ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ : ಸಿಪಿಐ(ಎಂ) ಖಂಡನೆ

ಸುಪ್ರಿಂ ಕೋರ್ಟ್ ತೀರ್ಪಿನ ಭಂಡ ಉಲ್ಲಂಘನೆ, ಸಂವಿಧಾನದ ಮೇಲೆ ಮೋದಿ ಸರಕಾರದ ಇನ್ನೊಂದು ಪ್ರಹಾರ

ಮಹಾರಾಷ್ಟ್ರದಲ್ಲಿ ಏಕಾಏಕಿಯಾಗಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದೆ, ಇದನ್ನು  ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ. ಸನ್ಮಾನ್ಯ ರಾಜ್ಯಪಾಲರು ಎನ್‍ ಸಿ ಪಿ ಮುಖಂಡ ಶ್ರೀ ಶರದ್‍ ಪವಾರ್ ಅವರಿಗೆ ಸರಕಾರವನ್ನು ರಚಿಸಲಿಕ್ಕೆ ಚುನಾಯಿತ ಶಾಸಕರ ಬಹುಮತದ ಬೆಂಬಲದ ದಾವೆಯನ್ನು ಸಲ್ಲಿಸಲು ನವಂಬರ್‍ 12ರ ಸಂಜೆ 8.30ರ ವರೆಗೆ ಸಮಯಾವಕಾಶ ಕೊಟ್ಟಿದ್ದರು.

ಆದರೆ ತಾನು ನೀಡಿದ ಸಮಯಾವಕಾಶ ಮುಗಿಯುವ ಮೊದಲೇ ಅವರು ಭಾರತದ ರಾಷ್ಟ್ರಪತಿಗಳು ಕಲಮು 356ನ್ನು ಹೇರುವಂತೆ ಶಿಫಾರಸು ಮಾಡಿದ್ದಾರೆ.

ಪ್ರಧಾನ ಮಂತ್ರಿಗಳು ವಿದೇಶಕ್ಕೆ ಹೊರಡುವ ಸ್ವಲ್ಪವೇ ಮೊದಲು ತರಾತುರಿಯಲ್ಲಿ ಕರೆದ ಕೇಂದ್ರ ಸಂಪುಟದ ಸಭೆ ರಾಜ್ಯಪಾಲರ ಶಿಫಾರಸನ್ನು ಅನುಮೋದಿಸಿದೆ ಮತ್ತು ಅದನ್ನು ಸನ್ಮಾನ್ಯ ರಾಷ್ಟ್ರಪತಿಗಳಿಗೆ ಕೇಂದ್ರೀಯ ಆಳ್ವಿಕೆಯನ್ನು ಹೇರಲು ಕಳಿಸಲಾಗಿದೆ.

ಇವೆಲ್ಲವೂ ಬೊಮ್ಮಾಯಿ ಕೇಸಿನಲ್ಲಿ ಸುಪ್ರಿಂ ಕೋರ್ಟ್ ತೀರ್ಪನ್ನು ನೇರವಾಗಿ ಉಲ್ಲಂಘಿಸುತ್ತವೆ. ಒಂದು ಸರಕಾರವನ್ನು ರಚಿಸುವ ದಾವೆಯನ್ನು ಚುನಾಯಿತ ಸದಸ್ಯರ ಒಂದು ಬಹುಮತದ ಮೂಲಕ ಸ್ಥಾಪಿಸುವ ಏಕೈಕ ಸ್ಥಳವೆಂದರೆ ಸದನದ ವೇದಿಕೆಯೇ ಎಂದು ಆ ಕೇಸಿನಲ್ಲಿ ಅಸಂಧಿಗ್ಧವಾಗಿ ಹೇಳಲಾಗಿತ್ತು. ಕಾನೂನು ವಿಧಿಸಿರುವ ವಿಧಾನಗಳನ್ನು ಅನುಸರಿಸದೆ, ಬಿಜೆಪಿ ಈ ರೀತಿಯಲ್ಲಿ ವರ್ತಿಸಿ ನಮ್ಮ ಸಂವಿಧಾನಿಕ ವ್ಯವಸ್ಥೆಯನ್ನು ಭಂಡತನದಿಂದ ಉಲ್ಲಂಘಿಸಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ರಾಷ್ಟ್ರಪತಿ ಆಳ್ವಿಕೆಯ ಅವಧಿಯನ್ನು ಬಳಸಿಕೊಂಡು ಬಿಜೆಪಿ ಈ ಹಿಂದೆ ಹಲವು ರಾಜ್ಯಗಳಲ್ಲಿ ಮಾಡಿರುವಂತೆ ತನಗೆ ಒಂದು ಬಹುಮತವನ್ನು ತಯಾರಿಸಿಕೊಳ್ಳಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲ ವಿಧಾನಗಳಲ್ಲಿ ತೊಡಗುತ್ತದೆ ಎನ್ನುವುದು ಸ್ಪಷ್ಟ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ಇದು ಭಾರತೀಯ ಸಂವಿಧಾನದ ಮೇಲೆ ಈ ಮೋದಿ ಸರಕಾರದ ಇನ್ನೊಂದು ಪ್ರಹಾರವಾಗಿದೆ, ಇದನ್ನು ಎಲ್ಲ ಜಾತ್ಯತೀತ ಪ್ರಜಾಪ್ರಭುತ್ವವಾದಿ ಶಕ್ತಿಗಳು ದೃಢವಾಗಿ ವಿರೋಧಿಸಬೇಕು ಎಂದಿದೆ.

Leave a Reply

Your email address will not be published. Required fields are marked *