ರಾಜದ್ರೋಹದ ಕೇಸನ್ನು ರದ್ದು ಮಾಡಬೇಕು

ರಾಜದ್ರೋಹದ ಅಂಶವನ್ನು ಕಾನೂನಿನ ಕಡತಗಳಿಂದ ತೆಗೆಯಲು ಗಾಂಧೀಜಿ-150 ಆಚರಣೆ ಅತ್ಯಂತ ಸೂಕ್ತ ಸಂದರ್ಭ

ನಲ್ವತ್ತೊಂಬತ್ತು ಪ್ರತಿಷ್ಠಿತ ಭಾರತೀಯರು, ತಂತಮ್ಮ ಕ್ಷೇತ್ರಗಳಲ್ಲಿ ಮಹಾಸಾದನೆಗಳನ್ನು ಮಾಡಿದವರು-ಇವರು ಹೆಚ್ಚುತ್ತಿರುವ ದ್ವೇಷ ಪ್ರಚಾರ ಮತ್ತು ಹಿಂಸಾಚಾರಗಳು ಸಾಮೂಹಿಕವಾಗಿ ಬಡಿದು ಸಾಯಿಸುವ ವರೆಗೂ ಹೋಗುತ್ತಿರುವುದನ್ನು ವಿರೋಧಿಸಿ ಪ್ರಧಾನ ಮಂತ್ರಿಗಳಿಗೆ ಒಂದು ಪತ್ರ ಬರೆದುದಕ್ಕೆ ಅವರ ಮೇಲೆ ರಾಜದ್ರೋಹದ ಕೇಸುಗಳನ್ನು ಜಡಿದಿರುವುದನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ.

ಈ ರಾಜದ್ರೋಹದ ಅಂಶವನ್ನು ಕಾನೂನಿನಲ್ಲಿ ಸ್ವಾತಂತ್ರ್ಯದ ನಂತರವೂ ಮುಂದುವರೆಸಿರುವುದನ್ನು ಸಿಪಿಐ(ಎಂ) ಸದಾ ವಿರೋಧಿಸುತ್ತ ಬಂದಿದೆ. ಈ ಅಂಶವನ್ನು ತಂದದ್ದೇ ಭಾರತದಲ್ಲಿ ಬ್ರಿಟಿಶ್ ರಾಜವಂಶವನ್ನು ಮತ್ತು ಅವರು ಸಾರ್ವಭೌಮರೆಂಬುದನ್ನು ರಕ್ಷಿಸಲಿಕ್ಕಾಗಿಯೇ. ಅದನ್ನು ಗಾಂಧೀಜಿ ಸೇರಿದಂತೆ ಪ್ರಮುಖ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡಲು ಮತ್ತು ಬಾಯಿಮುಚ್ಚಸಲು ವ್ಯಾಪಕವಾಗಿ ಬಳಸಲಾಗಿದೆ. ದೇಶವು ಗಾಂಧೀಜಿಯ 150ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಈ ರಾಜದ್ರೋಹ ಎಂಬುದನ್ನು ಕಾನೂನು ಕಡತಗಳಿಂದ ತೆಗೆಯುವುದು ಅತ್ಯಂತ ಸೂಕ್ತವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಪ್ರಧಾನ ಮಂತ್ರಿಗಳಿಗೆ ಮಹತ್ವದ ವಿಷಯಗಳ ಮೇಲೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಪತ್ರ ಬರೆಯುವುದು ಒಂದು ಅಪರಾಧವಾಗಲು ಸಾಧ್ಯವಿಲ್ಲ, ಅದನ್ನು ರಾಷ್ಟ್ರ-ವಿರೋಧಿ ಎನ್ನಲು ಸಾಧ್ಯವಿಲ್ಲ. ಇದು ಪ್ರಸಕ್ತ ಸರಕಾರದ ಧೋರಣೆಗಳ ಬಗ್ಗೆ ಭಿನ್ನ ಅಭಿಪ್ರಾಯ ಹೊಂದಿರುವವರನ್ನೆಲ್ಲ ಶಿಕ್ಷಿಸಬೇಕು ಎಂದಂತಾಗುತ್ತದೆ. ಹೀಗೆ ಮಾಡುವುದು ಪ್ರಜಾಪ್ರಭುತ್ವ ಹಕ್ಕುಗಳ ಸಂಪೂರ್ಣ ನಿರಾಕರಣೆಯಾಗುತ್ತದೆ, ಇದು ದೇಶದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಶಾಹಿಯನ್ನು ಬಿಂಬಿಸುತ್ತದೆ.

1962 ರಷ್ಟು  ಹಿಂದೆಯೇ ಸುಪ್ರಿಂ ಕೋರ್ಟ್ ರಾಜದ್ರೋಹದ ಕಾನೂನಿನ ಅಂಶವನ್ನು ಪ್ರಭುತ್ವದ ವಿರುದ್ಧ ಒಂದು ನೇರ ಕರೆ ಅಥವ ಹಿಂಸಾಚಾರದ ಕುಮ್ಮಕ್ಕು ಇಲ್ಲದಿದ್ದರೆ, ಬಳಸಲು ಸಾಧ್ಯವಿಲ್ಲ ಎಂದು ತೀರ್ಪಿತ್ತಿದ್ದರೂ, ಮುಝಪ್ಫರ್ ಪುರದ ಒಂದು ನ್ಯಾಯಾಲಯ  ಕೇಸನ್ನು ದಾಖಲಿಸಲು ಆದೇಶ ನೀಡಿದೆ ಎಂಬುದು ಆಶ್ಚರ್ಯದ ಸಂಗತಿ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಪ್ರತಿಷ್ಠಿತ ಬುದ್ಧಿಜೀವಿಗಳು /ಕಲಾವಿದರ ಮೇಲೆ ಹಾಕಿರುವ ಆಪಾದನೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *