ವ್ಯಾಪಕ ಖಾಸಗೀಕರಣದ ವಿರುದ್ಧ ಡಿಸೆಂಬರ್‌ನಲ್ಲಿ ಒಂದು ತಿಂಗಳ ಪ್ರತಿಭಟನೆಗಳು,ಸಮಾವೇಶಗಳು, ಚಳುವಳಿಗಳು
ಸಾರ್ವಜನಿಕ ವಲಯವನ್ನು ದೊಡ್ಡ ಪ್ರಮಾಣದಲ್ಲಿ ಖಾಸಗೀಕರಿಸುವುದರ ವಿರುದ್ಧ ಡಿಸೆಂಬರ್ ತಿಂಗಳಿಡೀ ಪ್ರತಿಭಟನೆಗಳು, ಚಳುವಳಿಗಳು ಮತ್ತು ಸಮಾವೇಶಗಳನ್ನು ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಈ ಒಂದು ತಿಂಗಳ ಚಳುವಳಿ ಜನವರಿ 8, 2020ರ ಅಖಿಲ ಭಾರತ ಮುಷ್ಕರಕ್ಕೆ ಪಕ್ಷದ ಬೆಂಬಲವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಸಂಪನ್ನಗೊಳ್ಳುತ್ತದೆ ಎಂದು ನವಂಬರ್ 16 ಮತ್ತು 17ರಂದು ನವದೆಹಲಿಯಲ್ಲಿ ನಡೆದಪೊಲಿಟ್ ಬ್ಯುರೊ ಸಭೆಯ ನಿರ್ಧಾರಗಳನ್ನು ತಿಳಿಸುತ್ತ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಮರುದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೋದಿ ಸರಕಾರ ಸಾರ್ವಜನಿಕ ವಲಯದ ಒಂದು ದೊಡ್ಡ ಪ್ರಮಾಣದ ಖಾಸಗೀಕರಣಕ್ಕೆ ಕೈಹಾಕಿದೆ. ಇದು ಭಾರತದ ಸ್ವಾವಲಂಬೀ ಆಧಾರವನ್ನು ಧ್ವಂಸ ಮಾಡುವುದಲ್ಲದೆ, ಈ ಸರಕಾರದ ಕಾರ್ಪೊರೇಟ್ ಬಂಟರಿಗೆ ನೇರವಾಗಿ ಪ್ರಯೋಜನಗಳನ್ನು ಕೂಡ ಕೊಡಿಸುತ್ತದೆ. ಇಂತಹ ಖಾಸಗೀಕರಣ ದೇಶದಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಏರುತ್ತಿರುವ ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೆ, ಭಾರತೀಯ ಸಮಾಜದ ಅಂಚಿಗೆ ತಳ್ಳಲ್ಪಟ್ಟ ವಿಭಾಗಗಳು ಮೀಸಲಾತಿಯಿಂದ ಪಡೆದಿರುವ ಅಲ್ಪ-ಸ್ವಲ್ಪ ಪ್ರಯೋಜನವನ್ನೂ ಗಂಭೀರವಾಗಿ ಕ್ಷಯಿಸುತ್ತದೆ ಎಂದು ಪೊಲಿಟ್ ಬ್ಯುರೊಹೇಳಿದೆ.
ಈ ಪೊಲಿಟ್‌ಬ್ಯುರೊ ಸಭೆ ಅಯೋಧ್ಯಾ ವಿವಾದ, ಶಬರಿಮಲೆ ಪರಾಮರ್ಶೆ ಮತ್ತು ರಫೇಲ್ ವ್ಯವಹಾರ ಕುರಿತ ಸುಪ್ರಿಂ ಕೋರ್ಟ್ ತೀರ್ಪುಗಳು, ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ, ದೇಶದಲ್ಲಿನ ಆರ್ಥಿಕ ಸಂಕಟ, ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು, ಹೊಸ ಶಿಕ್ಷಣ ಧೋರಣೆ ಮತ್ತು ಬೊಲಿವಿಯಾದಲ್ಲಿ ಬಲಪಂಥೀಯ ಕ್ಷಿಪ್ರಕ್ರಾಂತಿಯ ಬಗ್ಗೆಯೂ ಚರ್ಚಿಸಿತು. ಈ ಸಭೆಯ ನಂತರ ಪೊಲಿಟ್ ಬ್ಯುರೊ ಪ್ರಕಟಿಸಿರುವ ಹೇಳಿಕೆಯನ್ನು ಈ ಮುಂದೆ ಕೊಡಲಾಗಿದೆ.
ಅಯೋಧ್ಯಾ ವಿವಾದ: ತೀರ್ಪು ನೀಡಲಾಗಿದೆ ; ನ್ಯಾಯ ನೀಡಿಲ್ಲ
ಅಯೋಧ್ಯಾ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಿಕೊಳ್ಳಬೇಕು, ಅದು ಸಾಧ್ಯವಾಗದಿದ್ದರೆ ಅದನ್ನು ಬಗೆಹರಿಸುವ ಏಕೈಕ ದಾರಿಯೆಂದರೆ ಒಂದು ನ್ಯಾಯಾಲಯದ ತೀರ್ಪಿನ ಮೂಲಕ, ಎಂದು ಸಿಪಿಐ(ಎಂ) ಸದಾ ಹೇಳುತ್ತ ಬಂದಿದೆ. ಈ ರೀತಿಯಲ್ಲಿ ಮಾತ್ರವೇ ಕಾನೂನಿನ ಆಳ್ವಿಕೆಯಿರುವ ಒಂದು ಜಾತ್ಯತೀತ ಗಣರಾಜ್ಯ ಇಂತಹ ಒಂದು ವಿವಾದವನ್ನು ನಿಭಾಯಿಸಬಹುದು. ಈಗ ತೀರ್ಪನ್ನು ನೀಡಲಾಗಿದೆ. ಆದರೆ ಈ ತೀರ್ಪಿನ ಕೆಲವು ಪ್ರಮೇಯಗಳು ಗಂಭೀರ ಪ್ರಶ್ನೆಗಳನ್ನು ಎತ್ತಿವೆ ಎಂದು ಪೊಲಿಟ್ ಬ್ಯುರೊ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಾಧೀಶರ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ “ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ತಾನು