ಸಿ ಎ ಎ/ ಎನ್ ಆರ್ ಸಿ/ ಎನ್ ಪಿ ಆರ್ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಜನಗಳ ಪ್ರತಿಭಟನೆಗಳ ತೀವ್ರತೆಯನ್ನು ಕಂಡು ಮತ್ತು ಕನಿಷ್ಟ ಹತ್ತು ಮುಖ್ಯಮಂತ್ರಿಗಳು ಎನ್ ಆರ್ ಸಿಯನ್ನು ತಾವು ಜಾರಿ ಮಾಡುವುದಿಲ್ಲ ಎಂದು ಘೋಷಿಸಿರುವುದನ್ನು ಕೇಳಿ ಪ್ರಧಾನಮಂತ್ರಿ ತಬ್ಬಿಬ್ಬಾಗಿದ್ದಾರೆ ಎಂಬುದು ಸ್ಪಷ್ಟ. ಆದ್ದರಿಂದಲೇ ಅವರು ಜನಗಳನ್ನು ತಪ್ಪುದಾರಿಗೆಳೆಯಲು ಡಿಸೆಂಬರ್ 22ರಂದು ದಿಲ್ಲಿಯಲ್ಲಿ ಅಸತ್ಯಗಳ ಒಂದು ಮೂಟೆಯನ್ನೇ ಬಿಚ್ಚಿಟಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಅವರ ಭಾಷಣದಲ್ಲಿನ ಮೂರು ಸುಳ್ಳುಗಳನ್ನು ಸಿಪಿಐ(ಎಂ) ಪಟ್ಟಿ ಮಾಡಿದೆ.
ಸುಳ್ಳು ನಂ.1: “೨೦೧೪ರಲ್ಲಿ ನನ್ನ ಸರಕಾರ ಬಂದಾಗಿನಿಂದ ಎನ್ಆರ್ಸಿ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ ಎಂದು ೧೩೦ ಕೋಟಿ ಭಾರತದ ನಾಗರಿಕರಿಗೆ ಹೇಳಬಯಸುತ್ತೇನೆ” : ಮೋದಿ
ಬಿಜೆಪಿಯ ೨೦೧೯ರ ಚುನಾವಣಾ ಪ್ರಣಾಳಿಕೆ ದೇಶಾದ್ಯಂತ ಎನ್ ಆರ್ ಸಿ ಯ ಆಶ್ವಾಸನೆ ನೀಡಿತ್ತು.
ಗೃಹಮಂತ್ರಿ ಅಮಿತ್ ಷಾ ಲೋಕಸಭೆಯಲ್ಲಿ ಸಿಎಬಿಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ನವಂಬರ್ ೯ರಂದು ನಾವು ದೇಶಾದ್ಯಂತ ಎನ್ಆರ್ಸಿ ತರುತ್ತೇವೆ. ಒಬ್ಬನೇ ಒಬ್ಬ ನುಸುಳುಕೋರನನ್ನು ಬಿಡುವುದಿಲ್ಲ ಎಂದರು.
ಎನ್ಆರ್ಸಿ ಪ್ರಕ್ರಿಯೆ ಎಪ್ರಿಲ್ ೧, ೨೦೨೦ರಿಂದ ಸೆಪ್ಟಂಬರ್ ೩೦, ೨೦೨೦ರ ನಡುವೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿ ಆರ್)ಯನ್ನು ಕಲೆ ಹಾಕುವುದರೊಂದಿಗೆ ಆರಂಭವಾಗಬೇಕಿದೆ. ಎನ್ ಪಿ ಆರ್ ಎಂಬುದು ಎನ್ ಆರ್ ಸಿಯ ಮೊದಲ ಘಟ್ಟ. ಇದಕ್ಕೆ ಗಝೆಟ್ ಅಧಿಸೂಚನೆಯನ್ನು ಜುಲೈ ೩೧, ೨೦೧೯ರಂದು ಹೊರಡಿಸಲಾಗಿದೆ.
ಸುಳ್ಳು ನಂ.2: “ಎಲ್ಲಿಯೂ ಯಾವುದೇ ನಿರ್ಬಂಧ ಕೇಂದ್ರ (ಡಿಟೆನ್ಶನ್ ಸೆಂಟರ್)ಗಳಿಲ್ಲ”: ಮೋದಿ
ಗೃಹ ವ್ಯವಹಾರಗಳ ರಾಜ್ಯ ಮಂತ್ರಿಗಳು ಡಿಸೆಂಬರ್ 11ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಕಾನೂನುಬಾಹಿರ ವಲಸಿಗರನ್ನು ಮತ್ತು ಶಿಕ್ಷೆ ವಿಧಿಸಲ್ಪಟ್ಟಿರುವ ವಿದೇಶೀಯರನ್ನು ದೇಶದಿಂದ ಹೊರ ಕಳಿಸುವ ಮೊದಲು ನಿರ್ಬಂಧದಲ್ಲಿ ಇಡಲು ನಿರ್ಬಂಧ ಕೇಂದ್ರಗಳನ್ನು ರಚಿಸಬೇಕು ಎಂದು ಎಲ್ಲ ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರ 09.01.2019ರಂದು ಎಲ್ಲ ರಾಜ್ಯ/ಕೇಂದ್ರಾಡಳಿತ ಆಡಳಿತಗಾರರಿಗೆ ನಿರ್ಬಂಧ ಕೇಂದ್ರಗಳನ್ನು ನಿರ್ಮಿಸಲು ಕ್ರೋಡೀಕೃತ ಸೂಚನೆಗಳನ್ನು ಕಳಿಸಿದೆ.
