ಭಾರತದಲ್ಲಿ ಸಕ್ರಿಯ ಕಾರ್ಯಕರ್ತರು, ವಕೀಲರು, ಪತ್ರಕರ್ತರ ಫೋನ್ ಮಾಹಿತಿಗಳನ್ನು ಇಸ್ರೇಲಿ ಪೆಗಾಸಿಸ್ ಬೇಹುಗಾರಿಕೆ ಸಾಧನದಿಂದ ಸೀಳಿರುವುದನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ. ಸ್ವತಃ ವಾಟ್ಸ್ ಆಪ್ ಭಾರತದಲ್ಲಿ 40 ಮಂದಿ ಸೇರಿದಂತೆ ಜಗತ್ತಿನಾದ್ಯಂತ 1400 ಜನಗಳ ಮೇಲೆ ಗುರಿಯಿಡಲಾಗಿತ್ತು ಎಂದು ಒಪ್ಪಿಕೊಂಡಿದೆ. ಫೋನ್ ಮಾಹಿತಿಗಳನ್ನು ಸೀಳಿದರೆ, ಅದರಲ್ಲಿರುವ ವಾಟ್ಸ್ ಆಪ್ ಮಾತ್ರವಲ್ಲ, ‘ಟೆಲಿಗ್ರಾಮ್’ ಅಥವ ‘ಸಿಗ್ನಲ್’ ಮುಂತಾದ ಸಾಮಾಜಿಕ ಮಾಧ್ಯಮಗಳ ವೇದಿಕೆಗಳನ್ನು ಬಳಸಿ ಕಳಿಸಿದ ಸಂದೇಶಗಳೆಲ್ಲವೂ ಹೀಗೆ ಸೀಳಿದ ಸಂಸ್ಥೆಗೆ ಲಭ್ಯವಾಗುತ್ತದೆ ಎಂಬುದನ್ನು ಗಮನಿಸಬಹುದು.
ಸ್ಮಾರ್ಟ್ ಫೋನ್ ಅಥವ ಕಂಪ್ಯೂಟರ್ ಮುಂತಾದ ಯಾವುದೇ ವೈಯಕ್ತಿಕ ಸಾಧನದಿಂದ, ಒಂದು ಸೂಕ್ತ ವಿಧಾನವನ್ನು ಅನುಸರಿಸದೆ, ಅದರಿಂದ ಯಾವುದೇ ರೀತಿಯಲ್ಲಿ ಮಾಹಿತಿ ಸೀಳುವುದು ವ್ಯಕ್ತಿಯ ಖಾಸಗಿತ್ವದ ಮೂಲಭೂತ ಹಕ್ಕಿನ ಒಂದು ಉಲ್ಲಂಘನೆಯಾಗುತ್ತದೆ ಎಂದು ಸುಪ್ರಿಂ ಕೋರ್ಟ್ ವಿಧಿಸಿದೆ. ಪೆಗಾಸಸ್ ನಂತಹ ಬೇಹುಗಾರಿಕೆ ತಂತ್ರಾಂಶವನ್ನು ಬಳಸುವುದು, ಒಂದು ವ್ಯಕ್ತಿ ಖಾಸಗಿಯಾಗಿ ಹೊಂದಿರುವ ಮಾಹಿತಿ ಮತ್ತು ದತ್ತಾಂಶವನ್ನು ಕಾನೂನುಬಾಹಿರವಾಗಿ ಹುಡುಕುವುದು ಮತ್ತು ವಶಪಡಿಸಿಕೊಳ್ಳುವುದಕ್ಕೆ ಸಮನಾದುದಾಗಿರುತ್ತದೆ.
ಪೆಗಾಸಸ್ ಬೇಹುಗಾರಿಕೆ ಸಾಧನದ ಮಾಲಕರಾದ ಎನ್.ಎಸ್.ಒ. ಈ ಬೇಹುಗಾರಿಕೆ ತಂತ್ರಾಂಶವನ್ನು ಸರಕಾರೀ ಏಜೆನ್ಸಿಗಳಿಗೆ ಮಾತ್ರವೇ ಮಾರುವುದು ಎಂದು ಘೋಷಿಸಿದೆ. ಇದು ಈ ತಂತ್ರಾಂಶವನ್ನು ಕಾರ್ಯಕರ್ತರು, ಪತ್ರಕರ್ತರು, ವಕೀಲರುಗಳ ಮೇಲೆ ಗುರಿಯಿಡಲು ಸರಕಾರದ ಒಂದು ಸಂಸ್ಥೆಯೇ ಖರೀದಿಸಿದೆಯೇ ಎಂಬ ಸಂದೇಹವನ್ನು ಎಬ್ಬಿಸುತ್ತದೆ.
ತನ್ನ ಏಜೆನ್ಸಿಗಳುಲ್ಲಿ ಯಾವುದಾದರೂ ಈ ಮಾಹಿತಿ ಸೀಳುವ ತಂತ್ರಾಂಶವನ್ನು ಬಳಸುವಲ್ಲಿ ಶಾಮೀಲಾಗಿದೆಯೇ ಎಂದು ಸರಕಾರ ಉತ್ತರಿಸಬೇಕಾಗಿದೆ. ಏಕೆಂದರೆ, ಈ ತಂತ್ರಾಂಶವನ್ನು ಯಾರ ಮೇಲೆ ಗುರಿಯಿಡಲಾಗಿದೆಯೋ ಅವರಲ್ಲಿ ಹೆಚ್ಚಿನ ವ್ಯಕ್ತಿಗಳ ಮೇಲೆ ಸರಕಾರ ಕಳೆದ ವರ್ಷದ ಮೇ ತಿಂಗಳಲ್ಲಿ ಗುರಿಯಿಟ್ಟಿತ್ತು. ಕಾನೂನಿನ ಅಡಿಯಲ್ಲಿ ಜನಗಳ ಫೋನುಗಳ ಮಾಹಿತಿಗಳನ್ನು ಸೀಳುವುದು ಒಂದು ಸೈಬರ್ ಅಪರಾಧವಾಗುತ್ತದೆ.
ಸರಕಾರ ಹೇಳಿಕೊಳ್ಳುವಂತೆ ಪೆಗಾಸಸ್ ತಂತ್ರಾಂಶದಲ್ಲಿ ತೊಡಗಿರದಿದ್ದರೆ, ಅದು ಒಂದು ಎಫ್ ಐ ಆರ್ ನ್ನು ಏಕೆ ದಾಖಲಿಸಲಿಲ್ಲ, ಕ್ರಿಮಿನಲ್ ತನಿಖೆಯನ್ನು ಏಕೆ ಆರಂಭಿಸಲಿಲ್ಲ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಪ್ರಶ್ನಿಸಿದೆ. ಗೃಹ ವ್ಯವಹಾರಗಳ ಇಲಾಖೆಯ ಸೈಬರ್ ಮತ್ತು ಮಾಹಿತಿ ಭದ್ರತಾ ವಿಭಾಗ ಪೆಗಾಸಸ್ ತಂತ್ರಾಂಶವನ್ನು ಬಳಸಿಲ್ಲ ಎಂದು ಹೇಳುತ್ತದೆ. ಇತರ ಇಲಾಖೆಗಳಲ್ಲಿ ಬೇರೆ ಯಾವುದೂ, ಅಂದರೆ ಎನ್.ಟಿ.ಆರ್.ಒ. , ಸಿಬಿಐ ಅಥವ ಆರ್.ಎ.ಡಬ್ಲ್ಯು ನಂತಹ ಸಂಸ್ಥೆಗಳು ಖರೀದಿಸಿಲ್ಲ ಎಂದು ಸರಕಾರ ಇನ್ನೂ ಘೋಷಿಸಿಲ್ಲ.
ಈ ವಿಷಯದಲ್ಲಿ, ಸರಕಾರ ತನ್ನ ಕೈ ಸ್ವಚ್ಛವಾಗಿದೆ ಎಂದು ಸಾಬೀತು ಪಡಿಸಬೇಕಾಗಿದೆ. ಅದು ಒಂದು ಕ್ರಿಮಿನಲ್ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ನಾಗರಿಕರ ಹಕ್ಕುಗಳನ್ನು ಮತ್ತು ಖಾಸಗಿತ್ವವನ್ನು ರಕ್ಷಿಸುವ ಒಂದು ಸಮಗ್ರ ದತ್ತಾಂಶ ಕಾಯ್ದುಕೊಳ್ಳುವ ಕಾಯ್ದೆಯನ್ನು ಪಾಸು ಮಾಡಬೇಕು ಎಂದೂ ಆಗ್ರಹಿಸಿದೆ.