ಬದ್ಧ” ಎಂದೂ, “ಆಸ್ತಿಯನ್ನು ಕುರಿತ ನಾಗರಿಕ ದಾವೆಗಳ ನ್ಯಾಯನಿರ್ಣಯ ಜಾತ್ಯತೀತ ಪರಿಧಿಯೊಳಗೆ ಇರಬೇಕು….”, “ಹಕ್ಕುದಾರಿಕೆಯನ್ನು ನಂಬಿಕೆ ಮತ್ತು ವಿಶ್ವಾಸದ ಆಧಾರದಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ…..” ಎಂದೂ ಮತ್ತೆ-ಮತ್ತೆ ಹೇಳುತ್ತದೆ, ಆದರೆ ತೀರ್ಪಿನ ಕೊನೆಯಲ್ಲಿ ಕಾಣುವ ಫಲಿತಾಂಶದಲ್ಲಿ ಮಾತ್ರ ವಿವಾದದ ಒಂದು ಪಕ್ಷದ ನಂಬಿಕೆ ಮತ್ತು ವಿಶ್ವಾಸಗಳಿಗೆ ಅಗ್ರಸ್ಥಾನ ನೀಡಲಾಗಿದೆ. ಈ ಮೊಕದ್ದಮೆಯ ಅರ್ಜಿದಾರರ ದಾವೆಗಳನ್ನು ನಿಭಾಯಿಸುವ ಬದಲು ಈ ತೀರ್ಪು ಹಿಂದೂಗಳು ಮತ್ತು ಮುಸ್ಲಿಮರ ಬಗ್ಗೆ ಹೇಳುತ್ತ ವಿಷಯಾಂತರ ಮಾಡುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಡಿಸೆಂಬರ್ 1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದು ಕಾನೂನಿನ ಗಂಭೀರ ಉಲ್ಲಂಘನೆ ಎಂದು ನಿಸ್ಸಂದಿಗ್ಧವಾಗಿ ಹೇಳುತ್ತದೆ. ಆದರೆ, ಅಂತಿಮವಾಗಿ ಆ ಜಾಗವನ್ನು ಈ ಕ್ರಿಮಿನಲ್ ದಾಳಿಗೆ ಹೊಣೆಯಾದ ಶಕ್ತಿಗಳಿಗೇ ಒಪ್ಪಿಸುತ್ತದೆ. 1989ರಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯನ್ನು ವಿಶ್ವ ಹಿಂದೂ ಪರಿಷದ್‌ನ ಒಬ ಮುಖಂಡರು ಪ್ರತಿನಿಧಿಸಿದ್ದರು. ಆ ಸಂಘನೆಯ ನೇತೃತ್ವದ ಚಳುವಳಿಯೇ ಬಾಬ್ರಿ ಮಸೀದಿ ಧ್ವಂಸಕ್ಕೆ ಹಾದಿ ಮಾಡಿಕೊಟ್ಟದ್ದು.
ಡಿಸೆಂಬರ್ 1949ರಲ್ಲಿ ಮಸೀದಿಯೊಳಗೆ ಕಾನೂನುಬಾಹಿರವಾಗಿ ಮೂರ್ತಿಗಳನ್ನಿಟ್ಟು ಮಸೀದಿಯನ್ನು ಅಪವಿತ್ರಗೊಳಿಸಿದ್ದು ಕೂಡ ಒಂದು ಗಂಭೀರ ಕಾನೂನು ಉಲ್ಲಂಘನೆ ಎಂದು ತೀರ್ಪು ಹೇಳುತ್ತದೆ. ಆದರೂ ಇಡೀ ವಿವಾದಿತ ಜಾಗವನ್ನು ಕಾನೂನಿನ ಉಲ್ಲಂಘನೆ ಮಾಡಿದವರಿಗೇ ವಹಿಸಿ ಕೊಟ್ಟಿದೆ.
ಮಸೀದಿ ಕಟ್ಟಲು ಅಲ್ಲಿದ್ದ ಒಂದು ಮಂದಿರವನ್ನು ಕೆಡವಲಾಗಿದೆ ಎಂಬ ಹಿಂದುತ್ವ ಶಕ್ತಿಗಳ ದಾವೆಗೆ ಯಾವುದೇ ಸಾಕ್ಷ್ಯವನ್ನು ಭಾರತೀಯ ಪುರಾತತ್ವ ಸರ್ವೆ(ಎ.ಎಸ್.ಐ.) ಕಂಡುಕೊಂಡ ಸಂಗತಿಗಳು ಒದಗಿಸುವುದಿಲ್ಲ ಎಂದು ತೀರ್ಪು ಸ್ಪಷ್ಟವಾಗಿ ಹೇಳುತ್ತದೆ. ಆದರೆ, ಮುಂದುವರೆದು, 1528 ಮತ್ತು 1857ರ ನಡುವೆ ಬಾಬ್ರಿ ಮಸೀದಿಯ ಸಮಸ್ತ ರಚನೆ ಕೇವಲ ಮುಸ್ಲಿಮರ ಸುಪರ್ದಿಯಲ್ಲಿ ಇತ್ತು ಎಂದು ಸೂಚಿಸುವ ಯಾವುದೇ ಪುರಾವೆಯನ್ನು ನೀಡಲಾಗಿಲ್ಲ ಎಂದು ಹೇಳುತ್ತದೆ. 1528ರಲ್ಲಿ ಮಸೀದಿಯನ್ನು ಕಟ್ಟಿದಂದಿನಿಂದ ೧೮೫೬ರಲ್ಲಿ ಬ್ರಿಟಿಶರು ಅವಧ್ ಸಂಸ್ಥಾನವನ್ನು ವಶಪಡಿಸಿಕೊಳ್ಳುವ ವರೆಗೆ ಮೂರು ಶತಮಾನಗಳಿಗೂ ಹೆಚ್ಚು ಕಾಲ ಅದು, ಮೊದಲಿಗೆ ಮೊಗಲರ, ನಂತರ ಅವಧ್ ನವಾಬರ ಆಳ್ವಿಕೆಯಲ್ಲಿ ಇತ್ತು. ೧೮೫೭ರ ಮೊದಲು ವಿವಾದವಿರಲಿಲ್ಲ ಎಂಬ ಸಂಗತಿ ಅದು ಸಂಪೂರ್ಣವಾಗಿ ಮುಸ್ಲಿಮರ ಸ್ವಾಧೀನದಲ್ಲಿ ಇರಲಿಲ್ಲ, ಅಥವ ಅದನ್ನು ಪ್ರಾರ್ಥನೆ ಸಲ್ಲಿಸಲು ಬಳಸಲಾಗುತ್ತಿರಲಿಲ್ಲ ಎಂಬುದನ್ನೇನೂ ಸಾಬೀತು ಮಾಡಲು ಸಾಧ್ಯವಿಲ್ಲ. ತದ್ವಿರುದ್ಧವಾಗಿ, ಅದು ಸತತವಾಗಿ ತಮ್ಮ ಸುಪರ್ದಿಯಲ್ಲಿತ್ತು ಎಂಬ ಹಿಂದೂಗಳ ದಾವೆಯನ್ನು ಎತ್ತಿ ಹಿಡಿದಿರುವುದು ತಥ್ಯಗಳ ಆಧಾರದಲ್ಲಿ ಅಲ್ಲ. ನಂಬಿಕೆ ಮತ್ತು ವಿಶ್ವಾಸದ ಪ್ರದರ್ಶನ ಮೇಲುಗೈ ಪಡೆದಂತೆ ಕಾಣುತ್ತದೆ ಎಂದುಪೊಲಿಟ್ ಬ್ಯುರೊಅಭಿಪ್ರಾಯ ಪಟ್ಟಿದೆ.
ಈ ತೀರ್ಪು 1991ರ ಆರಾಧನೆಯ ಸ್ಥಳಗಳ ಕಾಯ್ದೆ ಎಲ್ಲ ಧರ್ಮಗಳು ಸಮಾನ ಎಂಬುದನ್ನು ಮತ್ತು ಜಾತ್ಯತಿತತೆಯನ್ನು ಎತ್ತಿ ಹಿಡಿಯುವ ಸಂವಿಧಾನಿಕ ಬಾಧ್ಯತೆಗಳನ್ನು ಜಾರಿಗೆ ತರುವ ಒಂದು ಕಾಯ್ದೆ ಎಂದು ಪುನರುಚ್ಚರಿಸುತ್ತದೆ. ಯಾವುದೇ ಆರಾಧನಾ ಸ್ಥಳ ಆಗಸ್ಟ್ ೧೫, ೧೯೪೭ರಂದು ಹೇಗಿತ್ತೋ ಅದನ್ನು ಬದಲಿಸಲು ಸಾಧ್ಯವಿಲ್ಲ. ಎಂದು ಅದು ಹೇಳುತ್ತದೆ. ಆದರೆ ಈ ತೀರ್ಪು ಕಾಶಿ ಅಥವ ಮಥುರಾದಂತಹ ಇತರ ಸ್ಥಳಗಳಲ್ಲಿ ಇಂತಹ ವಿವಾದಗಳನ್ನು ಭವಿಷ್ಯದಲ್ಲಿ ಎತ್ತದಂತೆ ನಿರ್ಬಂಧಿಸುವಲ್ಲಿ ವಿಫಲವಾಗಿದೆ. ಆರೆಸ್ಸೆಸ್ ಮುಖ್ಯಸ್ಥರು ಒಂದು ಮುಸುಕಿನ ಎಚ್ಚರಿಕೆಯಲ್ಲಿ ಕಾಶಿ ಮತ್ತು ಮಥುರಾದ ವಿವಾದಗಳು ಸದ್ಯಕ್ಕೆ ತಮ್ಮ ಅಜೆಂಡಾದಲ್ಲಿ ಇಲ್ಲ ಎಂದು ಸಾರಿದ್ದಾರೆ. ಇದೊಂದು ಅಶುಭಸೂಚಕ ಘೋಷಣೆ, ಭವಿಷ್ಯದಲ್ಲಿ ಯಾವಾಗ ಬೇಕಾದರೂ ಈ ವಿವಾದಗಳ ಮೇಲೆ ಭಾವೋದ್ರೇಕಗಳನ್ನು ಬಡಿದೆಬ್ಬಿಸಬಹುದು ಎಂಬುದರ ಸೂಚನೆಯಾಗಿದೆ. ಇಂತಹ ಸಾಧ್ಯತೆಗಳನ್ನು ನಿರ್ಬಂಧಿಸುವ ಒಂದು ದೃಢ ನಿರ್ಧಾರ ದೇಶದ ಅತ್ಯುನ್ನತ ನ್ಯಾಯಾಲಯದಿಂದ ವ್ಯಕ್ತಗೊಳ್ಳಲಿಲ್ಲ.
ಡಿಸೆಂಬರ್ 1949 ಮತ್ತು ಡಿಸೆಂಬರ್ 1992ರ ಘಟನೆಗಳನ್ನು ಗಂಭೀರ ಕಾನೂನು ಉಲ್ಲಂಘನೆಗಳು ಎಂದು ವರ್ಗಿಕರಿಸಿದ್ದರೂ ಇಂತಹ ಕ್ರಿಮಿನಲ್ ಕೃತ್ಯಗಳನ್ನು ಎಸಗಿದವರ ಬಗ್ಗೆ ನ್ಯಾಯ ತೀರ್ಪನ್ನು ನೀಡಲಿಲ್ಲ. ಬಾಬ್ರಿ ಮಸೀದಿ ಧ್ವಂಸಕ್ಕೆ ಹೊಣೆಗಾರರು ಎನ್ನಲಾಗಿರುವ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಕಲ್ಯಾಣ್ ಸಿಂಗ್ ಮುಂತಾದವರ ವಿರುದ್ಧ ಮೊಕದ್ದಮೆ ಸುಮಾರು 28 ವರ್ಷಗಳಿಂದ ನೆನಗುದಿಯಲ್ಲಿದೆ. ಇದನ್ನು ತ್ವರಿತಗೊಳಿಸಬೇಕು, ತಪ್ಪಿತಸ್ಥರನ್ನು ಶಿಕ್ಷಿಸಬೇಕು ಮತ್ತು ಸುಪ್ರಿಂ ಕೋರ್ಟಿನ ಈ ತೀರ್ಪು ಅದರಲ್ಲಿ ನ್ಯಾಯನೀಡಿಕೆಗೆ ಅಡ್ಡಿಯಾಗಬಾರದು ಎಂದು ಪೊಲಿಟ್ ಬ್ಯುರೊ ಹೇಳಿದೆ.
ಈಗಾಗಲೇ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡಿರುವ ಮತ್ತು ರಕ್ತಪಾತ ಹಾಗೂ ಉತ್ಪಾತಗಳನ್ನು ನಡೆಸಿರುವ ಈ ದೀರ್ಘಕಾಲದ ವಿವಾದವನ್ನು ಇತ್ಯರ್ಥಗೊಳಿಸಲು ಒಂದು ನ್ಯಾಯಾಂಗ ತೀರ್ಪನ್ನು ನೀಡಲಾಗಿದೆ.
ಶಬರಿಮಲೆ ಪರಾಮರ್ಶೆ-ಸಂದಿಗ್ಧ, ಅನಿಶ್ಚಿತ ಪರಿಸ್ಥಿತಿ ನಿರ್ಮಿಸಿರುವ ಬಹುಮತದ ತೀರ್ಪು
ಐವರು ಸದಸ್ಯರ ಸಂವಿಧಾನ ಪೀಠ ಶಬರಿಮಲೆಯಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ಸಪ್ಟಂಬರ್ ೨೦೧೮ರ ತೀರ್ಪಿನ ಪರಾಮರ್ಶೆ ಅರ್ಜಿಗಳ ಮತ್ತು ರಿಟ್ ಅರ್ಜಿಗಳ ವಿಚಾರಣೆ ನಡೆಸಬೇಕಾಗಿತ್ತು. ಪರಾಮರ್ಶೆ ಅರ್ಜಿಗಳ ವಿಲೇವಾರಿಯ ಬದಲು, ಎಂದಿನ ವಿಧಿ-ವಿಧಾನಗಳನ್ನು ಬಿಟ್ಟು, ಬಹುಮತದ ತೀರ್ಪು ಸಂವಿಧಾನದ ಅಡಿಯಲ್ಲಿ ವಿವಿಧ ಧಾರ್ಮಿಕ ಹಕ್ಕುಗಳನ್ನು ಪ್ರಸ್ತಾಪಿಸುತ್ತ ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸಿ ಏಳು ನ್ಯಾಯಾಧೀಶರ ಪೀಠಕ್ಕೆ ಕಳಿಸಿದೆ. ಇಬ್ಬರು ನ್ಯಾಯಾಧೀಶರ ಅಲ್ಪಮತದ ತೀರ್ಪು ಎಲ್ಲ ಮರುಪರಾಮರ್ಶೆ ಅರ್ಜಿಗಳನ್ನು ತಳ್ಳಿ ಹಾಕಿ ಸಪ್ಟಂಬರ್ ೨೦೧೮ರ ತೀರ್ಪನ್ನು ಎತ್ತಿ ಹಿಡಿದಿದೆ.
ಈಗಾಗಲೇ ನ್ಯಾಯಾಲಯದ ಇತರ ಪೀಠಗಳು ವಿಚಾರಣೆ ನಡೆಸುತ್ತಿರುವ ಇತರ ಧರ್ಮಗಳ ಮಹಿಳೆಯರ ಹಕ್ಕುಗಳಿಗೆ ಸಂಬಂಧಪಟ್ಟ ಇತರ ಸಂಗತಿಗಳತ್ತ ವಿಷಯಾಂತರ ಮಾಡಿ ಬಹುಮತದ ತೀರ್ಪು ೨೦೧೮ರ ತೀರ್ಪನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ ಮತ್ತು ಮರು ಪರಾಮರ್ಶೆ ಅರ್ಜಿಗಳ ವಿಚಾರಣೆಯನ್ನು ಬಾಕಿಯಿಟ್ಟು ಒಂದು ಸಂದಿಗ್ಧ ಮತ್ತು ಅನಿಶ್ಚಿತ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದಿರುವ ಪೊಲಿಟ್‌ಬ್ಯುರೊ, ಸಿಪಿಐ(ಎಂ)ಗೆ ಸಂಬಂಧಪಟ್ಟಂತೆ ಹೇಳುವುದಾದರೆ, ಎಲ್ಲ ರಂಗಗಳಲ್ಲಿ ಮಹಿಳಾ ಸಮಾನತೆಗೆ ಅದು ಬದ್ಧವಾಗಿದೆ, ಮತ್ತು ನ್ಯಾಯಾಲಯ ಆದಷ್ಟು ಬೇಗನೇ ಒಂದು ನಿರ್ಣಾಯಕ ನಿಲುವಿಗೆ ಬರಬೇಕು ಎಂದು ಬಯಸುವುದಾಗಿ ಹೇಳಿದೆ.
ರಫೆಲ್ ಆದೇಶ-ಪರಾಮರ್ಶೆಯಿಲ್ಲ, ತನಿಖೆಗೆ ಅವಕಾಶವಿದೆ ; ಜೆಪಿಸಿ ರಚಿಸಿ
ರಫೆಲ್ ವಿವಾದದ ಬಗ್ಗೆ ಮರಾಮರ್ಶೆ ಅರ್ಜಿಯನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸಿದೆ, ಆದರೆ ಸಿಬಿಐ ಅಥವ ಇತರ ಸಂಸ್ಥೆಗಳಿಂದ ಹಣ ದುರ್ಬಳಕೆ, ಭ್ರಷ್ಟಾಚಾರದ ಆಪಾದನೆಗಳ ತನಿಖೆಗೆ ಯಾವುದೇ ಅಡ್ಡಿಯಿಲ್ಲ ಎಂದಿದೆ. ಈ ಸರಕಾರದ ಅಡಿಯಲ್ಲಿ ಸಿಬಿಐನಿಂದ ತನಿಖೆಯ ಬಗ್ಗೆ ನಂಬಿಕೆ ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ಆದ್ದರಿಂದಲೇ ಸಿಪಿಐ(ಎಂ) ಈ ವಿವಾದ ಎದ್ದು ಬಂದಂದಿನಿಂದ, ಇದರಿಂದಾಗಿ ಸಾರ್ವಜನಿಕ ಖಜಾನೆಗೆ ಒಂದು ದೊಡ್ಡ ಪ್ರಮಾಣದ ಹಾನಿಯಾಗಿದೆ, ಅದರಿಂದ ಈ ಸರಕಾರದ ಬಂಟ ಕಾರ್ಪೊರೇಟ್ ಮಿತ್ರರಿಗೆ ಪ್ರಯೋಜನವಾಗಿರುವುದು ಬೆಳಕಿಗೆ ಬಂದಿರುವುದರಿಂದ, ಈ ಹಗರಣದ ತನಿಖೆಗೆ ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಬೇಕು ಎಂದು ಆಗ್ರಹಿಸುತ್ತ ಬಂದಿದೆ. ಮೋದಿ ಸರಕಾರ ಇದನ್ನು ಸ್ವೀಕರಿಸಲು ನಿರಾಕರಿಸುತ್ತದೆ. ಅದು ಬಹಳಷ್ಟು ಸಂಗತಿಗಳನ್ನು ಮುಚ್ಚಿಡಬಯಸುತ್ತದೆ ಎಂಬುದು ಸ್ಪಷ್ಟ.
ಈ ಹಗರಣದ ತನಿಖೆ ನಡೆಸಲು ಒಂದು ಜೆಪಿಸಿಯನ್ನು ರಚಿಸಬೇಕು ಎಂದು ತನ್ನ ಆಗ್ರಹವನ್ನು ಸಿಪಿಐ(ಎಂ) ಪುನರುಚ್ಚರಿಸಿದೆ.
ಜಮ್ಮು ಮತ್ತು ಕಾಶ್ಮೀರ-ಅನಿಶ್ಚಿತತೆ, ಭೀತಿ ಕಾಡುವ ಪರಿಸ್ಥಿತಿ ಮುಂದುವರೆಯಬಾರದು
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸಂರ್ಪಗಳು, ಸಾರ್ವಜನಿಕ ಸಾರಿಗೆ, ಚಲನವಲನಗಳಿಗೆ ನಿರ್ಬಂಧ ಹೇರಿ ನೂರು ದಿನಗಳಿಗಿಂತ ಹೆಚ್ಚಾಗಿದೆ. ಕೆಲವು ನಿರ್ಬಂಧಗಳನ್ನು ಸಡಿಲಿಸುವುದಾಗಿ ಪ್ರಕಟಿಸಿದರೂ, ಜನಗಳ ದೈನಂದಿನ ಬದುಕು ಅಪಾರ ಸಂಕಷ್ಟಗಳಿಂದಾಗಿ ಅಸ್ತವ್ಯಸ್ತಗೊಂಡೇ ಇದೆ.
