ಇದೊಂದು ಕೋಟ್ಯಂತರ ರೂ.ಗಳ ಅನಗತ್ಯ ದುಂದುವೆಚ್ಚದ ಪ್ರಕ್ರಿಯೆ
ಗೃಹಮಂತ್ರಿ ಅಮಿತ್ ಷಾ ಇಡೀ ದೇಶಕ್ಕೆ ಒಂದು ಎನ್.ಆರ್.ಸಿ. (ರಾಷ್ಟ್ರೀಯ ಪೌರತ್ವ ದಾಖಲೆ) ರಚಿಸಲಾಗುವುದು, ಅದರೊಂದಿಗೆ ಅಸ್ಸಾಂನಲ್ಲಿ ಎನ್.ಆರ್.ಸಿ. ಯನ್ನು ಪುನರಾವರ್ತಿಸಲಾಗುವುದು ಎಂದು ಸಂಸತ್ತಿನಲ್ಲಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ರೀತಿ ಎನ್.ಆರ್.ಸಿ.ಯನ್ನು ಇಡೀ ದೇಶಕ್ಕೆ ವಿಸ್ತರಿಸಿವುದಕ್ಕೆ ತನ್ನ ವಿರೋಧವನ್ನು ಪುನರುಚ್ಚರಿಸಿದೆ.
ಇದನ್ನು ಯಾವಾಗ ಕೈಗೊಳ್ಳಲಾಗುವುದು ಎಂದು ಅವರು ನಿರ್ದಿಷ್ಟವಾಗಿ ಹೇಳಿಲ್ಲವಾದರೂ, ಈ ಪ್ರಕ್ರಿಯೆ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್(ಎನ್.ಪಿ.ಆರ್)ಗೆ ಎಪ್ರಿಲ್ 1, 2020ರಿಂದ ಆರಂಭಗೊಳ್ಳುವ ಗಣತಿಯೊಂದಿಗೆ ಶುರುವಾಗಲಿದೆ. ಈ ಎನ್.ಪಿ.ಆರ್. ಆಧಾರದಲ್ಲಿ ಎನ್.ಆರ್.ಸಿ. ಯನ್ನು ಅಂತಿಮಗೊಳಿಸಲಾಗುವುದು.
ಈಗಾಗಲೇ ಆಧಾರ್ ಮತ್ತು ಮತದಾರರ ಫೋಟೋ ಗುರುತು ಪತ್ರ(ಇಪಿಐಸಿ) ಇರುವಾಗ, ಇದೊಂದು ಅನಗತ್ಯವಾದ, ದುಂದುವೆಚ್ಚದ ಪ್ರಕ್ರಿಯೆ. ಇದು ‘ವಿದೇಶೀಯರು’ ಎಂದು ಹಣೆಪಟ್ಟಿ ಹಚ್ಚಿರುವ ಕೆಲವು ವಿಭಾಗಗಳ ಮೇಲೆ ಗುರಿಯಿಡುವ ಆಳುವ ಪಕ್ಷದ ಅಜೆಂಡಾವನ್ನು ಈಡೇರಿಸಲಿಕ್ಕಾಗಿ ಮಾತ್ರವೇ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಅಸ್ಸಾಂನಲ್ಲಿ ಈ ಪ್ರಕ್ರಿಯೆಯ ಪುನರಾವರ್ತನೆಯನ್ನು ಕೂಡ ಬಲವಾಗಿ ವಿರೋಧಿಸಿದೆ.
ಅಲ್ಲಿ ಎನ್.ಆರ್.ಸಿ. ಪ್ರಕ್ರಿಯೆಯನ್ನು ಸುಪ್ರಿಂ ಕೋರ್ಟಿನ ಉಸ್ತುವಾರಿಯಲ್ಲಿ ಕೈಗೊಳ್ಳಲಾಗಿತ್ತು. ಈ ಇಡೀ ಪ್ರಕ್ರಿಯೆಗೆ 1600 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಅಗತ್ಯವಾಗಿರುವುದು ಆ ಪಟ್ಟಿಯಿಂದ ಹೊರಗಿಟ್ಟಿರುವ ಭಾರತೀಯ ನಾಗರಿಕರನ್ನು ಆ ಪಟ್ಟಿಯೊಳಕ್ಕೆ ತರುವುದು. ಇನ್ನೊಂದು ಎನ್.ಆರ್.ಸಿ. ಕಸರತ್ತು ಹೊಸ ಹೊರೆಗಳನ್ನು ಮತ್ತು ವಿವಿಧ ಜನವಿಭಾಗಗಳಲ್ಲಿ ಅಭದ್ರತೆಗಳನ್ನು ಹೇರುತ್ತದೆ. ಇದರಿಂದ ಜನಗಳನ್ನು ಕೋಮು ಆಧಾರದಲ್ಲಿ ಒಡೆಯುವ ಬಿಜೆಪಿಯ ಅಜೆಂಡಾಕ್ಕೆ ಮಾತ್ರವೇ ಪ್ರಯೋಜನ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.