ಸಿ.ಎ.ಎ. – ಎನ್.ಪಿ.ಆರ್. – ಎನ್.ಆರ್.ಸಿ. ವಿರುದ್ಧ ಆಂದೋಲನವನ್ನು ಒಂದುಗೂಡಿ ಮುಂದಕ್ಕೆ ಒಯ್ಯೋಣ – ಎಲ್ಲ ಜಾತ್ಯತೀತ ಮತ್ತು ಜನವಾದಿ ಶಕ್ತಿಗಳಿಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ
ಎನ್.ಆರ್.ಸಿ.ಯನ್ನು ಒಪ್ಪುವುದಿಲ್ಲ ಎಂದು ಪ್ರಕಟಿಸಿರುವ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಎನ್ಪಿಆರ್ ಪ್ರಕ್ರಿಯೆಗೆ ತಡೆ ಹಾಕಬೇಕು ಹೀಗೆ ಮಾಡುವ ಮೂಲಕ ಮಾತ್ರವೇ ಅವರು ಎನ್ಆರ್ಸಿ ಜಾರಿಯಾಗದಂತೆ ನಿಲ್ಲಿಸಲು ಸಾಧ್ಯ. ಸಿಎಎ-ಎನ್ಪಿಆರ್-ಎನ್ಆರ್ಸಿ ವಿರುದ್ಧ ದೇಶಾದ್ಯಂತ ಶಾಂತಿಯುತ ಪ್ರತಿಭಟನಾ ಚಳುವಳಿ ಬೆಳೆಯುತ್ತಿದ್ದು, ಈ ಆಂದೋಲನವನ್ನು ಒಂದುಗೂಡಿ ಮುಂದಕ್ಕೆ ಒಯ್ಯೋಣ ಎಂದು ಎಲ್ಲ ಜಾತ್ಯತೀತ ಮತ್ತು ಜನವಾದಿ ಶಕ್ತಿಗಳಿಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ನೀಡಿದೆ.
ಜನವರಿ 11 ಮತ್ತು 12ರಂದು ದಿಲ್ಲಿಯಲ್ಲಿ ಸಭೆ ಸೇರಿದ ಪೊಲಿಟ್ಬ್ಯುರೊ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಕರೆಯನ್ನು ನೀಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಪ್ರತಿಭಟನೆಗಳು ಮತ್ತು ಸಂವಿಧಾನ ಹಾಗೂ ಜಾತ್ಯತೀತತೆಯ ರಕ್ಷಣೆಗಾಗಿ ಚಳುವಳಿ ಬೆಳೆಯುತ್ತಿರುವುದರ ಬಗ್ಗೆ ಅದು ಹರ್ಷ ವ್ಯಕಪಡಿಸಿದೆ. ಸಿಎಎ ಒಂದು ಮತೀಯ ಮಾನದಂಡವನ್ನು ಸೇರಿಸುವುದರ ಮೂಲಕ ಸಂವಿಧಾನದಲ್ಲಿ ಪ್ರತಿಷ್ಠಾಪಿತಗೊಂಡಿರುವ ಪೌರತ್ವದ ಜಾತ್ಯತೀತ ಪರಿಕಲ್ಪನೆಯನ್ನು ಶಿಥಿಲಗೊಳಿಸುತ್ತದೆ ಎಂದು ಅದು ಪುನರುಚ್ಚರಿಸಿದೆ.
ಸಿಎಎ-ಎನ್ಪಿಆರ್-ಎನ್ಆರ್ಸಿ ವಿರುದ್ಧ ಸಾಮೂಹಿಕ ಆಂದೋಲನದಲ್ಲಿ ವಿದ್ಯಾರ್ಥಿಗಳು, ಯುವಜನರು ಮತ್ತು ಸಾಮಾನ್ಯ ನಾಗರಿಕರು ಇದ್ದಾರೆ. ಇವರಿಗೆ ಸಂವಿಧಾನ ಮತ್ತು ಅದರ ಜನವಾದಿ-ಜಾತ್ಯತೀತ ಮೌಲ್ಯಗಳಿಗೆ ಇದರಿಂದ ಬೆದರಿಕೆ ಬಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಳೆದ ಒಂದು ತಿಂಗಳಲ್ಲಿ ದೇಶದ ಎಲ್ಲ ಭಾಗಗಳಲ್ಲೂ ಪ್ರತಿದಿನ ಪ್ರತಿಭಟನೆಗಳು ನಡೆಯುತ್ತಿವೆ.
