- ಕಮ್ಯುನಿಸ್ಟ್ ಅಂತರ್ ರಾಷ್ಟ್ರೀಯವು ಸ್ಥಾಪನೆಯಾಗಿದ್ದು ಮಾರ್ಚ್ ೧೯೧೯ರಲ್ಲಿ. ಈ ಕಾಮಿಂಟರ್ನ್‌ನ ಮಾರ್ಗದರ್ಶನದಲ್ಲಿ ಹಲವಾರು ದೇಶಗಳ ಕಮ್ಯುನಿಸ್ಟ್ ಪಕ್ಷಗಳು ಸ್ಥಾಪಿಸಲ್ಪಟ್ಟವು. ಶ್ರಮಿಕ ವರ್ಗದ ಅಂತರ್ರಾಷ್ಟ್ರೀಯತೆಯು ಕಮ್ಯುನಿಸ್ಟ್ ಚಳುವಳಿಯ ಹಿಂದಿನ ಚಾಲನಾ ಶಕ್ತಿಯಾಗಿದ್ದ ಯುಗವಾಗಿತ್ತು ಅದು. ಅಂತರ್ರಾಷ್ಟ್ರೀಯ ಕಾರ್ಮಿಕ ವರ್ಗದ ಚಳುವಳಿಯನ್ನು ಬೆಳೆಸಲು ಕಮ್ಯುನಿಸ್ಟರು ರಾಷ್ಟ್ರೀಯ ಗಡಿಗಳನ್ನು ಮೀರಿ ನಿಂತರು. ಆದಕಾರಣ, ತಾಷ್ಕೆಂಟಿನಲ್ಲಿ ಸಿಪಿಐ ಸ್ಥಾಪನೆಯನ್ನು ಅದೊಂದು ವಿದೇಶದಲ್ಲಿ ಘಟಿಸಿದ್ದು ಎಂದು ನೋಡುವುದು ತಪ್ಪಾಗುತ್ತದೆ. ೧೯೨೫ ರ ಕಾನ್ಪುರ್ ಸಮ್ಮೇಳನದಂತೆ ರಾಷ್ಟ್ರೀಯ ಗಡಿಯೊಳಗೆ ಸ್ಥಾಪನೆಯಾದ ಪಕ್ಷದ ಘಟಕ ಮಾತ್ರವೇ ಅಪ್ಪಟವಾದದ್ದು ನಿಜವಾದದ್ದು ಎನ್ನುವುದು ಸಂಕುಚಿತ ರಾಷ್ಟ್ರೀಯತೆಯ ನೋಟವಾಗುತ್ತದೆ.
ಅಕ್ಟೋಬರ್ ೧೭, ೧೯೨೦ ರಂದು ತಾಷ್ಕೆಂಟಿನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ೧೦೦ನೇ ವರ್ಷಾಚರಣೆಯನ್ನು ವರ್ಷವಿಡೀ ಆಚರಿಸಲು ಸಿಪಿಐ(ಎಂ) ಮುಂದಾಗುತ್ತಿರುವಾಗ ಪಕ್ಷದ ಸ್ಥಾಪನೆಯ ನಿಜವಾದ ದಿನದ ಬಗ್ಗೆ ಜಿಜ್ಙಾಸೆ ಮತ್ತೆ ಎದ್ದಿದೆ. ಡಿಸೆಂಬರ್ ೨೬, ೧೯೨೫ ರಂದು ನಡೆದ ಕಾನ್ಪುರ್ ಕಮ್ಯುನಿಸ್ಟ್ ಸಮ್ಮೇಳನದ ದಿನವನ್ನೇ ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ದಿನವೆಂದು ಸಿಪಿಐ ಪರಿಗಣಿಸುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ.
ಈ ಅಂಕಣದಲ್ಲಿ, ಅಕ್ಟೋಬರ್ ೧೭, ೧೯೨೦ ರಲ್ಲಿನ ತಾಷ್ಕೆಂಟ್ ಸಭೆ, ಭಾರತದಲ್ಲಿ ಕಮ್ಯುನಿಸ್ಟ್ ಗುಂಪುಗಳ ರಚನೆ ಮತ್ತು ಅವುಗಳ ನಡುವಿನ ಸಂಬಂಧಗಳ ಕುರಿತು ನಾವೀಗಾಗಲೇ ಹೇಳಿದ್ದೇವೆ. ಹಿಂದಿನ ಸಂಚಿಕೆಯಲ್ಲಿ ೧೯೨೫ ರ ಕಾನ್ಪುರ್ ಕಮ್ಯುನಿಸ್ಟ್ ಸಮ್ಮೇಳನದ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದೇವೆ.
ಭಾರತ ಕಮ್ಯುನಿಸ್ಟ್ ಪಕ್ಷದ ಮೊದಲ ದಿನಗಳ ಒಂದು ಸಂಕ್ಷಿಪ್ತ ನೋಟವನ್ನು ನಮ್ಮ ಓದುಗರು ಪಡೆದಿದ್ದಾರೆ. ೧೯೨೦ ರಲ್ಲಿ ಸಿಪಿಐ ಸ್ಥಾಪನೆಯ ಕುರಿತು ಸಿಪಿಐ(ಎಂ)ನ ೧೦೦ನೇ ವರ್ಷಾಚರಣೆಯ ಬಗ್ಗೆ ಸಿಪಿಐ ಪ್ರತಿಕ್ರಿಯೆ ನೀಡಿ ೧೯೨೫ ರ ಸ್ಥಾಪನಾ ದಿನವನ್ನೇ ಏಕೆ ಪರಿಗಣಿಸಬೇಕೆಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ.
ನ್ಯೂ ಏಜ್ ಪತ್ರಿಕೆಯಲ್ಲಿನ ಲೇಖನವೊಂದರಲ್ಲಿ, ಅದರ ಸಂಪಾದಕ ಹಾಗೂ ಸಿಪಿಐನ ಕಾರ್ಯದರ್ಶಿ ಬಿನಯ್ ವಿಶ್ವಂ ಈ ಕುರಿತು ತಮ್ಮ ವಾದಗಳನ್ನು ಪ್ರತಿಪಾದಿಸಿದ್ದಾರೆ. ಹೇಗೆ ಅವಿಭಜಿತ ಸಿಪಿಐ ಪಕ್ಷವು ತನ್ನ ಸ್ಥಾಪನಾ ದಿನದ ಬಗ್ಗೆ ನಿರ್ಧಾರಕ್ಕೆ ಬಂತು ಎನ್ನುವುದನ್ನು ಸವಿಸ್ತಾರವಾಗಿ ನಿರೂಪಿಸಿದ್ದಾರೆ. ಸಿಪಿಐನ ಸ್ಥಾಪನಾ ದಿನವು ಡಿಸೆಂಬರ್ ೨೬, ೧೯೨೫ ಎಂದು ಪಕ್ಷದ ಕಾರ್ಯದರ್ಶಿ ಮಂಡಳಿಯು ಆಗಸ್ಟ್ ೧೯೫೯ ರಲ್ಲಿ ತೀರ್ಮಾನ ಮಾಡಿತು. ತದನಂತರದಲ್ಲಿ ಈ ಕುರಿತು ಪ್ರಶ್ನೆಗಳು ಎದ್ದಾಗಲೆಲ್ಲಾ ಆ ದಿನವನ್ನೇ ಸ್ಥಾಪನಾ ದಿನವೆಂದು ಪುನರುಚ್ಚರಿಸಲಾಗಿದೆ.
ಡಿಸೆಂಬರ್ ೧೯೨೫ರ ಕಾನ್ಪುರ್ ಸಮ್ಮೇಳನವು ಪಕ್ಷದ ಸ್ಥಾಪನಾ ದಿನವೆಂದು ಅವಿಭಜಿತ ಸಿಪಿಐ ತೀರ್ಮಾನ ಮಾಡಿದ್ದು ನಿಜ. ಆದರೆ ೧೯೬೪ ರಲ್ಲಿ ಸಿಪಿಐ(ಎಂ) ಸ್ಥಾಪನೆಯಾದ ನಂತರ, ಆಗ ಪ್ರಸ್ತುತವಾಗಿ ಸ್ಪಷ್ಟ ಅಭಿಪ್ರಾಯಕ್ಕೆ ಮತ್ತು ಅಂತಿಮ ಇತ್ಯರ್ಥಕ್ಕೆ ಬರಬೇಕಾಗಿದ್ದ ಇನ್ನೂ ಅನೇಕ ರಾಜಕೀಯ ಹಾಗೂ ಸೈದ್ಧಾಂತಿಕ ವಿಷಯಗಳಂತೆಯೇ ಈ ತೀರ್ಮಾನವನ್ನು ಪುನರ್ವಿಮರ್ಶೆ ಮಾಡಲಾಯಿತು. ಉದಾಹರಣೆಗೆ, ಪಕ್ಷದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ನಿರ್ಣಾಯಕ ಕಾರ್ಯಕ್ರಮವನ್ನು ಸಿಪಿಐ(ಎಂ) ೧೯೬೪ ರ ತನ್ನ ೭ನೇ ಮಹಾಧಿವೇಶನದಲ್ಲಿ ಅಂಗೀಕರಿಸಿತು. ಅದೇ ವರ್ಷ ಸಿಪಿಐ ಕೂಡ ತನ್ನ ೭ ನೇ ಮಹಾಧಿವೇಶನದಲ್ಲಿ ತನ್ನದೇ ಆದ ಕಾರ್ಯಕ್ರಮವೊಂದನ್ನು ಅಂಗೀಕರಿಸಿತು.
ಭಾರತ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಹಾಗೂ ಸಿಪಿಐ(ಎಂ) ಕೇಂದ್ರ ಸಮಿತಿಯ ಸದಸ್ಯರಾಗಿ ಚುನಾಯಿತರಾದ ಕಾಂ.ಮುಜಾಫರ್ ಅಹಮದ್ ಅವರ ಪ್ರಯತ್ನಗಳಿಂದಾಗಿ ಪ್ರಥಮತಃ ಸಿಪಿಐನ ಸ್ಥಾಪನಾ ದಿನದ ಪ್ರಶ್ನೆಯನ್ನು ಮತ್ತೆ ಎತ್ತಲಾಯಿತು.
ಈ ಪುನರ್ವಿಮರ್ಶೆಯ ಇತಿಹಾಸದ ಆಳಕ್ಕೆ ಹೋಗದೆ, ತಾಷ್ಕೆಂಟ್ ಸಭೆಯ ಸಾಕ್ಷ್ಯಾಧಾರಿತ ದಾಖಲೆಗಳ ಶೋಧನೆಯು ಆ ದಿನದ ಪುನರ್ವಿಮರ್ಶೆಗೆ ವೇಗ ನೀಡಿತು ಎಂಬುದನ್ನು ಮಾತ್ರ ಇಲ್ಲಿ ತಿಳಿಸುವುದು ಅಗತ್ಯ. ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ದೇವೇಂದ್ರ ಕೌಶಿಕ್‌ರವರು ಈ ಸಂಶೋಧನೆಗಾಗಿ ತಾಷ್ಕೆಂಟಿನಲ್ಲಿ ಮೂರು ವರ್ಷ ತಂಗಿದ್ದರು. ಉಜ್ಬೆಕಿಸ್ತಾನದ ರಾಜಧಾನಿಯಾಗಿರುವ ತಾಷ್ಕೆಂಟಿನಲ್ಲಿ ಉಜ್ಬೆಕಿಸ್ತಾನ್ ಕಮ್ಯುನಿಸ್ಟ್ ಪಕ್ಷದ ಪತ್ರಾಗಾರದಲ್ಲಿ ಸಿಪಿಐ ಸ್ಥಾಪನೆಗೆ ಸಂಬಂಧಪಟ್ಟ ದಾಖಲೆಗಳು ಅವರ ಸಂಶೋಧನೆಯ ಸಂದರ್ಭದಲ್ಲಿ ಸಿಕ್ಕವು.
