ಚಾರಿತ್ರಿಕ ಅಖಿಲ ಭಾರತ ಮುಷ್ಕರ: ಅಭಿನಂದನೆ

ಇನ್ನಷ್ಟು ಬಲಿಷ್ಟ ಹೋರಾಟಗಳನ್ನು ಬೆಸೆದು ಇನ್ನಷ್ಟು ವಿಶಾಲ ಐಕ್ಯತೆಗೆ ದಾರಿ ಮಾಡಿ ಕೊಡುತ್ತದೆ

ಜನವರಿ ೮ರಂದು ದೇಶಾದ್ಯಂತ ನಡೆದಿರುವ ಭವ್ಯ ಮುಷ್ಕರಕ್ಕಾಗಿ ಕಾರ್ಮಿಕ ವರ್ಗ, ರೈತರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರ ಪ್ರಜಾಪ್ರಭುತ್ವವಾದಿ ಜನವಿಭಾಗಗಳನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿನಂದಿಸಿದೆ. ವ್ಯಾಪಕ ಪ್ರಮಾಣದಲ್ಲಿ ಬಂಧನಗಳು, ದಮನವನ್ನು ಎದುರಿಸಿಯೂ ಈ ಮುಷ್ಕರ ನಡೆದಿದೆ ಎಂದು ಅದು ಹೇಳಿದೆ.

ಮೋದಿ ಸರಕಾರದ ಧೋರಣೆಗಳಿಂದ ಚಿಂದಿಯಾಗಿರುವ ಜೀವನಾಧಾರದ ಅತ್ಯಂತ ಕಷ್ಟಕರ ಪರಿಸ್ಥಿತಿಗಳನ್ನು ಕಾರ್ಮಿಕ ಸಂಘಗಳು ಮತ್ತು ವಿವಿಧ ಒಕ್ಕೂಟಗಳ ಜಂಟಿ ವೇದಿಕೆ ಈ ಭವ್ಯ ಸಾಮೂಹಿಕ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ಎತ್ತಿ ತೋರಿದೆ. ಸಂಘಟಿತ ವಲಯದಲ್ಲೂ, ಅಸಂಘಟಿತ ವಲಯದಲ್ಲೂ, ಹಣಕಾಸು ಮತ್ತು ಇತರ ಸೇವಾ ವಲಯಗಳಲ್ಲೂ ಕೈಗಾರಿಕಾ ಕಾರ್ಮಿಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರಿಂದಾಗಿ ಅರ್ಥವ್ಯವಸ್ಥೆಯ ಎಲ್ಲ ವಿಭಾಗಗಳಲ್ಲೂ ಮುಷ್ಕರ ಉತ್ಕೃಷ್ಟವಾಗಿತ್ತು. ವಿಶೇಷವಾಗಿ, ಸಾರ್ವಜನಿಕ ವಲಯದಲ್ಲಿ, ಸಾರಿಗೆ, ಚಹಾ ತೋಟಗಳು, ಸಣಬು, ಇಂಜಿನಿಯರಿಂಗ್‌ನಲ್ಲಿ ಮತ್ತು ಸ್ಕೀಮ್ ಕಾರ್ಮಿಕರ ಮುಷ್ಕರದ ಯಶಸ್ಸು ಎದ್ದು ಕಂಡಿದೆ.

GEN STRIKEಅಖಿಲ ಭಾರತ ಮುಷ್ಕರದ ಒಂದು ಹೊಸ ಲಕ್ಷಣವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಬಿಕ್ಕಟ್ಟಿನ ತೀವ್ರತೆಯನ್ನು ಎತ್ತಿ ತೋರಿದ ರೈತಾಪಿ ಜನಗಳು ಮತ್ತು ಕೃಷಿ ಕಾರ್ಮಿಕರು ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿರುವುದು ಎಂದು ಪೊಲಿಟ್‌ಬ್ಯುರೊ ಹೇಳಿದೆ.

ವಿದ್ಯಾರ್ಥಿ ಸಂಘಟನೆಗಳೂ ಹೆಚ್ಚುತ್ತಿರುವ ಶಿಕ್ಷಣದ ವೆಚ್ಚಗಳ ಮತ್ತು ಇತ್ತೀಚೆಗೆ ಜಾಮಿಯ, ಎಎಂಯು ಮತ್ತು ಜೆಎನ್‌ಯುನಲ್ಲಿ ಕಂಡಿರುವಂತೆ ಕ್ಯಾಂಪಸ್‌ಗಳಲ್ಲಿ ಪ್ರಜಾಪ್ರಭುತ್ವದ ಮೇಲೆ ಆಕ್ರಮಣಗಳ ತೀವ್ರತೆಯತ್ತ ಗಮನ ಸೆಳೆಯಲು ಮುಷ್ಕರಕ್ಕೆ ಕರೆ ನೀಡಿದ್ದವು. ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮುಷ್ಕರದ ಸಂದೇಶವನ್ನು, ವಿಶೇಷವಾಗಿ ಭಾರತದ ಸಂವಿಧಾನದ ರಕ್ಷಣೆಯ ಬಗ್ಗೆ ಕಳವಳದ ಸಂದೇಶವನ್ನು ಪಸರಿಸುವಲ್ಲಿ ಒಂದು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಅಧ್ಯಾಪಕರು ವ್ಯಾಪಕವಾಗಿ ಭಾಗವಹಿಸಿದ್ದಾರೆ.

