ಸಿಎಎ : ಬಿಜೆಪಿಯ ಸುಳ್ಳು ಪ್ರಚಾರ ಬಯಲು

ಬಿಜೆಪಿ ತನ್ನ ನೇತೃತ್ವದ ಕೇಂದ್ರ ಸರಕಾರ ತಂದಿರುವ ಅಸಮರ್ಥನೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳ ಮೊರೆ ಹೊಕ್ಕಿದೆ. ನಿಜ ಸಂಗತಿಗಳನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡಿಸಿದೆ.

ಸಿಪಿಐ(ಎಂ) ಮತ್ತು ಕಮ್ಯುನಿಸ್ಟರು ಪೂರ್ವ ಪಾಕಿಸ್ತಾನದಿಂದ, ನಂತರ ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರಿಗೆ ಪೌರತ್ವ ಕೊಡುವ ಪ್ರಶ್ನೆಯಲ್ಲಿ ಇಬ್ಬಂದಿತನವನ್ನು ಪ್ರದರ್ಶಿಸಿದ್ದಾರೆ  ಎಂದು ಸಾಬೀತು ಮಾಡಲು ಅದು ಮೇ ೧೨, ೨೦೧೨ರಲ್ಲಿ ಆಗಿನ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾರಟ್ ಆಗಿನ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರಿಗೆ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಬಂಗಾಲೀ ನಿರಾಶ್ರಿತರಿಗೆ ಪೌರತ್ವ ಕೊಡಬೇಕೆಂದು  ಆಗ್ರಹಿಸಿ ಬರೆದ ಪತ್ರವನ್ನು ಉದ್ಧರಿಸಿದೆ.

ಬಾಂಗ್ಲಾದೇಶದಿಂದ ಅಲ್ಪಸಂಖ್ಯಾತ ಬಂಗಾಲೀ ನಿರಾಶ್ರಿತರಿಗೆ ಪೌರತ್ವ ಕೊಡಬೇಕು ಎಂದು ಪ್ರತಿಪಾದಿಸಿದ್ದ ಸಿಪಿಐ(ಎಂ) ಈಗ ಅದನ್ನೇ ಮಾಡಿರುವ ಸಿಎಎಯನ್ನು ವಿರೋಧಿಸುತ್ತಿದೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವಕ್ತಾರರುಗಳ ಮೂಲಕ ಅಪಪ್ರಚಾರ ಮಾಡುತ್ತಿದೆ.

ಇಂತಹ ಸುಳ್ಳು ಆಪಾದನೆ ಮಾಡಲು ಅದು ಹೇಗೆ ನಿಜ ಸಂಗತಿಗಳನ್ನು ತಿರುಚಿಟ್ಟಿದೆ ಎಂಬುದನ್ನು ಪೊಲಿಟ್‌ಬ್ಯುರೊ ತನ್ನ ಹೇಳಿಕೆಯಲ್ಲಿ ಬಯಲಿಗೆಳೆದಿದೆ.

ಮೊದಲನೆಯದಾಗಿ, ಸಿಪಿಐ(ಎಂ) ಸದಾ ಹಿಂದಿನ ಪೂರ್ವ ಪಾಕಿಸ್ತಾನ ಮತ್ತು ನಂತರ ಬಾಂಗ್ಲಾದೇಶದಿಂದ ಬಂದ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಪೌರತ್ವ ಕೊಡಬೇಕು ಎಂದು ಆಗ್ರಹಿಸಿಕೊಂಡೇ ಬಂದಿದೆ. ಆದರೆ ಸಿಎಎ ಈಗ ಅದನ್ನು ಕೊಡುತ್ತಿರುವುದು ಧಾರ್ಮಿಕ ಗುರುತಿನ ಆಧಾರದಲ್ಲಿ ಮತ್ತು ಮುಸ್ಲಿಂ ವಲಸೆಗಾರರನ್ನು ಹೊರತುಪಡಿಸುವ ಮೂಲಕ ಎಂಬುದನ್ನು ಅದು ಒತ್ತಿ ಹೇಳಿದೆ. ಆದರೆ ಸಿಪಿಐ(ಎಂ) ಎಂದೂ ಪೌರತ್ವ ಕೊಡುವಾಗ ಮುಸ್ಲಿಮರನ್ನು ಹೊರತುಪಡಿಸಬೇಕು ಎಂದು ಹೇಳಿಲ್ಲ. ಪಕ್ಷ ಸಿಎಎಯನ್ನು ಬಲವಾಗಿ ವಿರೋಧಿಸಿರುವುದು ಇದೇ ಕಾರಣಕ್ಕಾಗಿ.

ಎರಡನೆಯದಾಗಿ, ಸಿಪಿಐ(ಎಂ) ಎಪ್ರಿಲ್ ೨೦೧೨ರಲ್ಲಿ ತನ್ನ ೨೦ನೇ ಮಹಾಧಿವೇಶನದಲ್ಲಿ ಅಂಗೀಕರಿಸಿದ  ಬಂಗಾಲೀ ನಿರಾಶ್ರಿತರ ಹಕ್ಕುಗಳಿಗಾಗಿ ಎಂಬ ನಿರ್ಣಯದಲ್ಲಿ ತನ್ನ ನಿಲುವನ್ನು ಸ್ಪಷ್ಟವಾಗಿ ನಿರೂಪಿಸಿದೆ.  ಬಾಂಗ್ಲಾದೇಶದಿಂದ ಬರುವ ನಿರಾಶ್ರಿತರಿಗೆ ಪೌರತ್ವವನ್ನು ಪರಿಶೀಲಿಸುವಾಗ ಅಸ್ಸಾಂ ಒಪ್ಪಂದವನ್ನು ಕಾಪಾಡಬೇಕು ಎಂದು ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಂದರೆ ಅಸ್ಸಾಂ ಒಪ್ಪಂದದಲ್ಲಿ ಇರುವ ಮಾರ್ಚ್ ೧೯೭೧ ರ ವರೆಗಿನ ಗಡುವನ್ನು ಕದಡಿಸಬಾರದು ಎಂದರ್ಥ. ಬಿಜೆಪಿ ಸರಕಾರದ ಸಿಎಎ ಇದನ್ನು ಉಲ್ಲಂಘಿಸುತ್ತದೆ. ಸಂಸತ್ತಿನಲ್ಲಿ ಸಿಎಬಿಯನ್ನು ಸಿಪಿಐ(ಎಂ) ವಿರೋಧಿಸಲು ಇದು ಇನ್ನೊಂದು ಕಾರಣ.

ಸಿಪಿಐ(ಎಂ) ಎಂಪಿಗಳು ಸಂಸತ್ತಿನಲ್ಲಿ ಮೂರು ತಿದ್ದುಪಡಿಗಳನ್ನು ಮಂಡಿಸಿದರು ಎಂಬ ಸಂಗತಿಯತ್ತ ಪೊಲಿಟ್‌ಬ್ಯುರೊ ತನ್ನ ಹೇಳಿಕೆಯಲ್ಲಿ ಗಮನ ಸೆಳೆದಿದೆ.

ಎರಡು ತಿದ್ದುಪಡಿಗಳು ಎಲ್ಲ ನೆರೆ ದೇಶಗಳಿಂದ ಬಂದಿರುವ ವಲಸಿಗರನ್ನು ಅವರ ಧರ್ಮ ಯಾವುದೇ ಇದ್ದರೂ ಪೌರತ್ವ ನೀಡಿಕೆಗೆ ಪರಿಗಣಿಸಲು ಸಾಧ್ಯವಾಗುವಂತೆ ಮಸೂದೆಯಲ್ಲಿದ್ದ ಧಾರ್ಮಿಕ ವರ್ಗೀಕರಣವನ್ನು ತೆಗೆಯಬೇಕು  ಎಂಬುದಕ್ಕಾಗಿ. ಉದಾಹರಣೆಗೆ, ತಮಿಳುನಾಡಿನಲ್ಲಿರುವ ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ಪೌರತ್ವ ನೀಡಿಕೆಯನ್ನು ಪರಿಶೀಲಿಸಲು ಅನುವು ಮಾಡಿಕೊಡಬೇಕು ಎಂದು.

ಮೂರನೇ ತಿದ್ದುಪಡಿ ಅಸ್ಸಾಂ ಮತ್ತು ಈಶಾನ್ಯ ಭಾರತದ ರಾಜ್ಯಗಳಿಗೆ ಈ ಮಸೂದೆಯ ವ್ಯಾಪ್ತಿಯಿಂದ ವಿನಾಯ್ತಿ ಕೊಡಬೇಕು ಎಂದು.

ಈ ಸಂಗತಿಗಳು ಬಿಜೆಪಿಯ ಸುಳ್ಳು ಪ್ರಚಾರವನ್ನು ಬಯಲಿಗೆಳೆಯುತ್ತಿವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *