ಸಂವಿಧಾನವನ್ನುಉಳಿಸುವಕೆಲಸವನ್ನುಐಕ್ಯತೆಯಿಂದಮಾಡಬೇಕಾಗಿದೆ- ಸೀತಾರಾಂ ಯೆಚುರಿ
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಸಂವಿಧಾನಿಕ ಮಾತ್ರವಲ್ಲ, ಸಂವಿಧಾನ ವಿರೋಧಿಯೂ ಆಗಿದೆ, ಸಂವಿಧಾನದ ಮೂಲ ಆಶಯಗಳಿಗೇ ವಿರುದ್ಧವಾಗಿದೆ, ಆದ್ದರಿಂದ ಸಿಪಿಐ(ಎಂ) ಇದಕ್ಕೆ ಸವಾಲು ಹಾಕಿ ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಡಿಸೆಂಬರ್ ೧೬ರಂದು ಕೇಂದ್ರ ಸಮಿತಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಿಎಎ ಅಸ್ಸಾಂ ಒಪ್ಪಂದವನ್ನು ಕೂಡ ಉಲ್ಲಂಘಿಸುತ್ತದೆ. ಏಕೆಂದರೆ ಅದರಲ್ಲಿ ನಮೂದಿಸಿರುವ ದಿನಾಂಕ ಮಾರ್ಚ್ ೨೪, ೧೯೭೧, ಈ ತಿದ್ದುಪಡಿ ಅದನ್ನು ಡಿಸೆಂಬರ್೩೧, ೨೦೧೪ಕ್ಕೆ ಒಯ್ದಿದೆ. ಅಲ್ಲದೆ ಅಲ್ಲಿ ಯಾವುದೇ ಧರ್ಮದ ಪ್ರಸ್ತಾಪವಿಲ್ಲ.
ಈ ತಿದ್ದುಪಡಿಯ ವಿರುದ್ಧ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಉಂಟಾಗಿರುವ ಉದ್ರಿಕ್ತ ಪರಿಸ್ಥಿತಿ, ಮತ್ತು ದೇಶಾದ್ಯಂತವೂ ವ್ಯಕ್ತವಾಗುತ್ತಿರುವ ಪ್ರತಿಭಟನೆ, ಅದರಲ್ಲೂ ಜಾಮಿಯಾ ಮಿಲಿಯದಲ್ಲಿ ಪೋಲೀಸರ ಅಮಾನುಷ ವರ್ತನೆಗೆ ದೇಶಾದ್ಯಂತ ವಿದ್ಯಾರ್ಥಿಗಳು ವ್ಯಕ್ತಪಡಿಸುತ್ತಿರುವ ಆಕ್ರೋಶದ ಬಗ್ಗೆಯೂ ಯೆಚುರಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು.
ಪ್ರಧಾನ ಮಂತ್ರಿಗಳ ಸ್ಥಾನಕ್ಕೆ ಕುಂದು ತರುವ ಮಾತುಗಳು:
ದೇಶದಲ್ಲಿ ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದೇ ಇದರ ಉದ್ದೇಶ ಎಂಬುದು ಪ್ರಧಾನ ಮಂತ್ರಿಗಳಿಂದ ಹಿಡಿದು ಕೆಳಗಿನ ವರೆಗೂ ಬಿಜೆಪಿಯ ಮುಖಂಡರುಗಳ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ಅವರೆಲ್ಲ ಇದಕ್ಕೆ ಹಿಂದು-ಮುಸ್ಲಿಂ ಬಣ್ಣ ಕೊಡಲು ಪ್ರಯತ್ನಿಸುತ್ತಿದ್ದಾರೆ. ಸ್ವತಃ ಮೋದಿಯವರು ಝರ್ಖಂಡ್ನಲ್ಲಿ ಚುನಾವಣಾ ಸಭೆಯೊಂದರಲ್ಲಿ ಇದನ್ನು ವಿರೋಧಿಸುವವರು ಯಾರು ಎಂಬುದನ್ನು ಅವರು ತೊಟ್ಟಿರುವ ಬಟ್ಟೆಗಳಿಂದಲೇ ಗುರುತಿಸಬಹುದು ಎಂದಿದ್ದಾರೆ. ಇದು ಭಾರತದ ಪ್ರಧಾನ ಮಂತ್ರಿಯವರ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಗೆ ಶೋಭೆ ತರುವಂತಹ ಮಾತು ಖಂಡಿತಾ ಅಲ್ಲ ಎಂದು ಯೆಚುರಿ ಬಲವಾಗಿ ಟೀಕಿಸಿದರು.
ನೆರೆ ದೇಶವೊಂದರ ಕುಮ್ಮಕ್ಕಿನಿಂದ ಇದನ್ನು ವಿರೋದಿಸಲಾಗುತ್ತಿದೆ ಎಂದೂ ಪ್ರಧಾನಿಗಳು ಹೇಳಿದ್ದಾರೆ, ಆ ಮೂಲಕ ಸಿಎಎ ಯನ್ನು ದೇಶಾದ್ಯಂತ ವಿರೋಧಿಸುತ್ತಿರುವವರೆಲ್ಲರೂ ರಾಷ್ಟ್ರ-ವಿರೋಧಿಗಳು ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ. ಇದು ಸಂಪೂರ್ಣ ತಪ್ಪು. ವಾಸ್ತವವಾಗಿ ಭಾರತದ ಸಂವಿಧಾನವನ್ನು ರಕ್ಷಿಸುವುದು ಅತ್ಯುನ್ನತ ದೇಶಪ್ರೇಮೀ ಕರ್ತವ್ಯ, ಪ್ರತಿಭಟನಾಕಾರರು ಅದನ್ನೇ ಮಾಡುತ್ತಿದ್ದಾರೆ ಎಂದು ಅವರು ನೆನಪಿಸಿದರು.
ಈಶಾನ್ಯ ಭಾರತದಲ್ಲಿ ಉದ್ರಿಕ್ತ ಪರಿಸ್ಥಿತಿ:
ಈಶಾನ್ಯ ಭಾರತದಲ್ಲಿ ಪ್ರತಿಭಟನಾಕಾರರ ವಿರುದ್ಧ ದಮನಕಾರೀ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಕರ್ಫ್ಯೂ ಹೇರಲಾಗಿದೆ, ಸೇನಾಪಡೆಗಳನ್ನು ತರಲಾಗಿದೆ, ಐದು ಸಾವುಗಳೂ ವರದಿಯಾಗಿವೆ, ಹಲವರನ್ನು ಬಂಧಿಸಲಾಗಿದೆ, ಸಿಪಿಐ(ಎಂ)ನ ಹಲವು ಜಿಲ್ಲಾ ಮುಖಂಡರನ್ನೂ ಬಂಧಿಸಲಾಗಿದೆ, ಇಂಟರ್ನೆಟ್ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಕಾಶ್ಮೀರದಲ್ಲಿ ಸತತ ನಾಲ್ಕು ತಿಂಗಳಿಗೂ ಹೆಚ್ಚು ಕಾಲದಿಂದ ಮಾಡಿರುವುದನ್ನು ಈಗ ಈಶಾನ್ಯ ಭಾರತಕ್ಕೂ ವಿಸ್ತರಿಸಲಾಗಿದೆ. ಭಾರತ ಈಗ ಜಗತ್ತಿನಲ್ಲೇ ಅತಿ ಹೆಚ್ಚು ಇಂಟರ್ನೆಟ್ ಕಡಿತಗಳನ್ನು ಕಾಣುತ್ತಿರುವ ದೇಶ ಎಂಬ ಕುಖ್ಯಾತಿಗೆ ಒಳಗಾಗುತ್ತಿದೆ ಎಂದು ಯೆಚುರಿ ಖೇದ ವ್ಯಕ್ತ ಪಡಿಸಿದರು.
ಇಂತಹ ಕುಖ್ಯಾತಿಯನ್ನು ತಪ್ಪಿಸಬೇಕು, ಸಿಎಎ ಯನ್ನು ಹಿಂದಕ್ಕೆ ಪಡೆಯಬೇಕು, ಸೇನಾಪಡೆಗಳನ್ನು ಹಿಂದಕ್ಕೆ ಕರೆಸಬೇಕು, ಬಂಧಿತರೆಲ್ಲರನ್ನೂ ಬಿಡುಗಡೆ ಮಾಡಬೇಕು, ಸಾವಿಗೀಡಾದವರ ಕುಟುಂಬಗಳಿಗೆ ತಲಾ ೨೦ ಲಕ್ಷ ರೂ. ಪರಿಹಾರ ನೀಡಬೇಕು, ಇಂಟರ್ನೆಟ್ ಸಂಪರ್ಕಗಳನ್ನು ಕೂಡಲೇ ಮರುಸ್ಥಾಪಿಸಬೇಕು ಎಂದು ಯೆಚುರಿ ಸರಕಾರವನ್ನು ಆಗ್ರಹಿಸಿದರು.
ದೇಶದ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ:
ದೇಶದ ಇತರ ಭಾಗಗಳಲ್ಲೂ ಧರ್ಮ, ಪಂಗಡ, ಜಾತಿ, ಭಾಷೆ, ಲಿಂಗದ ಭೇದ-ಭಾವವಿಲ್ಲದೆ ಎಲ್ಲರೂ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ೧೫ರಂದು ಜಾಮಿಯಾ ಮಿಲಿಯಾದ ವಿದ್ಯಾರ್ಥಿಗಳೊಂದಿಗೆ ದಿಲ್ಲಿ ಪೋಲೀಸರ ಅಮಾನುಷ ವರ್ತನೆ ಖಂಡಿತಾ ಒಪ್ಪತಕ್ಕಂತ್ತದ್ದಲ್ಲ, ಸಿಪಿಐ(ಎಂ) ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಯೆಚುರಿ ಹೇಳಿದರು.
ದಿಲ್ಲಿ ಪೋಲೀಸ್ ನೇರವಾಗಿ ಕೇಂದ್ರ ಗೃಹಮಂತ್ರಿಗಳ ಅಡಿಯಲ್ಲಿ ಇದೆ. ಆದ್ದರಿಂದ ಪೋಲೀಸರ ಈ ವರ್ತನೆಯ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆಲ್ಲ ಅವರು ಉತ್ತರ ನೀಡಬೇಕಾಗಿದೆ. ಕ್ಯಾಂಪಸ್ನೊಳಕ್ಕೆ ಪ್ರವೇಶಿಸುವ ಮೊದಲು ಪೋಲೀಸರು ಸಂಬಂಧಪಟ್ಟ ವಿದ್ಯಾಸಂಸ್ಥೆಯ ಮುಖ್ಯಸ್ಥರು, ಉಪಕುಲಪತಿಗಳ ಅನುಮತಿ ಪಡೆಯಬೇಕು, ವಿ.ವಿ. ಅಧಿಕಾರಿಗಳು ಕರೆದರೆ ಮಾತ್ರ ಹೋಗಬೇಕು ಎಂಬುದು ಈ ದೇಶದ ಕಾನೂನಿನಲ್ಲಿದೆ.
ಇದನ್ನು ಉಲ್ಲಂಘಿಸಿ, ಕ್ಯಾಂಪಸ್ನೊಳಕ್ಕೆ ನುಗ್ಗಿ ದಿಲ್ಲಿಪೋಲೀಸರು ಧಾಂಧಲೆ ನಡೆಸಿದ್ದನ್ನು ಇಡೀ ದೇಶ ನೋಡಿದೆ. ಹೀಗೆ ಮಾಡಲು ಅವರಿಗೆ ಅಧಿಕಾರ ನೀಡಿದವರು ಯಾರು ಎಂದು ಯೆಚುರಿ ಪ್ರಶ್ನಿಸಿದರು. ವಿದ್ಯಾರ್ಥಿಗಳೊಂದಿಗೆ, ಅಂದರೆ ದೇಶದ ಭವಿಷ್ಯದೊಂದಿಗೆ ಇಂತಹ ವರ್ತನೆ ಅತ್ಯಂತ ಆಘಾತಕಾರಿ ಎಂದು ಅವರು ಹೇಳಿದರು.
ದೇಶವನ್ನು ಬಾಧಿಸುತ್ತಿರುವ ಜನಗಳ ಜೀವನೋಪಾಯಗಳ ಪ್ರಶ್ನೆಗಳು, ಆರ್ಥಿಕ ಮಂದಗತಿ, ನಿರುದ್ಯೋಗ, ನಿಜ ಆದಾಯ ಇಳಿಕೆ ಇವುಗಳತ್ತ ಗಮನ ನೀಡುವ ಬದಲು ಈ ಸರಕಾರ ಈ ರೀತಿ ಜನಗಳನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ನಾವು ಮುಂದುವರೆಸುತ್ತೇವೆ, ಮತ್ತು ಜನಗಳಿಗೂ ಶಾಂತಿಯುತವಾಗಿ, ಹಿಂಸೆಗೆ ಅವಕಾಶ ನೀಡದೆ, ಕೋಮುವಾದೀಕರಿಸುವ ಆಳುವ ಪಕ್ಷದ ಪ್ರಯತ್ನಗಳಿಗೆ ಬಲಿಯಾಗದೆ ಈ ಹೋರಾಟವನ್ನು ಮುಂದುವರೆಸಬೇಕು, ಏಕೆಂದರೆಸಂವಿಧಾನವನ್ನುಉಳಿಸುವಕೆಲಸವನ್ನುಐಕ್ಯತೆಯಿಂದಮಾಡಬೇಕಾಗಿದೆ ಎಂದು ಸೀತಾರಾಂ ಯೆಚುರಿಯವರು ಮನವಿ ಮಾಡಿದರು.