ಜೆ.ಎನ್.ಯು. ವಿದ್ಯಾರ್ಥಿ ಸಂಘದ ಕಚೇರಿಯನ್ನು ತೆರವುಗೊಳಿಸುವ ಆದೇಶ-ಸಿಪಿಐ(ಎಂ) ಖಂಡನೆ
ಜವಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ(ಜೆ.ಎನ್.ಯು.ಎಸ್.ಯು.)ದ ಕಚೇರಿಯನ್ನು ಖಾಲಿ ಮಾಡಬೇಕು ಎಂದು ವಿವಿ ಅಧಿಕಾರಿಗಳು ಆದೇಶ ನೀಡಿರುವುದು ಚುನಾಯಿತ ವಿದ್ಯಾರ್ಥಿ ಸಂಘವನ್ನು ದಮನ ಮಾಡುವ ಹೊಚ್ಚ ಹೊಸ ಮತ್ತು ಕಣ್ಣಿಗೆ ರಾಚುವಂತಿರುವ ಪ್ರಯತ್ನ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ.
ಕಳೆದ ವರ್ಷ 2018-19ರಲ್ಲೂ ವಿ.ವಿ. ಅಧಿಕಾರಿಗಳು ವಿದ್ಯಾರ್ಥಿಸಂಘದ ಆಯ್ಕೆಯ ಅಧಿಸೂಚನೆ ಪ್ರಕಟಿಸಲು ನಿರಾಕರಿಸಿದ್ದರು. ಈ ವರ್ಷವಂತೂ ಜೆ.ಎನ್.ಯು..ಎಸ್.ಯು. ಚುನಾವಣೆಗೆ ನ್ಯಾಯಾಂಗದ ಊರ್ಜಿತತೆಯೂ ಸಿಕ್ಕಿದೆ. ದೊಡ್ಡ ಸಂಖ್ಯೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಆದರೂ ಇಂತಹ ಆದೇಶ ವಿ.ವಿ. ಆವರಣದಲ್ಲಿ ಪ್ರಜಾಪ್ರಭುತ್ವ ಚಟುವಟಿಕೆಗಳನ್ನೆಲ್ಲ ನಿಲ್ಲಿಸುವ ಪ್ರಯತ್ನಗಳ ಭಾಗವೇ ಆಗಿದೆ. ತಮ್ಮ ಹಕ್ಕುಗಳನ್ನು ಎತ್ತಿ ಹಿಡಿಯಲು ಮುಂದಾಗಿರುವ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಗುರಿಯಿಡಲಾಗುತ್ತಿದೆ.
ಮೋದಿ ಸರಕಾರದ ಅಡಿಯಲ್ಲಿ ಎಲ್ಲ ಕೇಂದ್ರೀಯ ಶಿಕ್ಷಣ ಸಂಸ್ಥೆಗಳನ್ನು ಸರಕಾರದ ಕಟ್ಟುಪಾಡುಗಳಿಗೆ ಒಳಪಡಿಸಲಾಗುತ್ತಿದೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಪ್ರಹಾರಗಳು ನಡೆಯುತ್ತಿವೆ ಎಂದು ಟೀಕಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಸಂಘದ ಕಚೇರಿಯನ್ನು ತೆರವುಗೊಳಿಸುವ ಆದೇಶವನ್ನು ವಿವಿ ಅಧಿಕಾರಿಗಳು ಹಿಂತೆಗೆದುಕೊಳ್ಳಬೇಕು, ಹೊಸ ವಿದ್ಯಾರ್ಥಿ ಸಂಘದ ಆಯ್ಕೆಯ ಅಧಿಸೂಚನೆಯನ್ನು ಪ್ರಕಟಿಸಬೇಕು, ವಿದ್ಯಾರ್ಥಿ ಸಂಘದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಾರದು ಎಂದು ಆಗ್ರಹಿಸಿದೆ.