ಅಲ್ಲಿಯ ತನಕ, ತಾಷ್ಕೆಂಟಿನಲ್ಲಿ ಸಭೆ ನಡೆದಿತ್ತು ಎಂದಷ್ಟೇ ತಿಳಿದಿತ್ತು, ಅದರ ದಿನಾಂಕ ಸ್ಪಷ್ಟವಿರಲಿಲ್ಲ. ಎಂ.ಎನ್.ರಾಯ್ ಕೂಡ ತಮ್ಮ ಆತ್ಮಕಥೆಯಲ್ಲಿ ನಿರ್ದಿಷ್ಟವಾಗಿ ದಿನಾಂಕವನ್ನು ನಮೂದಿಸಿರಲಿಲ್ಲ. ತಾಷ್ಕೆಂಟ್ ಸಭೆಯ ಆ ದಾಖಲೆಗಳ ಮತ್ತು ಅದರ ಕಾರ್ಯಕಲಾಪಗಳ ಆವಿಷ್ಕಾರವು ಸಿಪಿಐನ ಮೊದಲ ಘಟಕವು ಹೇಗೆ ಸ್ಥಾಪನೆಯಾಯಿತು ಎನ್ನುವುದರ ಸುಸಂಗತ ಚಿತ್ರಣವನ್ನು ನೀಡಿತು. ಆ ಗುಂಪಿನ ಕಮ್ಯುನಿಸ್ಟ್ ಗುಣದ ವಿಶ್ವಾಸಾರ್ಹತೆ ಪ್ರಶ್ನಾತೀತವಾಗಿತ್ತು. ಆ ಘಟಕದ ಸ್ಥಾಪನೆಗೆ ಆರಂಭದ ಶ್ರಮ ಹಾಕಿದ್ದ ಎಂ.ಎನ್.ರಾಯ್ ಅವರು ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ಎರಡನೇ ಮಹಾಧಿವೇಶನದಲ್ಲಿ ಮೆಕ್ಸಿಕನ್ ಕಮ್ಯುನಿಸ್ಟ್ ಪಕ್ಷದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಆದರೆ, ರಾಷ್ಟ್ರೀಯ ಹಾಗೂ ವಸಾಹತು ಪ್ರಶ್ನೆಗಳ ಮೇಲಿನ ಚರ್ಚೆಯಲ್ಲಿ ಅವರು ವಹಿಸಿದ ಪ್ರಮುಖ ಪಾತ್ರದಿಂದಾಗಿ ಮಹಾಧಿವೇಶನದ ನಂತರ ಅವರನ್ನು ಸೆಂಟ್ರಲ್ ಏಶಿಯಾಟಿಕ್ ಬ್ಯೂರೋದ ಸದಸ್ಯರನ್ನಾಗಿ ಮಾಡಲಾಯಿತು, ಅದರ ಕೇಂದ್ರ ತಾಷ್ಕೆಂಟ್ ಆಗಿತ್ತು. ಅವರ ಈ ಹೊಣೆಗಾರಿಕೆಯಿಂದಾಗಿ ಅವರು ತಮ್ಮ ಪತ್ನಿ ಇವೆಲಿನ್ ಟ್ರೆಂಟ್ ರಾಯ್ ಅವರ ಜತೆ ತಾಷ್ಕೆಂಟಿಗೆ ತೆರಳಿದರು. ಇವೆಲಿನ್ ಟ್ರೆಂಟ್ ಕೂಡ ತಮ್ಮ ಸಾಧನೆಯಿಂದಲೇ ಕಮ್ಯುನಿಸ್ಟರಾಗಿದ್ದವರು. ಎರಡು ಮಹಾಧಿವೇಶನಗಳ ನಡುವಿನ ಕಾಮಿಂಟರ್ನ್‌ನ ಎಲ್ಲಾ ಕೆಲಸಕಾರ್ಯಗಳನ್ನು ನಿಭಾಯಿಸುತ್ತಿದ್ದ ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ಕಾರ್ಯಕಾರಿ ಸಮಿತಿ(ಎಕ್ಸೆಕ್ಯುಟಿವ್ ಕಮಿಟಿ ಆಫ್ ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್ – ಇಸಿಸಿಐ)ಯ ಸದಸ್ಯರನ್ನಾಗಿ ಎಂ.ಎನ್.ರಾಯ್ ಅವರನ್ನು ತದನಂತರ ಚುನಾಯಿಸಲಾಯಿತು. ಕಾಮಿಂಟರ್ನ್‌ನಲ್ಲಿ ಅಂತಹ ಅಧಿಕಾರ ಹೊಂದಿದ್ದ ವ್ಯಕ್ತಿ ತಾಷ್ಕೆಂಟಿನಲ್ಲಿ ಮುಹಾಜಿರರ ನಡುವೆ ಕೆಲಸ ಮಾಡಲು ಆರಂಭಿಸಿ, ಅವರನ್ನು ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿಸಿಕೊಂಡರು.
೧೯೨೧ ರಲ್ಲಿ ಬರ್ಲಿನ್‌ನಲ್ಲಿದ್ದ ಭಾರತೀಯ ಕ್ರಾಂತಿಕಾರಿಗಳ ಗುಂಪೊಂದು ಮಾಸ್ಕೋಗೆ ಭೇಟಿ ನೀಡಿತು. ಅದರ ನೇತೃತ್ವವನ್ನು ಪ್ರಖ್ಯಾತ ಸ್ವಾತಂತ್ರ್ಯ ಹೋರಾmಗಾರ್ತಿಯಾಗಿದ್ದ ಸರೋಜಿನಿ ನಾಯ್ಡು ಅವರ ಸೋದರ ವೀರೇಂದ್ರನಾಥ್ ಚಟ್ಟೋಪಾಧ್ಯಾಯ ಅವರು ವಹಿಸಿದ್ದರು. ಅವರು ಮತ್ತು ಅವರ ಗುಂಪು ಭಾರತ ಸ್ವಾತಂತ್ರ್ಯ ಗಳಿಸುವುದಕ್ಕಿಂತ ಮುಂಚೆ ಕಮ್ಯುನಿಸ್ಟ್ ಪಕ್ಷ ಸ್ಥಾಪನೆ ಮಾಡುವುದರ ಪರವಾಗಿ ಇರಲಿಲ್ಲ. ಅದರ ಬದಲಾಗಿ ಅವರು ಭಾರತದ ಕ್ರಾಂತಿಕಾರಿ ಮಂಡಳಿ(ಇಂಡಿಯನ್ ರೆವಲ್ಯೂಷನರಿ ಬೋರ್ಡ್)ಯೊಂದಕ್ಕೆ ಕಾಮಿಂಟರ್ನ್ ಬೆಂಬಲ ನೀಡಬೇಕೆಂದು ಬಯಸಿದ್ದರು. ತಾಷ್ಕೆಂಟ್ ಪಕ್ಷವನ್ನು ವಿಸರ್ಜಿಸಬೇಕೆಂದು ಅವರು ಒತ್ತಾಯಿಸಿದರು ಮತ್ತು ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ಪಟ್ಟಿಯಿಂದ ಅದನ್ನು ಕಿತ್ತುಹಾಕಬೇಕೆಂದು ಕೇಳಿಕೊಂಡರು.
ಕಾಮಿಂಟರ್ನ್‌ನ ಆಯೋಗವೊಂದು ಅವರ ಮತ್ತು ಎಂ.ಎನ್.ರಾಯ್ ಅವರ ಅಭಿಪ್ರಾಯಗಳನ್ನು ಆಲಿಸಿತು. ಕಾಮಿಂಟರ್ನ್ ಆಯೋಗವು ಬರ್ಲಿನ್ ಗುಂಪಿನ ಬೇಡಿಕೆಯನ್ನು ಒಪ್ಪಲಿಲ್ಲ; ಏಕೆಂದರೆ, ವಸಾಹತು ದೇಶಗಳಲ್ಲಿ ರಾಷ್ಟ್ರೀಯ ವಿಮೋಚನೆಗಾಗಿ ಸಂಯುಕ್ತ ರಂಗದ ಜತೆ ಸೇರಿಕೊಳ್ಳುತ್ತಲೇ ಕಮ್ಯುನಿಸ್ಟ್ ಪಕ್ಷವು ತನ್ನ ಸ್ವತಂತ್ರ ಅಸ್ತಿತ್ವ ಹೊಂದಿರಲೇಬೇಕು ಎಂಬ ನಿರ್ಧಾರವನ್ನು ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯವು ಹೊಂದಿತ್ತು. ಕಾಮಿಂಟರ್ನ್ ತಾಷ್ಕೆಂಟ್ ಗುಂಪನ್ನು(ಅದಾಗಲೇ ವಿಸ್ತಾರ ಪಡೆದಿತ್ತು) ಭಾರತೀಯ ಕಮ್ಯುನಿಸ್ಟ್ ಗುಂಪು, ಅಥವಾ, ವಲಸಿಗ ಭಾರತ ಕಮ್ಯುನಿಸ್ಟ್ ಪಕ್ಷ ಎಂದು ಮಾನ್ಯ ಮಾಡುವ ತನ್ನ ನಿಲುವನ್ನು ಮುಂದುವರಿಸಿತು.