ಹೆಚ್ಚಿನ ರಾಜಕೀಯ ಮುಖಂಡರು ಒಂದೋ ಕರಾಳ ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಬಂಧನದಲ್ಲಿದ್ದಾರೆ ಅಥವ ಗೃಹ ಬಂಧನದಲ್ಲೇ ಉಳಿದಿದ್ದಾರೆ. ಅವರನ್ನು ಬಂಧಿಸಿಲ್ಲ, ಅವರ ಮೇಲೆ ಯಾವುದೇ ಆಪಾದನೆಗಳಿಲ್ಲ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ನಿಜಸಂಗತಿಯೆಂದರೆ ಅವರು ತಮ್ಮ ಮನೆಗಳಿಂದ ಹೊರಹೋಗುವಂತಿಲ್ಲ, ಯಾರೂ ಅವರನ್ನು ಭೇಟಿಯಾಗುವಂತಿಲ್ಲ. ಇತರ ನೂರಾರು ಮಂದಿ ದೇಶದ ವಿವಿಧ ಜೈಲುಗಳಲ್ಲಿ ಬಂಧನದಲ್ಲಿದ್ದಾರೆ ಎಂದು ವರದಿಯಾಗಿದೆ. ನೂರು ದಿನಗಳಾದ ನಂತರವೂ ಎಷ್ಟು ಮಂದಿ, ಯಾವ ಆಪಾದನೆಗಳ ಮೇಲೆ ಬಂಧನದಲ್ಲಿದ್ದಾರೆ ಎಂಬುದರ ಸ್ಪಷ್ಟತೆ ಇಲ್ಲ.
ಜನಗಳ ಸಾಮಾನ್ಯ ಬದುಕುಗಳನ್ನು ಮತ್ತು ಚಟುವಟಿಕೆಗಳನ್ನು ಇನ್ನೂ ಬಾಧಿಸುತ್ತಿರುವ ಎಲ್ಲ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆಯಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಇಂಟರ್ನೆಟ್ ಮತ್ತು ಎಸ್‌ಎಂಎಸ್ ಗಳೂ ಈಗಲೂ ನಿರ್ಬಂಧಿತವಾಗಿದ್ದು, ಇದು ಅರ್ಥವ್ಯವಸ್ಥೆಯನ್ನು ಆತಂಕಕಾರಿಯಾಗಿ ತಟ್ಟಿದೆ. ಇಲ್ಲಿನ ಅರ್ಥವ್ಯವಸ್ಥೆ ಮುಖ್ಯವಾಗಿ ಪ್ರವಾಸೋದ್ಯಮ ಮತ್ತು ಹಣ್ಣುಗಳು, ಕೇಸರಿಯಂತಹ ವಾಣಿಜ್ಯ ಬೆಳೆಗಳ ಮಾರಾಟವನ್ನು ಅವಲಂಬಿಸಿದೆ. ಇವುಗಳಲ್ಲಿ ಹೆಚ್ಚಿನವುಗಳ ಆರ್ಡರುಗಳು ಮತ್ತು ಪಾವತಿಗಳು ಆನ್‌ಲೈನ್ ಮೂಲಕವೇ ಆಗುವಂತವುಗಳು. ಇವೆಲ್ಲ ಈಗಲೂ ಅಸ್ತವ್ಯಸ್ತಗೊಂಡಿವೆ.
ಇಲ್ಲಿನ ವಾರ್ಷಿಕ ಸೇಬು ವ್ಯಾಪಾರ 10,000 ಕೋಟಿ ರೂ.ಗಳಷ್ಟು ಇರುತ್ತದೆ. ಇದು ಸಂಪೂರ್ಣವಾಗಿ ಹಾಳಾಗಿದೆ. ಕೇಂದ್ರ ಸರಕಾರ ಇದೊಂದು ಪೊಲಿಟ್ ಬ್ಯುರೊಆಗ್ರಹಿಸಿದೆ.
ಬಂಧನದಲ್ಲಿಟ್ಟಿರುವ ಎಲ್ಲ ರಾಜಕೀಯ ಮುಖಂಡರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಸಂವಿಧಾನ ಖಾತ್ರಿಪಡಿಸಿರುವ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಮತ್ತೆ ನೆಲೆಗೊಳಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ಮುಖ್ಯವಾಗಿ, ಶಾಲಾ ಮಕ್ಕಳನ್ನು ಅಪಾರ ಭೀತಿ ಕಾಡುತ್ತಿದೆ, ಅವರ ಭವಿಷ್ಯ, ಉದ್ಯೋಗದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಇದು ಹೀಗೇ ಮುಂದುವರೆಯಲು ಬಿಡಲಾಗದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಆರ್ಥಿಕ ಸಂಕಟ-ಮಾಹಿತಿ ದಗಲ್ ಬಾಜಿತನ
ಜಿಡಿಪಿ ಬೆಳವಣಿಗೆ ಸತತ ಎರಡು ತ್ರೈಮಾಸಿಕಗಳಿಗಿಂತಲೂ ಹೆಚ್ಚು ಸಮಯದಿಂದ ಇಳಿಕೆ ತೋರಿಸುತ್ತಿದ್ದು ಭಾರತೀಯ ಅರ್ಥವ್ಯವಸ್ಥೆ ಹಿಂಜರಿತದ ಘಟ್ಟವನ್ನು ತಲುಪಿಯೇ ಬಿಟ್ಟಿರುವಂತಿದೆ. ಆದರೆ ಮೋದಿ ಸರಕಾರ ಇದನ್ನು ನಿರಾಕರಿಸುತ್ತಲೇ ಇದೆ. ಇದರ ಫಲಿತಾಂಶವೆಂದರೆ ನಮ್ಮ ಬಹುಪಾಲು ಜನಗಳ ಮೇಲೆ ಅಭೂತಪೂರ್ವ ಹೊರೆಗಳು ಬಿದ್ದಿವೆ. ಎನ್ ಎಸ್ ಎಸ್ ಒ. ಬಿಡುಗಡೆ ಮಾಡಿರುವ ಮಾಹಿತಿ ೨೦೧೭-೧೮ರಲ್ಲಿ ಬಳಕೆ ವಸ್ತುಗಳಿಗೆ ಜನ ಮಾಡುವ ವೆಚ್ಚದ ಪ್ರಮಾಣ ಗ್ರಾಮೀಣ ಭಾರತದಲ್ಲಿ ೮.೮ಶೇ.ದಷ್ಟು ಇಳಿದಿದೆ ಎಂದು ತೋರಿಸುತ್ತಿದೆ. ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಇದು ಇಳಿದಿದ್ದು, ಅದರಿಂದಾಗಿ ಬಡತನದ ಮಟ್ಟ ಏರಿರುವುದನ್ನು ಇದು ಸೂಚಿಸುತ್ತದೆ. ಸರಕಾರ ಈ ವರದಿಯನ್ನು ಈಗ ಮಾಹಿತಿ ಗುಣಮಟ್ಟ ಪ್ರಶ್ನೆಗಳಿಂದಾಗಿ ಹಿಂತೆಗೆದುಕೊಂಡಿದೆ. ಈ ಮೋದಿ ಸರಕಾರ ಮಾಹಿತಿಗಳ ದಗಲಿಬಾಜಿತನದಲ್ಲಿ ತೊಡಗಿದೆ. ಇಂತಹ ಮಾಹಿತಿಯ ಅವಿಶ್ವಸನೀಯತೆ ಭಾರತದ ಜಾಗತಿಕ ರೇಟಿಂಗ್‌ಗಳನ್ನೂ ತಟ್ಟುತ್ತಿದೆ.
