ಸವ ಆಚರಣೆ:
ಅಕ್ಟೋಬರ್ 17, 2020ರಂದು ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ 100 ನೇ ವರ್ಷ. ಸಿಪಿಐ(ಎಂ) ಕೇಂದ್ರ ಸಮಿತಿ ಅಕ್ಟೋಬರ್ 17, 2019ರಿಂದ ಪಕ್ಷದ ಸ್ಥಾಪನೆಯ ಶತಮಾನೋತ್ಸವವನ್ನು ವರ್ಷವಿಡೀ ಆಚರಿಸಬೇಕು ಎಂದು ಕರೆ ನೀಡಿದೆ.