“ವಿದ್ಯಾರ್ಥಿಗಳ ಪ್ರಾತಿನಿಧ್ಯದ ಹಕ್ಕಿನ ಪ್ರತೀಕ”-ಕಚೇರಿ ಖಾಲಿ ಮಾಡಲು ವಿದ್ಯಾರ್ಥಿ ಸಂಘದ ನಕಾರ
ವಿ.ವಿ.ಯ ವಿದ್ಯಾರ್ಥಿಗಳ ಡೀನ್ ಪ್ರೊ. ಉಮೇಶ್ ಕದಂ ಅಕ್ಟೋಬರ್ 15ರಂದು ಒಂದು ನೋಟೀಸು ಕಳಿಸಿ 16ರ ಸಂಜೆಯ ಒಳಗೆ ಸಂಘಕ್ಕೆ ನೀಡಿರುವ ಕಚೇರಿಯನ್ನು ತೆರವು ಮಾಡಬೇಕು ಎಂದು ಆದೇಶಿಸಿದ್ದರು. ಕಳೆದ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಗಳು ಲಿಂಗ್ಡೋಹ್ ಸಮಿತಿಯ ವರದಿಗೆ ಅನುಗುಣವಾಗಿರಲಿಲ್ಲವಾದ್ದರಿಂದ ಅದರ ಅಧಿಸೂಚನೆ ಪ್ರಕಟಿಸಿರಲಿಲ್ಲ. ಅದೀಗ ನ್ಯಾಯಾಂಗ ವಿಚಾರಣೆಗೆ ಒಳಪಟ್ಟಿದೆ. ಇದರಿಂದಾಗಿ ಈ ಬಾರಿಯ ಆಯ್ಕೆಯ ಅಧಿಸೂಚನೆ ಪ್ರಕಟವಾಗಿಲ್ಲ. “ಆದ್ದರಿಂದ ಕಚೇರಿಯ ದುರುಪಯೋಗವನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಅದಕ್ಕೆ ಬೀಗ ಹಾಕಲು ನಿರ್ಧರಿಸಿದ್ದಾರೆ, ಅಧಿಸೂಚನೆ ಪ್ರಕಟವಾದ ಮೇಲೆ ಅದನ್ನು ವಿದ್ಯಾರ್ಥಿ ಸಂಘಕ್ಕೆ ನೀಡಲಾಗುವುದು” ಎಂದು ಈ ನೋಟೀಸಿನಲ್ಲಿ ಹೇಳಲಾಗಿತ್ತು.
ಆದರೆ ವಿದ್ಯಾರ್ಥಿ ಸಂಘ ಕಚೇರಿಯನ್ನು ತೆರವು ಮಾಡಲು ನಿರಾಕರಿಸಿದೆ. ಅಕ್ಟೋಬರ್ 16ರ ಸಂಜೆ 5ಗಂಟೆಯ ವೇಳೆಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಚೇರಿಯಲ್ಲಿ ನೆರೆದಿದ್ದುದರಿಂದ ಬೀಗ ಹಾಕಲು ಬಂದವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
“ಈ ಸ್ಥಳ ವಿ.ವಿ.ಯ 8500 ವಿದ್ಯಾರ್ಥಿಗಳಿಗೆ ಸೇರಿದ್ದು, ಇದನ್ನು ಮುಚ್ಚುವ ಅಧಿಕಾರ ವಿಶ್ವವಿದ್ಯಾಲಯಕ್ಕೆ ಇಲ್ಲ. ಇದು ವಿದ್ಯಾರ್ಥಿಗಳ ಡೀನ್ ರವರ ಖಾಸಗಿ ಆಸ್ತಿಯಲ್ಲ, ವಿದ್ಯಾರ್ಥಿ ಸಮುದಾಯದ ಪ್ರಾತಿನಿಧ್ಯದ ಹಕ್ಕಿನ ಪ್ರತೀಕ” ಎಂದು ಜೆ.ಎನ್.ಯು.ಎಸ್.ಯು.ನ ಚುನಾಯಿತ ಮುಖಂಡರುಗಳು ಹೇಳಿದ್ದಾರೆ.