ಆಸಿಯಾನ್, ಚೀನಾ, ನ್ಯೂಝೀಲೆಂಡ್, ಆಸ್ಟ್ರೇಲಿಯ, ಜಪಾನ್, ದಕ್ಷಿಣ ಕೊರಿಯ ಮತ್ತು ಭಾರತದ ನಡುವಿನ ಒಂದು ಬೃಹತ್ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) “ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ”ಕ್ಕೆ (ಆರ್.ಸಿ.ಇ.ಪಿ.) ಬರಲು ಕೊನೆಯ ಗಳಿಗೆಯ ಮಾತುಕತೆಗಳು ನಡೆಯುತ್ತಿವೆ. ಬಿಜೆಪಿ ಕೇಂದ್ರ ಸರಕಾರ ಈ ಮಾತುಕತೆಗಳು ನೇರವಾಗಿ ತಟ್ಟುವ ವಿಭಾಗಗಳನ್ನು ತೊಡಗಿಸಿಕೊಳ್ಳದೆ ಮತ್ತು ರಾಜ್ಯಗಳು ಹಾಗೂ ಸಂಸತ್ತಿನೊಂದಿಗೆ ಸಮಾಲೋಚಿಸದೆ ಈ ಮಾತುಕತೆಗಳನ್ನು ರಹಸ್ಯಮಯವಾಗಿ ಮತ್ತು ಪ್ರಜಾಪ್ರಭುತ್ವ ರೀತಿಯನ್ನು ಬದಿಗಿಟ್ಟು ನಡೆಸುತ್ತಿರುವುದು ಅತ್ಯಂತ ಆಕ್ಷೇಪಾರ್ಹ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಭಾರತ ಈ ಮುಕ್ತ ವ್ಯಾಪಾರ ಒಪ್ಪಂದವನ್ನು ಸೇರಲು ನಿರ್ಧರಿಸಿದರೆ, ಅದು ಭಾರತದ ಸರಕು ತಯಾರಿಕಾ ವಲಯ ಮತ್ತು ಕೃಷಿಗೆ ಹಾನಿಯುಂಟು ಮಾಡುತ್ತದೆ, ಮತ್ತು ದೇಶದ ಪ್ರಸಕ್ತ ಚಾಲ್ತಿ ಖಾತೆ ಕೊರತೆಯನ್ನು (ಕರೆಂಟ್ ಅಕೌಂಟ್ ಡೆಫಿಸಿಟ್) ಹೆಚ್ಚಿಸುತ್ತದೆ. ಇದು ಉದ್ಯೋಗ ಹಾಗೂ ಜನಗಳ ಕಲ್ಯಾಣದ ಮೇಲೆ ಗಂಭೀರವಾದ ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ ಎಂದು ಸಿಪಿಐ(ಎಂ) ಎಚ್ಚರಿಸಿದೆ.
ಭಾರತದ ಅರ್ಥವ್ಯವಸ್ಥೆಯನ್ನು ಅಗತ್ಯಕ್ಕಿಂತ ಮೊದಲು ತೆರೆದು ಕೊಡುವ ಹಿಂದಿನ ಸರಕಾರದ ನಿರ್ಧಾರಗಳಿಂದಾಗಿ ಭಾರ ದ ವ್ಯಾಪಾರ ಕೊರತೆ ಸತತವಾಗಿ ಏರುತ್ತ ಬರುತ್ತಿದೆ. ಅದೀಗ 184 ಬಿಲಿಯ ಅಮೆರಿಕನ್ ಡಾಲರ್ ಆಗಿದೆ. ಈ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ(ಎಫ್ ಟಿ ಎ) ಅದನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ. ಏಕೆಂದರೆ, ಈಗಿರುವ ಸುಮಾರಾಗಿ ಎಲ್ಲ ಎಫ್ ಟಿ ಎ ಭಾಗೀದಾರರೊಂದಿಗೆ ಭಾರತ ವ್ಯಾಪಾರ ಕೊರತೆಯನ್ನು ಹೊಂದಿದೆ.
ಭಾರತೀಯ ಸರಕು ತಯಾರಿಕಾ ವಲಯ ಈಗಾಗಲೇ ಮಂದಗತಿಯನ್ನು ಎದುರಿಸಬೇಕಾಗಿರುವ ಮತ್ತು ಗ್ರಾಮೀಣ ಸಂಕಟ ನಿಲ್ಲದೆ ಮುಂದುವರೆಯುತ್ತಿರುವ ಸಮಯದಲ್ಲಿ, ಆರ್.ಸಿ.ಇ.ಪಿ. ಅಡಿಯಲ್ಲಿ ಹೂಡಿಕೆ, ಬೌದ್ಧಿಕ ಆಸ್ತಿ ಹಕ್ಕುಗಳು, ಸೇವೆಗಳು ಮತ್ತು ಇ-ವಾಣಿಜ್ಯ ಕುರಿತಂತೆ ಆಶ್ವಾಸನೆಗಳನ್ನು ಕೊಡುವುದರೊಂದಿಗೇ, ಆಮದು ಸುಂಕಗಳನ್ನು ತೆಗೆದು ಹಾಕಿದರೆ, ಅದರಿಂದ ತಯಾರಿಕೆ ವಲಯದ ಪುನರುಜ್ಜೀವನಕ್ಕೆ ಮತ್ತು ಹರಡಿರುವ ಕೃಷಿ ಬಿಕ್ಕಟ್ಟನ್ನು ಮೀರಿ ನಿಲ್ಲಲು ಪರಿಣಾಮಕಾರೀ ಧೋರಣೆಯನ್ನು ರೂಪಿಸುವ ಸರಕಾರದ ಸಾಮರ್ಥ್ಯಕ್ಕೆ ಕಡಿವಾಣ ಬೀಳುತ್ತದೆ.
ಆದ್ದರಿಂದ ಸರಕಾರ ಈ ಒಪ್ಪಂದಕ್ಕೆ ತರಾತುರಿಯಿಂದ ಸಹಿ ಹಾಕಬಾರದು, ಇದರ ಕರಡನ್ನು ಮುಂಬರುವ ಸಂಸತ್ತಿನ ಅಧಿವೇಶನದ ಮುಂದೆ ಮಂಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.
ರೈತ ಸಂಘಟನೆಗಳು ಈ ಪ್ರಸ್ತಾವಿತ ಆರ್ ಸಿ ಇ ಪಿ ಯ ವಿರುದ್ಧ ನವಂಬರ್4 ರಂದು ನಡೆಸುರುವ ಅಖಿಲ ಭಾರತ ಪ್ರತಿಭಟನೆಯೊಂದಿಗೆ ಸೌಹಾರ್ದ ವ್ಯಕ್ತಪಡಿಸಿದೆ, ಅದನ್ನು ಬೆಂಬಲಿಸುವುದಾಗಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.