ಜಾಮಿಯ ಮಿಲಿಯ ಮತ್ತು ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಕ್ಯಾಂಪಸ್ಗಳಲ್ಲಿ ಶಾಂತಿಯುತ ಪ್ರತಿಭಟನೆಗಳ ಮೇಲೆ ಹರಿಯಬಿಟ್ಟ ಪಾಶವೀ ದಮನ ಮತ್ತು ಪೋಲೀಸ್ ಅತ್ಯಾಚಾರಗಳನ್ನು ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ಸರಕಾರ ಪ್ರತಿಭಟನಾಕಾರರ ಮೇಲೆ ಹೇರಿರುವ ಸುಳ್ಳು ಕೇಸುಗಳನ್ನೆಲ್ಲ ಹಿಂತೆಗೆದುಕೊಳ್ಳಬೇಕು, ಬಂಧಿಸಿರುವವರನ್ನು , ಜೈಲಿನಲ್ಲಿರುವವರನ್ನು ಎಲ್ಲರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.
ಉತ್ತರಪ್ರದೇಶದಲ್ಲಿ ಅತ್ಯಂತ ಪಾಶವೀ ದಮನವನ್ನು ಶಾಂತಿಯುತ ಪ್ರತಿಭಟನಾಕಾರರ ಮೇಲೆ, ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಮೇಲೆ ಹರಿಯಬಿಡಲಾಗಿದೆ. ಪೋಲೀಸ್ ಗೋಲೀಬಾರ್ನಿಂದ ೨೦ ಮಂದಿ ಸತ್ತಿದ್ದಾರೆ, ನೂರಾರರು ಮನಗಳಲ್ಲಿ ದಾಂಧಲೆ ನಡೆಸಲಾಗಿದೆ ಮತ್ತು ದಂಡಗಳನ್ನು ವಿಧಿಸಲಾಗಿದೆ. ಇವೆಲ್ಲವೂ ಮುಖ್ಯಮಂತ್ರಿ ಆದಿತ್ಯನಾಥರ ನೇರ ಕುಮ್ಮಕ್ಕಿನಿಂದ ನಡೆಯುತ್ತಿವೆ.
ಸಿಎಎ-ಎನ್ಪಿಆರ್-ಎನ್ಆರ್ಸಿ ಯನ್ನು ಜತೆ-ಜತೆಯಾಗಿ ನೋಡಬೇಕಾಗುತ್ತದೆ. ಪೌರತ್ವ(ನೋಂದಣಿ ಮತ್ತು ರಾಷ್ಟ್ರೀಯ ಪರಿಚಯ ಪತ್ರ ನೀಡಿಕೆ) ನಿಯಮಗಳು, ೨೦೦೩ರ ಪ್ರಕಾರ ಒಂದು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್(ಎನ್ಪಿಆರ್) ನ್ನು ಕಲೆ ಹಾಕಲಾಗುತ್ತದೆ, ಅದು ಎನ್ಆರ್ಸಿ(ರಾಷ್ಟ್ರೀಯ ಪೌರರ ರಿಜಿಸ್ಟರ್)ಗೆ ಆಧಾರವಾಗುತ್ತದೆ. ಸರಕಾರದ ಅಧಿಸೂಚನೆಯ ಪ್ರಕಾರ ಎನ್ಪಿಆರ್ ಪ್ರಕ್ರಿಯೆ ಎಪ್ರಿಲ್ ೧ರಿಂದ ಸಪ್ಟಂಬರ್ ೩೦, ೨೦೨೦ರ ನಡುವೆ ನಡೆಯುತ್ತದೆ. ಸಿಎಎ-ಎನ್ಪಿಆರ್-ಎನ್ಆರ್ಸಿ ಪ್ರಕ್ರಿಯೆ ಲಕ್ಷಾಂತರ ಬಡಜನಗಳನ್ನು, ಅಂಚಿಗೆ ತಳ್ಳಲ್ಪಟ್ಟ ಜನಗಳನ್ನು ಬಾಧಿಸುತ್ತದೆ, ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲೆ ಗುರಿಯಿಟ್ಟಿದೆ. ಸಿಎಎ ಯನ್ನು ಹಿಂತೆಗೆದುಕೊಳ್ಳಬೇಕು ಎಂಬ ತನ್ನ ಕರೆಯನ್ನು ಪೊಲಿಟ್ಬ್ಯುರೊ ಪುನರುಚ್ಚರಿಸಿದೆ. ಮೋದಿ ಸರಕಾರ ಅಧಿಸೂಚಿಸಿರುವಂತೆ ಎನ್ಪಿಆರ್ನ್ನು ನಡೆಸಬಾರದು ಎಂದು ಅದು ಆಗ್ರಹಿಸಿದೆ.