ಕೇರಳದಲ್ಲಿ ಈ ಸಾರ್ವತ್ರಿಕ ಮುಷ್ಕರ ಸಂಪೂರ್ಣವಾಗಿತ್ತು. ತ್ರಿಪುರಾದಲ್ಲಿ ಬಿಜೆಪಿಯ ಮತ್ತು ರಾಜ್ಯ ಆಡಳಿತದ ಪಾಶವೀ ವರ್ತನೆಗಳನ್ನು ಎದುರಿಸಿ ಮುಷ್ಕರ ಸುಮಾರಾಗಿ ಸಂಪೂರ್ಣವಾಗಿಯೇ ನಡೆಯಿತು. ಮಣಿಪುರದಲ್ಲಿ ಸಂಪೂರ್ಣವಗಿತ್ತು. ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ನೇತೃತ್ವದ ಆಡಳಿತ ಬಂದ್‌ನ್ನು ವಿಫಲಗೊಳಿಸಲು ಸರ್ವಪ್ರಯತ್ನ ನಡೆಸಿದರೂ ಮುಷ್ಕರ ಅತ್ಯುತ್ಸಾಹದಿಂದ, ವ್ಯಾಪಕವಾಗಿ ನಡೆಯಿತು. ಅಸ್ಸಾಂ, ಬಿಹಾರ, ಝಾರ್ಖಂಡ್, ಪಂಜಾಬ್, ಒಡಿಶ, ಮಧ್ಯಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಮುಷ್ಕರ ಬಹಳ ಗಮನಾರ್ಹವಾಗಿತ್ತು ಎಂದು ಪೊಲಿಟ್‌ಬ್ಯುರೊ ಗಮನಿಸಿದೆ.

ಕಾರ್ಮಿಕರು ಮತ್ತು ಇತರ ದುಡಿಯುವ ಜನವಿಭಾಗಗಳ, ಮತ್ತು ಅವರೊಂದಿಗೆ ವಿದ್ಯಾರ್ಥಿಗಳು ಮತ್ತಿತರ ಪ್ರಜಾಪ್ರಭುತ್ವವಾದಿ ವಿಭಾಗಗಳ ದನಿ ಇವರೆಲ್ಲರ  ದೃಢನಿರ್ಧಾರವನ್ನು ದ್ವಿಗುಣಗೊಳಿಸುತ್ತದೆ, ಮತ್ತು ನಮ್ಮ  ಬಹುಪಾಲು ದುಡಿಯುವ ಜನಗಳನ್ನು ದಾರಿದ್ರ್ಯಕ್ಕೆ ತಳ್ಳುವ ಬೆನ್ನು ಮುರಿಯುವ ಆರ್ಥಿಕ ಧೋರಣೆಗಳನ್ನು, ವಿಭಜನಕಾರೀ ಧ್ರುವೀಕರಣ ಧೋರಣೆಗಳನ್ನು, ನಮ್ಮ ಗಣತಂತ್ರದ ಸಂವಿಧಾನಿಕ ನೀತಿಗಳ ಬುನಾದಿಯನ್ನೇ ಶಿಥಿಲಗೊಳಿಸುವ ಫ್ಯಾಸಿಸ್ಟ್ ತೆರನ ಆಕ್ರಮಣಗಳನ್ನು ಸೋಲಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನವರಿ ೮ರ ಮುಷ್ಕರ ಕಾರ್ಯಾಚರಣೆ ಇನ್ನಷ್ಟು ಬಲಿಷ್ಟವಾದ ಹೋರಾಟಗಳನ್ನು ಬೆಸೆಯುವ ಮೂಲಕ ಇನ್ನಷ್ಟು ವಿಶಾಲವಾದ ಐಕ್ಯತೆಗೆ ದಾರಿ ಮಾಡಿ ಕೊಡುತ್ತದೆ ಎಂದು ಹೇಳಿದೆ.

Leave a Reply

Your email address will not be published. Required fields are marked *