ಚುನಾವಣಾ ಬಾಂಡುಗಳ ಯೋಜನೆ ಹೇಗೆ ಆಳುವ ಪಕ್ಷಕ್ಕೆ ಹಣಕಾಸು ಒದಗಿಸುವ ಒಂದು ಮಾರ್ಗವಾಗಿದೆ ಎಂಬುದು ಇತ್ತೀಚೆಗೆ ಬಯಲಾಗಿದ್ದು, ಇದು ಈ ರೀತಿ ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವುದು ಕೊನೆಗೊಳ್ಳಲೇಬೇಕು ಎಂಬುದನ್ನು ದೃಢಪಡಿಸಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಯಾರಿಗೂ ನಿಚ್ಚಳ ಬಹುಮತವಿಲ್ಲದ ಸ್ಥಿತಿ ಏರ್ಪಟ್ಟ ನಂತರ ಬಿಜೆಪಿಯ ಕುದುರೆ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿಕೊಡುವುದಕ್ಕಾಗಿ ಕಾಲಮಿತಿ ದಾಟಿದ ಚುನಾವಣಾ ಬಾಂಡುಗಳ ಮೊತ್ತವನ್ನು ಪಡೆಯಲು ಅನುಮತಿ ಕೊಡಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸೂಚನೆ ಕೊಡುವಂತೆ ಪ್ರಧಾನ ಮಂತ್ರಿ ಕಚೇರಿ ಹಣಕಾಸು ಮಂತ್ರಾಲಯಕ್ಕೆ ನಿರ್ದೇಶನ ನೀಡಿತ್ತು, ಇದು ಸ್ವತಃ ಹಣಕಾಸು ಮಂತ್ರಾಲಯವೇ ಹಾಕಿಕೊಟ್ಟ ನಿಯಮಗಳ ಉಲ್ಲಂಘನೆಯಾಗಿತ್ತು ಎಂದು ಈಗ ಬಯಲಾಗಿದೆ.
ಭಾರತೀಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯದ ದೃಷ್ಟಿಯಿಂದ ಈ ಚುನಾವಣಾ ಬಾಂಡುಗಳನ್ನು ತಕ್ಷಣವೇ ರದ್ದು ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.