ಅದು ಭಾರತದ ಹೊರಗೆ ಸ್ತಾಪನೆಯಾದ ಘಟಕ, ಆದ್ದರಿಂದಲೇ, ಅದನ್ನು ಸಿಪಿಐನ ಸ್ಥಾಪನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ವಾದವು ಸಮರ್ಥನೀಯವಲ್ಲದ್ದು ಮತ್ತು ಸಂಕುಚಿತ ಮನೋಭಾವದ್ದು. ೧೯೨೦ರಲ್ಲಿ ತಾಷ್ಕೆಂಟ್ ಘಟಕ ಸ್ಥಾಪನೆಯಾದಾಗ, ಭಾರತದಲ್ಲಿ ಎಲ್ಲಿಯೂ ಕಮ್ಯುನಿಸ್ಟ್ ಗುಂಪುಗಳು ಅಸ್ತಿತ್ವದಲ್ಲಿ ಇರಲಿಲ್ಲ. ೧೯೨೨ರಲ್ಲಿ ಮಾತ್ರವೇ ಕೆಲವು ಗುಂಪುಗಳು ಅಸ್ತಿತ್ವಕ್ಕೆ ಬಂದವು, ಆದರೆ ಒಂದು ಕಮ್ಯುನಿಸ್ಟ್ ಪಕ್ಷವು ಹೇಗೆ ಕಾರ್ಯನಿರ್ವಹಿಸಬೇಕೆಂಬ ರಾಜಕೀಯ ಅಥವಾ ಸಂಘಟನಾತ್ಮಕ ಸ್ಪಷ್ಟತೆಯನ್ನು ಅವು ಪಡೆಯಲಾಗಿರಲಿಲ್ಲ. ಆಗಷ್ಟೆ ಗರಿಗೆದರುತ್ತಿದ್ದ ಕಮ್ಯುನಿಸ್ಟ್ ಗುಂಪುಗಳು ಮತ್ತು ಅವುಗಳ ಮುಖಂಡರ ಜತೆ ಸಂಪರ್ಕವನ್ನು ತಾಷ್ಕೆಂಟ್ ಘಟಕ ಸಾಧಿಸಿತ್ತು. ೧೯೨೧ ಮತ್ತು ೧೯೨೨ರಲ್ಲಿ ನಿರಂತರ ಪತ್ರಗಳನ್ನು ಮತ್ತು ಸಂದೇಶಗಳನ್ನು ಎಸ್.ಎ.ಡಾಂಗೆ(ಬೊಂಬಾಯಿ), ಮುಜಾಫರ್ ಅಹಮದ್(ಕಲ್ಕತ್ತಾ) ಮತ್ತು ಸಿಂಗಾರವೇಲು ಚೆಟ್ಟಿಯಾರ್(ಮದ್ರಾಸ್) ಅವರುಗಳಿಗೆ ಕಳಿಸಲಾಗಿತ್ತು.
೧೯೨೨ ರಲ್ಲಿ ಎಂ.ಎನ್.ರಾಯ್ ಮತ್ತು ತಾಷ್ಕೆಂಟಿನ ಘಟಕ ಬರ್ಲಿನ್ನಿಗೆ, ಅಲ್ಲಿಂದ ಕೆಲಸ ಮಾಡಲು ಸ್ಥಳಾತರಗೊಂಡಿತು. ತಾಷ್ಕೆಂಟಿನ ಆಷ್ಟು ದೂರದಿಂದ ಭಾರತದ ವಿವಿಧ ಪ್ರದೇಶಗಳಲ್ಲಿದ್ದ ಆಗತಾನೇ ರೂಪುಗೊಳ್ಳುತ್ತಿದ್ದ ಕಮ್ಯುನಿಸ್ಟರನ್ನು ಸಂಪರ್ಕಿಸುವುದು ಕಷ್ಟವಾಗುತ್ತದೆ ಎಂದು ಕಂಡುಕೊಂಡು ಬರ್ಲಿನ್ನಿಗೆ ಸ್ಥಳಾಂತರಿಸಬೇಕಾಯಿತು. ಮೇ ೧೯೨೨ ರಲ್ಲಿ, ವ್ಯಾನ್‌ಗಾರ್ಡ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್(ಭಾರತದ ವಿಮೋಚನೆಯ ನೇತಾರ) ಎಂಬ ಭಾರತ ಕಮ್ಯುನಿಸ್ಟ್ ಪಕ್ಷದ ಮೊದಲ ಪತ್ರಿಕೆಯನ್ನು ಬರ್ಲಿನ್ ನಿಂದ ಹೊರತರಲಾಯಿತು. ಬ್ರಿಟಿಷ್ ಸರ್ಕಾರದ ಕಣ್ತಪ್ಪಿಸಲು ಅದರ ಶೀರ್ಷಿಕೆಯಲ್ಲಿ ಅದು ಭಾರತ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಬಂಧ ಹೊಂದಿದೆ ಎಂದು ಮುದ್ರಿಸಿರಲಿಲ್ಲ. ಬ್ರಿಟಿಷ್ ಸರ್ಕಾರದ ನಿಷೇಧದ ಹೊರತಾಗಿಯೂ ಆ ಪತ್ರಿಕೆಯ ಪ್ರತಿಗಳು ಕಮ್ಯುನಿಸ್ಟರನ್ನು ತಲುಪುತ್ತಿದ್ದವು ಮತ್ತು ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಕಮ್ಯುನಿಸ್ಟ್ ಪಕ್ಷದ ಗುರಿ ಸಾಧನೆಗಾಗಿ ಅವರನ್ನು ಅಣಿನೆರೆಸಿಕೊಳ್ಳಲು ಸಹಾಯಕವಾಗಿತ್ತು. ಕೆಲವು ಸಂಚಿಕೆಗಳ ನಂತರ ಅದರ ಹೆಸರನ್ನು ಅಡ್ವಾನ್ಸ್ ಗಾರ್ಡ್ ಎಂದು ಬದಲಾಯಿಸಲಾಯಿತು. ಒಂದು ವರ್ಷದ ನಂತರ ಅದು ವ್ಯಾನ್‌ಗಾರ್ಡ್ ಆಗಿ ಹೊರಬರಲು ಪ್ರಾರಂಭಿಸಿತು. ಈ ಸಂಚಿಕೆಯ ನಂತರ ಪತ್ರಿಕೆಯು ಭಾರತ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಎಂದು ಘೋಷಿಸಲಾಯಿತು ಎಂಬ ಸಂಗತಿ ಮಹತ್ವಪೂರ್ಣವಾದದ್ದು ಎಂಬುದನ್ನು ಗಮನಿಸಬೇಕು.