ನಮ್ಮ ಅರ್ಥವ್ಯವಸ್ಥೆಯ ಎಲ್ಲ ವಲಯಗಳು, ಕೃಷಿ, ಕೈಗಾರಿಕೆ, ಮತ್ತು ಸೇವಾವಲಯ, ಎಲ್ಲವೂ ಮಂದಗತಿಗೆ ಒಳಗಾಗಿವೆ. ಕೈಗಾರಿಕಾ ಉತ್ಪಾದನೆ ಕಳೆದ ಎಂಟು ವರ್ಷಗಳಲ್ಲೇ ವಿಪರೀತ ಇಳಿಕೆ ದಾಖಲಿಸಿದೆ. ವಿದ್ಯುತ್ ಬೇಡಿಕೆ ಕಳೆದ ಹನ್ನೆರಡ ವರ್ಷಗಳಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಇಳಿದಿದೆ. ಜಿಡಿಪಿಯ ಎಲ್ಲ ಪ್ರಸಕ್ತ ಅಂದಾಜುಗಳು ಅದು ೫ಶೇ.ಕ್ಕಿಂತ ಕೆಳಕ್ಕೆ ಬೀಳುವ ಸಾಧ್ಯತೆಯನ್ನು ತೋರಿಸುತ್ತಿವೆ.
ನಿರುದ್ಯೋಗ ಮಟ್ಟ ಕಳದೆ ಐವತ್ತು ವರ್ಷಗಳಲ್ಲೇ ಅತ್ಯುನ್ನತ ಮಟ್ಟವನ್ನು ಮುಟ್ಟಿದೆ. ಮಾಹಿತಿ ತಂತ್ರಜ್ಞಾನ ವಲಯವೂ ಸೇರಿದಂತೆ ಎಲ್ಲ ವಲಯಗಳಲ್ಲೂ ಬೃಹತ್ ಪ್ರಮಾಣದಲ್ಲಿ ಲೇ-ಆಫ್, ರಿಟ್ರೆಂಚ್‌ಮೆಂಟ್‌ಗಳು ನಡೆಯುತ್ತಿವೆ.
ಇದರೊಂದಿಗೇ, ಮೋದಿ ಸರಕಾರ ಸಾರ್ವಜನಿಕ ವಲಯದ ಒಂದು ದೊಡ್ಡ ಪ್ರಮಾಣದ ಖಾಸಗೀಕರಣಕ್ಕೆ ಕೈಹಾಕಿದೆ. ಇದು ಭಾರತದ ಸ್ವಾವಲಂಬೀ ಆಧಾರವನ್ನು ಧ್ವಂಸ ಮಾಡುವುದಲ್ಲದೆ, ಈ ಸರಕಾರದ ಕಾರ್ಪೊರೇಟ್ ಬಂಟರಿಗೆ ನೇರವಾಗಿ ಪ್ರಯೋಜನಗಳನ್ನು ಕೂಡ ಕೊಡಿಸುತ್ತದೆ. ಇಂತಹ ಖಾಸಗೀಕರಣ ದೇಶದಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಏರುತ್ತಿರುವ ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೆ, ಭಾರತೀಯ ಸಮಾಜದ ಅಂಚಿಗೆ ತಳ್ಳಲ್ಪಟ್ಟ ವಿಭಾಗಗಳು ಮೀಸಲಾತಿಯಿಂದ ಪಡೆದಿರುವ ಅಲ್ಪ-ಸ್ವಲ್ಪ ಪ್ರಯೋಜನವನ್ನೂ ಗಂಭೀರವಾಗಿ ಕ್ಷಯಿಸುತ್ತದೆ.
ಈ ಆರ್ಥಿಕ ಹಿಂಜರಿತ ನಮ್ಮ ಬಹುಪಾಲು ಜನಗಳ ಕೊಳ್ಳುವ ಸಾಮರ್ಥ್ಯಗಳು ತೀವ್ರವಾಗಿ ಇಳಿದಿರುವುದರಿಂದಾಗಿ ಆಗಿದೆ. ಅರ್ಥ ವ್ಯವಸ್ಥೆಯನ್ನು ಸುಧಾರಿಸುವುದು ಹೇಗೆ ಎಂಬುದಕ್ಕೆ ಉತ್ತರ ಜನಗಳ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದರಲ್ಲಿ ಅಡಗಿದೆ. ಈ ಮೂಲಕ ಆಂತರಿಕ ಬೇಡಿಕೆಗಳ ಮಟ್ಟ ಏರುತ್ತದೆ, ಅದು ಮುಚ್ಚಿದ ಕಾರ್ಖಾನೆಗಳ ಪುನರುಜ್ಜೀವನಕ್ಕೆ ಹಾದಿ ಮಾಡಿಕೊಡುತ್ತದೆ. ಮೋದಿ ಸರಕಾರ ಕಾರ್ಪೊರೇಟ್‌ಗಳಿಗೆ ಎರಡು ಕಂತುಗಳಲ್ಲಿ ೨.೧೫ ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಕಡಿತಗಳನ್ನು ಮತ್ತು ಇತರ ಪ್ರಯೋಜನಗಳನ್ನು ಪ್ರಕಟಿಸಿದೆ. ಆ ಮೂಲಕ ಅವರು ತಮ್ಮ ಹೂಡಿಕೆಗಳನ್ನು ಹೆಚ್ಚಿಸುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಹೆಚ್ಚಿನ ಹೂಡಿಕೆಯಿಂದಲೇ ಅರ್ಥವ್ಯವಸ್ಥೆ ಪುನರುಜ್ಜೀವನ ಸಾಧ್ಯವಿಲ್ಲ, ಇಂತಹ ಹೊಸ ಹೂಡಿಕೆಗಳು ಉತ್ಪಾದಿಸಿದುದನ್ನು ಕೊಳ್ಳುವ ಸಾಮರ್ಥ್ಯ ಜನಗಳಲ್ಲಿ ಹೆಚ್ಚದೆ ಅದು ಸಾಧ್ಯವಿಲ್ಲ. ಈ ಖರೀದಿ ಸಾಮರ್ಥ್ಯವೇ ಸರಕಾರದ ಪರಿಹಾರಗಳು ಎಂಬುದರಿಂದಾಗಿ ಮತ್ತಷ್ಟು ಹದಗೆಡುತ್ತವೆ.