ಎನ್ಆರ್ಸಿಯನ್ನು ಒಪ್ಪುವುದಿಲ್ಲ ಎಂದು ಪ್ರಕಟಿಸಿರುವ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಎನ್ಪಿಆರ್ ಪ್ರಕ್ರಿಯೆಗೆ ತಡೆ ಹಾಕಬೇಕು ಎಂದು ಪೊಲಿಟ್ಬ್ಯುರೊ ಮನವಿ ಮಾಡಿದೆ. ಹೀಗೆ ಮಾಡುವ ಮೂಲಕ ಮಾತ್ರವೇ ಅವರು ಎನ್ಆರ್ಸಿ ಜಾರಿಯಾಗದಂತೆ ನಿಲ್ಲಿಸಲು ಸಾಧ್ಯ ಎಂದು ಅದು ಹೇಳಿದೆ.
ಸಿಎಎ-ಎನ್ಪಿಆರ್-ಎನ್ಆರ್ಸಿ ವಿರುದ್ಧ ದೇಶಾದ್ಯಂತ ಶಾಂತಿಯುತ ಪ್ರತಿಭಟನಾ ಚಳುವಳಿಯನ್ನು ಉಳಿಸಿಕೊಳ್ಳುವ ಮತ್ತು ಮುನ್ನಡೆಸುವ ದಾರಿಗಳು ಮತ್ತು ಸಾಧನಗಳ ಬಗ್ಗೆ ಚರ್ಚಿಸಿದ ಪೊಲಿಟ್ಬ್ಯುರೊ ಈ ಆಂದೋಲನವನ್ನು ಒಂದುಗೂಡಿ ಮುಂದಕ್ಕೆ ಒಯ್ಯೋಣ ಎಂದು ಎಲ್ಲ ಜಾತ್ಯತೀತ ಮತ್ತು ಜನವಾದಿ ಶಕ್ತಿಗಳಿಗೆ ಕರೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧಗಳನ್ನು ತೆಗೆಯಬೇಕು
ಕಲಮು ೩೭೦ನ್ನು ರದ್ದುಗೊಳಿಸಿ ಹಾಗು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕಿದ ಐದು ತಿಂಗಳುಗಳ ನಂತರವೂ ಕಾಶ್ಮೀರದ ಜನತೆ ವಿವಿಧ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಂದ ವಂಚಿತರಾಗಿದ್ದಾರೆ. ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಸ್ಥಾನಬದ್ಧತೆಯಲ್ಲಿದ್ದಾರೆ, ಸಭೆ ಸೇರುವ ಹಕ್ಕನ್ನು ನಿರಾಕರಿಸಲಾಗಿದೆ, ಮತ್ತು ಇಂಟರ್ನೆಟ್ ಸಂಪರ್ಕವನ್ನು ಕಡಿದಿಡಲಾಗಿದೆ.
