ಹಿರಿಯ ಕಾರ್ಮಿಕ ಮುಖಂಡ ಕೋದಂಡರಾಮ ನಿಧನ

Kodandaram 19 10 2019ಹಿರಿಯ ಕಾರ್ಮಿಕ ಮುಂದಾಳು, ಗೋವಾ ವಿಮೋಚನಾ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟಗಾರ ಸಿಐಟಿಯು ಮತ್ತು ಸಿಪಿಐ(ಎಂ) ಮುಖಂಡರಾಗಿದ್ದ ಕೋದಂಡರಾಮ್ ಅವರು ತಮ್ಮ 83ನೇ ವಯಸ್ಸಿನಲ್ಲಿ ಅಕ್ಟೋಬರ್ 19 ರಂದು ರಾತ್ರಿ 8 ಕ್ಕೆ ತೀರಿಕೊಂಡರು.

ಅವರು ಬೆಂಗಳೂರಿನ ಸಿಐಟಿಯು ರಾಜ್ಯ ಕಚೇರಿಯಾದ ಸೂರಿ ಭವನದಲ್ಲಿ ವಾಸವಾಗಿದ್ದರು. ಅವಿವಾಹಿತರಾಗಿದ್ದ ಅವರು ತಮ್ಮನ್ನು ಪೂರ್ಣವಾಗಿ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು.

ಅವರು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಪೌರಕಾರ್ಮಿಕರು, ಬೀಡಿಕಾರ್ಮಿಕರನ್ನು ಸಂಘಟಿಸುತ್ತ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದರು.

ಸಿಐಟಿಯುನ ನಾಯಕರಾಗಿ ನಾಲ್ಕೈದು ದಶಕಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದರು. ತಿಪಟೂರಿನಲ್ಲಿ ಸಮಕಾಲೀನರಾದ ವಕೀಲರಾದ ಬಿ.ಡಿ.ರಾಮಯ್ಯ, ನಿವೃತ್ತ ನ್ಯಾಯಾಧೀಶರಾದ ಮರಿಯಪ್ಪ, ಸ್ವಾತಂತ್ರ್ಯ ಹೋರಾಟಗಾರ ಮಹಮದ್ ದಸ್ತಗೀರ್, ಹಾಗಲವಾಡಿ ಚನ್ನಪ್ಪ, ಚನ್ನಬಸಣ್ಣ, ಎಸ್.ಆರ್. ಆರಾಧ್ಯ ಅವರ ಜೊತೆಗೂಡಿ ಹಲವಾರು ಪ್ರಮುಖ ಚಳವಳಿಗಳನ್ನು ಸಂಘಟಿಸಿದ್ದರು.

ತಮ್ಮ ಇಳಿವಯಸ್ಸಿನಲ್ಲಿಯೂ ಲವಲವಿಕೆಯಿಂದ ಆಶಾಭಾವನೆಯೊಂದಿಗೆ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಸಿಐಟಿಯುನ ರಾಜ್ಯ ಮುಖಂಡರಾಗಿ, ದೀರ್ಘಕಾಲ ಸಿಐಟಿಯು ರಾಜ್ಯ ಕಚೇರಿ ಕಾರ್ಯದರ್ಶಿಯಾಗಿ ದುಡದಿದ್ದರು. ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ, ತುಮಕೂರು ಜಿಲ್ಲಾ ಪುಟ್‍ಪಾತ್ ವ್ಯಾಪಾರಿಗಳ ಸಂಘದ ಸಂಸ್ಥಾಪಕ ಮುಖಂಡರಾಗಿ ಹಾಗೂ ಸಿಪಿಐ(ಎಂ) ಪಕ್ಷದ ಶಿಸ್ತುಬದ್ಧ ಕಾರ್ಯಕರ್ತರಾಗಿದ್ದರು.

ಅವರು ಚಳವಳಿಗಾಗಿ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಶೋಷಿತರ, ಕಾರ್ಮಿಕರ ಪರ ಕೆಲಸ ಮಾಡುತ್ತಿದ್ದರು.

ಅವರ ಅಂತ್ಯ ಸಂಸ್ಕಾರವು ಮರುದಿನ ಮಧ್ಯಾಹ್ನ 2 ಗಂಟೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ನೆರವೇರಿತು. ಅಂದು ಮಧ್ಯಾಹ್ನ 01 ಗಂಟೆಯವರೆಗೆ ಸಂಪಂಗಿರಾಮನಗರದ ಸಿಐಟಿಯು ರಾಜ್ಯ ಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತು.

Leave a Reply

Your email address will not be published. Required fields are marked *