ಆದ್ದರಿಂದಲೇ, ಬರ್ಲಿನ್ನಿನಿಂದ ಹೊರಬರುತ್ತಿದ್ದ ವ್ಯಾನ್‌ಗಾರ್ಡ್ ನ ಮೊದಲ ವರ್ಷಾಚರಣೆಯಂದು ಇಸಿಸಿಐ ನ ಅಧ್ಯಕ್ಷೀಯ ಮಂಡಳಿಯಿಂದ ಪತ್ರಿಕೆಗೆ ಬಂದ ಶುಭಾಶಯದ ಘೋಷಣೆ ಹೀಗಿತ್ತು: ಸ್ವತಂತ್ರ ಭಾರತ ಚಿರಾಯುವಾಗಲಿ ! ಭಾರತ ಕಮ್ಯುನಿಸ್ಟ್ ಪಕ್ಷ ಚಿರಾಯುವಾಗಲಿ ! ವ್ಯಾನ್‌ಗಾರ್ಡ್ ಚಿರಾಯುವಾಗಲಿ !
ತಾಷ್ಕೆಂಟ್ ಗುಂಪಿನ ಮುಖಂಡರು ನಡೆಸಿದ ಸೈದ್ಧಾಂತಿಕ ಕೆಲಸವನ್ನು ಕಡಿಮೆ ಅಂದಾಜು ಮಾಡಬಾರದು.
ಇ.ಎಂ.ಎಸ್.ನಂಬೂದಿರಿಪಾಡ್ ಅವರ ಪ್ರಕಾರ, ಎಂ.ಎನ್.ರಾಯ್ ಅವರ ಇಂಡಿಯಾ ಇನ್ ಟ್ರಾನ್ಸಿಷನ್(ಸಂಕ್ರಮಣದಲ್ಲಿ ಭಾರತ) ಪುಸ್ತಕವು ವಾಸ್ತವದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿನ ಭಾರತದ ಆರ್ಥಿಕತೆ, ಸಮಾಜ ವ್ಯವಸ್ಥೆ ಮತ್ತು ಸಿದ್ಧಾಂತಗಳ ಮಾರ್ಕ್ಸ್‌ವಾದಿ-ಲೆನಿನ್‌ವಾದಿ ವಿಶ್ಲೇಷಣೆಯ ಮೊದಲ ಆರಂಭ. ಸೈದ್ಧಾಂತಿಕ ಕೆಲಸಗಳ ಈ ಪರಂಪರೆಯನ್ನು ಮತ್ತು ಭಾರತೀಯ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಕ್ಸ್‌ವಾದಿ-ಲೆನಿನ್‌ವಾದಿ ತತ್ವದ ಅಳವಡಿಕೆಯನ್ನು ೧೯೩೪ ರಲ್ಲಿ ಉದಿಸಿದ ಕೇಂದ್ರೀಕೃತ ಮುಖಂಡತ್ವದ ಸಂಘಟಿತ ಭಾರತ ಕಮ್ಯುನಿಸ್ಟ್ ಪಕ್ಷವು ನಂತರದಲ್ಲಿ ಮುಂದುವರಿಸಿತು. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ೧೯೨೧ ರ ಅಹಮದಾಬಾದ್ ಅಧಿವೇಶನಕ್ಕೆ ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಸ್ವಾತಂತ್ರ್ಯದ ಘೋಷಣೆ ಎತ್ತಿದ್ದ ಪ್ರಣಾಳಿಕೆಯನ್ನು ತಾಷ್ಕೆಂಟ್ ಗುಂಪು ಕಳಿಸಿತ್ತು. ಹಸ್ರತ್ ಮೊಹಾನಿಯವರು ಅಧಿವೇಶನದಲ್ಲಿ ಆ ಬೇಡಿಕೆಯನ್ನು ಮಾರ್ದನಿಸಿದರು.
ಕಮ್ಯುನಿಸ್ಟ್ ಅಂತರ್ ರಾಷ್ಟ್ರೀಯವು ಸ್ಥಾಪನೆಯಾಗಿದ್ದು ಮಾರ್ಚ್ ೧೯೧೯ರಲ್ಲಿ. ಈ ಕಾಮಿಂಟರ್ನ್‌ನ ಮಾರ್ಗದರ್ಶನದಲ್ಲಿ ಹಲವಾರು ದೇಶಗಳ ಕಮ್ಯುನಿಸ್ಟ್ ಪಕ್ಷಗಳು ಸ್ಥಾಪಿಸಲ್ಪಟ್ಟವು. ಶ್ರಮಿಕ ವರ್ಗದ ಅಂತರ್ ರಾಷ್ಟ್ರೀಯತೆಯು ಕಮ್ಯುನಿಸ್ಟ್ ಚಳುವಳಿಯ ಹಿಂದಿನ ಚಾಲನಾ ಶಕ್ತಿಯಾಗಿದ್ದ ಯುಗವಾಗಿತ್ತು ಅದು. ಅಂತರ್ ರಾಷ್ಟ್ರೀಯ ಕಾರ್ಮಿಕ ವರ್ಗದ ಚಳುವಳಿಯನ್ನು ಬೆಳೆಸಲು ಕಮ್ಯುನಿಸ್ಟರು ರಾಷ್ಟ್ರೀಯ ಗಡಿಗಳನ್ನು ಮೀರಿ ನಿಂತರು. ಆದಕಾರಣ, ತಾಷ್ಕೆಂಟಿನಲ್ಲಿ ಸಿಪಿಐ ಸ್ಥಾಪನೆಯನ್ನು ಅದೊಂದು ವಿದೇಶದಲ್ಲಿ ಘಟಿಸಿದ್ದು ಎಂದು ನೋಡುವುದು ತಪ್ಪಾಗುತ್ತದೆ. ೧೯೨೫ ರ ಕಾನ್ಪುರ್ ಸಮ್ಮೇಳನದಂತೆ ರಾಷ್ಟ್ರೀಯ ಗಡಿಯೊಳಗೆ ಸ್ಥಾಪನೆಯಾದ ಪಕ್ಷದ ಘಟಕ ಮಾತ್ರವೇ ಅಪ್ಪಟವಾದದ್ದು ನಿಜವಾದದ್ದು ಎನ್ನುವುದು ಸಂಕುಚಿತ ರಾಷ್ಟ್ರೀಯತೆಯ ನೋಟವಾಗುತ್ತದೆ.