ಸುಪ್ರಿಂ ಕೋರ್ಟ್ ತೀರ್ಪಿನ ಭಾವಕ್ಕೆ ಅನುಗುಣವಾಗಿ ಇಂಟರ್ನೆಟ್ ಸಂರ್ಕವನ್ನು ಮತ್ತೆ ನೆಲೆಗೊಳಿಸಬೇಕು ಎಂದು ಆಗ್ರಹಿಸಿರುವ ಪೊಲಿಟ್ಬ್ಯುರೊ ಎಲ್ಲ ನಿರ್ಬಂಧಗಳನ್ನು ತೆಗೆಯಬೇಕು, ಮತ್ತು ರಾಜಕೀಯ ಮುಖಂಡರ ಮೇಲಿನ ಸ್ಥಾನಬದ್ಧತೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದೆ.
ಜೆಎನ್ಯು ಮೇಲೆ ದಾಳಿ-ತನಿಖೆಯಲ್ಲಿ ದಿಲ್ಲಿ ಪೋಲೀಸರ ಪಕ್ಷಪಾತ
ಎಬಿವಿಪಿ-ಆರೆಸ್ಸೆಸ್ ಪುಂಡರು ಜನವರಿ ೫ರಂದು ಹರಿಯಬಿಟ್ಟ ಹಿಂಸಾಚಾರವನ್ನು ಪೊಲಿಟ್ಬ್ಯುರೊ ಖಂಡಿಸಿದೆ. ಈ ಹಿಂಸಾಚಾರದಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಸೇರಿದಂತೆ ೨೯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗಾಯಗೊಂಡಿದ್ದಾರೆ. ದಿಲ್ಲಿ ಪೋಲಿಸ್ ಪುಂಡರು ಧಾಂಧಲೆ ನಡೆಸುತ್ತಿರುವುದನ್ನು ಕೈಕಟ್ಟಿ ನಿಂತು ನೋಡುತ್ತಿರುವುದು, ನಂತರ ಅವರಿಗೆ ಕ್ಯಾಂಪಸ್ನಿಂದ ಹೊರ ಹೋಗಲು ಅನುಕೂಲ ಮಾಡಿಕೊಡುತ್ತಿರುವ ದೃಶ್ಯ ಆಘಾತಕಾರಿ.
ದಿಲ್ಲಿ ಪೋಲೀಸರ ತನಿಖೆ ಪಕ್ಷಪಾತದಿಂದ ಕೂಡಿದೆ, ಅದು ವಿದ್ಯಾರ್ಥಿ ಸಂಘಕ್ಕೆ ಸೇರಿದ ವಿದ್ಯಾರ್ಥಿ ಕಾರ್ಯಕರ್ತರ ಮೇಲೆಯೇ ಗುರಿ ಮಾಡಿದೆಯೇ ಹೊರತು ನಿಜವಾದ ಅಪರಾಧಿಗಳ ಮೇಲಲ್ಲ. ಮಾನವ ಸಂಪನಮೂಲ ಅಭಿವೃದ್ಧಿ ಮಂತ್ರಾಲಯ ಮಧ್ಯಪ್ರವೇಶಿಸಬೇಕು, ತೀವ್ರ ಶುಲ್ಕ ಏರಿಕೆಗಳನ್ನು ರದ್ದು ಮಾಡಬೇಕು ಎಂದು ಪೊಲಿಟ್ಬ್ಯುರೊ ಹೇಳಿದೆ. ಈ ವಿಶ್ವವಿದ್ಯಾಲಯದ ಸ್ವರೂಪವನ್ನು ಧ್ವಂಸ ಮಾಡಲು ಹೊಣೆಗಾರನಾದ ಉಪಕುಲಪತಿಯನ್ನು ತೆಗೆಯಬೇಕು ಎಂದು ಅದು ಆಗ್ರಹಿಸಿದೆ.