“ಭಾರತದಲ್ಲಿ ಕಾನೂನುಬಾಹಿರವಾಗಿ ಇರುವ ವಿದೇಶಿ ರಾಷ್ಟ್ರೀಯರನ್ನು ಇಡಲು ನಿರ್ಬಂಧ ಕೇಂದ್ರಗಳನ್ನು ಹೊಂದಬೇಕು ಎಂದು ನಾವು ೨೦೧೪ರಲ್ಲಿ ಎಲ್ಲ ರಾಜ್ಯ ಸರಕಾರಗಳಿಗೆ ಪತ್ರ ಬರೆದಿದ್ದೇವೆ ಮತ್ತು ಅದನ್ನನುಸರಿಸಿ ೨೦೧೮ರಲ್ಲಿ ಪತ್ರವನ್ನು ಬರೆದಿದ್ದೇವೆ” ಎಂದು ಕೇಂದ್ರ ಸರಕಾರ ನವಂಬರ್ ೨೮ ರಂದು ಕರ್ನಾಟಕ ಹೈಕೋರ್ಟಿಗೆ ಹೇಳಿದೆ.
ನವಂಬರ್ ೨೦೧೯ರಲ್ಲಿ ಗೃಹ ವ್ಯವಹಾರಗಳ ರಾಜ್ಯಮಂತ್ರಿಗಳು ರಾಜ್ಯಸಭೆಯಲ್ಲಿ ಒಂದು ಪ್ರಶ್ನೆಗೆ ಉತ್ತರಿಸುತ್ತ ಅಸ್ಸಾಂನ ನಿರ್ಬಂಧ ಕೇಂದ್ರಗಳಲ್ಲಿ ೨೮ ಮಂದಿ ಸತ್ತಿದ್ದಾರೆ ಎಂದು ಉತ್ತರಿಸಿದ್ದಾರೆ. ಅಸ್ಸಾಂನ ಆರು ನಿರ್ಬಂಧ ಕೇಂದ್ರಗಳಲ್ಲಿ ೯೮೮ ’ವಿದೇಶೀಯರನ್ನು’ ಇಡಲಾಗಿದೆ ಎಂದು ಅವರು ತಿಳಿಸಿದರು.
ಗೃಹ ವ್ಯವಹಾರಗಳ ಮಂತ್ರಾಲಯ ೨೪/೨೯ ಎಪ್ರಿಲ್ ೨೦೧೪ರಲ್ಲಿ ಮತ್ತು ೯-೧೦ ಸಪ್ಟಂಬರ್ ೨೦೧೪ರಲ್ಲಿ ಇನ್ನೊಮ್ಮೆ ನಿರ್ದೇಶನಗಳನ್ನು ಕಳಿಸಿದೆ. ಇದರ ಆಧಾರದಲ್ಲಿ ಒಂದು ಮಾದರಿ ನಿರ್ಬಂಧ ಕೇಂದ್ರ/ ತಡೆದಿಡುವ ಕೇಂದ್ರ/ಶಿಬಿರದ ಕೈಪಿಡಿ(ಮ್ಯಾನುವಲ್)ಯನ್ನು ೨೦೧೮ರಲ್ಲಿ ಎಲ್ಲ ರಾಜ್ಯ /ಕೇಂದ್ರಾಡಳಿತ ಪ್ರದೇಶಗಳಿಗೆ ಕೊಡಲಾಗಿದೆ.
ಕರ್ನಾಟಕದಂತಹ ಹಲವು ಬಿಜೆಪಿ ರಾಜ್ಯ ಸರಕಾರಗಳು ಈಗಾಗಲೇ ನಿರ್ಬಂದ ಕೇಂದ್ರಗಳನ್ನು ನಿರ್ಮಿಸಲು ನಿರ್ದೇಶನಗಳನ್ನು ಕೊಟ್ಟಿವೆ.