ಈ ವಿಷಯದಲ್ಲಿ, ಬಿನಯ್ ವಿಶ್ವಂ ಅನಗತ್ಯವಾದ ಅಂಶವನ್ನು ಎಳೆದು ತಂದಿದ್ದಾರೆ. ವರ್ಗ ಶತೃಗಳು ವಿದೇಶಿ ಬಣ್ಣ ಹಚ್ಚುವ ಹಾನಿಕಾರಕ ಪ್ರಚೋದಿತ ಯತ್ನಗಳ ಬಗ್ಗೆ ನೆನಪಿಡಬೇಕು. ತಾಷ್ಕೆಂಟ್ ಸಭೆಯಲ್ಲಿ ಪಾಲ್ಗೊಂಡ ಏಳು ಜನರಲ್ಲಿ ಇಬ್ಬರು ವಿದೇಶಿಯರು ಎಂಬ ಆಧಾರದಲ್ಲಿ ಶತೃಗಳು ನಮ್ಮ ಮೇಲೆ ತೀವ್ರ ದಾಳಿ ಮಾಡಬಹುದು. ಎಂದು ಅವರು ಟಿಪ್ಪಣಿ ಮಾಡಿದ್ದಾರೆ.
ಜಗತ್ತಿನ ಎಲ್ಲಾ ಕಡೆಗಳಲ್ಲಿಯೂ ಆಳುವ ವರ್ಗಗಳು ಕಮ್ಯುನಿಸ್ಟರನ್ನು ಮತ್ತು ಬೋಲ್ಶೆವಿಕರನ್ನು ವಿದೇಶಿ ಏಜಂಟರೆಂದು ಪರಿಗಣಿಸುತ್ತಿರುವಾಗ ಅವರ ಈ ಧೋರಣೆ ಅಚ್ಚರಿ ಉಂಟುಮಾಡುತ್ತಿದೆ. ಮಾರ್ಕ್ಸ್‌ವಾದಕ್ಕೆ ರಾಷ್ಟ್ರೀಯ ತತ್ವವಿಲ್ಲದೆ ಇರುವುದರಿಂದ ಅದಕ್ಕೆ ಯಾವಾಗಲೂ ವಿದೇಶಿ ಬಣ್ಣ ಬಳಿಯುವುದುಂಟು. ತಮ್ಮ ಕಾರ್ಮಿಕ ವರ್ಗದ ಅಂತರ್ರಾಷ್ಟ್ರೀಯತೆಯ ದೃಷ್ಟಿಕೋನ ಕುರಿತು ಕಮ್ಯುನಿಸ್ಟರಿಗೆ ಹೆಮ್ಮೆ ಇದೆ. ತಾಷ್ಕೆಂಟ್ ಸಭೆಯಲ್ಲಿ ಭಾಗವಹಿಸಿದ ಇಬ್ಬರು ವಿದೇಶಿಯರು ಇವೆಲಿನ್ ಟ್ರೆಂಟ್ ರಾಯ್ ಮತ್ತು ರೋಸಾ ಫಿತಿಂಗೋಫ್. ಇಬ್ಬರೂ ಕಮ್ಯುನಿಸ್ಟರಾಗಿದ್ದರು, ಒಬ್ಬರು ಅಮೆರಿಕಾ ಮೂಲದವರಾದರೆ ಮತ್ತೊಬ್ಬರು ರಷ್ಯಾದವರು. ಎಂ.ಎನ್.ರಾಯ್ ಅವರ ಮಡದಿಯಾಗಿದ್ದ ಇವೆಲಿನ್ ಟ್ರೆಂಟ್ ರಾಯ್ ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಭಾರತದಲ್ಲಿನ ಸನ್ನಿವೇಶವನ್ನು ವಿಶ್ಲೇಷಣೆ ಮಾಡುತ್ತಾ ಲೇಖನಗಳನ್ನು ಬರೆಯುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ತಾಷ್ಕೆಂಟಿನಲ್ಲಿ ಮತ್ತು ನಂತರ ಬರ್ಲಿನ್ನಿನಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಭಾರತ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಿತ ಘಟಕದ ಏಳು ಜನರಲ್ಲಿ ಇಬ್ಬರು ಮಹಿಳೆಯರಾಗಿದ್ದರು ಎಂಬುದರ ಬಗ್ಗೆ ಭಾರತದಲ್ಲಿನ ಕಮ್ಯುನಿಸ್ಟರು ಹೆಮ್ಮೆಪಡಬೇಕು.