ಜನವರಿ ೮ ಮುಷ್ಕರ-ಮೋದಿ ಸರಕಾರಕ್ಕೆ ಎಚ್ಚರಿಕೆ
ಜನವರಿ ೮ರ ಸಾರ್ವತ್ರಿಕ ಮುಷ್ಕರದ ಕರೆಯನ್ನು ಅತ್ಯಂತ ಯಶಸ್ವಿಗೊಳಿಸಿರುವ ಕಾರ್ಮಿಕ ವರ್ಗ, ನೌಕರರು, ರೈತರು, ಕೃಷಿ ಕೂಲಿಕಾರರು, ವಿದ್ಯಾರ್ಥಿಗಳು ಮತ್ತು ಇತರ ದುಡಿಯುವ ಜನವಿಭಾಗಗಳನ್ನು ಪೊಲಿಟ್ಬ್ಯುರೊ ಅಭಿನಂದಿಸಿದೆ. ವಿವಿಧ ಕೈಗಾರಿಕೆಗಳಲ್ಲಿ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ, ಹಣಕಾಸು ಮತ್ತು ಅಸಂಘಟಿತ ವಲಯಗಳಲ್ಲಿ ಮುಷ್ಕರ ನಡೆಯಿತು. ದೇಶಾದ್ಯಂತ ಸಾವಿರಾರು ರೈತರು ಮತ್ತು ಕೃಷಿಕೂಲಿಕಾರರು ರಾಸ್ತಾರೋಕೋ, ರೈಲ್ರೋಕೋಗಳಲ್ಲಿ ಭಾಗವಹಿಸಿದರು. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ಅಧ್ಯಾಪಕರು ವ್ಯಾಪಕವಾಗಿ ಭಾಗವಹಿಸಿದರು. ಈ ಮುಷ್ಕರ ಕಾರ್ಮಿಕ ವರ್ಗ-ವಿರೋಧಿ, ಜನವಿರೋಧಿ ಧೋರಣೆಗಳನ್ನು ಅನುಸರಿಸದಂತೆ ಮೋದಿ ಸರಕಾರಕ್ಕೆ ನೀಡಿದ ಒಂದು ಎಚ್ಚರಿಕೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಬೆಲೆಯೇರಿಕೆಯನ್ನು ತಡೆಗಟ್ಟಲು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು
ಹಣದುಬ್ಬರ ದರ ಏರುತ್ತಿದೆ, ಆಹಾರ ಸಾಮಗ್ರಿಗಳು ಮತ್ತು ಅಗತ್ಯ ಸರಕುಗಳ ಬೆಲೆಗಳು ಏರುತ್ತಿವೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆ ಇದನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದು ಪೊಲಿಟ್ಬ್ಯುರೊ ಆತಂಕ ವ್ಯಕ್ತಪಡಿಸಿದೆ. ಸರಕಾರ ತಕ್ಷಣವೇ ಬೆಲೆಯೇರಿಕೆ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಇಳಿಸಬೇಕು ಎಂದು ಅದು ಸೂಚಿಸಿದೆ.
ಕೇರಳದ ವಿರುದ್ಧ ತಾರತಮ್ಯ ನಿಲುವನ್ನು ಕೇಂದ್ರ ಕೊನೆಗೊಳಿಸಬೇಕು
ಕೇಂದ್ರ ಸರಕಾರ ಕೇರಳದ ಹಣಕಾಸು ಅಗತ್ಯಗಳ ಬಗ್ಗೆ ಒಂದು ತಾರತಮ್ಯದ ಮತ್ತು ನಕಾರಾತ್ಮಕ ನಿಲುವನ್ನು ತಳೆಯುತ್ತಿದೆ. ಕೇರಳ ೨೦೧೯-೨೦ಕ್ಕೆ ರೂ.೨೪,೯೧೫ ಕೋಟಿ ಸಾರ್ವಜನಿಕ ಸಾಲಕ್ಕೆ ಅರ್ಹವಾಗಿದೆ. ಕೇಂದ್ರ ಸರಕಾರ ಇದನ್ನು ೨೦೧೬-೧೭ರಲ್ಲಿ ಸಾರ್ವಜನಿಕ ಖಾತೆ ಸಾಲ ಹೆಚ್ಚಿದೆ, ಅದನ್ನು ಸರಿಹೊಂದಿಸಬೇಕಾಗಿದೆ ಎನ್ನುತ್ತ ಏಕಪಕ್ಷೀಯವಾಗಿ ರೂ.೧೬,೬೦೨ ಕೋಟಿಗೆ ಇಳಿಸಿದೆ.
ಡಿಸೆಂಬರ್ನಲ್ಲಿ ತೆರಬೇಕಾದ ೧೬೦೦ ಕೋಟಿ ರೂ.ಗಳ ಜಿಎಸ್ಟಿ ಪರಿಹಾರವನ್ನು ತೆತ್ತಿಲ್ಲ. ಮನರೇಗ ಸ್ಕೀಮಿನಲ್ಲಿ ೧೨೧೫ ಕೋಟಿ ರೂ. ಬಾಕಿ ಮತ್ತು ಭತ್ತ ಖರೀದಿಗೆ ೧೦೩೫ ಕೋಟಿ ರೂ.ಗಳನ್ನೂ ಅದು ಕೊಡಬೇಕಾಗಿದೆ. ನೈಸರ್ಗಿಕ ವಿಪತ್ತು ಪರಿಹಾರಕ್ಕೆ ರೂ.೨೧೦೦ ಕೋಟಿ ರೂ. ದಾವೆಯನ್ನು ಸಲ್ಲಿಸಿದ್ದರೂ ಯಾವುದೇ ಹಣ ನೀಡದೆ ಕೇರಳವನ್ನು ವಂಚಿಸಲಾಗಿದೆ.
ಕೇಂದ್ರ ತನ್ನ ಈ ತಾರತಮ್ಯದ ನಿಲುವನ್ನು ಕೊನೆಗೊಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ. ವಿವಿಧ ಬಾಬ್ತುಗಳಲ್ಲಿ ಕೇರಳಕ್ಕೆ ಸಲ್ಲಬೇಕಾದ ನಿಧಿಗಳು ಸಿಗಬೇಕು. ೨೦೧೯ರಲ್ಲಿ ಗಂಭೀರ ಪ್ರವಾಹವನ್ನು ಅನುಭವಿಸಿರುವ ಕೇರಳಕ್ಕೆ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಿಂದಲೂ ಹಣ ಒದಗಿಸಬೇಕು ಎಂದು ಪೊಲಿಟ್ಬ್ಯುರೊ ಹೇಳಿದೆ.
ಇರಾನೀ ಸೇನಾಧಿಕಾರಿಯ ಹತ್ಯೆಗೆ ಬಲವಾದ ಖಂಡನೆ
ಇರಾನೀ ಸೇನಾಧಿಕಾರಿ ಖಾಸಿಂ ಸೊಲೈಮಾನಿಯವರನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಬಾಗ್ದಾದ್ನಲ್ಲಿ ಹತ್ಯೆ ಮಾಡಿರುವುದಕ್ಕೆ ಖಂಡನೆಯನ್ನು ಪೊಲಿಟ್ಬ್ಯುರೊ ಪುನರುಚ್ಚರಿಸಿದೆ. ಇದೊಂದು ಭಂಡ ಕೃತ್ಯ ಮತ್ತು ಅಂತರ್ರಾಷ್ಟ್ರೀಯ ವಿಧಿ-ವಿಧಾನಗಳ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ತಿರುವನಂತಪುರದಲ್ಲಿ ಕೇಂದ್ರ ಸಮಿತಿ ಸಭೆ: ಜನವರಿ ೧೭-೧೯
ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ತಿರುವನಂತಪುರದಲ್ಲಿ ಜನವರಿ ೧೭ರಿಂದ ೧೯ರ ವರೆಗೆ ನಡೆಯಲಿದೆ, ಅದರ ಮುಂದೆ ಸಲ್ಲಿಸಬೇಕಾದ ರಾಜಕೀಯ ಬೆಳವಣಿಗೆಗಳ ಕುರಿತ ಕರಡು ವರದಿಯನ್ನು ಚರ್ಚಿಸಲಾಯಿತು ಎಂದು ಪೊಲಿಟ್ಬ್ಯುರೊ ಹೇಳಿಕೆ ತಿಳಿಸಿದೆ.