ದೇಶದ ರಾಜಧಾನಿಯ ಜಾಮಿಯ ನಗರದಲ್ಲಿ ಪೋಲಿಸ್ ಸಿಬ್ಬಂದಿಯ ಒಂದು ದೊಡ್ಡ ತುಕಡಿಯ ಕಣ್ಣ ಮುಂದೆಯೇ ಒಬ್ಬ ಶಸ್ತ್ರ ಸಜ್ಜಿತ ವ್ಯಕ್ತಿ , ರಾಜಘಾಟ್ ನತ್ತ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಹೋಗುತ್ತಿದ್ದ ಜಾಮಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವ ಅಭೂತಪೂರ್ವ ಘಟನೆ ನಡೆದಿದೆ. ಇದರಲ್ಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಈ ಕ್ರಿಮಿನಲ್ ವ್ಯಕ್ತಿ ಸಂಘ ಪರಿವಾರದೊಂದಿಗೆ ಸಂಯೋಜಿತನಾಗಿದ್ದಾನೆ ಎಂದು ಆ ಮೇಲೆ ದೃಢಪಟ್ಟಿದೆ.
ಆತನ ಭಯೋತ್ಪಾದಕ ಕೃತ್ಯ ಒಬ್ಬ ಬಿಜೆಪಿ ಮುಖಂಡ ಮತ್ತು ಮೋದಿ ಸರಕಾರದಲ್ಲಿನ ಮಂತ್ರಿ ಅನುರಾಗ್ ಠಾಕುರ್ ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದು ಕರೆದು ಅವರಿಗೆ ಗುಂಡಿಕ್ಕುವಂತೆ ಕರೆ ಕೊಟ್ಟಿರುವುದರ, ಜತೆಗೆ ಬಿಜೆಪಿ ಮುಖಂಡರು ಅಮಿತ್ ಷಾ ನೇತೃತ್ವದಲ್ಲಿ ನೀಡುತ್ತಿರುವ ಕೋಮುವಾದಿ ದ್ವೇಷ ಕಾರುವ ಹಾಗೂ ಹಿಂಸಾಚಾರಕ್ಕೆ ಪ್ರಚೋದಿಸುವ ಭಾಷಣಗಳ ನೇರ ಫಲಿತಾಂಶ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಕಟುವಾಗಿ ಟೀಕಿಸಿದೆ.
ಹಿಂಸಾಚಾರ ಪ್ರಚೋದಿಸುವವರಿಗೆ ಕೃಪಾಪೋಷಣೆ ದೊರಕುತ್ತಿದೆ ಎಂಬುದು, ಒಂದೆಡೆಯಲ್ಲಿ ಶಾಂತಿಯುತ ಪ್ರತಿಭಟನಾಕಾರರನ್ನು ಬಂಧಿಸುತ್ತಿದ್ದರೂ, ಠಾಕುರ್, ಮತ್ತು ದಿಲ್ಲಿ ಎಂಪಿ ಪರ್ವೇಶ್ ವರ್ಮ ಸೇರಿದಂತೆ ಯಾವ ಬಿಜೆಪಿ ಮುಖಂಡರ ಮೇಲೂ ಒಂದೇ ಒಂದು ಎಫ್ಐಆರ್ ಹಾಕಿಲ್ಲವೆಂಬ ಸಂಗತಿಯೇ ಬಿಂಬಿಸುತ್ತದೆ ಎಂದು ಅದು ಹೇಳಿದೆ.
ಹಿಂದೂ ಸೇನೆ ಎಂಬೊಂದು ಸಂಘಟನೆ ಫೆಬ್ರುವರಿ 2 ರಂದು ಶಾಹೀನ್ ಬಾಗ್ ಮತ್ತಿತರ ರಾಜಧಾನಿಯಲ್ಲಿನ ಪ್ರತಿಭಟನಾ ಸ್ಥಳಗಳ ಮೇಲೆ ದಾಳಿ ಮಾಡುವುದಾಗಿ ಬಹಿರಂಗ ಕರೆ ಕೊಟ್ಟು, ಪೋಸ್ಟರ್ ಗಳನ್ನು ಹಚ್ಚಿದ್ದರೂ ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಪೊಲಿಟ್ಬ್ಯುರೊ ಆಘಾತ ವ್ಯಕ್ತಪಡಿಸಿದೆ.
ಮುಂಬರುವ ದಿಲ್ಲಿ ಚುನಾವಣೆಗಳಲ್ಲಿ ಸೋಲು ಎದುರಿಸುತ್ತಿರುವ ಬಿಜೆಪಿ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ, ಬಹಿರಂಗ, ಪ್ರಚೋದನಕಾರಿ ಕೋಮುವಾದಿ ದ್ವೇಷ ಕಾರುವ ಮಾತುಗಳನ್ನು ಹರಡಿಸುವ ಅತ್ಯಂತ ಅಪಾಯಕಾರಿ ದಾರಿಯನ್ನು ಹಿಡಿದಿದೆ, ಸಿ.ಎ.ಎ., ಎನ್.ಆರ್.ಸಿ. ಮತ್ತು ಎನ್.ಪಿ.ಆರ್. ವಿರುದ್ಧ ಪ್ರತಿಭಟಿಸುತ್ತಿರುವವರ ಮೇಲೆ ಅದು ಗುರಿಯಿಟ್ಟಿದೆ ಎಂದಿರುವ ಪೊಲಿಟ್ ಬ್ಯುರೊ ಅನುರಾಗ್ ಠಾಕುರ್ ಮತ್ತು ಪರ್ವೇಶ್ ವರ್ಮ ವಿರುದ್ಧ ಎಫ್ಐಆರ್ ಹಾಕಬೇಕು, ಚುನಾವಣಾ ಆಯೋಗ ಗೃಹಮಂತ್ರಿಗೆ ಅವರ ದ್ವೇಷ ಭಾಷಣಗಳ ವಿರುದ್ಧ ನೋಟೀಸು ಕೊಡಬೇಕು ಮತ್ತು ಹಿಂದು ಸೇನಾದ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಬಿಜೆಪಿಯ ಹಗೆಕೋರರಿಂದ ಪ್ರಚೋದಿತರಾಗಬಾರದು, ಅವರ ಸೋಲನ್ನು ಖಾತ್ರಿಪಡಿಸಿ ರಾಜಧಾನಿಯಲ್ಲಿ ಕೋಮುಸೌಹಾರ್ದ ಮತ್ತು ಶಾಂತಿ ಕಾಪಾಡಿಕೊಳ್ಳಬೇಕು ಎಂದು ಅದು ದಿಲ್ಲಿಯ ಜನತೆಗೆ ಮನವಿ ಮಾಡಿಕೊಂಡಿದೆ.