ಇತಿಹಾಸವನ್ನು ಪರಿಷ್ಕರಿಸುವಾಗ ಭಾರತದಲ್ಲಿನ ಕಮ್ಯುನಿಸ್ಟ್ ಚಳುವಳಿಯ ಬೆಳವಣಿಗೆಯಲ್ಲಿ ವಿದೇಶಿ ಕಮ್ಯುನಿಸ್ಟರ ಪಾತ್ರವನ್ನು ಅಳಿಸಿ ಹಾಕಲಾಗದು. ಮೀರಠ್ ಪಿತೂರಿ ಪ್ರಕರಣದಲ್ಲಿನ ೩೩ ಆರೋಪಿಗಳಲ್ಲಿ ಮೂರು ಬ್ರಿಟಿಷ್ ಕಮ್ಯುನಿಸ್ಟರಿದ್ದರು ಎಂಬುದನ್ನು ನಾವು ನೆನೆಯಬೇಕು. ಅವರು ಬೆನ್ ಬ್ರಾಡ್ಲಿ, ಫಿಲಿಪ್ ಸ್ಪ್ರಾಟ್ ಮತ್ತು ಹೆಚ್.ಎಲ್.ಹಚಿನ್ಸನ್. ಭಾರತದಲ್ಲಿನ ಕಮ್ಯುನಿಸ್ಟ್ ಪಕ್ಷದ ಬೆಳವಣಿಗೆಗೆ ಸಹಾಯ ಮಾಡುವುದರಲ್ಲಿ ಬ್ರಿಟಿಷ್ ಪಕ್ಷದ ರಜನಿ ಪಾಮೆ ದತ್ ಮತ್ತು ಬೆನ್ ಬ್ರಾಡ್ಲಿ ಅವರ ಪಾತ್ರವನ್ನು ಭಾರತದ ಕಮ್ಯುನಿಸ್ಟರು ಮರೆಯಲು ಸಾಧ್ಯವಿಲ್ಲ.
ತಾಷ್ಕೆಂಟ್ ಕಮ್ಯುನಿಸ್ಟ್ ಪಕ್ಷದ ಘಟಕ ಹಾಗೂ ಕಾನ್ಪುರ್ ಕಮ್ಯುನಿಸ್ಟ್ ಸಮ್ಮೇಳನ ಎರಡೂ, ಪಕ್ಷದ ಕಾರ್ಯಕ್ರಮವನ್ನು ಅಂಗೀಕರಿಸಿಲ್ಲ. ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದೊಂದಿಗೆ ಒಂದು ಪೂರ್ಣಪ್ರಮಾಣದ ಕಮ್ಯುನಿಸ್ಟ್ ಪಕ್ಷವಾಗಿ ನೋಂದಾಯಿಸಲು ಒಂದು ಕಾರ್ಯಕ್ರಮವು ಅವರಿಗೆ ಆಧಾರವನ್ನು ಒದಗಿಸುತ್ತಿತ್ತು. ಆದ್ದರಿಂದ ಪಕ್ಷದ ಅಸಲಿ ಸ್ಥಾಪನೆಯನ್ನು ನಿರ್ಧರಿಸಲು ಇದು ಮಾನದಂಡವಾಗಲು ಸಾಧ್ಯವಿಲ್ಲ. ಕಾನ್ಪುರ್ ಸಮ್ಮೇಳನದ ನಂತರ ಕೂಡ ಅಲ್ಲಿ ಸ್ಥಾಪನೆಯಾದ ಪಕ್ಷದ ಘಟಕವು ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ನೋಂದಾವಣೆಗೆ ಅರ್ಜಿ ಸಲ್ಲಿಸಲಿಲ್ಲ ಎಂಬುದನ್ನು ಗಮನಿಸಬೇಕು.
ಕಮ್ಯುನಿಸ್ಟ್ ಚಳುವಳಿಯನ್ನು ಕಟ್ಟಲು ವಲಸಿಗ ಸಿಪಿಐ ತನ್ನ ಅನೇಕ ಸದಸ್ಯರುಗಳನ್ನು ಭಾರತಕ್ಕೆ ಕಳಿಸಿತು. ಅವರಲ್ಲಿನ ಅನೇಕರನ್ನು ಪೆಶಾವರ್ ಮತ್ತು ಕಾನ್ಪುರ್ ಪಿತೂರಿ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಕಳಿಸಲಾಯಿತು. ತಾಷ್ಕೆಂಟ್ ಮತ್ತು ಮಾಸ್ಕೋದಲ್ಲಿ ಕಮ್ಯುನಿಸ್ಟರಾದ ಫಿರೋಜುದ್ದಿನ್ ಮತ್ತು ಎಂ.ಎ.ಮಜೀದ್ ಅವರಂತಹ ಕೆಲವು ಮುಹಾಜಿರ್‌ಗಳು ಭಾರತದಲ್ಲಿನ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದರು.
ತಾಷ್ಕೆಂಟಿನಲ್ಲಿ ಸ್ಥಾಪನೆಯಾದ ಭಾರತ ಕಮ್ಯುನಿಸ್ಟ್ ಪಕ್ಷವು ಹೀಗೆ ೧೯೨೫ ರಲ್ಲಿ ಕಾನ್ಪುರದಲ್ಲಿ ನಡೆದ ಕಮ್ಯುನಿಸ್ಟ್ ಸಮ್ಮೇಳನದ ಜತೆ ತಾರ್ಕಿಕವಾದ ಸಂಬಂಧ ಹೊಂದಿದೆ. ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯಲ್ಲಿ ತಾಷ್ಕೆಂಟ್ ಮೊದಲ ಹೆಜ್ಜೆಯಾದರೆ, ಕಾನ್ಪುರ್ ಸಮ್ಮೇಳನವು ಪಕ್ಷದ ಬೆಳವಣಿಗೆಯಲ್ಲಿ ನಂತರದ ಹೆಜ್ಜೆ.
ಕನ್ನಡಕ್ಕೆ: ಟಿ.ಸುರೇಂದ್ರ ರಾವ್