ವಿದೇಶಿ ಎಂಪಿಗಳಿಗೆ ಮಾತ್ರ ಕಾಶ್ಮೀರ ಭೇಟಿಗೆ ಅವಕಾಶ – ಸಿಪಿಐ(ಎಂ) ಪೊಲಿಟ್ ಬ್ಯುರೋದ ಬಲವಾದ ಪ್ರತಿಭಟನೆ
ಮೋದಿ ಸರಕಾರ ಸಂಯೋಜಿಸಿದ ವಿವಿಧ ಯುರೋಪಿನ ದೇಶಗಳ ಬಲಪಂಥೀಯ ಛಾಪಿನ ಪಾರ್ಲಿಮೆಂಟ್ ಸದಸ್ಯರುಗಳ ಕಾಶ್ಮೀರ ಕಣಿವೆಯ ಭೇಟಿಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ಭಾರತೀಯ ಸಂಸತ್ ಸದಸ್ಯರು ಮತ್ತು ರಾಷ್ಟ್ರೀಯ ಪಕ್ಷಗಳ ಮುಖಂಡರಿಗೆ ಕಾಶ್ಮೀರ ಕಣಿವೆಗೆ ಭೇಟಿ ನೀಡುವ ಸ್ವಾತಂತ್ರ್ಯವನ್ನು ನಿರಾಕರಿಸಿರುವಾಗ ಕೆಲವು ವಿದೇಶಿ ಪಾರ್ಲಿಮೆಂಟ್ ಸದಸ್ಯರ ಖಾಸಗಿ ಎನ್ನಲಾದ ಭೇಟಿಗೆ ಅವಕಾಶ ನೀಡಿರುವುದು ಭಾರತೀಯ ಸಂಸತ್ತಿಗೆ ಮತ್ತು ಸಾರ್ವಭೌಮತೆಗೆ ಆಗಿರುವ ಒಂದು ಮುಖಭಂಗ ಎಂದು ಖಂಡಿಸಿರುವ ಪೊಲಿಟ್ ಬ್ಯುರೊ ಇದನ್ನು ಖಾಸಗಿ ಭೇಟಿ ಎನ್ನಲಾಗುತ್ತಿದ್ದರೂ, ಪ್ರಧಾನ ಮಂತ್ರಿಗಳು ಅವರನ್ನು ಭೇಟಿಯಾಗಿದ್ದಾರೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಅವರಿಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಸಂಗತಿಯತ್ತ ಗಮನ ಸೆಳೆದಿದೆ.
ಕಾಶ್ಮೀರ ಕಣಿವೆಗೆ ಭೇಟಿ ನೀಡಲು ಬೇರೆಯವರಿಗೆ, ಅದರಲ್ಲೂ ನಮ್ಮದೇ ಎಂ.ಪಿ. ಗಳಿಗೆ ಹಾಗೂ ರಾಷ್ಟ್ರೀಯ ರಾಜಕೀಯ ಮುಖಂಡರಿಗೆ ಅವಕಾಶವಿಲ್ಲದಿರುವಾಗ, ರಾಜ್ಯದ ಸುಪರಿಚಿತ ರಾಜಕೀಯ ಮುಖಂಡರಲ್ಲಿ ಹೆಚ್ಚಿನವರು ಇನ್ನೂ ಬಂಧನದಲ್ಲಿ, ಸ್ಥಾನಬದ್ಧತೆಯಲ್ಲಿ ಇರುವಾಗ ವಿದೇಶಿ ಪಾರ್ಲಿಮೆಂಟ್ ಸದಸ್ಯರ ಒಂದು ಗುಂಪಿಗೆ ಈ ವಿಷಯದಲ್ಲಿ ವಿಶೇಷ ಸೌಲಭ್ಯವೇನೂ ಇರಲು ಸಾಧ್ಯವಿಲ್ಲ.
ಕಾಶ್ಮೀರ ಬಹುಮಟ್ಟಿಗೆ ಇನ್ನೂ ಮುಚ್ಚಿ ಹಾಕಲ್ಪಟ್ಟಿರುವ ಪರಿಸ್ಥಿತಿಯಲ್ಲಿದ್ದು, ವ್ಯಾಪಾರಿಗಳ ಸಂಘಟನೆಗಳು ಕಳೆದ ಮೂರು ತಿಂಗಳಲ್ಲಿ ರಾಜ್ಯದ ಅರ್ಥವ್ಯವಸ್ಥೆಗೆ 10,000 ಕೊಟಿ ರೂ.ಗಳ ಹಾನಿ ತಟ್ಟಿದೆ ಎಂದು ಹೇಳಿರುವುದಾಗಿ ವರದಿಯಾಗಿರುವಾಗ ಭಾರತೀಯ ರಾಜಕೀಯ ಪಕ್ಷಗಳು ಮತ್ತು ಎಂಪಿಗಳಿಗೆ ಭೇಟಿ ನೀಡಲು ಅವಕಾಶ ನಿರಾಕರಿಸುವುದು ಮತ್ತು ವಿದೇಶಿ ಎಂಪಿಗಳಿಗೆ ಅವಕಾಶ ನೀಡಿರುವುದು ಸರಕಾರ ಹೇಳಿಕೊಳ್ಳುತ್ತಿರುವಂತೆ “ಸಾಮಾನ್ಯ ಸ್ಥಿತಿ” ಏರ್ಪಟ್ಟಿದೆ ಎಂಬುದನ್ನೇನೂ ಸಾಬೀತು ಮಾಡುವುದಿಲ್ಲ, ಅದಕ್ಕೆ ಯಾವುದೇ ಭೌತಿಕ ಆಧಾರ ಇಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಕಾಶ್ಮೀರದಲ್ಲಿ ಪ್ರವಾಸಕ್ಕೆ ಮತ್ತು ಓಡಾಡಕ್ಕೆ ಇರುವ ಎಲ್ಲ ಮಿತಿಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದೆ.
ಸರಕಾರ ಎಲ್ಲ ದಮನಕಾರೀ ಕ್ರಮಗಳನ್ನು ನಿಲ್ಲಿಸಲು ಮತ್ತು ಜನಗಳ ಪ್ರಜಾಪ್ರಭುತ್ವ ಹಕ್ಕುಗಳನ್ನು ಮತ್ತೆ ಸ್ಥಾಪಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂಬ ತನ್ನ ಆಗ್ರಹವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಪುನರುಚ್ಚರಿಸಿದೆ.