ಇದರ ಬದಲು, ಈ ೨.೧೫ಲಕ್ಷ ಕೋಟಿ ರೂ.ಗಳನ್ನು ನಮ್ಮ ಬಹು ಅಗತ್ಯವಿರುವ ಸಾಮಾಜಿಕ, ಆರ್ಥಿಕ ಮೂಲರಚನೆಗಳನ್ನು ಕಟ್ಟುವ ಸಾರ್ವಜನಿಕ ಹೂಡಿಕೆಗಳನ್ನು ವಿಸ್ತರಿಸಲು ಬಳಸಿದ್ದರೆ, ಇದು ನಮ್ಮ ಲಕ್ಷಾಂತರ ಹತಾಶ ಯುವಜನರಿಗೆ ಹೊಸ ಉದ್ಯೋಗಗಳನ್ನು ನಿರ್ಮಿಸುತ್ತಿತ್ತು. ಅವರು ತಮ್ಮ ಆದಾಯಗಳನ್ನು ಖರ್ಚು ಮಾಡಲಾರಂಭಿಸಿದರೆಂದರೆ, ಆಂತರಿಕ ಬೇಡಿಕೆಗಳು ಏರುತ್ತಿದ್ದವು, ಇವು, ಅರ್ಥವ್ಯವಸ್ಥೆ ಸುಧಾರಿಸಿಕೊಳ್ಳುವ ಪ್ರಕ್ರಿಯೆಗೆ ಒತ್ತು ಕೊಡುತ್ತಿತ್ತು. ಕ್ರೂರ ಸಂಗತಿಯೆಂದರೆ, ಸರಕಾರ ಮನರೇಗದ ಅಡಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ ೧೩ ಕೋಟಿ ಜನಗಳಲ್ಲಿ ಎರಡು ಲಕ್ಷ ಜನಗಳನ್ನು ಕೆಲಸ ಕೊಡದೆ ಹಿಂದಕ್ಕೆ ಕಳಿಸಿದೆ.
ಆದರೆ ಈ ಮೋದಿ ಸರಕಾರ ವಿದೇಶಿ ಮತ್ತು ದೇಶೀ ಕಾರ್ಪೊರೇಟ್‌ಗಳಿಗೆ ಅವರ ಲಾಭಗಳನ್ನು ಗರಿಷ್ಟ ಮಟ್ಟಗಳಿಗೆ ಏರಿಸಿಕೊಳ್ಳಲು ಹೆಚ್ಚಿನ ದಾರಿಗಳನ್ನು ಕಲ್ಪಿಸಿಕೊಡುವ ಆಕಾಂಕ್ಷೆಯಿಂದ ಅವರಿಗೆ ರಿಯಾಯ್ತಿಗಳನ್ನು ಒದಗಿಸುತ್ತಿದ್ದರೆ, ನಮ್ಮ ಬಹುಪಾಲು ಜನಗಳನ್ನು ಇನ್ನಷ್ಟು ಕುಗ್ಗಿಸಿ ಬಿಡುವ ದುರ್ದೆಸೆಯತ್ತ ತಳ್ಳುತ್ತಿದೆ.
ರಾಜ್ಯ ವಿಧಾನಸಭಾ ಚುನಾವಣೆಗಳು- ಬಿಜೆಪಿ ಅಬ್ಬರದ ಪ್ರಭಾವ ಕುಂದುತ್ತಿರುವದನ್ನು ತೋರಿಸಿದೆ
ಮಹಾರಾಷ್ಟ್ರ ಮತ್ತು ಹರ‍್ಯಾಣಾ ವಿಧಾನಸಭಾ ಚುನಾವಣೆಗಳು ಮತ್ತು ಗುಜರಾತ, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಕೇರಳ ಮತ್ತು ಅಸ್ಸಾಂನಂತಹ ವಿವಿಧ ರಾಜ್ಯಗಳಲ್ಲಿ ಉಪಚುನಾವಣೆಗಳ ಫಲಿತಾಂಶಗಳು ಬಿಜೆಪಿ ತಿದಿಯೂದುತ್ತಿರುವ ಕೋಮುವಾದಿ ರಾಷ್ಟ್ರೀಯವಾದಿ ಅಬ್ಬರದ ಪ್ರಚೋದಕ ಅಪಪ್ರಚಾರದ ಪ್ರಭಾವ ಕುಂದುತ್ತಿದೆ ಎಂಬುದನ್ನು ತೋರಿಸಿದೆ.
ಜನಗಳ ಜೀವನಾಧಾರಗಳ ಮೇಲೆ ಆರ್ಥಿಕ ಹಿಂಜರಿತದಿಂದಾಗಿ ಹೆಚ್ಚುತ್ತಿರುವ ಹೊರೆಗಳ ಗಂಭೀರ ವಾಸ್ತವತೆ ಮುನ್ನೆಲೆಗೆ ಬರುತ್ತಿದೆ. ಇದು ಜನಗಳ ಹೆಚ್ಚುತ್ತಿರುವ ಆರ್ಥಿಕ ದುರ್ದೆಸೆಗಳ ವಿರುದ್ಧ ಜನಗಳ ಐಕ್ಯ ಹೋರಾಟಗಳನ್ನು ತೀವ್ರಗೊಳಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ಝಾರ್ಖಂಡ್: ಝಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಸಿಪಿಐ(ಎಂ) ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಜನಗಳ ಕಲ್ಯಾಣವನ್ನು ಉತ್ತಮಪಡಿಸುವುದಕ್ಕಾಗಿ ರಾಜ್ಯದಲ್ಲಿನ ಎಡಪಕ್ಷಗಳ ನಡುವೆ ತಿಳುವಳಿಕೆ ಬೆಸೆಯಲು ಒಂದುಗೂಡಬೇಕು ಎಂದು ಎಲ್ಲ ಎಡಪಕ್ಷಗಳಿಗೆ ಸಿಪಿಐ(ಎಂ) ಮನವಿ ಮಾಡಿದೆ.