ಸುಳ್ಳು ನಂ.3: “ನಾನು ಎಂದೂ ಯಾರೊಬ್ಬರದ್ದೂ ಧರ್ಮ ಎನೆದು ಕೇಳಿಲ್ಲ” :ಮೋದಿ
ಝಾರ್ಖಂಡ್ನ ಧುಮ್ಕದಲ್ಲಿ ಇತ್ತಿಚೆಗೆ ನಡೆದ ಒಂದು ಚುನಾವಣಾ ರ್ಯಾಲಿಯಲ್ಲಿ ಹಿಂಸಾಚಾರದಲ್ಲಿ ತೊಡಗಿರುವವರನ್ನು ಅವರ ಉಡುಗೆಗಳಿಂದ ಗುರುತಿಸಬಹುದು ಎಂದರು.
೨೦೧೯ರ ಸಾರ್ವತ್ರಿಕ ಚುನಾವಣೆಗಳ ವೇಳೆಯಲ್ಲಿ ರಾಹುಲ್ ಗಾಂಧಿ ಕೇರಳದ ವೈನಾಡಿನಿಂದ, ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಿರುವ ಒಂದು ಕ್ಷೇತ್ರವನ್ನು ಸ್ಪರ್ಧೆಗೆ ಆಯ್ದುಕೊಂಡಿದ್ದಾರೆ ಎಂದರು.
ಇಂತಹ ಸುಳ್ಳುಗಳ ಮೂಟೆಯೊಂದಿಗೆ ಮೋದಿಯವರು ಭಾರತೀಯ ಸಂವಿಧಾನದ ಜಾತ್ಯತೀತ-ಪ್ರಜಾಸತ್ತಾತ್ಮಕ ತಿರುಳಿನ ಮೇಲೆ ಅವರುಗಳ ಆಕ್ರಮಣದ ಬಗ್ಗೆ ಜನಗಳನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲಿಟ್ ಬ್ಯುರೋ ಹೇಳಿದೆ.
ಮೋದಿ ಸರಕಾರಕ್ಕೆ ಇರುವುದು ಒಂದೇ ಅಜೆಂಡಾ: ಧ್ರುವೀಕರಣ
ಅವರ ೯೦ ನಿಮಿಷಗಳ ದೀರ್ಘ ಭಾಷಣದಲ್ಲಿ ಒಮ್ಮೆಯೂ ತನ್ನ ಸರಕಾರ ಮತ್ತು ಧೋರಣೆಗಳು ಜನಗಳ ದೈನಂದಿನ ಬದುಕಿನ ಮೇಲೆ ಹೆಚ್ಚೆಚ್ಚಾಗಿ ಹೇರುತ್ತಿರುವ ಸಂಕಟಗಳನ್ನು ಪ್ರಸ್ತಾಪಿಸಲಿಲ್ಲ. ಅರ್ಥವ್ಯವಸ್ಥೆ ಹಿಂಜರಿತಕ್ಕೆ ಒಳಗಾಗಿಯೇ ಬಿಡುತ್ತಿದೆ, ನಿರುದ್ಯೋಗ ಕಳೆದ ಅರ್ಧ ಶತಮಾನದಲ್ಲೇ ಅತ್ಯುನ್ನತ ಮಟ್ಟಕ್ಕೇರಿದೆ. ರೈತರ ಹತಾಶ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಹಣದುಬ್ಬರ ಜನಗಳ ಬದುಕನ್ನು ಹಿಂಡುತ್ತಿದೆ, ಈರುಳ್ಳಿಯ ವಿಪರೀತ ಬೆಲೆಗಳಿಂದಾಗಿ ಜನ ಅದನ್ನು ತಿನ್ನುವುದನ್ನೇ ಬಿಟ್ಟಿದ್ದಾರೆ.
ದ್ವೇಷ ಮತ್ತು ಹಿಂಸಾಚಾರದ ಮೂಲಕ ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದು ಮತ್ತು ಜನಗಳನ್ನು ಒಡೆಯುವುದು ಮಾತ್ರವೇ ಮೋದಿ ಸರಕಾರದ ಏಕೈಕ ಅಜೆಂಡಾ ಆಗಿ ಬಿಟ್ಟಿದೆ ಎಂಬುದು ಸುಸ್ಪಷ್ಟವಾಗಿದೆ ಎಂದು ಬಲವಾಗಿ ಟೀಕಿಸಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಸಿ ಎ ಎ/ಎನ್ ಆರ್ ಸಿ/ಎನ್ ಪಿ ಆರ್ ವಿರುದ್ಧ ಪ್ರತಿಭಟನೆಗಳು ಈಗ ನಡೆಯುತ್ತಿರುವ ಪ್ರಕ್ರಿಯೆಗಳನ್ನು ನಿಲ್ಲಿಸಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸುವ ವರೆಗೂ ಮುಂದುವರೆಯುತ್ತವೆ ಎಂದು ಹೇಳಿದೆ.