ಹೊಸ ಶಿಕ್ಷಣ ಧೋರಣೆ- ಜನಗಳ ಹಕ್ಕು ಆಗಿರುವ ಬದಲು ಕೆಲವರ ಸೌಲಭ್ಯ
ಈ ಮೋದಿ ಸರಕಾರ ನಮ್ಮ ದೇಶದ ಶಿಕ್ಷಣ ಧೋರಣೆಯ ವಿವಿಧ ಅಂಶಗಳಲ್ಲಿ ಪ್ರಸ್ತಾವಿಸಿರುವ ತೀವ್ರ ಬದಲಾವಣೆಗಳಿಗೆ ಸಿಪಿಐ(ಎಂ)ನ ವಿರೋಧವಿದೆ. ಈಗಾಗಲೇ ಈ ಕುರಿತಂತೆ ಸಿಪಿಐ(ಎಂ)ನ ತರ್ಕಬದ್ಧ ಅಭಿಪ್ರಾಯವನ್ನು ಸಾರ್ವಜನಿಕರ ಮುಂದೆ ಇಡಲಾಗಿದೆ. ಈ ಹೊಸ ಧೋರಣೆ ಭಾರತದ ಭವಿಷ್ಯಕ್ಕೆ ಮಾರಕವಾದ ಮತ್ತು ಶಿಕ್ಷಣವನ್ನು ಜನಗಳ, ಅದರಲ್ಲೂ ನಮ್ಮ ಮಕ್ಕಳ ಒಂದು ಹಕ್ಕು ಆಗಿಸುವ ಬದಲು ಕೆಲವರ ಒಂದು ವಿಶೇಷ ಸೌಲಭ್ಯವಾಗಿಸುವ ಪ್ರಸ್ತಾವಗಳನ್ನು ಹೊಂದಿದೆ.
ಇದು ನಮ್ಮ ದೇಶದ ಹಿತಗಳಿಗೆ ಮತ್ತು ನಮ್ಮ ಜನಗಳ ಭವಿಷ್ಯಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಧೋರಣೆ ಎಂದಿರುವ ಪೊಲಿಟ್‌ಬ್ಯುರೊ ಈ ಶಿಕ್ಷಣ ಧೋರಣೆಗೆ ವಿರುದ್ಧವಾಗಿರುವ ಎಲ್ಲ ಪ್ರಜಾಪ್ರಭುತ್ವವಾದಿ ಜನವಿಭಾಗಗಳನ್ನು ಒಂದು ರಾಷ್ಟ್ರೀಯ ಪ್ರಚಾರಾಂದೋಲನದಲ್ಲಿ ಮತ್ತು ಸರಕಾರ ಈ ಧೋರಣೆಯನ್ನು ಹಿಂತೆಗೆದುಕೊಳ್ಳುವಂತೆ ಬಲವಂತಕ್ಕೊಳಪಡಿಸುವ ಒಂದು ಪ್ರತಿಭಟನಾ ಚಳುವಳಿಯಲ್ಲಿ ಒಟ್ಟುಗೂಡಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುವುದು ಎಂದಿದೆ.
ಬೊಲಿವಿಯಾದಲ್ಲಿ ಬಲಪಂಥೀಯ ಕ್ಷಿಪ್ರಕ್ರಾಂತಿ
ಬೊಲಿವಿಯಾದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಆ ದೇಶದ ಮೊದಲ ಮೂಲನಿವಾಸಿ ಅಧ್ಯಕ್ಷ ಇವೊ ಮೊರಲೆಸ್ ಸರಕಾರವನ್ನು ಪದಚ್ಯುತಗೊಳಿಸಿರುವ ಬಲಪಂಥೀಯ ಕ್ಷಿಪ್ರಕ್ರಾಂತಿಯನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ.
ಹಲವು ಲ್ಯಾಟಿನ್ ಅಮೆರಿಕಾ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿಯ ನೇರ ಮತ್ತು ಭಂಡ ಹಸ್ತಕ್ಷೇಪ ವಿವಿಧ ದೇಶಗಳಲ್ಲಿ ಜನಗಳಿಂದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಡ ಒಲವಿನ ಸರಕಾರಗಳನ್ನು ಉರುಳಿಸಲು ಬಲಪಂಥೀಯ ಶಕ್ತಿಗಳಲ್ಲಿ ಧೈರ್ಯ ತುಂಬಿದೆ. ಬ್ರೆಝಿಲ್‌ನಲ್ಲಿ ಸ್ವಯಂ ಘೋಷಿತ ಫ್ಯಾಸಿಸ್ಟ್ ಬೊಲ್ಸನಾರೊ ತುಸು ಎಡಪಂಥದತ್ತ ವಾಲಿದ್ದ ಸರಕಾರವನ್ನು ಬಲಪಂಥೀಯ ಪ್ರತಿಗಾಮಿ ಅಸ್ಥಿರತೆ ಉಂಟು ಮಾಡಿ ಮತ್ತು ಮಾಜಿ ಅಧ್ಯಕ್ಷರಾದ ಲೂಲ ಮತ್ತು ದಿಲ್ಮಾ ರೌಸೆಫ್‌ರನ್ನು ಬಂಧಿಸಿದ ನಂತರ ಚುನಾಯಿತರಾದರು. ಮೋದಿ ಸರಕಾರ ಈತನನ್ನು ಭಾರತದ ೨೦೨೦ರ ಗಣರಾಜ್ಯ ದಿನದ ಪರೇಡಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ನಿರೀಕ್ಷಿತವೇ ಆಗಿದೆ.
ಅಮೆರಿಕಾ ಸಾಮ್ರಾಜ್ಯಶಾಹಿ ವೆನೆಝುವೆಲಾದಲ್ಲಿ ಭಂಡತನದಿಂದ ಹಸ್ತಕ್ಷೇಪ ಮಾಡುವುದನ್ನು ಮುಂದುವರೆಸಿದೆ. ಅದು ಮದುರೊ ಸರಕಾರದ ಮೇಲೆ ಗುರಿಯಿಟ್ಟಿದೆ, ಮದುರೊ ಸರಕಾರವನ್ನು ಅಸ್ಥಿರಗೊಳಿಸಲು ನೇರವಾಗಿ ನೆರವಾಗುತ್ತಿದೆ ಮತ್ತು ಹಣಕಾಸನ್ನೂ ಒದಗಿಸುತ್ತಿದೆ.
ಆದರೆ ಇಂತಹ ಬಲಪಂಥೀಯ ದಾಳಿಗಳಿಗೆ ಪ್ರತಿರೋಧವೂ ಅರ್ಜೆಂಟಿನಾ, ಚಿಲಿ ಮುಂತಾದ ದೇಶಗಳಲ್ಲಿ ಕಾಣ ಬರುತ್ತಿದೆ.
ಈ ಖಂಡದಲ್ಲಿ ರಾಜಕೀಯ ಬಲಪಂಥ ಮತ್ತು ರಾಜಕೀಯ ಎಡಪಂಥದ ನಡುವಿನ ಹೋರಾಟ ರಾಜಕಾರಣದ ಭವಿಷ್ಯದ ದಾರಿಯನ್ನು ರೂಪಿಸಲಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊಅಭಿಪ್ರಾಯಪಟ್ಟಿದೆ.
Good defniation and diciation. Lal salam.